ಇಂಡಿ: ಗ್ರಾಮೀಣ ಭಾಗಗಳಿಂದ ಶಾಲಾ-ಕಾಲೇಜುಗಳಿಗೆ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಕೆಕೆಆರ್‌ಟಿಸಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸದಿರುವುದು ತೀವ್ರ ತೊಂದರೆ ಉಂಟುಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಹೆಚ್ಚಿನ ಸೌಲಭ್ಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ಪಟ್ಟಣಗಳಿಗೆ ಬರಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳಿಗೆ ಸರಕಾರ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿರುವುದು ಅನುಕೂಲವಾಗಿದ್ದರೂ, ಸಮಯಕ್ಕೆ ಸರಿಯಾಗಿ ಬಸ್ಗಳು ಸಿಗದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಮುಂಜಾನೆ 6 ಗಂಟೆಗೆ ಮನೆ ಅಥವಾ ತೋಟದ ಮನೆಯಿಂದ ಹೊರಡುವ ವಿದ್ಯಾರ್ಥಿಗಳು ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ತಡವಾಗಿ ಮನೆಗೆ ಮರಳಬೇಕಾಗುತ್ತಿರುವುದರಿಂದ ಪಾಲಕರು, ವಿಶೇಷವಾಗಿ ಹೆಣ್ಣುಮಕ್ಕಳನ್ನು ದೂರದ ಶಾಲಾ-ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ, ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ದಾರಿ ಮಧ್ಯೆ ಕೆಟ್ಟು ನಿಲ್ಲುವ ವಾಹನಗಳು :

ಇಂಡಿ ಘಟಕ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿ ಬಸ್‌ಗಳು ಕೆಟ್ಟು ನಿಲ್ಲುತ್ತಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಪ್ರತಿದಿನ ಒಂದೆರಡು ಬಸ್‌ಗಳು ದುರಸ್ತಿಗಾಗಿ ನಿಲ್ಲುತ್ತಿದ್ದು, ದಿನದ ಬಹುಪಾಲು ಸಮಯವನ್ನು ದುರಸ್ತಿಯಲ್ಲೇ ಕಳೆಯುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಮಯಕ್ಕೆ ಬಸ್‌ಗಳು ಓಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ. ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ತಿಳಿಯದಂತಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಭಾಗದ ಶಾಸಕರು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಕೆಕೆಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ವಿದ್ಯಾರ್ಥಿಗಳು ಹಾಗೂ ಪಾಲಕರ ಒತ್ತಾಯವಾಗಿದೆ.

ಎಲ್ಲ ರೂಟೀನ್ ಬಸ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದ ಮಾರ್ಗಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಮೀರಗಿ ರೂಟೀನ್ ಬಸ್‌ಗಳಲ್ಲಿ ಸ್ವಲ್ಪ ತೊಂದರೆ ಇರುವುದು ನಿಜ. ಅದನ್ನೂ ಸರಿಪಡಿಸಲಾಗಿದೆ. ಅಗರಖೇಡ ರೂಟೀನ್ ಬಸ್‌ಗಳ ಟೈರ್ ಬ್ಲಾಸ್ಟ್ ಆಗಿ ಬಸ್‌ಗಳು ನಿಲ್ಲುತ್ತಿವೆ. ಅಗರಖೇಡ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ಇಂಡಿ ತಾಲೂಕಿನಲ್ಲಿ ಒಟ್ಟು 109 ಬಸ್ ಇದ್ದು, 105 ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ನಿಗಾ ವಹಿಸಲಾಗುವುದು.

-ವಿ.ವಿ. ಭೋವಿ ಘಟಕ ವ್ಯವಸ್ಥಾಪಕ, ಇಂಡಿ

ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ. ಮುಂಜಾನೆ 6 ಗಂಟೆಗೆ ನಾವು ಮನೆಯಿಂದ ಬರುತ್ತೇವೆ. ದೂರದ 32 ಕಿ.ಮೀ.ಯಿಂದ ಬಂದರೂ ಮಧ್ಯಾಹ್ನ 2 ಗಂಟೆಯಾದರೂ ಬಸ್ ಬಿಡುವುದಿಲ್ಲ. ಅಧಿಕಾರಿಗಳನ್ನು ಕೇಳಿದರೆ ‘ಈಗ ಬರುತ್ತೆ, ಆಗ ಬರುತ್ತೆ’ ಎಂದು ಹೇಳುತ್ತಾರೆ. ಬಸ್‌ನಲ್ಲಿ ಸೀಟೂ ಸಿಗುವುದಿಲ್ಲ. ಕೆಲವೊಮ್ಮೆ ಉಪವಾಸ ನಿಂತುಕೊಂಡೇ ಪ್ರಯಾಣಿಸಬೇಕಾಗುತ್ತದೆ. ನಮ್ಮ ಗೋಳು ಕೇಳುವವರು ಯಾರು ಎಂಬುದು ತಿಳಿಯುತ್ತಿಲ್ಲ.

-ಜಯಶ್ರೀ ಇಂಗಳಗಿ, ಕಾಲೇಜು ವಿದ್ಯಾರ್ಥಿನಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಯಭೀಮ ಸೋ ಸಿಂಗೆ

contributor