ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ : ಜುಲೈ ಅಂತ್ಯಕ್ಕೆ 1,133.39 ಕೋಟಿ ಮೊತ್ತ ಪಾವತಿಸದೇ ಬಾಕಿ
ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು 2026ರ ಜುಲೈ ಅಂತ್ಯಕ್ಕೆ 1,133.39 ಕೋಟಿ ರೂ. ಮೊತ್ತವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿಎಪಿಸಿಎಂಎಸ್‌ಗಳಿಗೆ 2026ರ ಸೆಪ್ಟಂಬರ್ ಅಂತ್ಯಕ್ಕೆ ಪಡಿತರ ಆಹಾರ ಧಾನ್ಯ ಎತ್ತುವಳಿ ಮತ್ತು ಸಕ್ಕರೆ ಸಹಾಯಧನದ ಪೈಕಿ ಇನ್ನು 17.29 ಕೋಟಿರಷ್ಟು ಬಾಕಿ ಮೊತ್ತವನ್ನು ಆಹಾರ ಇಲಾಖೆಯು ಉಳಿಸಿಕೊಂಡಿದೆ. ಅಲ್ಲದೇ ಮುಂದಿನ ವರ್ಷದಲ್ಲಿ ಮಾರುಕಟ್ಟೆ ಸೆಸ್ ಆಗಿ ಸಂಗ್ರಹಿಸಲಾಗುವ 60 ಪೈಸೆಯಲ್ಲಿ 10 ಪೈಸೆಯ ಪಾಲನ್ನು ಹೆಚ್ಚಿಸಲು ಚಿಂತಿಸಿದೆ.
ಆಹಾರ ಧಾನ್ಯಗಳ ಸಹಾಯ ಧನ ಬಿಲ್‌ಗಳು ಜಿಲ್ಲಾ ಘಟಕ ಕಚೇರಿಗಳಲ್ಲಿ ತಡವಾಗಿ ಸ್ವೀಕೃತವಾಗುತ್ತಿವೆ. ಆಯಾ ಆರ್ಥಿಕ ವರ್ಷಗಳಲ್ಲಿ ಬಿಲ್‌ಗಳ ಮೊತ್ತವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲದಿರುವ ಕುರಿತು ವಿಧಾನ ಪರಿಷತ್‌ನಲ್ಲಿಯೂ ಚರ್ಚೆ ನಡೆದಿತ್ತು. ಆದರೂ ಸಹಕಾರ ಮತ್ತು ಆಹಾರ ಇಲಾಖೆಯು ಕನಿಷ್ಟ ಬೆಂಬಲ ಬೆಲೆ ಯೋಜನೆ ಮತ್ತು ಆಹಾರ ಧಾನ್ಯಗಳ ಎತ್ತುವಳಿ, ಸಹಾಯಧನವನ್ನು ಬಹುಕೋಟಿಯಷ್ಟು ಬಾಕಿ ಉಳಿಸಿಕೊಂಡಿರುವುದು ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು, 2025-26ನೇ ಸಾಲಿನ ಖಾರಿಫ್ ಮಾರುಕಟ್ಟೆ ಹಂಗಾಮಿನಲ್ಲಿ ರಾಗಿ, ಭತ್ತ ಮತ್ತು ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕಾರ್ಯಾಚರಣೆಗಳನ್ನು ಜಾರಿಗೊಳಿಸುತ್ತಿದೆ. ಈ ಸಂಬಂಧ ಪ್ರಸ್ತುತ ಹಣಕಾಸಿನ ಸ್ಥಿತಿಗತಿ ಕುರಿತೂ ಇಲಾಖೆ ಮಟ್ಟದಲ್ಲಿ ಚರ್ಚೆಗಳಾಗಿವೆ.
ಈ ಸಂಬಂಧ 2026ರ ಜುಲೈ 31ರಂದು ಅಭಿವೃದ್ಧಿ ಆಯುಕ್ತ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಣಕಾಸಿನ ಸ್ಥಿತಿಗತಿಯನ್ನು ಮಂಡಿಸಲಾಗಿದೆ. ಈ ಸಭೆಯ ನಡವಳಿಯ ಪ್ರತಿಯು ‘the-file.in‘ಗೆ ಲಭ್ಯವಾಗಿದೆ.
ಕನಿಷ್ಟ ಬೆಂಬಲ ಬೆಲೆ ಯೋಜನೆ ಡಿಯಲ್ಲಿ ಆಹಾರ ಧಾನ್ಯಗಳ ಖರೀದಿ ಕಾರ್ಯಾಚರಣೆಗಳು 2026ರ ಜೂನ್ 15ರಂದೇ ಪೂರ್ಣಗೊಂಡಿವೆ. ಲಭ್ಯವಿರುವ ಅನುದಾನದ ಮಟ್ಟಿಗೆ ರೈತರಿಗೆ ಹಣ ಪಾವತಿಸಲಾಗಿದೆ. 2,02,929 ರೈತರಿಗೆ ಹಣ ಪಾವತಿ ಮಾಡಿರುವ ಇಲಾಖೆಯು, 86,409 ರೈತರಿಗೆ ಹಣ ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.
ಖರೀದಿ- ಪಾವತಿಯ ಪ್ರಸ್ತುತ ಸ್ಥಿತಿ ಹೇಗಿದೆ? :
ರಾಗಿಯನ್ನು 246,756 ರೈತರಿಂದ ಒಟ್ಟು 5,69,331.10 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಖರೀದಿಸಲಾಗಿದೆ. ಇದರ ಒಟ್ಟಾರೆ ಮೌಲ್ಯ 2,781.75 ಕೋಟಿ ರೂ.ನಷ್ಟಿದೆ. ಈ ಪೈಕಿ 1,79,902 ರೈತರಿಗೆ 2,503.67 ಕೋಟಿ ರೂ. ಪಾವತಿಸಲಾಗಿದೆ. ಇನ್ನು 66,854 ರೈತರಿಗೆ 728.09 ಕೋಟಿ ರೂ. ಪಾವತಿಸಲು ಬಾಕಿ ಇದೆ. 1,706 ಸಂಖ್ಯೆಯ ರೈತರಿಂದ 5,677.00 ಮೆಟ್ರಿನ್ ಟನ್ ಪ್ರಮಾಣದ ಭತ್ತ ಖರೀದಿಸಲಾಗಿದೆ.
ಇದರ ಮೊತ್ತ 13.48 ಕೋಟಿರಷ್ಟಿದೆ. ಈ ಪೈಕಿ 1,706 ಸಂಖ್ಯೆಯ ರೈತರಿಗೆ 13.48 ಕೋಟಿ ರೂ. ಪಾವತಿಸಲಾಗಿದೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ. 26,049 ರೈತರಿಂದ 1,40,198.65 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಜೋಳ (ಖಾರೀಫ್) ಖರೀದಿಸಲಾಗಿದೆ. ಇದರ ಮೊತ್ತ 518.59 ಕೋಟಿ ರೂ.ರಷ್ಟಿದೆ. ಈ ಪೈಕಿ 21,321 ರೈತರಿಗೆ 414.95 ಕೋಟಿ ಪಾವತಿಸಿರುವ ಇಲಾಖೆಯು ಇನ್ನೂ 4,278 ರೈತರಿಗೆ 103.64 ಕೋಟಿಯಷ್ಟು ಹಣ ಬಾಕಿ ಉಳಿಸಿಕೊಂಡಿದೆ.
114,827 ರೈತರಿಂದ 81,552.15 ಮೆಟ್ರಿಕ್ ಟನ್ ಪ್ರಮಾಣದ ಜೋಳ (ರಬಿ) ಖರೀದಿಸಲಾಗಿದೆ. ಇದರ ಒಟ್ಟು ಮೊತ್ತ 301.66 ರೂ. ಕೋಟಿರಷ್ಟಿದೆ. ಈ ಪೈಕಿ ಒಬ್ಬ ರೈತನಿಗೂ ಹಣ ಪಾವತಿಯಾಗಿಲ್ಲ. ಹೀಗಾಗಿ 301.66 ಕೋಟಿ ರೂ. ಪಾವತಿಗೆ ಬಾಕಿ ಇದೆ.
ಒಟ್ಟಾರೆ 2,89,338 ರೈತರಿಂದ 3,615.49 ಕೋಟಿ ರೂ. ಮೌಲ್ಯದ 7,96,758.90 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಆಹಾರ ಧಾನ್ಯ ಖರೀದಿಸಲಾಗಿದೆ. ಈ ಪೈಕಿ 2,02,929 ರೈತರಿಗೆ 2,482.10 ಕೋಟಿ ರೂ. ಪಾವತಿಸಿದೆ. ಇನ್ನೂ 86,409 ರೈತರಿಗೆ 1,133.39 ಕೋಟಿರಷ್ಟು ಪಾವತಿಸಲು ಬಾಕಿ ಉಳಿಸಿಕೊಂಡಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.
ರಿವಾಲ್ವಿಂಗ್ ಫಂಡ್ ಕುರಿತು ಸಭೆಯಲ್ಲಿ ಚರ್ಚೆಯಾಗಿತ್ತು. ಕರ್ನಾಟಕ ರಾಜ್ಯ ಆಹಾರ ನಿಗಮಕ್ಕೆ ಬಿಡುಗಡೆ ಮಾಡಿದ್ದ ಹಣವನ್ನು 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾರ್ಯಾಚರಣೆಗಳಡಿ ರೈತರಿಗೆ ಪಾವತಿ ಮಾಡಲು ಸಂಪೂರ್ಣವಾಗಿ ಬಳಸಲಾಗಿದೆ ಒಟ್ಟು 2,487.690 ಕೋಟಿ ರೂ. ಸ್ವೀಕರಿಸಿದೆ. ಇದರಲ್ಲಿ ಈಗಾಗಲೇ 2,482.099 ಕೋಟಿ ರೂ. ವಿತರಿಸಲಾಗಿದೆ. ಪಾವತಿ ವಿಫಲವಾದ ಕಾರಣ 5.591 ಕೋಟಿ ರೂ. ಹಿಂತಿರುಗಿಸಲಾಗಿದೆ. ಈ ರೈತರಿಗೆ ಪಾವತಿ ಮಾಡುವ ಪ್ರಕ್ರಿಯೆ ಮುಂದುವರಿದಿದೆ ಎಂದು ಸಭೆಯಲ್ಲಿ ಹಣಕಾಸಿನ ಸ್ಥಿತಿಗತಿ ಕುರಿತು ಅಧಿಕಾರಿಗಳು ಅಂಕಿ ಅಂಶ ಮಂಡಿಸಿರುವುದು ತಿಳಿದು ಬಂದಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳು ನೀಡಿದ್ದ ಅಂಕಿ ಅಂಶಗಳನ್ನು ಆರ್ಥಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ರೈತರಿಗೆ ಮಾಡಬೇಕಿರುವ ಪಾವತಿಗಳ ಬಗ್ಗೆ ಹಣಕಾಸು ಇಲಾಖೆಗೆ ಅರಿವಿದೆ. ಅಲ್ಲದೇ ಕರ್ನಾಟಕ ರಾಜ್ಯ ಆಹಾರ ನಿಗಮದಿಂದ ಕರ್ನಾಟಕ ಸರಕಾರಕ್ಕೆ 357.39 ಕೋಟಿ ರೂ. ಬಾಕಿ ಇದೆ. ಈ ಹಣವನ್ನು 2025-26ನೇ ಸಾಲಿನ ಕೆಎಂಎಸ್ ಅಡಿಯಲ್ಲಿ ರೈತರಿಗೆ ಪಾವತಿ ಮಾಡಲು ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಿಸಿರುವುದು ತಿಳಿದುಬಂದಿದೆ.
ಅದರಂತೆ ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮದಿಂದ ಕರ್ನಾಟಕ ಸರಕಾರಕ್ಕೆ ಪಾವತಿಸಬೇಕಾದ ಬಾಕಿ ಮೊತ್ತವು 1,721.39 ಕೋಟಿಯಷ್ಟು ಉಳಿಯುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಇಲಾಖೆಯ ಕಾರ್ಯದರ್ಶಿ (ವೆಚ್ಚ) ಅವರು ಮುಂದಿನ ವರ್ಷದಲ್ಲಿ ಮಾರುಕಟ್ಟೆ ಸೆಸ್ ಆಗಿ ಸಂಗ್ರಹಿಸಲಾಗುವ 60 ಪೈಸೆಯಲ್ಲಿ 10 ಪೈಸೆಯ ಪಾಲನ್ನು ಹೆಚ್ಚಿಸಬೇಕು. ಇದರಿಂದ ರಿವಾಲ್ವಿಂಗ್ ಫಂಡ್‌ಗೆ ಹೆಚ್ಚಿನ ಮೊತ್ತದ ಕೊಡುಗೆ ಹರಿದುಬರಲಿದೆ ಎಂದು ಸಲಹೆ ನೀಡಿರುವುದು ಗೊತ್ತಾಗಿದೆ.
ಹೆಚ್ಚುವರಿಯಾಗಿ 1,127.801 ಕೋಟಿ ರೂ. ಅಗತ್ಯವಿದೆ :
ರೈತರಿಗೆ ಇನ್ನೂ 1,133.392 ಕೋಟಿ ರೂ. ಪಾವತಿಸಬೇಕಿದೆ. ಲಭ್ಯವಿರುವ ಬಾಕಿ ಮೊತ್ತವನ್ನು ಹೊಂದಾಣಿಕೆ ಮಾಡಿದ ನಂತರ, ಹೆಚ್ಚುವರಿಯಾಗಿ 1,127.801 ಕೋಟಿ ರೂ. ಅಗತ್ಯವಿದೆ. 2026ರ ಜುಲೈ 31ರ ಹೊತ್ತಿಗೆ 2004-05ನೇ ಸಾಲಿನಿಂದ ರಿವಾಲ್ವಿಂಗ್ ಫಂಡ್‌ಗೆ ಮರುಪಾವತಿಸಬೇಕಾದ 2,074.47 ಕೋಟಿ ರೂ. ಬಾಕಿ ಉಳಿದಿದೆ. 2024-25ನೇ ಸಾಲಿನ ಕೆಎಂಎಸ್‌ಗೆ ಸಂಬಂಧಿಸಿದಂತೆ, ಭಾರತ ಸರಕಾರವು 351.95 ಕೋಟಿ ರೂ. ಬಿಡುಗಡೆ ಮಾಡಿದೆ. ಅದನ್ನು 2026ರ ಜುಲೈ 30ರಂದು ಖಾತೆಗೆ ಜಮಾ ಮಾಡಲಾಗಿದೆ. ಈ ಮೊತ್ತವನ್ನು ಆರಂಭದಲ್ಲಿ ರಿವಾಲ್ವಿಂಗ್ ಫಂಡ್‌ಗೆ ಜಮೆ ಮಾಡಲಾಗಿತ್ತು. ಇದಲ್ಲದೆ, 2022-23ನೇ ಸಾಲಿನ ಕೆಎಂಎಸ್‌ಗೆ ಸಂಬಂಧಿಸಿದಂತೆ, 357.39 ಕೋಟಿ ರೂ. ಬಿಡುಗಡೆ ಮಾಡಿರುವ ಭಾರತ ಸರಕಾರವು 2026ರ ಜುಲೈ 30ರಂದು ಜಮೆ ಮಾಡಿದೆ. ಈ ಮೊತ್ತವನ್ನು ಕರ್ನಾಟಕ ಸರಕಾರಕ್ಕೆ ಪಾವತಿಸಬೇಕಾಗಿದೆ. ಪ್ರಸ್ತುತ ಈ ಹಣವು ಕರ್ನಾಟಕ ರಾಜ್ಯ ಆಹಾರ ನಿಗಮದ ಬಳಿ ಇರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.