×
Ad

“ಅಧ್ಯಾಪನ ಅಧ್ಯಯನದ ನೀಲನಕ್ಷೆ' ಡಾ.ನೀಲಮ್ಮ ಕತ್ನಳ್ಳಿ

Update: 2025-07-07 13:19 IST

1966ರಲ್ಲಿ ಗುಲ್ಬರ್ಗಾ ಆಕಾಶವಾಣಿ ಪ್ರಾರಂಭವಾದಾಗ ಅದು ಸಂಪೂರ್ಣವಾಗಿ ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳ ಮರು ಪ್ರಸಾರ ಕೇಂದ್ರವಾಗಿತ್ತು. ಆಗಲೇ ಆ ಪ್ರದೇಶದ ಸಾಹಿತಿಗಳ, ಕಲಾವಿದರ ಗಮನ ಸಳೆಯಿತಾದರೂ, ಸ್ವತಂತ್ರವಾಗಿ ಅಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಪ್ರಸಾರ ಮಾಡಲು ಸಾಧ್ಯವಾಗಿರಲಿಲ್ಲ. ಕ್ರಮೇಣ ಅದು ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ಪ್ರಸಾರ ಮಾಡಲು ಸಿದ್ಧಗೊಳ್ಳುತ್ತಿರುವಾಗ ಅನುಕೂಲವಾದವರು ಆ ಭಾಗದ ಸಾಹಿತಿಗಳು ಹಾಗೂ ಕಲಾವಿದರು.

ಹೈದರಾಬಾದ್ ಕರ್ನಾಟಕವೆಂದು ಕರೆಸಿಕೊಂಡ ಅತ್ಯಂತ ಶುದ್ಧ ಅಪ್ಪಟ ಕನ್ನಡದ ಕವಿರಾಜ ಮಾರ್ಗದ ಪ್ರದೇಶದಲ್ಲಿ ಸಾಹಿತ್ಯದ ಸಂಪತ್ತು ಕಡಿಮೆ ಏನು ಇರಲಿಲ್ಲ. ಈ ಪ್ರದೇಶದ ಸಾಹಿತ್ಯ ಕಲಾವಿದರನ್ನು ಬೆಳಕಿಗೆ ತರಲು ಆಕಾಶವಾಣಿ ಕೇಂದ್ರ ಸಿದ್ಧವಾದಾಗ ಸಾಹಿತಿಗಳ ತಂಡವೇ ಎದುರಾಯಿತು. ಅದರಲ್ಲಿ ಅನೇಕ ಲೇಖಕ, ಕವಿಯತ್ರಿ, ಕಲಾವಿದೆಯರು ಗಮನಾರ್ಹ ಸಂಖ್ಯೆಯಲ್ಲಿದ್ದುದು ಆಕಾಶವಾಣಿಗೆ ಮತ್ತಷ್ಟು ಅನುಕೂಲವಾಯಿತು.

ಗೀತಾ ನಾಗಭೂಷಣ, ಶಶಿಕಲಾ ವಸ್ತ್ರದ, ಶಶಿಕಲಾ ಮೋದಿ, ಸರಸ್ವತಿ ಚಿಮ್ಮಲಗಿ, ಲಕ್ಷ್ಮೀದೇವಿ ಶಾಸ್ತ್ರಿ, ಪ್ರೇಮಾ ಶಿರ್ಸೆ, ಸುಮನ ಯಜುರ್ವೇದಿ ಮುಂತಾದ ಅನೇಕ ಮಹಿಳಾ ಸಾಹಿತಿಗಳ ಗಡಣದಲ್ಲಿ ನನಗೆ ಕಂಡವರು ನೀಲಮ್ಮ ಕತ್ನಳ್ಳಿ.

ಕನ್ನಡ ಪ್ರಾಧ್ಯಾಪಕಿಯಾಗಿ ಅತ್ಯಂತ ಕಳಕಳಿಯ ಬೋಧಕರಾಗಿ ನನಗೆ ಪರಿಚಯವಾದ ನೀಲಮ್ಮ ಅವರಿಂದ ಆಕಾಶವಾಣಿಗೆ ಅವರ ಕವನ, ಚಿಂತನ, ನಾಟಕಗಳನ್ನು ಪ್ರಸಾರ ಮಾಡಲು ಸಾಧ್ಯವಾಯಿತು. ನನಗೀಗ ನೆನಪಿನಲ್ಲಿರುವ ಅವರ ಕಾರ್ಯಕ್ರಮಗಳಲ್ಲಿ ಚಿಂತನ ಬರಹಗಳೇ ಹೆಚ್ಚು.

ನೀಲಮ್ಮ ಅವರು ಅಧ್ಯಾಪಕ ವೃತ್ತಿಯಲ್ಲಿ ಯಾವಾಗಲೂ ಅಧ್ಯಯನದಲ್ಲಿಯೇ ತೊಡಗಿಸಿಕೊಂಡು ಹಲವಾರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅಧ್ಯಯನ, ಅಧ್ಯಾಪನ ಎರಡರಲ್ಲಿಯೂ ಪರಿಣತಿ ಪಡೆದಿದ್ದಾರೆ. ಅವರ ಚಿಂತನ ಬರಹಗಳಲ್ಲಿ ಮಹಿಳಾಪರ ಕಳಕಳಿಯ ಜೊತೆಗೆ ಅಧ್ಯಾತ್ಮದ ಒಲವು ಎದ್ದು ಕಾಣುತ್ತದೆ. ನಾಲ್ಕು ದಶಕಗಳ ತಮ್ಮ ಬೋಧನ ವೃತ್ತಿಯಲ್ಲಿ ವಿದ್ಯಾರ್ಥಿಗಳ ಒಲುಮೆಗೆ, ಸಾಹಿತ್ಯದಲ್ಲಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ತಾನು ಕಲಿಸಿದ ಸಂಸ್ಥೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು ಅವರ ವ್ಯಕ್ತಿತ್ವಕ್ಕೆ ಮೆರುಗು ತಂದಿದೆ.

ನೀಲಮ್ಮ ಅವರ ಬರಹಗಳನ್ನು ಡಾ.ಹಾಮಾನಾ, ಡಾ,ಹಂಪನಾ, ಡಾ.ತಿಪ್ಪೆರುದ್ರಸ್ವಾಮಿ, ಡಾ.ಗುರುಲಿಂಗ ಕಾಪಸೆ ಮುಂತಾದ ಖ್ಯಾತರು ಶ್ಲಾಘಿಸಿದ್ದಾರೆ. ಡಾ.ನೀಲಮ್ಮ ಕಲ್ಯಾಣ ಕರ್ನಾಟಕದ ಶ್ರೇಷ್ಠ ಚಿಂತಕರಲ್ಲಿ ಒಬ್ಬರು ಎನ್ನುವುದಕ್ಕೆ ಅವರ ಬರಹಗಳ ಸಂಗ್ರಹ ‘ಬಾಳಿಗೊಂದು ಬೆಳಕು’ ಗ್ರಂಥವೇ ಸಾಕ್ಷಿ. ಅವರ ಅನೇಕ ಬರಹಗಳಲ್ಲಿ ನಾವು ಶೈಕ್ಷಣಿಕ ಕ್ರಾಂತಿ, ಮಹಿಳಾ ಪರ ಚಿಂತನೆ, ಮುಂತಾದ ವಿಷಯಗಳ ಸ್ವತಂತ್ರ ಚಿಂತನೆಯನ್ನು ಕಾಣುತ್ತೇವೆ. ಇವು ಅವರ ಅವಿರತ ಅಧ್ಯಯನಕ್ಕೆ ಸಾಕ್ಷಿಯಾಗಿವೆ.

ಕೆಲವೇ ವರ್ಷಗಳ ಅವರ ಸಾಹಿತ್ಯಒಡನಾಟ ಕಂಡು ಆಕಾಶವಾಣಿಗೆ ಸಂದ ಅವರ ಪ್ರಸಾರ ಸೇವೆ ನನಗೆ ಈಗಲೂ ನೆನಪಿದೆ. ನಗು ಮುಖದ ಪ್ರಾಧ್ಯಾಪಕಿಗೆ ಈಗ 75 ವರ್ಷ. ‘ತನ್ನ ಕೆಲಸದಲ್ಲಿ ಆನಂದ ಪಡುವವರು ಯಾವಾಗಲೂ ದೀರ್ಘಾಯುಷಿ’ ಎಂಬ ಮಾತು ಪ್ರೊಫೆಸರ್‌ಡಾ.ನೀಲಮ್ಮ ಅವರಿಗೆ ಸಲ್ಲುತ್ತದೆ. ಅವರ ಬಾಳಿಗೊಂದು ಬೆಳಕು ಗ್ರಂಥದಲ್ಲಿಯ ಸುಖ ದುಃಖ ಲೇಖನದಲ್ಲಿ ಉದ್ಧರಿಸಿದ ಕಾವ್ಯಾನಂದರ ಈ ಸಾಲುಗಳೇ ನನ್ನ ಹಾರೈಕೆ.

ಬದುಕು ಜೀವಿಯ ಬದುಕು

ಕುತ್ತಗಳತುತ್ತ

ನುಂಗಿ ಬದುಕು;

ನಿರಾಳೆಗಳ ನಂಜನೀಂಟ ಬದುಕು...

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಎಂ. ಶಿರಹಟ್ಟಿ

contributor

Similar News