ನೊಂದವರಿಗೆ ಆಸರೆಯಾದ ‘ರಾಜಶ್ರೀ’ ನಾಲ್ವಡಿ
ಹಲವು ರಾಜರ ಆಳ್ವಿಕೆಯ ಇತಿಹಾಸವನ್ನು ಕೆದಕಿ ನೋಡಿದಾಗ ಅದು ಮಣ್ಣಿಗಾಗಿ ಇಲ್ಲವೇ ಹೆಣ್ಣಿಗಾಗಿ ನಡೆದ ಚರಿತ್ರೆಯೇ ಕಾಣುತ್ತದೆ. ಆದರೆ ಭಾರತ ದೇಶದಲ್ಲಿ ಸಂಪ್ರದಾಯಸ್ಥರು ನೆಟ್ಟು ಬೇರೂರಿರುವ ಜಾತಿ ವ್ಯವಸ್ಥೆ, ಅಸಮಾನತೆ, ಮಹಿಳೆಯ ಎರಡನೇ ದರ್ಜೆಯ ಸ್ಥಾನಮಾನ ಇತ್ಯಾದಿ ಅನಿಷ್ಟಗಳು ಚಾಲ್ತಿಯಲ್ಲಿರುವಂತೆ ಜಾರಿಗೆ ತರಲಾಗಿರುವ ಪದ್ಧತಿಯಿಂದ ನೊಂದಿರುವವರ ಪಾಲಿಗೆ ಆಸರೆಯಾದವರ ಇತಿಹಾಸ ಕಾಣಸಿಗುವುದು ಅತಿ ವಿರಳ. ಅಂತಹವರೊಬ್ಬರು ನಮ್ಮ ರಾಜಶ್ರೀ ನಾಲ್ವಡಿಯವರು. ಮೈಸೂರಿನ ಸಂಸ್ಥಾನದ 10ನೇ ಚಾಮರಾಜ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣಿ ದಂಪತಿಯ ಮಗನಾಗಿ ಜೂನ್ 4, 1884ರಂದು ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರು ಮುಂದೊಂದು ದಿನ ಒಬ್ಬ ರಾಜನಾಗಿ ತನ್ನ ಆಡಳಿತದಲ್ಲಿ ನೊಂದವರಾದ ಅಸ್ಪಶ್ಯರು, ಮಹಿಳೆಯರಿಗಾಗಿ ಎಷ್ಟೊಂದು ಕಾನೂನು ಜಾರಿಗೆ ತಂದಿದ್ದಾರೆ ಎಂದರೆ ನಿಜಕ್ಕೂ ಅವರ ಆಡಳಿತದ ಆದರ್ಶವೇ ಸರಿ. ಇವರ ಆಡಳಿತವನ್ನು 1930-32ರ ದುಂಡುಮೇಜಿನ ಸಮ್ಮೇಳನದ ಸಂಯುಕ್ತ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಬ್ರಿಟಿಷ್ ನ್ಯಾಯವಾದಿ ಲಾರ್ಡ್ ಸಾಂಕಿರವರು ‘ನಾಲ್ವಡಿಯವರ ಆಳ್ವಿಕೆಯ ಮೈಸೂರು ಸಂಸ್ಥಾನ ಭರತಖಂಡದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿ ಮುಂದುವರಿಯುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ನ್ಯಾಯವಾದ ಅರ್ಹತೆಯನ್ನು ಪಡೆದಿದ್ದು, ಭಾರತದ ಸಂಸ್ಥಾನಗಳಲ್ಲಿಯೇ ಮಾದರಿ ಸಂಸ್ಥಾನವಾಗಿದೆ’ ಎಂದು ಹೇಳಿದ್ದಾರೆ. ಇವರ ಹೇಳಿಕೆಯು ಎನ್‌ಸೈಕ್ಲೋಪಿಡಿಯಾ ಬ್ರಿಟ್ಯಾನಿಕಾದಲ್ಲೂ ಕೂಡ ದಾಖಲಾಗಿದೆ. ಏಕೆಂದರೆ, ಆಡಳಿತದಲ್ಲಿ ನಾಲ್ವಡಿಯವರು ಜಾತಿಪದ್ಧತಿ ಹಾಗೂ ಅಸ್ಪಶ್ಯತೆಯಿಂದ ನೊಂದಿರುವ ಜನರಿಗೆ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಇತರ ಸೌಲಭ್ಯಗಳು ಮತ್ತು ಮೂಢನಂಬಿಕೆಗಳ ವಿರುದ್ಧ ಕಾನೂನುಗಳು, ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕುವಿಕೆ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಬದುಕಲು ಅವರು ಕಾನೂನುಗಳನ್ನು ಜಾರಿಗೆ ತಂದರು.
1894ರಲ್ಲಿ ನಾಲ್ವಡಿಯವರ ತಂದೆ 10ನೇ ಚಾಮರಾಜ ಒಡೆಯರ್‌ರವರು ನಿಧನ ಹೊಂದಿದ ನಂತರ ರಾಣಿ ಕೆಂಪನಂಜಮ್ಮಣಿ ದೇವಿಯವರು 1895ರಿಂದ 1902ರವರಿಗೆ ಮೈಸೂರು ರಾಜ್ಯದ ಆಡಳಿತವನ್ನು ನಡೆಸಿದರು. ಶತಮಾನಗಳ ಕಾಲ ಮಹಿಳೆಯರು ಕಟ್ಟುಪಾಡಿನಿಂದ ಬದುಕುವಂತಹ ಸ್ಥಿತಿ ನಿರ್ಮಾಣವಾಗಿರುವ ಕಾಲಘಟ್ಟದಲ್ಲಿ 1881ರಲ್ಲಿ ಮಹಾರಾಣಿ ಯವರ ಹೆಸರಿನಲ್ಲಿ ಸ್ಥಾಪಿತವಾಗಿದ್ದ ಬಾಲಿಕಾ ಪಾಠಶಾಲೆ ಮುಂದಿನ ದಿನಗಳಲ್ಲಿ ಪ್ರೌಢಶಾಲೆಯಾಗಿ ಮಾರ್ಪಾಡಾಯಿತು. ನಾಲ್ವಡಿಯವರ ತಾಯಿ ಮಹಾರಾಣಿ ಕೆಂಪನಂಜಮ್ಮಣಿರವರು ಹೆಣ್ಣು ಮಕ್ಕಳ ಮೇಲೆ ಕಾಳಜಿಯಿಂದ ಅವರ ಶಿಕ್ಷಣಕ್ಕೆ ಒತ್ತು ನೀಡಿ, ಅವರ ಆಡಳಿತದಿಂದ ಅಭಿವೃದ್ಧಿಪಡಿಸಿದ್ದು, 1901ರಲ್ಲಿ ಮಹಾರಾಣಿ ಕಾಲೇಜು ಆಗಿ ಬೆಳೆಯಿತು. ಇಂದಿಗೂ ಮೈಸೂರು ಭಾಗದ ಹೆಣ್ಣು ಮಕ್ಕಳಿಗೆ ಮಹಾರಾಣಿ ಕಾಲೇಜು ಶೈಕ್ಷಣಿಕ ಆಸರೆಯಾಗಿದ್ದು, ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಮಹಾರಾಣಿ ಕಾಲೇಜಿಗೆ ಭೇಟಿ ಕೊಟ್ಟ ಬ್ರಿಟಿಷ್ ನಾಗರಿಕ ಸೇವಕರಾದ ಸರ್ ರೋಪರ್ ಲೆತ್‌ಬ್ರಿಡ್ಜ್ ರವರು ‘ಸ್ತ್ರೀ ಶಿಕ್ಷಣದ ವಿಚಾರದಲ್ಲಿ ಈ ಸಂಸ್ಥೆಯು ಭಾರತದಲ್ಲಿಯೇ ಮುಖ್ಯ ಸಂಸ್ಥೆಯಾಗಿದೆ. ಇದನ್ನು ಮಹಾರಾಜರ ಸಾಮ್ರಾಜ್ಯದಲ್ಲಿ ಅತ್ಯಂತ ರತ್ನಗಳಲ್ಲೊಂದೆಂದು ಭಾವಿಸಬಹುದಾಗಿದೆ’ ಎಂದು ದಾಖಲಿಸಿದ್ದಾರೆ. ಹೀಗೆ ಮಹಾರಾಣಿ ಕಾಲೇಜು ಮಾತ್ರವಲ್ಲದೆ ಮಹಿಳೆಯರಿಗಾಗಿ 1913ರಲ್ಲಿ ವಾಣಿವಿಲಾಸ ಅರಸು ಗರ್ಲ್ಸ್ ಸ್ಕೂಲ್, ಎನ್‌ಟಿಎಂ ಶಾಲೆ ಮತ್ತು ಚಾಮರಾಜೇಂದ್ರ ಅರಸು ಬೋರ್ಡಿಂಗ್ ಸ್ಕೂಲ್ ಹಾಗೂ ಇನ್ನೂ ಹಲವು ಶಾಲೆಗಳು ಸ್ಥಾಪಿತವಾಗಿವೆ. ಹೀಗೆ ಮಹಿಳಾ ಶಿಕ್ಷಣಕ್ಕೆ ನಾಲ್ವಡಿಯವರು ಎಷ್ಟು ಒತ್ತು ನೀಡಿದ್ದರೋ ಹಾಗೆಯೇ ಮಹಿಳೆಯರನ್ನು ಶೋಷಿಸಲು ರೂಢಿಗತವಾಗಿ ನಡೆಸಿಕೊಂಡು ಬಂದಿರುವಂತಹ ಅನಿಷ್ಟ ಪದ್ಧತಿಗಳನ್ನು ಕೂಡ ಅವರು ತೊಡೆದು ಹಾಕುವಲ್ಲಿ ದಿಟ್ಟ ಹೆಜ್ಜೆ ಇಟ್ಟರು.
ಅನಾದಿಕಾಲದಿಂದಲೂ ಹೆಣ್ಣಿನ ಮೇಲೆ ದೇವದಾಸಿ ಪದ್ಧತಿ ಹೇರಿ ಅವರನ್ನು ಶೋಷಿಸುತ್ತಾ ಬಂದಿದ್ದು, ಇದನ್ನು ನಿರ್ನಾಮಗೊಳಿಸಲು 1909ರ ಮೇ ತಿಂಗಳಿನಲ್ಲಿ ನಾಲ್ವಡಿಯವರು ಸರಕಾರದ ಆಜ್ಞೆಯನ್ನು ಹೊರಡಿಸಿ ದೇವದಾಸಿ ಪದ್ಧತಿಯನ್ನು ದುಷ್ಟಪದ್ಧತಿ ಎಂದು ಘೋಷಿಸಿ ನಿಷೇಧ ಮಾಡಿದರು. ಇವರ ಈ ಕೆಚ್ಚೆದೆಯ ಧೈರ್ಯದ ಕಾರ್ಯವನ್ನು ಮೆಚ್ಚಿ ‘ಮದ್ರಾಸ್ ಮೇಲ್’ ಪತ್ರಿಕೆಯು ಭಾರತವನ್ನಾಳುತ್ತಿದ್ದ ಬ್ರಿಟಿಷರು ಹಾಗೂ ಭಾರತೀಯ ಸಂಸ್ಥಾನದ ಅನೇಕ ರಾಜರುಗಳು ಈ ಅನಿಷ್ಟವನ್ನು ತಡೆಯುವ ಧೈರ್ಯ ಮಾಡದೆ ಹೋಗಿದ್ದರೂ, ನಾಲ್ವಡಿ ಅವರು ನಿರ್ಭೀತಿಯಿಂದ ಈ ಪದ್ಧತಿಯನ್ನು ತಡೆದರು ಎಂದು ಹೊಗಳಿ ಪ್ರಕಟಿಸಿತು. ಮಹಿಳೆಯರನ್ನು ಮತ್ತೊಂದು ಬಗೆಯಲ್ಲಿ ಶೋಷಿಸಲು ಜಾರಿಯಲ್ಲಿದ್ದ ವೇಶ್ಯಾವೃತ್ತಿಯನ್ನು ನಿಷೇಧಿಸಲು ನಾಲ್ವಡಿಯವರು ಯೋಚಿಸಿ, ಈ ವೃತ್ತಿಯ ಆಳವನ್ನು ಅರಿಯಲು ಒಂದು ಸಮಿತಿಯನ್ನು ಮಾಡಿ ಅದರಿಂದ ಬಂದ ಮಾಹಿತಿಯ ಆಧಾರ ಮತ್ತು ಪ್ರಜಾಪ್ರತಿನಿಧಿ ಸಭೆಯ ಬಹುಮತದೊಂದಿಗೆ 1936 ಜುಲೈ 14ರಂದು ಸಪ್ರೆಷನ್ ಆಫ್ ಇಮ್ಮಾರಲ್ ಟ್ರಾಫಿಕ್ ಕಾಯ್ದೆಯನ್ನು ಜಾರಿಗೆ ತಂದು ವೇಶ್ಯಾವೃತ್ತಿಯನ್ನು ಕಾನೂನುಬಾಹಿರಗೊಳಿಸಿದರು. ಸತಿ ಪದ್ಧತಿ ಭಾರತದ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದಂತಹ ಒಂದು ಅನಿಷ್ಟ ಪದ್ಧತಿ, ಈ ಪದ್ಧತಿಯಲ್ಲಿ ಪತಿ ಸತ್ತ ನಂತರ ವಿಧವೆ ಹೆಣ್ಣು ತಾನು ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಿದ್ದಳು. ರಾಜಾರಾಮ್ ಮೋಹನ್ ರಾಯ್‌ರವರ ಪರಿಶ್ರಮದಿಂದ 1829ರಲ್ಲಿ ಸತಿ ಪದ್ಧತಿ ನಿಷೇಧವಾಯಿತು, ವಿಧವೆಯರ ಮರು-ಮದುವೆ ಎಂಬುದಂತೂ ದೂರದ ಮಾತಾಗಿತ್ತು. ಆದರೆ, ನಾಲ್ವಡಿಯವರು ಈ ಸಂಪ್ರದಾಯದ ಕಟ್ಟುಪಾಡುಗಳನ್ನು ಮುರಿದು 1938ರಲ್ಲಿ ಪ್ರಜಾಪ್ರತಿನಿಧಿ ಮತ್ತು ಸಾರ್ವಜನಿಕರ ಬೆಂಬಲದೊಂದಿಗೆ ಜುಲೈ 7, 1938ರಲ್ಲಿ ‘ದಿ ಮೈಸೂರು ಹಿಂದೂ ವಿಡೋ ರೀ ಮ್ಯಾರೇಜ್ ಆಕ್ಟ್’ನ್ನು ಜಾರಿಗೆ ತಂದು ದೇವರಾಜ ಬಹಾದ್ದೂರ್ ಫಂಡ್‌ನ್ನು ಸ್ಥಾಪಿಸಿ ವಿಧವೆಯರಿಗೆ ಹಣದ ಸಹಾಯವನ್ನು ನೀಡಲು ವಿಡೋ ಹೋಂಗಳನ್ನು ಸ್ಥಾಪನೆ ಮಾಡಿದರು. ಇವರು ನೊಂದ ವಿಧವೆಯರಿಗೆ ಪುನರ್ವಿವಾಹಕ್ಕೆ ದಾರಿ ಮಾಡಿಕೊಟ್ಟರು. ಇಷ್ಟೇ ಅಲ್ಲದೆ ಜೂನ್ 29, 1933ರಲ್ಲಿ ‘ದಿ ಹಿಂದೂ ಲಾ ವುಮೆನ್ಸ್ ರೈಟ್ಸ್ ಆಕ್ಟ್’ನ್ನು ಜಾರಿಗೆ ತಂದು ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲೂ ಹಕ್ಕನ್ನು ಪಡೆಯುವಂತೆ ಮಾಡಿದರು. ನಾಲ್ವಡಿಯವರ ಆಡಳಿತದಲ್ಲಿ ಜಾರಿಗೆ ತಂದ ಈ ಕಾನೂನನ್ನು ಗಮನಿಸಿದರೆ ಅವರ ದೂರದೃಷ್ಟಿತನ ಅರಿವಾಗುತ್ತದೆ.
ಅಪ್ರಾಪ್ತ ವಯಸ್ಕರಲ್ಲಿ ಒಳ್ಳೆಯದು-ಕೆಟ್ಟದು ಎಂಬುದನ್ನು ತೀರ್ಮಾನಿಸಲು ಕಷ್ಟಸಾಧ್ಯವಾಗುತ್ತದೆ ಹಾಗೂ ಇವರು ಕೆಟ್ಟ ದುಶ್ಚಟಗಳಿಗೆ ದಾಸರಾಗಬಾರದು ಹಾಗೂ ಬಲಿಯಾಗಬಾರದೆಂದು ಕಾಳಜಿ ಇಟ್ಟಿದ್ದ ನಾಲ್ವಡಿಯವರು ಅಕ್ಟೋಬರ್ 9, 1911ರಲ್ಲಿ ‘ದಿ ಪ್ರಿವೆನ್ಷನ್ ಆಫ್ ಜುವೆನೈಲ್ ಸ್ಮೋಕಿಂಗ್’ ಕಾನೂನನ್ನು ಜಾರಿಗೆ ತಂದು 16 ವರ್ಷದ ಒಳಗಿನ ಮಕ್ಕಳಿಗೆ ತಂದೆಯ ಅನುಮತಿ ಪತ್ರವಿಲ್ಲದೆ ಹೊಗೆಸೊಪ್ಪಿನ ಪದಾರ್ಥಗಳನ್ನು ಮಾರುವವರನ್ನು ಶಿಕ್ಷೆಗೆ ಗುರಿ ಮಾಡಿದರು. ಇತ್ತೀಚಿನ ದಿನಗಳಲ್ಲೂ ಈ ಕಾನೂನು ಚಾಲ್ತಿಯಲ್ಲಿದೆ. ವೃತ್ತಿನಿರತ ಮಹಿಳೆಯರು ತಾವು ಹೆರಿಗೆ ಸಮಯದಲ್ಲಿ ಕೆಲಸ ನಿರ್ವಹಿಸಲು ಬಹಳ ಕಷ್ಟ ಅನುಭವಿಸುತ್ತಿದ್ದುದನ್ನು ಕಂಡಿದ್ದ ನಾಲ್ವಡಿಯವರು ಮೈಸೂರಿನ ಮಹಿಳಾ ಕಾರ್ಮಿಕರ ಹೆರಿಗೆ ಭತ್ತೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಖಾಸಗಿ ಕಾರ್ಖಾನೆಗಳಿಗೆ ಅನ್ವಯವಾಗುವಂತೆ ದುಡಿಯುವ ಮಹಿಳಾ ಕಾರ್ಮಿಕರಿಗೆ ಎಂಟು ವಾರಗಳ ಹೆರಿಗೆ ಭತ್ತೆ ನೀಡುವ ‘ದಿ ಮೈಸೂರು ಮೆಟರ್ನಿಟಿ ಬೆನಿಫಿಟ್ ಆಕ್ಟ್’ನ್ನು 1927ರಲ್ಲಿ ಜಾರಿಗೆ ತಂದು ಪ್ರಸೂತಿ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟರು.
ಶಿಕ್ಷಣಕ್ಕೆ ವಿಶ್ವವಿದ್ಯಾನಿಲಯಗಳು, ಜನರ ಆರೋಗ್ಯಕ್ಕೆ ಆಸ್ಪತ್ರೆಗಳು, ರೈತಾಪಿ ಜನರಿಗೆ ಅನುಕೂಲವಾಗಲು ಜಲಾಶಯಗಳು, ಕಾರ್ಖಾನೆಗಳು, ಮೂಲಸೌಕರ್ಯ ಹೀಗೆ ಹೇಳುತ್ತಾ ಹೋದರೆ ನಾಲ್ವಡಿಯವರ ಸಾಧನೆಯ ಪಟ್ಟಿ ಮುಗಿಯದು. ಈ ಅಭಿವೃದ್ಧಿಯ ನಡುವೆಯೇ ನೊಂದ, ತುಳಿತಕ್ಕೆ ಒಳಗಾದ ದಮನಿತರು ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಸಾಮಾಜಿಕ ಸಮಾನತೆಯ ಸ್ಥಾನವನ್ನು ಕಲ್ಪಿಸಿದ್ದಾರೆ. ನಾಲ್ವಡಿಯವರ ಕಾಲದ ಆಡಳಿತ ಮೈಸೂರು ಸಂಸ್ಥಾನದಲ್ಲೇ ಒಂದು ಸ್ವರ್ಣ ಯುಗವೇ ಎಂದು ಹೇಳಬಹುದು. ನಾಲ್ವಡಿಯವರ ಸಾಮಾಜಿಕ ಕ್ರಾಂತಿಯ ಆಡಳಿತವನ್ನು ಮಹಾತ್ಮಾ ಗಾಂಧಿಯವರು ಕಂಡು ಅವರಿಗೆ ‘ರಾಜಶ್ರೀ’ ಎಂದು ಬಿರುದು ನೀಡಿದ್ದಾರೆ. ಇಂದಿಗೂ ರಾಜಶ್ರೀ ನಾಲ್ವಡಿಯವರ ಆಡಳಿತ ಮತ್ತು ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕಾರ್ಖಾನೆಗಳು ಮೈಸೂರಿನ ಜನರಿಗೆ ಆಸರೆಯಾಗಿ ನಿಂತಿವೆ. ಹಾಗೆಯೇ ನಾಲ್ವಡಿ ಎಂಬ ಹೆಸರು ಕೂಡ ಮೈಸೂರಿಗೆ ಚಿರಋಣಿಯಾಗಿದೆ.