×
Ad

ಪ್ರೊ. ಬಿ. ಕೃಷ್ಣಪ್ಪರ ಹೋರಾಟದ ಕಥನ : ದಲಿತ ಸಮುದಾಯ ಹಾಗೂ ಚಳವಳಿ ಮುಂದಿರುವ ಸಮಸ್ಯೆ ಸವಾಲು

Update: 2025-06-09 16:49 IST

ಪ್ರೊ. ಬಿ. ಕೃಷ್ಣಪ್ಪ

ಪ್ರೊ. ಬಿ. ಕೃಷ್ಣಪ್ಪ ಅವರ 87ನೇ ಹುಟ್ಟುಹಬ್ಬದ ಈ ಸಂದರ್ಭದಲ್ಲಿ, ಒಳಮೀಸಲಾತಿ ವಿಚಾರದ ಕಾರಣಕ್ಕಾಗಿ ಅನಗತ್ಯ ಅಸಹನೆಗೆ ಒಳಗಾಗಿರುವ ದಲಿತ ಸಮುದಾಯಕ್ಕೆ ಪ್ರೊ. ಬಿ. ಕೃಷ್ಣಪ್ಪನವರ ಚಿಂತನೆಗಳು ಅರಿವಿನ ಹಣತೆಯಾಗಲಿ. ಪ್ರೊ. ಬಿ.ಕೆ. ಅವರು 9ನೇ ಜೂನ್ 1938 ರಂದು, ಚಿತ್ರದುರ್ಗ ಜಿಲ್ಲೆಯ, ಹರಿಹರ ತಾಲ್ಲೂಕಿನ ದಲಿತ ಕುಟುಂಬದಲ್ಲಿ ಜನಿಸಿದರು. ತಂದೆ-ಬಸಪ್ಪ, ತಾಯಿ-ಚೌಡಮ್ಮ ಹರಿಹರ ತಾಲ್ಲೂಕು ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಹರಿಹರದಲ್ಲಿಯೂ, ಬಿ.ಎ. ಪದವಿಯನ್ನು ಚಿತ್ರದುರ್ಗದಲ್ಲಿಯೂ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡ ಇವರು, ಶಿವಮೊಗ್ಗ ಜಿಲ್ಲೆಯ ಸಾಗರದ ಲಾಲ್‍ಬಹದ್ದೂರ್ ಕಾಲೇಜ್, ಶಿವಮೊಗ್ಗ ನಗರದ ಕಮಲಾನೆಹರೂ ಕಾಲೇಜ್ ಹಾಗೂ ಭದ್ರಾವತಿಯ ಸರ್. ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, 1995ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಪ್ರಾಧ್ಯಾಪಕರಾಗಿದ್ದಾಗಲೇ ‘ಸಾಹಿತ್ಯ ಚಿಂತನ ವೇದಿಕೆ’ ಹಾಗೂ ‘ತರುಣ ಕಲಾವಿದರು’ ಎಂಬ ಹವ್ಯಾಸಿ ನಾಟಕ ತಂಡವನ್ನು ಸ್ಥಾಪಿಸಿದ್ದ ಪ್ರೊ. ಬಿ.ಕೆ. ಅವರು, ಆ ವೇದಿಕೆಯ ಅಡಿಯಲ್ಲಿ ಹಲವು ಚರ್ಚೆ, ಸಂವಾದ, ಉಪನ್ಯಾಸ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಸಾಹಿತ್ಯ ಜಿಜ್ಞಾಸೆಯನ್ನು ಹುಟ್ಟುಹಾಕಿದ್ದರು.

1974ರಲ್ಲಿ ಪ್ರೊ. ಬಿ.ಕೆ. ಕೃಷ್ಣಪ್ಪ ಅವರು ಬ್ರಾಹ್ಮಣ ಸಮುದಾಯದ ಇಂದಿರಾ ಮೇಡಂ ಅವರೊಂದಿಗೆ ಅಂತರ್ಜಾತಿ ವಿವಾಹವಾಗುವ ಮೂಲಕ ಸಂಪ್ರದಾಯ ವ್ಯವಸ್ಥೆಯೊಳಗೆ ಬಹುದೊಡ್ಡ ಸಂಚಲನವನ್ನು ಉಂಟುಮಾಡಿದರು. ಅಂತರ್ಜಾತಿ ವಿವಾಹಗಳಿಂದ ಜಾತಿವಿನಾಶ ಸಾಧ್ಯ ಎಂಬ ವೈಚಾರಿಕ ಚರ್ಚೆಯನ್ನು ಸಮಾಜದಲ್ಲಿ ಹುಟ್ಟುಹಾಕಿದರು. ಲೋಹಿಯಾ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಇವರು, ಭದ್ರಾವತಿಯಲ್ಲಿರುವಾಗಲೇ “ಸಮಾಜವಾದಿ ಯುವಜನ ವೇದಿಕೆ”ಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮಾಜವಾದಿ ಯುವಜನ ವೇದಿಕೆಯ ವತಿಯಿಂದ, ಭದ್ರಾವತಿಯ ಕಬ್ಬಿಣ ಕಾರ್ಖಾನೆಯಲ್ಲಿ ರೋಸ್ಟರ್ ಪದ್ಧತಿಯನ್ನು ಅನುಸರಿಸದೆ ಸಾಮಾಜಿಕ ನ್ಯಾಯವನ್ನು ಉಲ್ಲಂಘಿಸಿದ್ದನ್ನು ಖಂಡಿಸಿ ಹಾಗೂ ಕಾರ್ಖಾನೆಯ ಎಂ.ಡಿ. ಅವರು ತಮ್ಮ ಮಗಳ ವೈಭವದ ಮದುವೆ ಕೆಲಸಕ್ಕೆ ಕಾರ್ಖಾನೆಯ ಕಾರ್ಮಿಕರನ್ನು ಬಳಸಿಕೊಂಡದ್ದರ ವಿರುದ್ಧ ಹೋರಾಟ ರೂಪಿಸುವಲ್ಲಿ ಪ್ರೊ. ಬಿ.ಕೆ. ಅವರು ಪ್ರಮುಖ ಪಾತ್ರ ವಹಿಸಿದರು. ಪ್ರೊ. ಬಿ.ಕೆ. ಅವರದು ಸ್ವಾಭಿಮಾನದ ಹೋರಾಟದ ವ್ಯಕ್ತಿತ್ವ. ಬಾಲ್ಯದಲ್ಲಿ ನಡೆದ ಮೂರು ಘಟನೆಗಳು ಇವರೊಳಗಿನ ಹೋರಾಟದ ವೈಚಾರಿಕ ಮನೋಭಾವವನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿವೆ :

1. ದಾವಣಗೆರೆಯ ಡಿ.ಆರ್.ಎಂ. ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದ ಪ್ರೊ. ಬಿ.ಕೆ. ಅವರಿಗೆ, ದಾವಣಗೆರೆ ಪಟ್ಟಣದ ಹೋಟೆಲ್‍ನಲ್ಲಿ ದಲಿತರಿಗೆ ಪ್ರತ್ಯೇಕವಾಗಿ ತೆಂಗಿನ ಚಿಪ್ಪಿನಲ್ಲಿ ಟೀ ಕೊಡುತ್ತಿರುವ, ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಸಂಗತಿ ಗಮನಕ್ಕೆ ಬರುತ್ತದೆ. ವಿದ್ಯಾರ್ಥಿಯಾಗಿದ್ದ ಬಿ.ಕೆ. ಅವರು ಸಹಪಾಠಿಗಳನ್ನು ಸಂಘಟಿಸಿಕೊಂಡು ಆ ಹೋಟೆಲ್ ಬಳಿ ಹೋಗಿ ಹೋರಾಡುವ ಮೂಲಕ, ಹೋಟೆಲ್‍ನಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯ ಪದ್ಧತಿಯನ್ನು ರದ್ಧುಪಡಿಸುವಲ್ಲಿ ಯಶಸ್ವಿಯಾಗುತ್ತಾರೆ.

2. ಹರಿಹರದ ಹರಿಹರೇಶ್ವರ ದೇವಾಲಯದ ದೀಪಕ್ಕೆ ಎಣ್ಣೆ ಕೊಡುವ ಸಂಪ್ರದಾಯ ದಲಿತ ಕುಟುಂಬಗಳದ್ದು. ಪದ್ಧತಿಯಂತೆ ಬಿ.ಕೆ. ಅವರ ತಾಯಿ ಎಣ್ಣೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ, ದೇವಾಲಯದ ಪುರೋಹಿತ ಬಿ.ಕೆ. ಅವರ ತಾಯಿ ದಲಿತಳು ಎಂಬ ಕಾರಣಕ್ಕೆ ಜಾತಿ ನಿಂದನೆಯ ಮಾತುಗಳನ್ನಾಡಿ ಅವಮಾನಿಸುತ್ತಾನೆ. ಈ ವಿಚಾರ ತಿಳಿದ ವಿದ್ಯಾರ್ಥಿ ಬಿ.ಕೆ. ಅವರು ತಮ್ಮ ಸಮುದಾಯದವರನ್ನು ಸಂಘಟಿಸಿ ದೇವಾಲಯದ ಬಳಿ ಹೋಗಿ ಪುರೋಹಿತರ ಜಾತಿವಾದಿ ನಡೆಯನ್ನು ಪ್ರತಿರೋಧದ ಹಾಡು ಹಾಡುವ ಮೂಲಕ ಖಂಡಿಸುತ್ತಾರೆ.

3. ಪ್ರೊ. ಬಿ.ಕೆ. ಅವರ ಸಹೋದರಿ ಇವರ ಕಣ್ಣೆದುರೆ ಆಕಸ್ಮಿಕವಾಗಿ ಅಡಿಗೆ ಮನೆ ಒಲೆಯ ಬೆಂಕಿಗೆ ಬಿದ್ದು ಗಾಯಗೊಂಡು ಸಾವನ್ನಪ್ಪುತ್ತಾರೆ. ಈ ಘಟನೆ ಬಿ.ಕೆ. ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ‘ಈ ದುರಂತಕ್ಕೆ ದಲಿತರಾದ ನೀವು ಮನೆಯಲ್ಲಿ ಶಿವಲಿಂಗ ಪೂಜಿಸುತ್ತಿರುವುದೆ ಕಾರಣ. ಹಾಗಾಗಿ ಶಿವ ಲಿಂಗವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ, ಪೂಜಿಸಬೇಡಿ. ಇಲ್ಲವಾದರೆ ನಿಮಗೆ ಕೇಡು ತಪ್ಪಿದ್ದಲ್ಲ’ವೆಂದು ಜಾತಿವಾದಿ ಸಂಪ್ರದಾಯಸ್ಥ ಜೋಯಿಸರು ಹೇಳುತ್ತಾರೆ. ಈ ಅಜ್ಞಾನಕ್ಕೆ ಸಿಟ್ಟುಗೊಂಡ ಬಿ.ಕೆ. ಅವರು ಪ್ರತಿಭಟನಾತ್ಮಕವಾಗಿ ತಮ್ಮ ಮನೆಯಲ್ಲಿದ್ದ ರುದ್ರಾಕ್ಷಿ, ಶಿವಲಿಂಗ, ಪೂಜಾ ಸಾಮಗ್ರಿಗಳನ್ನು ತುಂಗಾಭದ್ರ ನದಿಗೆ ಬಿಸಾಡುತ್ತಾರೆ.

‘ಸಮಾಜವಾದಿ ಯುವಜನ ಸಭಾ’ದ ‘ಜಾತಿ ವಿನಾಶ ಚಳವಳಿ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಬಿ.ಕೆ. ಅವರು, ಅಮೇರಿಕಾದ ಬ್ಲಾಕ್ ಪ್ಯಾಂಥರ್ಸ್ ಚಳವಳಿ-ಸಾಹಿತ್ಯ ಹಾಗೂ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿ-ಸಾಹಿತ್ಯದ ಓದಿನಿಂದ ಪ್ರಭಾವಿತರಾಗಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಪ್ರಮುಖ ಕಾರಣ 1973ರಲ್ಲಿ ನಡೆದ ಬಿ. ಬಸವಲಿಂಗಪ್ಪ ಅವರ ‘ಬೂಸಾ ಚಳವಳಿ’. ಬೂಸಾ ಚಳವಳಿಯ ಸಂದರ್ಭದಲ್ಲಿ ದಲಿತರ ಮೇಲೆ ಹಲ್ಲೆಯಾದಾಗ, ಬಿ. ಬಸವಲಿಂಗಪ್ಪ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ಸಂದರ್ಭ ಎದುರಾದಾಗ ಸಮಾಜವಾದಿಗಳು ಬಿ. ಬಸವಲಿಂಗಪ್ಪ ಅವರ ಪರ ಮಾತನಾಡದ್ದನ್ನು ಗಮನಿಸಿದ ಪ್ರೊ. ಬಿ.ಕೆ. ಅವರು ಸಮಾಜವಾದಿ ಯುವಜನ ಸಭಾದ ಚಟುವಟಿಕೆಯಿಂದ ಹೊರಬರುತ್ತಾರೆ. ಭದ್ರಾವತಿಯ ಕಬ್ಬಿಣ ಕಾರ್ಖಾನೆಯಲ್ಲಿ ನೌಕರರಾಗಿದ್ದ ಎನ್. ಗಿರಿಯಪ್ಪ, ಬಿ. ವಿ. ಚಂದ್ರಪ್ರಸಾದ್ ತ್ಯಾಗಿ, ರಾಜಣ್ಣ ಮುಂತಾದವರ್ನು ಸಂಘಟಿಸಿ 1975ರಲ್ಲಿ ‘ದಲಿತ ಸಂಘಟನೆ’(ರಿಜಿಸ್ಟರ್ ನಂ. ಡಿ.ಆರ್.ಎಸ್.ಟಿ.ಎಸ್. 47/74-75 ರಿಜಿಸ್ಟ್ರೇಷನ್ 196-1975 ಜನವರಿ 24. ಅಧ್ಯಕ್ಷರು-ಎನ್. ಗಿರಿಯಪ್ಪ) ಯನ್ನು ಕಟ್ಟಿಕೊಂಡು, ಪ್ರತಿ ರವಿವಾರ ಸೈಕಲ್‍ಗಳಲ್ಲಿ ಭದ್ರಾವತಿಯ ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ದಲಿತರನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಭದ್ರಾವತಿಯ ಕಬ್ಬಿಣ ಕಾರ್ಖಾನೆಯಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ತ್ಯಾಗಿ, ಗಿರಿಯಪ್ಪ, ರಾಜಣ್ಣ ಮುಂತಾದವರು ಸಂಘಟಿತರಾಗಿ ಹೋರಾಟ ರೂಪಿಸುವಂತೆ ಕರಪತ್ರ ಬರೆದು ಕೊಟ್ಟು ಮಾರ್ಗದರ್ಶನ ನೀಡಿದ್ದರು.

ಬಿ. ಬಸವಲಿಂಗಪ್ಪ ಅವರ ‘ಬೂಸಾ ಚಳವಳಿ’ಯ ಪರಿಣಾಮದಿಂದಾಗಿ ದಲಿತರು ಸಂಘಟಿತರಾಗಬೇಕು, ಅವರದ್ದೇ ಆದ ಸಂಘಟನೆಯೊಂದನ್ನು ಕಟ್ಟಿಕೊಂಡು ಹಕ್ಕುಗಳಿಗಾಗಿ ಹೋರಾಡಬೇಕೆಂಬ ಚಿಂತನೆ ಪ್ರಬಲವಾಗಿ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ “ಗಾಂಧೀಜಿ ಮತ್ತು ಅಸ್ಪೃಶ್ಯರು” ಎಂಬ ಕಿರು ಪುಸ್ತಕವನ್ನು ಬರೆದು ಪ್ರಕಟಿಸಿದ ಪ್ರೊ. ಬಿ.ಕೆ. ಅವರು “ದಲಿತರ ಉದ್ಧಾರವಾಗಬೇಕಾದರೆ, ಅವರು ಪ್ರಜ್ಞಾವಂತರಾಗಬೇಕು ಮತ್ತು ಈ ದೇಶದ ನಾಯಕತ್ವವನ್ನು ಹಿಡಿಯಬೇಕು” ಎಂದು ಹೇಳಿದರು. 10, 11 ಡಿಸೆಂಬರ್ 1976ರಲ್ಲಿ ಭದ್ರಾವತಿಯಲ್ಲಿ ‘ದಲಿತ ಲೇಖಕರು ಕಲಾವಿದರ ಯುವ ಸಂಘಟನೆ’(ದಲೇಕಯುಸಂ)ಯ ಪ್ರಥಮ ಸಮ್ಮೇಳವನ್ನು ಸಂಘಟಿಸುವಲ್ಲಿ ಪ್ರೊ. ಬಿ.ಕೆ., ಎನ್. ಗಿರಿಯಪ್ಪ, ಬಿ. ವಿ. ಚಂದ್ರಪ್ರಸಾದ್ ತ್ಯಾಗಿ ಅವರ ಪಾತ್ರ ಮಹತ್ತರವಾದದ್ದು. ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ತಿಪ್ಪೇಸ್ವಾಮಿ ಅವರು ವಹಿಸಿದ್ದು, ಬಿ. ಬಸವಲಿಂಗಪ್ಪ ಅವರು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ವಿ. ಟಿ. ರಾಜಶೇಖರ್ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಇಂದೂಧರ ಹೊನ್ನಾಪುರ, ಕೋಟಗಾನಹಳ್ಳಿ ರಾಮಯ್ಯ ಮುಂತಾದವರು ಪಾಲ್ಗೊಂಡಿದ್ದರು. ಈ ಸಮ್ಮೇಳನದ ತರುವಾಯ “ಕರ್ನಾಟಕ ದಲಿತ ಸಂಘರ್ಷ ಸಮಿತಿ” ಎಂಬ ರಾಜ್ಯ ಮಟ್ಟದ ಸಂಘಟನೆ ಉದಯವಾಯಿತು. ಪ್ರೊ. ಬಿ.ಕೆ. ಅವರು ದಸಂಸದ ಮೊದಲ ರಾಜ್ಯ ಸಂಚಾಲಕರಾದರು. ಶ್ರಮ ಸಮುದಾಯದ ಸಂಕೇತವಾದ ‘ಪಿಕಾಸಿ ಮತ್ತು ಪೊರಕೆ’ ಸಂಘದ ಲಾಂಛನವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ನಂಬಿಕೆ ಇದ್ದ ಪ್ರೊ. ಬಿ.ಕೆ. ಅವರು ಡಿಎಸ್‍ಎಸ್ ಸಂಘಟನೆಯನ್ನು ಸಹ ಪ್ರಜಾಸತ್ತಾತ್ಮಕ ಮೌಲ್ಯಗಳ ಅಡಿಯಲ್ಲಿ ಕಟ್ಟುತ್ತಾರೆ. ಅಧಿಕಾರ ವಿಕೇಂದ್ರೀಕರಣಗೊಳ್ಳಬೇಕು ಹಾಗೂ ಸಂಘಟನೆ ಪ್ರಬಲವಾಗಿ ಬೆಳೆಯಬೇಕು ಎಂಬ ದೃಷ್ಟಿಯಿಂದ ಡಿಎಸ್‍ಎಸ್ ಅಡಿಯಲ್ಲಿ ಹಲವು “ದಲಿತ ಲೇಖಕರು ಮತ್ತು ಕಲಾವಿದರ ಒಕ್ಕೂಟ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಮಹಿಳಾ ಒಕ್ಕೂಟ, ದಲಿತ ಕಲಾ ಮಂಡಳಿ, ದಲಿತ ನೌಕರರ ಒಕ್ಕೂಟ” ಎಂಬ ಅಂಗ ಸಂಸ್ಥೆಗಳನ್ನು ಸ್ಥಾಪಿಸುತ್ತಾರೆ.

ಆರಂಭದಲ್ಲಿ ಡಿಎಸ್‍ಎಸ್ ಒಳಗೆ ವ್ಯಕ್ತಿ ಆರಾಧನೆಗೆ ಅವಕಾಶವಿರಲಿಲ್ಲ. ಸಂಘಟನೆಯೇ ಚಳವಳಿಯ ನಾಯಕ ಸ್ಥಾನದಲ್ಲಿತ್ತು. ತ್ಯಾಗಿಯವರು ಹೇಳುತ್ತಿದ್ದಂತೆ, ಡಿಎಸ್‍ಎಸ್ ಸಮಾವೇಶ, ಚಳವಳಿಗಳಲ್ಲಿ ಎಂದಿಗೂ ಸಹ ವ್ಯಕ್ತಿಯ ಹೆಸರಲ್ಲಿ ಜಯಕಾರ ಹಾಕುತ್ತಿರಲಿಲ್ಲವಂತೆ. ಹಾಗಾಗಿ ಎಪ್ಪತ್ತರ ದಶಕದಲ್ಲಿದ್ದದ್ದು ಡಿಎಸ್‍ಎಸ್ ಕೇಂದ್ರಿತ ಸಂಘಟನೆ ಮತ್ತು ಚಳವಳಿ. ಪ್ರೊ. ಬಿ.ಕೆ. ನಿಧನದ ತರುವಾಯ ಡಿಎಸ್‍ಎಸ್ ವ್ಯಕ್ತಿ ಕೇಂದ್ರಿತ ಸಂಘಟನೆಯಾಗಿ, ವ್ಯಕ್ತಿಯ ಹೆಸರಲ್ಲಿ ಜಯಘೋಷಗಳು ಮುಳುಗತೊಡಗಿದವು. ಇದು ಸಹ ದಲಿತ ಚಳವಳಿಯ ಹಿನ್ನೆಡೆಗಳಲ್ಲಿ ಒಂದಾಗಿದೆ. ಪ್ರಾರಂಭದ ಡಿಎಸ್‍ಎಸ್ ನಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆಯ ಮೂಲಕ ಡಿಎಸ್‍ಎಸ್ ರಾಜ್ಯ ಸಂಚಾಲಕ, ಇತರೆ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಆದರೆ ಇಂದು ಆರಂಭದ ಡಿಎಸ್‍ಎಸ್ ಸಂವಿಧಾನದ ಮೌಲ್ಯವನ್ನು ಧಿಕ್ಕರಿಸಿ, ವ್ಯಕ್ತಿ ಕೇಂದ್ರಿತ ‘ಆಜೀವ ಸಂಚಾಲಕತ್ವ’ದ ಪರಿಕಲ್ಪನೆ ಹೆಮ್ಮರವಾಗಿ ಬೆಳೆದು ನಿಂತಿದೆ. ಇದು ಸಹ ಇದು ಸಹ ದಲಿತ ಚಳವಳಿಯ ಹಿನ್ನೆಡೆಗಳಲ್ಲಿ ಒಂದಾಗಿದೆ. ಇಂತಹ ಪ್ರಮುಖ ಕಾರಣಗಳಿಂದಾಗಿ ಡಿಎಸ್‍ಎಸ್ ಪ್ರಜಾಸತ್ತಾತ್ಮಕ ಮೌಲ್ಯವನ್ನು ಕಳೆದುಕೊಂಡಿದೆ.

ನೇರ ನಡೆನುಡಿಯ, ಶಿಸ್ತಿನ, ಪ್ರಾಮಾಣಿಕ, ಸ್ವಾಭಿಮಾನಿ ಹೋರಾಟಗಾರರು, ಚಿಂತಕರು, ಉತ್ತಮ ವಾಗ್ಮಿಗಳು, ಸಂಘಟಕರು, ಬರಹಗಾರರು ಆದ ಪ್ರೊ. ಬಿ.ಕೆ. ಅವರು ತಮ್ಮ ವ್ಯಕ್ತಿತ್ವದ ಮೂಲಕ ಹಲವು ಹೋರಾಟಗಾರರು, ಚಿಂತಕರು, ಬರಹಗಾರರು, ನಿಷ್ಠಾವಂತ ಕಾರ್ಯಕರ್ತರು, ಹಾಡುಗಾರರನ್ನು ಹುಟ್ಟುಹಾಕಿದ್ದಾರೆ. ಹಳ್ಳಿಹಳ್ಳಿಗೆ ಡಿಎಸ್‍ಎಸ್ ಸಂಘಟನೆ ಹಾಗೂ ಅಂಬೇಡ್ಕರ್ ವಾದವನ್ನು ಮುಟ್ಟಿಸಿದ ಧೀಮಂತರು. ಉತ್ತಮ ಯೋಗಾಪಟು, ವ್ಯಾಯಾಮ ಪಟುವಾಗಿದ್ದ ಪ್ರೊ. ಬಿ.ಕೆ. ಅವರು, ಡಿಎಸ್‍ಎಸ್ ಕಾರ್ಯಕರ್ತರಲ್ಲಿ ಸದಾ ತಮ್ಮ ಜೊತೆಯಲ್ಲೊಂದು ಕೈಚೀಲ, ಡೈರಿ, ಪುಸ್ತಕವನ್ನು ಇಟ್ಟುಕೊಂಡು ಓದುವ ಹಾಗೂ ಡೈರಿ ಬರೆಯುವ ಹವ್ಯಾಸವನ್ನು ಬೆಳೆಸಿದರು. ಯಾವುದೇ ಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆ ನಡೆದಾಗ ಡಿಎಸ್‍ಎಸ್ ಕಾರ್ಯಕರ್ತರು ಹೇಗೆ ಸ್ಥಳ ಪರಿಶೀಲನೆ ಮಾಡಿ ಘಟನೆಯ ಸತ್ಯದ ವರದಿಯನ್ನು ರಚಿಸಬೇಕೆಂದು ಹೇಳಿಕೊಟ್ಟವರು. ಡಿಎಸ್‍ಎಸ್ ಅಧ್ಯಯನ ಶಿಬಿರಗಳನ್ನು ತಾತ್ವಿಕವಾಗಿ ರೂಪಿಸಿ, ಮುಕ್ತ ಚರ್ಚಿಸುವ, ಪ್ರಶ್ನಿಸುವ, ಸಂವಾದಿಸುವ ಪ್ರಜಾಸತ್ತಾತ್ಮಕ ವಾತಾವರಣವನ್ನು ಕಲ್ಪಿಸಿದವರು. ಯಾವ ಸ್ವರೂಪದ ವಿಷಯಗಳು ಮಂಡನೆ ಹಾಗೂ ಚರ್ಚೆಯಾಗಬೇಕೆಂಬ ಅಭಿರುಚಿಯನ್ನು ಮೂಡಿಸಿದವರು. ಶತಮಾನಗಳಿಂದ ಜಾತಿವಾದಿಗಳ ದೌರ್ಜನ್ಯಕ್ಕೆ ಒಳಗಾಗಿ ಮಾತು ಕಳೆದುಕೊಂಡಿದ್ದ ಶೋಷಿತ ಸಮುದಾಯಕ್ಕೆ ಡಿಎಸ್‍ಎಸ್ ಸಂಘಟನೆಯ ಮೂಲಕ ಸ್ವಾಭಿಮಾನ, ಧೈರ್ಯ, ಪ್ರತಿರೋಧದ ಚೈತನ್ಯವನ್ನು ತಂದುಕೊಟ್ಟರು. ಶತಮಾನಗಳಿಂದ ಜಾತಿವಾದಿ ವ್ಯವಸ್ಥೆಗೆ ಹೆದರಿ ಬದುಕುತ್ತಿದ್ದ ಶೋಷಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ, ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಎಪ್ಪತ್ತರ ದಶಕದ ತರುವಾಯ; ಜಾತಿವಾದಿಗಳು, ಆಳುವ ರಾಜಕೀಯ ಪಕ್ಷಗಳು, ಸರ್ಕಾರಗಳು, ರಾಜಕಾರಣಿಗಳು, ಅಧಿಕಾರಿಗಳು ಸಹ ಡಿಎಸ್‍ಎಸ್ ಎಂದರೆ, ದಲಿತರೆಂದರೆ ಹೆದರುವ ಸನ್ನಿವೇಶವನ್ನು ಸೃಷ್ಟಿಸಿದರು. ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಅಂಬೇಡ್ಕರ್ ವಾದ, ಡಿಎಸ್‍ಎಸ್ ಸಂಘಟನೆ, ಅಂಬೇಡ್ಕರ್ ಸಂಘಗಳು ಸ್ವಾಭಿಮಾನದಿಂದ ತಲೆ ಎತ್ತುವಂತೆ ಮಾಡಿದರು. ಡಿಎಸ್‍ಎಸ್ ಕಾರ್ಯಕರ್ತರು ಸರ್ಕಾರಿ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ನಿರ್ಭೀಡೆಯಿಂದ ಪ್ರಶ್ನಿಸುವುದನ್ನು, ಅನ್ಯಾಯ ಕಂಡುಬಂದಾಗ ಪ್ರತಿಭಟಿಸುವ ಮನೋಭಾವವನ್ನು ಬೆಳೆಸಿದರು. ದಾದಾಸಾಹಬ್ ಕಾನ್ಫಿರಾಮ್ ಚಿಂತನೆ ಮತ್ತು ಬಿಎಸ್‍ಪಿ ರಾಜಕೀಯ ಸೈದ್ಧಾಂತಿಕತೆಯನ್ನು ಕರ್ನಾಟಕದಲ್ಲಿ ವಿಸ್ತರಿಸುವ ಮೂಲಕ ದಲಿತ ರಾಜಕಾರಣಕ್ಕೆ ಭಿನ್ನ ಸ್ವರೂಪವನ್ನು ತಂದುಕೊಟ್ಟರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹತ್ವದ ಕನಸಾದ ದಲಿತರು ಆಳುವ ವರ್ಗವಾಗಬೇಕು ಎಂಬುದನ್ನು ನನಸು ಮಾಡುವ ನಿಟ್ಟಿನಲ್ಲಿ, ಡಿಎಸ್‍ಎಸ್ ಗೆ ರಾಜಕೀಯ ಸ್ವರೂಪವನ್ನು ತಂದುಕೊಡುವ ಸಲುವಾಗಿ, ಹಲವರ ಭಿನ್ನಾಭಿಪ್ರಾಯದ ನಡುವೆಯೂ ಬಿಎಸ್‍ಪಿ ಪಕ್ಷ ಸೇರಿದರು. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಮನನೊಂದ ಪ್ರೊ. ಬಿ.ಕೆ. ಅವರು ತಮ್ಮ ಮೂಲಕ ದಲಿತ ವರ್ಗ ಆಳುವ ರಾಜಕೀಯ ವರ್ಗವಾಗುವುದನ್ನು ಕಾಣಲಿಕ್ಕೆ ಸಾಧ್ಯವಾಗದೆ ಅದೇ ಕೊರಗಿನಲ್ಲಿ, 30 ಎಪ್ರಿಲ್ 1997ರಲ್ಲಿ ಗದಗ್‍ನ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಲು ಹೋಗಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು.

ಪ್ರೊ. ಬಿ.ಕೆ. ಮತ್ತು ದಲಿತ ಚಳವಳಿ:

ಪ್ರೊ. ಬಿ.ಕೆ. ಅವರು ಕರ್ನಾಟಕದ ಎಪ್ಪತ್ತರ ದಶಕದ ದಲಿತ ಚಳವಳಿಯ ನಿರ್ಮಾತೃ. ಸ್ವತಃ ಹೋರಾಟಾಗಾರರಾಗಿದ್ದ ಪ್ರೊ. ಬಿ.ಕೆ. ಅವರು ಅನೇಕ ಸಾಮಾಜಿಕ ಹೋರಾಟ, ಕಾನೂನು ಹೋರಾಟ, ಭೂಮಿ ಹೋರಾಟಗಳನ್ನು ಹುಟ್ಟುಹಾಕಿದ್ದಾರೆ, ಪ್ರಾಣದ ಹಂಗು ತೊರೆದು ಹಲವು ಹೋರಾಟಗಳಲ್ಲಿ ಸ್ವತಃ ಭಾಗವಹಿಸಿದ್ದಾರೆ ಹಾಗೂ ಅಸಂಖ್ಯಾತ ಹೋರಾಟಗಾರರನ್ನು ರೂಪಿಸಿದ್ದಾರೆ.

►1977ರಲ್ಲಿ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿಯ ಸಿದ್ಲಿಪುರ ಭೂ ಹೋರಾಟದ ಮೂಲಕ 70 ದಲಿತ ಕುಟುಂಬಗಳಿಗೆ ಸುಮಾರು 31 ಎಕರೆ 9 ಗುಂಟೆ ಭೂಮಿಯನ್ನು ಕೊಡಿಸಿದ್ದಾರೆ. ಈ ಹೋರಾಟದ ಪರಿಣಾದಿಂದಾಗಿ, ಅಂದಿನ ಕಂದಾಯ ಮಂತ್ರಿಯಾಗಿದ್ದ ಬಿ. ಬಸವಲಿಂಗಪ್ಪ ಅವರ ಪ್ರಯತ್ನದ ಫಲವಾಗಿ ಕರ್ನಾಟಕ ಸರ್ಕಾರವು 1975 ರಿಂದ ಅನ್ವಯವಾಗುವಂತೆ “ದಲಿತರ ಭೂಮಿ ಪರಭಾರೆ ನಿಷೇಧ ಕಾನೂನ’ನ್ನು ಜಾರಿಗೊಳಿಸಿತು.

►ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾದ ಎಂ. ಡಿ. ಗಂಗಯ್ಯ ಅವರ ಸಹಕಾರದಿಂದ, 1979 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹೋಬಳಿಯ ಚಂಡಗೋಡು ಭೂ ಹೋರಾಟದ ಮೂಲಕ ಸುಮಾರು 300 ಎಕರೆ ಭೂಮಿಯನ್ನು ದಲಿತರಿಗೆ ದೊರಕಿಸಿಕೊಟ್ಟಿದ್ದಾರೆ.

►1983 ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನ ದೇವಲಾಪುರ ಭೂ ಹೋರಾಟದ ಮೂಲಕ ದಲಿತರಿಗೆ ಭೂಮಿ ಕೊಡಿಸಲಾಯಿತು.

►1985 ರಲ್ಲಿ ನಡೆದ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾಗಸಂದ್ರ ಭೂ ಹೋರಾಟದಿಂದ 600 ಎಕರೆ ಭೂಮಿ ದಲಿತರಿಗೆ ಲಭಿಸಿತು. ಇದೇ ಹೋರಾಟದಲ್ಲಿ “ಹೆಂಡ ಬೇಡ, ಭೂಮಿ ಬೇಕು, ವಸತಿ ಶಾಲೆ ಬೇಕು” ಎಂಬ ಘೋಷಣೆ ಮೊಳಗಿದ ಪರಿಣಾಮ ಕರ್ನಾಟಕ ಸರ್ಕಾರ ಹೆಂಡ ನಿಷೇದ ಮಾಡಿತು, ವಸತಿ ಶಾಲೆಗಳನ್ನು ಆರಂಭಿಸಿತು.

►1986 ರಲ್ಲಿ ನಡೆದ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ, ಕ್ಯಾಸಿನಕೆರೆ ಭೂ ಹೋರಾಟದ ಮೂಲಕ ಸುಮಾರು 2500 ಎಕರೆ ಭೂಮಿಯನ್ನು ಎಲ್ಲಾ ಜಾತಿಯ ಭೂ ಹೀನರಿಗೆ ಕಲ್ಪಿಸಲಾಯಿತು.

►1978 ಎಪ್ರಿಲ್ 6 ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ, ದಾಸನಪುರ ಗ್ರಾಮದ ದಲಿತ ಚಿಕ್ಕತಿಮ್ಮಯ್ಯನನ್ನು 20 ರೂಪಾಯಿ ಸಾಲದ ವಿಚಾರವಾಗಿ ಚನ್ನೇಗೌಡ ಹಲ್ಲೆ ಮಾಡಿ ಕೊಲೆ ಮಾಡುತ್ತಾನೆ. ಈ ಘಟನೆಯ ವಿರುದ್ಧ ಹೋರಾಟ ರೂಪಿಸಿ ಅಪರಾಧಿ ಶಿಕ್ಷೆ ಆಗುವಂತೆ ಮಾಡಲಾಯಿತು.

►1979 ಡಿಸೆಂಬರ್ 2 ರಂದು ರಾಯಚೂರಿನ ಖಾನ್‍ಪುರದ ಪರದಯ್ಯ ಎಂಬ ದಲಿತ ಯುವಕನನ್ನು ಅಮಾನುಷವಾಗಿ ಹತ್ಯೆಗೈದಿಗ್ದನ್ನು ವಿರೋಧಿಸಿ ಚಳವಳಿ ಮಾಡಲಾಯಿತು.

►1980ರಲ್ಲಿ ಕೋಲಾರ ಜಿಲ್ಲೆಯ, ಮಾಲೂರು ತಾಲ್ಲೂಕಿನ ಹುಣಸೆಕೋಟೆ ಗ್ರಾಮದ ಕೃಷ್ಣೇಗೌಡ ಮತ್ತು ಆತನ ಸಹೋದರರು ಕುಂಬಾರ ಸಮುದಾಯದ ಶೇಷಗಿರಿಯಪ್ಪನನ್ನು ಕೊಂದು, ಆತನ ಮಗಳು ವಿಧವೆ ಅನಸೂಯಮ್ಮಳನ್ನು ಅತ್ಯಾಚಾರ ಮಾಡಿದ ಘಟನೆಯನ್ನು ವಿರೋಧಿಸಿ ಹುಣಸೆಕೋಟೆಯಿಂದ ಬೆಂಗಳೂರಿನ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾವನ್ನು ಆಯೋಜಿಸಿ ತಪ್ಪಿತಸ್ತರಿಗೆ ಶಿಕ್ಷೆ ಆಗುವಂತೆ ಮಾಡಿದರು.

►1980 ಜನವರಿ 30 ರಂದು ಕರ್ನಾಟಕದ ಗೋರಕ್‍ಪುರದ ದಲಿತ ಯುವಕನನ್ನು ಜೀವಂತವಾಗಿ ಸುಟ್ಟು ಕೊಂದ ಘಟನೆಯನ್ನು ವಿರೋಧಿಸಿ ಚಳವಳಿ ಮಾಡಲಾಯಿತು

►1980 ನವೆಂಬರ್ 11 ರಿಂದ 24 ರವರೆಗೆ ಶಿವಮೊಗ್ಗದ ಶಂಕರಮಠದಲ್ಲಿ ದೇಶದ ಸಂಪತ್ತು ಹೆಚ್ಚಲಿ ಮತ್ತು ಶಾಂತಿ ನೆಲಸಲೆಂದು ಅತಿರುದ್ರಮಹಾಯಾಗವನ್ನು ಹಮ್ಮಿಕೊಂಡಿದ್ದನ್ನು ವಿರೋಧಿಸಿ 1980 ನವೆಂಬರ್ 16 ರಂದು ಪುರೋಹಿತಶಾಹಿ ವಿರುದ್ಧ “ಮೂಢನಂಬಿಕೆಗಳ ವಿರುದ್ಧ ವಿಚಾರವಾದಿಗಳ ಕರೆ” ಎಂಬ ಹೋರಾಟವನ್ನು ಮಾಡುತ್ತಾರೆ.

►1982ರಲ್ಲಿ ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ ಗಿಡ್ಡನಕಟ್ಟೆ ಗ್ರಾಮದ ನಾಯಕ ಸಮುದಾಯದ ರಾಮಣ್ಣ ಕೊಲೆಯಾದ ವಿಚಾರ ತಿಳಿದ ಪ್ರೊ. ಬಿ.ಕೆ. ಅವರು ಸ್ವತಃ ತಾವೇ ಆ ಗ್ರಾಮಕ್ಕೆ ಹೋಗಿ ಕೊಲೆಯಾದ ವ್ಯಕ್ತಿಯ ಶವವನ್ನು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಜಗಳೂರಿಗೆ ಹೋಗಿ ಪೋಸ್ಟ್ ಮಾರ್ಟಂ ಮಾಡಿಸಿ, ಅದನ್ನು ಕೊಲೆ ಎಂದು ಸಾಬೀತುಪಡಿಸಿ, ನಂತರ ಮೃತದೇಹವನ್ನು ತಾವೇ ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಬಂದು ಶವಸಂಸ್ಕಾರ ಮಾಡಿಸುತ್ತಾರೆ. ಈ ಘಟನೆಯ ಸಂದರ್ಭದಲ್ಲಿಯೇ ಪ್ರೊ. ಬಿ.ಕೆ. ಅವರು ಹೇಳಿದ್ದು : “ಚಿಂತನೆ ಇಲ್ಲದ ಹೋರಾಟ, ಹೋರಾಟವಿಲ್ಲದ ಚಿಂತನೆ ಎರಡೂ ವ್ಯರ್ಥ” ಎಂದು. ಆ ಘಟನೆಯನ್ನು ಕುರಿತು ಪ್ರೊ. ಬಿ.ಕೆ. ಅವರು : “ಅದೊಂದು ಭಯಾನಕ ಅನುಭವ. ಹೆಣವನ್ನು ಪೋಸ್ಟ್ ಮಾರ್ಟಂ ಮಾಡಿದ್ದರಿಂದ ಒಂದು ಬಗೆಯ ರಕ್ತ ಮಿಶ್ರಿತ ದ್ರವ ತೊಟ್ಟಿಕ್ಕುತ್ತಿತ್ತು. ನಾನೇ ಕೈಯಾರೆ ಮೃತದೇಹವನ್ನು ಹೊತ್ತಾಗ ನೀರು ಕೈ ಮೇಲೆಲ್ಲಾ ಚೆಲ್ಲಾಡಿತು. ಅದ್ಯಾವ ಧೈರ್ಯನೋ ಗೊತ್ತಿಲ್ಲ, ಈಗ ನೆನಸಿಕೊಂಡರೇ ಮೈ ಜುಂ ಎನ್ನುತ್ತೆ” ಎಂದು ಹೇಳಿಕೊಂಡಿದ್ದಾರೆ. ನಂತರ ಗಿಡ್ಡನಕಟ್ಟೆ ಗ್ರಾಮದಿಂದ ಚಿತ್ರದುರ್ಗದ ಜಿಲ್ಲಾ ಕಛೇರಿಯವರೆಗೆ ಕಾಲ್ನಡಿಗೆ ಜಾಥಾವನ್ನು ಮಾಡುವುದರ ಮೂಲಕ ಕೊಲೆಗಾರರಿಗೆ ಶಿಕ್ಷೆ ಆಗುವಂತೆ ಮಾಡುತ್ತಾರೆ.

►1984ರಲ್ಲಿ ಪೋಲಂಕಿರಾಮಮೂರ್ತಿಯವರ ‘ಸೀತಾಯಣ’ ಕೃತಿ ಕುರಿತು ಶಿವಮೊಗ್ಗದಲ್ಲಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜಾತಿವಾದಿಗಳು, ಕೋಮುವಾದಿಗಳು ಕಾರ್ಯಕ್ರಮ ನಡೆಯುವಲ್ಲಿಗೆ ಹೋಗಿ ಪೋಲಂಕಿರಾಮಮೂರ್ತಿ, ರಾಜೇಂದ್ರ ಚೆನ್ನಿ ಮುಂತಾದವರ ಮೇಲೆ ಹಲ್ಲೆ ಮಾಡುತ್ತಾರೆ. ಇದನ್ನು ಖಂಡಿಸಿ ಹೋರಾಟವನ್ನು ರೂಪಿಸಲಾಗಿತ್ತು.

►1986 ರಲ್ಲಿ ಶಿವಮೊಗ್ಗ ಜಿಲ್ಲೆಯ, ಸೊರಬ ತಾಲ್ಲೂಕಿನ, ಹೋಬಳಿ ಗ್ರಾಮವಾದ ಚಂದ್ರಗುತ್ತಿಯ ರೇಣುಕಾ ಎಲ್ಲಮ್ಮ ದೇವಿಗೆ ನಡೆಯುತ್ತಿದ್ದ ‘ಬೆತ್ತಲೆ ಸೇವೆ’ ಪದ್ಧತಿ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುವ ಮೂಲಕ, 1987ರಲ್ಲಿ ಬೆತ್ತಲೆ ಸೇವೆ ನಿಷೇಧ ಕಾನೂನು ಜಾರಿಯಾಗುವಂತೆ ಮಾಡಲಾಯಿತು. ಈ ಚಳವಳಿಯಲ್ಲಿ ಪ್ರೊ. ಬಿ.ಕೆ. ಅವರು ಬದುಕುಳಿದಿದ್ದೆ ಹೆಚ್ಚು.

► 1987ರಲ್ಲಿ ಬೆಳಗಾವಿ ತಾಲ್ಲೂಕಿನ ಬೆಂಡಿಗೇರಿ ಗ್ರಾಮದ ವೀರಶೈವ ಸಮುದಾಯದವರು ಜೀತಗಾರರಾದ ದಲಿತರಿಗೆ ಮಲ ತಿನ್ನಿಸಿದ ಅಮಾನವೀಯ ಘಟನೆಯ ವಿರುದ್ಧ ಹಾಗೂ ಸೊರಗ ತಾಲ್ಲೂಕಿನ ತತ್ತೂರು ಗ್ರಾಮದ ಜೀತಗಾರ ದಲಿತರಿಗೆ ಜಾತಿವಾದಿಗಳು ಉಚ್ಚೆ ಕುಡಿಸಿದ್ದರ ವಿರುದ್ಧ ಹೋರಾಟವನ್ನು ರೂಪಿಸಲಾಯಿತು.

►ಅಟಿನ್ ಬರೋ ನಿರ್ಮಾಣದ ಗಾಂಧಿ ಸಿನಿಮಾದಲ್ಲಿ ಡಾ. ಅಂಬೇಡ್ಕರ್ ಅವರನ್ನು ಕಡೆಗಣಿಸಿ ಅವಮಾನ ಮಾಡಿದ್ದನ್ನು ಖಂಡಿಸಿ ಸಿನಿಮಾ ಬಹಿಷ್ಕಾರದ ಹೋರಾಟವನ್ನು ಮಾಡಲಾಯಿತು.

►1988 ರಲ್ಲಿ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿಯ ತಟ್ಟೆಹಳ್ಳಿ ಗ್ರಾಮದ ಹೇಮಂತರಾಜು, ತನ್ನ ತಂಗಿಯ ಪ್ರೇಮಕ್ಕೆ ಸಹಾಯ ಮಾಡಿದನೆಂದು ದಲಿತ ಸಮುದಾಯದ ಎಂಟು ವರ್ಷದ ಹುಡುಗ ಗಣೇಶನ್ನು ಕೊಲೆ ಮಾಡುತ್ತಾನೆ. ಈ ಘಟನೆಯನ್ನು ವಿರೋಧಿಸಿ ಭದ್ರಾವತಿ ತಾಲ್ಲೂಕು ಕಛೇರಿಯ ಮುಂದೆ ಧರಣಿ ಸತ್ಯಾಗ್ರಹವನ್ನು ಏರ್ಪಡಿಸಲಾಯಿತು.

►1977 ಮೇ 27 ರಂದು ಬಿಹಾರದ ಬೆಲ್ಚಿ ಗ್ರಾಮದ ದಲಿತರು ಕೂಲಿ ಕೇಳಿದ್ದಕ್ಕೆ ಅಲ್ಲಿನ ಜಾತಿವಾದಿಗಳು 12 ಜನ ದಲಿತರನ್ನು ಕೊಂದು ಜೀವಂತವಾಗಿ ಸುಟ್ಟ ಘಟನೆಯ ವಿರುದ್ಧ ಬಹುದೊಡ್ಡ ಹೋರಾಟವನ್ನು ಮಾಡಲಾಯಿತು.

►1978ರಲ್ಲಿ ಮರಾಠಾವಾಡ ವಿಶ್ವವಿದ್ಯಾಲಯಕ್ಕೆ ಡಾ. ಅಂಬೇಡ್ಕರ್ ಹೆಸರಿಡಬೇಕೆಂದು ದಲಿತರು ಹೋರಾಟ ಮಾಡುತ್ತಿದ್ದಾಗ ಅವರ ಮೇಲೆ ಜಾತಿವಾದಿಗಳು ಹಲ್ಲೆ ಮಾಡಿ ಕೊಂದ ಖಂಡಿಸಿ ಹೋರಾಟವನ್ನು ರೂಪಿಸಲಾಯಿತು.

►1980ರಲ್ಲಿ ಪೊಲೀಸರು ಉತ್ತರಪ್ರದೇಶದ ನಾರಾಯಣಪುರ ಗ್ರಾಮದ ದಲಿತರ ಕೇರಿಗೆ ನುಗ್ಗಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಘಟನೆಯನ್ನು ವಿರೋಧಿಸಿ ಹೋರಾಟ ಮಾಡಲಾಯಿತು.

► 1980 ಫೆಬ್ರವರಿ 10 ರಂದು ಬಿಹಾರದ ಪರಾಸ್‍ಬೀಪ್ ಗ್ರಾಮದ 12 ಜನ ದಲಿತರನ್ನು ಜೀವಂತವಾಗಿ ಸುಟ್ಟು ಕೊಂದ ಘಟನೆಯನ್ನು ವಿರೋಧಿಸಿ ಚಳವಳಿ ಮಾಡಲಾಯಿತು.

►1980 ಫೆಬ್ರವರಿ 25 ರಂದು ಬಿಹಾರದ ಪಾಟ್ನಾದ ಬಳಿಯ ಪಿಪ್ರಾ ಗ್ರಾಮದ ದಲಿತ ಸಮುದಾಯದ 7 ಮಹಿಳೆಯರು, 4 ಮಕ್ಕಳು, 3 ಗಂಡಸರನ್ನು ಸಜೀವವಾಗಿ ದಹನ ಮಾಡಿದ ಘಟನೆಯನ್ನು ಖಂಡಿಸಿ 1980 ಮಾರ್ಚ್ 11 ರಂದು ಹೋರಾಟ ರೂಪಿಸಲಾಯಿತು. ಈ ಹೋರಾಟದ ಸಂದರ್ಭದಲ್ಲಿ ಪ್ರೊ. ಬಿ.ಕೆ. ಅವರು : “ದಲಿತರನ್ನು ಸುಟ್ಟ ಬೆಂಕಿ ಕೊಲೆಗಡುಕರನ್ನು ಸುಟ್ಟೇ ಸುಡುತ್ತದೆ” ಎಂದು ಹೇಳಿದರು.

►ಕರ್ನಾಟಕದ ಕೆಲವು ಮೇಲ್ಜಾತಿ ಸವರ್ಣೀಯ ಜನರು ಹಿಂದುಳಿದ ವರ್ಗಗಳ ಪರವಾದ ‘ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ, ಮಂಡಲ್ ಆಯೋಗ’ದ ವರದಿಗಳ ವಿರುದ್ಧ ಪ್ರತಿಭಟಿಸಿದಾಗ, ಇದನ್ನು ಖಂಡಿಸಿದ ಪ್ರೊ. ಬಿ.ಕೆ. ಅವರು ಡಿಎಸ್‍ಎಸ್ ಮೂಲಕ ಹಿಂದುಳಿದ ವರ್ಗಗಳ ಹಿತಕಾಯುವ ಈ ವರದಿಗಳು ಜಾರಿಯಾಗಲಿ ಎಂದು ಪ್ರಬಲವಾದ ಹೋರಾಟವನ್ನು ರೂಪಿಸಿದರು. ಇದು ಪ್ರೊ. ಬಿ.ಕೆ. ಅವರ ಜಾತ್ಯಾತೀತ ಮನೋಭಾವದ ಹೋರಾಟದ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ.

ಪ್ರೊ. ಬಿ. ಕೆ. ಅವರು ದಲಿತ ಸಮುದಾಯದ ಮುಂದಿಟ್ಟಿರುವ ಸವಾಲುಗಳು

ಪ್ರೊ. ಬಿ.ಕೆ. ಅವರು ‘ದಲಿತ ನೌಕರರ ಒಕ್ಕೂಟ’ವನ್ನು ಸ್ಥಾಪಿಸಿದಾಗ, ಸರ್ಕಾರಿ ದಲಿತ ನೌಕರರನ್ನು ಕುರಿತು “ಸಮಾಜದೆಡೆಗೆ ಚಲಿಸುವುದು(Go-Back to Society), ಸಮಾಜಕ್ಕೆ ಹಿಂಪಾವತಿಸುವುದು (Pay-Back to Society)” ಎಂದು ಹೇಳಿದ ಮಾತನ್ನು ಕಾರ್ಯರೂಪಕ್ಕೆ ತಂದಿದ್ದೀವ? ಪ್ರೊ. ಬಿ.ಕೆ. ಅವರು 1996 ಅಕ್ಟೋಬರ್ 28 ರಂದು ರಾಯಚೂರಿನಲ್ಲಿ ನಡೆದ ಡಿಎಸ್‍ಎಸ್ ಪುನಶ್ಚೇತನ ಅಧ್ಯಯನ ಶಿಬಿರದಲ್ಲಿ ಹೇಳಿದ ಮಾತುಗಳನ್ನು ಇಂದು ನಾವು ಸವಾಲಾಗಿ ಸ್ವೀಕರಿಸಬೇಕಿದೆ:

1. ಡಿಎಸ್‍ಎಸ್ ಮಾಡುತ್ತಿರುವ ಕೆಲಸ ಡಿಎಸ್‍ಎಸ್‍ನ ಸಿದ್ಧಾಂತಕ್ಕೆ ಅನುಗುಣವಾಗಿ ನಡೀತಿದೆಯೆ? ಅಥವಾ ಸಿದ್ಧಾಂತವನ್ನು ಬಿಟ್ಟು ನಾವು ಎಲ್ಲಾದರೂ ಹೋಗಿದ್ದೇವೊ?

2. ಡಿಎಸ್‍ಎಸ್ ಹುಟ್ಟು ಯಾವ ಸಿದ್ಧಾಂತದ ಅಡಿಯಲ್ಲಿ ಆಯ್ತು? ನಂತರ ಅದು ಎಲ್ಲಿ ಹೋಗ್ತಾ ಇದೆ?

3. ವಿಮರ್ಶೆ ಡಿಎಸ್‍ಎಸ್‍ನಲ್ಲಿ ಇದೆಯಾ? ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳುವಂತಹದ್ದು ನಮ್ಮಲ್ಲಿ ಇದೆಯಾ?

4. ದಲಿತ ಸಂಘರ್ಷ ಸಮಿತಿಗೆ ಮತ್ತೆ ಚೈತನ್ಯ ಬರಬೇಕು, ಸ್ವಾಭಿಮಾನದ ಚೈತನ್ಯ ಬರಬೇಕು, ಆತ್ಮಗೌರವದ ಚೈತನ್ಯ ಬರಬೇಕು, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಮತ್ತು ಏನೇ ಕಷ್ಟ ಆದರೂ ಕೂಡ ನಾನದನ್ನ ನಿಭಾಯಿಸ್ತಿನಿ ಅನ್ನತಕ್ಕಂತ ಒಂದು ಛಲ ದಲಿತ ಸಂಘರ್ಷ ಸಮಿತಿಯಲ್ಲಿ ಬರಬೇಕು.

5. ಈ ಬಿಡುಗಡೆಯ ಹೋರಾಟ ಇದೆಯಲ್ಲಾ ಇದು ಮಾತ್ರ ಸರಳವಾಗಿಲ್ಲ, ತುಂಬಾ ಕಷ್ಟದ, ಅತ್ಯಂತ ಮುಳ್ಳಿನ ಹಾದಿ. ಆದರೂ ಕಊಡ ಇದನ್ನ ತುಳಿಲೇ ಬೇಕಾಗಿದೆ. ನಾವು ಒಗ್ಗಟ್ಟಿನಿಂದ ತುಳಿಯಬೇಕಾಗಿದೆ.

6. ಜಾತಿಗಳನ್ನು ಬೆಸೆಯುವಂತ ಕೆಲಸ ಮಾಡಬೇಕು. ಡಾ. ಅಂಬೇಡ್ಕರ್ ಹೇಳುವ ಹಾಗೆ, ಕಳಚಿ ಹೋದ ಕೊಂಡಿಗಳನ್ನು ಬೆಸೆಯುವುದರಲ್ಲಿ ನಮ್ಮ ರಾಜಕೀಯ ಶಕ್ತಿ ಇದೆ.

7. ಡಾ. ಅಂಬೇಡ್ಕರ್ ಹೇಳಿದಂತೆ, ಈ ದೇಶವನ್ನು ಆಳಲಿಕ್ಕೆ ಹುಟ್ಟಿದ ಜನ ನಾವು. ಆದರೆ ನಮಗೆ ಆಳಲಿಕ್ಕೆ ಆಗಿಲ್ಲ ಯಾಕೆಂದರೆ ನಾವು ಒಡೆದು ಛಿದ್ರವಾಗಿ ಹೋಗಿದ್ದೇವೆ. ಒಡೆದು ಹೋದ ಮನಸ್ಸುಗಳನ್ನು ಒಟ್ಟಿಗೆ ತಂದು ರಾಜಕೀಯ ಶಕ್ತಿ ಮಾಡುವುದರ ಮೂಲಕ ಈ ರಾಷ್ಟ್ರದ ಸಂಪತ್ತಿನಲ್ಲಿ ಪಾಲು ತೆಗೆದುಕೊಳ್ಳಲು ಸಾಧ್ಯ.

8. ಕೆಳಜಾತಿಗಳಲ್ಲಿ ಸ್ವಾಭಿಮಾನವನ್ನು ತುಂಬಬೇಕು. ಅವರು ಮಾನಸಿಕ ದಾಸ್ಯದಿಂದ ಮುಕ್ತರಾಗುವಂತೆ ಮಾಡಬೇಕು. ಸ್ವಾಭಿಮಾನ ತುಂಬಿ ಅವರನ್ನು ಯಾರು ತುಳೀತಾ ಇದಾರೋ ಅವರ ವಿರುದ್ಧ ಸಂಘರ್ಷಕ್ಕೆ ಸಿದ್ಧಮಾಡಬೇಕು. ಸಂಘರ್ಷ ಮಾಡುವುದರ ಮೂಲಕವಾಗಿ ಸಮಾನತೆಯನ್ನು ತಂದುಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ದಲಿತ ಸಮುದಾಯ ಹಾಗೂ ದಲಿತ ಚಳವಳಿ ಪುನಶ್ಚೇತನಗೊಳ್ಳಬೇಕು ಎಂದು ಪ್ರೊ. ಬಿ.ಕೆ. ಅವರು ಹೇಳಿದರು, ಇದು ಸಾಧ್ಯವಾಗಿದೆಯೇ? ಏಕೆ ಸಾಧ್ಯವಾಗಿಲ್ಲ? ಸಾಧ್ಯ ಮಾಡುವ ಮಾರ್ಗಗಳು ಯಾವುವು? ಇದನ್ನು ಸಾಧ್ಯ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಅಲ್ಲವೆ? ಡಿಎಸ್‍ಎಸ್‍ನ ಸಭೆಯೊಂದರಲ್ಲಿ ಪ್ರೊ. ಬಿ.ಕೆ. ಅವರು : “ಎಷ್ಟೋ ಕಾಲದ ನಂತರ ದಲಿತರ ಜೋಪಡಿಯಲ್ಲಿ ಒಂದು ಮಣ್ಣಿನ ಹಣತೆ ಮಿಣಿಮಿಣಿ ಉರಿಯತ್ತಿದೆ. ಹೊರಗೆ ಕತ್ತಲು ಬಿರುಗಾಳಿ ಇದೆ. ನಾವು ಈ ಹಣತೆಯನ್ನು ಕಾಪಾಡಲೇಬೇಕು” ಎಂದು ಗದ್ಗದಿತರಾಗಿ ಹೇಳಿದ ಮಾತು ಇವತ್ತಿಗೂ ಪ್ರಸ್ತುತ. ಪ್ರೊ. ಬಿ.ಕೆ. ಅವರ ಈ ಮಾತನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಮುಂದಿರುವ ಸವಾಲು ಹಾಗೂ ಆದ್ಯ ಕರ್ತವ್ಯ. ಆ ಮಣ್ಣಿನ ಹಣತೆಯನ್ನು ನಾವು ‘ಭಾರತ ಸಂವಿಧಾನ’ಕ್ಕೆ ಹೋಲಿಸಿಕೊಂಡು ಅರ್ಥಮಾಡಿಕೊಳ್ಳಬೇಕಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಪ್ಪಗೆರೆ ಸೋಮಶೇಖರ್

contributor

Similar News