×
Ad

ಸಾವಯವ ವಿಧಾನದಲ್ಲಿ ಅರಿಶಿಣ ಕೃಷಿ: ಯುವ ರೈತ ಗುರುಪ್ರಸಾದ್ ಮಾದರಿ ಬೇಸಾಯ

Update: 2025-05-19 11:47 IST

ಚಾಮರಾಜನಗರ: ಗಡಿ ಚಾಮರಾಜನಗರ ಜಿಲ್ಲೆಯ ಪ್ರಮುಖ ವಾಣಿಜ್ಯ ತೋಟಗಾರಿಕೆ ಬೆಳೆಗಳಲ್ಲಿ ಒಂದಾಗಿರುವ ಅರಿಶಿಣವನ್ನು ಯುವ ರೈತರೋರ್ವರು ಸಾವಯವ ವಿಧಾನದಲ್ಲಿ ಮಾಡುವ ಮೂಲಕ ಕೃಷಿ ಕ್ರಾಂತಿಗೆ ಮುಂದಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ನಿವಾಸಿ ನಾಗರಾಜು ಮತ್ತು ಪುಷ್ಪಾ ದಂಪತಿ ಪುತ್ರ ಕೆ.ಎನ್.ಗುರುಪ್ರಸಾದ್ ಕೃಷಿ ಕಾಯಕದಲ್ಲಿ ತೊಡಗಿರುವ ಮಾದರಿ ರೈತ. ಕೊತ್ತಲವಾಡಿ ಗ್ರಾಮದಲ್ಲಿರುವ ಒಟ್ಟು 6 ಎಕರೆಯಲ್ಲಿ 4 ಎಕರೆ ನೀರಾವರಿ, 2 ಎಕರೆ ಬೆಜ್ಜಲು ಭೂಮಿ ಇದೆ. ಇದರಲ್ಲಿ 4 ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಕೃಷಿ ಮಾಡಲಾಗುತ್ತಿದೆ. ಈಗಾಗಲೇ ಸಾವಯವ ವಿಧಾನದಲ್ಲಿ ಅರಿಶಿಣ ಬೆಳೆದು ಇಳುವರಿ ಪಡೆದಿದ್ದಾರೆ. ಮುಂದಿನ ಸಲ ನಾಟಿ ಮಾಡಲು ಮತ್ತು ಮಾರಾಟ ಮಾಡಲು ಅರಿಶಿಣವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ.

ಬಳಕುತ್ತಿರುವ ಬಾಳೆ: ಗುರುಪ್ರಸಾದ್ ಅವರು 4 ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ಏಲಕ್ಕಿ ಬಾಳೆ ಹಾಕಿದ್ದಾರೆ. ಮುಕ್ಕಾಲು ಎಕರೆಯಲ್ಲಿ ಮುಸುಕಿನ ಜೋಳ ಬೆಳೆದಿದ್ದಾರೆ. ಅರಿಶಿಣ ಕೊಯ್ಲು ಮಾಡಿರುವ ಜಾಗದಲ್ಲಿ ಸಣ್ಣ ಜೋಳ ಹಾಕಲು ನಿರ್ಧರಿಸಿದ್ದಾರೆ. 125 ತೆಂಗಿನ ಸಸಿಗಳಿದ್ದು, 16 ದೊಡ್ಡ ಮರಗಳಿವೆ. 1 ಎಕರೆ ಪ್ರದೇಶದಲ್ಲಿರುವ ಬಾಳೆ ಹಚ್ಚ ಹಸಿರಿನಿಂದ ಬಳಕುತ್ತಿವೆ. ಗೋವುಗಳ ಮೇವಿಗಾಗಿ ಹುಲ್ಲು ಬೆಳೆದಿರುವ ಗುರುಪ್ರಸಾದ್, ರಾಸಾಯನಿಕ ಗೊಬ್ಬರ, ಔಷಧಿ ಬಳಕೆ ಮಾಡದೆ ಸಾಂಪ್ರದಾಯಿಕ ವಿಧಾನಗಳಲ್ಲಿ ಕೃಷಿ ಮಾಡುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ರೈತರು ಸಾವಯವ ವಿಧಾನದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು, ಇದರಲ್ಲಿ ಅರಿಶಿಣ ಬೆಳೆಯುವ ರೈತರ ಸಂಖ್ಯೆ ಕಡಿಮೆ ಇದೆ. ಗುರುಪ್ರಸಾದ್ ಅವರು ಸಾವಯವ ಕೃಷಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಪ್ರಮಾಣ ಪತ್ರವನ್ನೂ ಕೊಡಿಸಿದೆ. ಮೇಘಾಲಯದಿಂದ ಬಂದಿದ್ದ ತಂಡವೊಂದು ಇವರ ಜಮೀನಿಗೆ ಭೇಟಿ ನೀಡಿ ಕೃಷಿ ಪರಿಶೀಲನೆ ನಡೆಸಿತ್ತು.

ಗೋ ಆಧಾರಿತ ಕೃಷಿ

ಭೂಮಿಗೆ ರಸಗೊಬ್ಬರ ಬದಲು ಕೊಟ್ಟಿಗೆ ಗೊಬ್ಬರ ಬಳಕೆ, ತಿಪ್ಪೆ ಕಸ, ಪಂಚಗವ್ಯ, ಉಳಿಮಜ್ಜಿಗೆ, ಜೀವಾಮೃತ ಬಳಕೆ ಮಾಡಿ ಕೃಷಿ ಮಾಡುತ್ತಿದ್ದಾರೆ. ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. 9 ಜಾನುವಾರುಗಳನ್ನು ಸಾಕುತ್ತಿರುವ ಕೆ.ಎನ್.ಗುರುಪ್ರಸಾದ್, ಸೆಗಣಿ, ಗಂಜಲವನ್ನು ಗೊಬ್ಬರವಾಗಿ ಬಳಕೆ ಮಾಡುತ್ತಿದ್ದಾರೆ.

ತಂದೆಗಾಗಿ ಸಾವಯವ ಕೃಷಿಗಿಳಿದ ಮಗ

ಕೆ. ಎನ್.ಗುರುಪ್ರಸಾದ್ ಅವರು ತನ್ನ ತಂದೆಯ ಕಾರಣಕ್ಕಾಗಿ ಸಾವಯವ ಕೃಷಿ ಶುರು ಮಾಡಿದರು. ತಂದೆ ನಾಗರಾಜು ಅವರಿಗೆ ಮಧುಮೇಹ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಸಾಯನಿಕ ಮುಕ್ತ ಬೆಳೆ ಬೆಳೆಯಬೇಕೆಂದು ನಿರ್ಧರಿಸಿದ್ದರು. ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ನಲ್ಲಿ ಕ್ಯಾಶಿಯರ್ ಕೆಲಸ ಬಿಟ್ಟು ಕೃಷಿಗೆ ಮರಳಿದರು. ಸಾವಯವ ಪದ್ಧತಿಯಲ್ಲಿ ಬೇಸಾಯ ಆರಂಭಿಸಿದರು. ಇವರಿಗೆ ತಂದೆ ನಾಗರಾಜು ಅವರೂ ಸಾಥ್ ನೀಡುತ್ತಿದ್ದಾರೆ. ಜೊತೆಗೆ ಸಹೋದರ ಶಿವಕುಮಾರ್ ಅವರೂ ಸಹಕಾರ ನೀಡುತ್ತಿದ್ದಾರೆ.

ಅರಿಶಿಣ ಕೃಷಿಯಲ್ಲಿ ಸಾವಯವ ವಿಧಾನ ಅನುಸರಿಸುವುದರಿಂದ ಗುಣಮಟ್ಟದ ಬೆಳೆ ಸಿಗುತ್ತದೆ. ಉತ್ತಮ ಫಸಲು ದೊರೆಯುತ್ತದೆ. ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯನ್ನೂ ಪಡೆಯಬಹುದು.

-ಕೆ.ಎನ್.ಗುರುಪ್ರಸಾದ್, ಯುವ ರೈತ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News