ಉತ್ತರಾಖಂಡದಲ್ಲಿ ದಿಢೀರ್ ಪ್ರವಾಹ: ಮಹಿಳೆ ಮೃತ್ಯು, ಕನಿಷ್ಠ ಓರ್ವ ನಾಪತ್ತೆ
PC : PTI
ಡೆಹ್ರಾಡೂನ್,ಆ.23: ಶುಕ್ರವಾರ ತಡರಾತ್ರಿ ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಹಠಾತ್ ಪ್ರವಾಹದ ಬಳಿಕ ಓರ್ವ ಮಹಿಳೆಯ ಶವ ಪತ್ತೆಯಾಗಿದ್ದು,ಕನಿಷ್ಠ ಓರ್ವ ವ್ಯಕ್ತಿ ನಾಪತ್ತೆಯಾಗಿರುವುದು ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ ಬಳಿಕ ಗ್ರಾಮಗಳಲ್ಲಿ ಪ್ರವಾಹದ ನೀರು ನುಗ್ಗಿದ್ದು,ಹಲವಾರು ವಾಹನಗಳು ಕೆಸರಿನಲ್ಲಿ ಹೂತುಹೋಗಿವೆ ಮತ್ತು ಅಂಗಡಿಗಳಿಗೆ ಹಾನಿಯುಂಟಾಗಿದ್ದು,ಮನೆಗಳು ಜಲಾವೃತಗೊಂಡಿವೆ.
ಜಿಲ್ಲಾಡಳಿತದ ಪ್ರಕಾರ ಥರಾಲಿಯ ಸಗ್ವಾರಾ ಗ್ರಾಮದಲ್ಲಿ 21ರ ಹರೆಯದ ಓರ್ವ ಮಹಿಳೆ ಮತ್ತು ಓರ್ವ ವೃದ್ಧ ಅವಶೇಷಗಳಡಿ ಸಿಕ್ಕಿಕೊಂಡಿದ್ದಾರೆ. ಹೊಳೆಯಲ್ಲಿ ನೀರಿನ ಮಟ್ಟ ಏರಿದ್ದರಿಂದ ಶನಿವಾರ ನಸುಕಿನ 12:48ರ ಸುಮಾರಿಗೆ ಕೆಸರು ಗ್ರಾಮದ ಮಾರುಕಟ್ಟೆಗಳಿಗೆ ನುಗ್ಗಿದ್ದು,ಮನೆಗೂ ನುಗ್ಗಿದ ಪರಿಣಾಮ ಬಾಲಕಿಯೋರ್ವಳು ಒಳಗೆ ಸಿಕ್ಕಿಹಾಕಿಕೊಂಡಿದ್ದಾಳೆ.
ಆಕೆಯನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ ಅಧಿಕಾರಿಗಳು ತಿಳಿಸಿದರು.
ತಾಲೂಕು ಆಡಳಿತ,ಪೋಲಿಸರು,ಡಿಡಿಆರ್‌ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು,ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನೂ ಸ್ಥಳಕ್ಕೆ ರವಾನಿಸಲಾಗಿದೆ.
ಪ್ರವಾಹದಿಂದಾಗಿ ಹಲವಾರು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು,ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಅವರು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದ್ದಾರೆ.