ಅಹಿಂದ ನಾಯಕರೇ ಅಪರಾಧಿಗಳು!
ಅಹಿಂದ ವರ್ಗದ ಜಾತಿಗಳು, ಅದರಲ್ಲೂ ಸಣ್ಣ, ಅತಿ ಸಣ್ಣ ಜಾತಿಗಳು ದಶಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಜಾರಿ ಬಗ್ಗೆ ಕಟ್ಟಿಕೊಂಡಿದ್ದ ಕನಸುಗಳು ಛಿದ್ರಗೊಂಡಿವೆ. ಇಷ್ಟಾದರೂ ಈ ಸಮುದಾಯಗಳನ್ನು ಪ್ರತಿನಿಧಿಸುವ ನಾಯಕರು ಕಿರುಧ್ವನಿಯಲ್ಲೂ ಮಾತನಾಡುತ್ತಿಲ್ಲ. ಅಹಿಂದ ವರ್ಗದ ಸಕಲೆಂಟು ಸಂಗತಿಗಳನ್ನೂ ಸಿದ್ದರಾಮಯ್ಯ ಅವರ ಹೆಗಲಿಗೇರಿಸಿ ಅತ್ಯಂತ ನಿರ್ಲಿಪ್ತ, ನಿರ್ಲಜ್ಜ ಮತ್ತು ನಿರ್ವೀರ್ಯರಾಗಿ ವರ್ತಿಸುತ್ತಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತಿದೆ. ರಾಜಕೀಯ ಮೀಸಲಾತಿಯೂ ಇದೆ. ಅದರಿಂದಾಗಿ ಆ ಸಮುದಾಯದ ನಾಯಕರು ಸೊಲ್ಲೆತ್ತುತ್ತಿಲ್ಲ. ಅಲ್ಪಸಂಖ್ಯಾತರಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರಿಗೆ ಜಾಗತೀಕ ಮಾನ್ಯತೆ ಇದೆ. ಅದಕ್ಕಿಂತ ಹೆಚ್ಚಾಗಿ ಅವರು ಜಾತಿ ಹೆಸರಿನಲ್ಲಿ ಗುರುತಿಸಿಕೊಳ್ಳಲು ಸಿದ್ಧರಿಲ್ಲ. ಆದುದರಿಂದ ಅವರೂ ಮಾತನಾಡುತ್ತಿಲ್ಲ. ಪರಿಣಾಮವಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಜಾರಿಯ ಪ್ರಶ್ನೆ ಹಿಂದುಳಿದವರಿಗೆ ಮಾತ್ರ ಸಂಬಂಧಿಸಿದ್ದು ಎನ್ನುವಂತಾಗಿದೆ.
ಜಾತಿ ಸಮೀಕ್ಷಾ ವರದಿ ಜಾರಿಯಾಗಬೇಕಾಗಿದುದು ಹಿಂದುಳಿದವರಿಗೆ ಮಾತ್ರವಲ್ಲ, ಎಲ್ಲರ ದೃಷ್ಟಿಯಲ್ಲೂ ಮುಖ್ಯವಾದುದು ಎನ್ನುವುದನ್ನು ಮುಂದುವರಿದವರು ವಿರೋಧಿಸುವುದರಿಂದಲೇ ಅರ್ಥ ಮಾಡಿಕೊಳ್ಳಬಹುದು. ವರದಿ ಜಾರಿ ಮೀಸಲಾತಿ ಹಂಚಿಕೆಗೆ ಮಾತ್ರ ಸೀಮಿತವಾದುದಲ್ಲ. ಅದು ಇಡೀ ಸಮಾಜಕ್ಕೆ ಹಿಡಿಯುವ ಭೂತಗನ್ನಡಿ. ಈ ದೊಡ್ಡ ಕನ್ನಡಿಯಲ್ಲಿ ಹಿಂದುಳಿದ ವರ್ಗಕ್ಕಾದ ಅನ್ಯಾಯ ಮಾತ್ರ ಅನುರಣಿಸುವುದಿಲ್ಲ. ಪರಿಶಿಷ್ಟ ಜಾತಿ/ಪಂಗಡ ಮತ್ತು ಅಲ್ಪಸಂಖ್ಯಾತರಿಗಾಗುತ್ತಿರುವ ತಾರತಮ್ಯಗಳೂ ಪ್ರತಿಫಲಿಸುತ್ತವೆ. ಈ ವಾಸ್ತವವನ್ನು ಅರಿಯದಿದ್ದರೆ ಅಲ್ಪಸಂಖ್ಯಾತರು, ಹಿಂದುಳಿದವರು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಪಟ್ಟಭದ್ರರೆದುರು ಪರಿತಪಿಸುತ್ತಿರುವ ಪರಂಪರೆ ಕೊನೆಯಾಗದು.
ಸಮಾಜ ಹಿಮ್ಮುಖವಾಗಿ ಚಲಿಸುತ್ತಿರಬಹುದೇನೋ ಎಂಬ ಅನುಮಾನ, ಆತಂಕ ಮೂಡುತ್ತಿರುವ ಈ ನಿರ್ಣಾಯಕ ಕಾಲಘಟ್ಟದಲ್ಲಿ, ಜಾತಿ ವ್ಯವಸ್ಥೆ ಗಾಢಗೊಳ್ಳುತ್ತಿರುವ ಸಂದರ್ಭದಲ್ಲಿ, ಸಂಪತ್ತಿನ ಹಂಚಿಕೆ ಅಗಾಧವಾಗಿ ಅಸಮರ್ಪಕವಾಗುತ್ತಿರುವ ಹೊತ್ತಿನಲ್ಲಿ ಅಹಿಂದ ಸಮುದಾಯಗಳು ಸಂಘಟಿತವಾಗಬೇಕಾದುದು ಅನಿವಾರ್ಯ. ಅರಿವು ಮೂಡಬೇಕಾದುದು-ಮೂಡಿಸಬೇಕಾದುದೂ ಅನಿವಾರ್ಯ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಮೂಲಕ ತಮ್ಮ ಸ್ಥಿತಿಗತಿಗಳನ್ನು ತಿಳಿದು ಯಾರೊಂದಿಗೆ ನಿಲ್ಲಬೇಕು? ಹೇಗೆ ನಿಲ್ಲಬೇಕು? ಎಂಬ ನಿಲುವು ತಳೆಯುವುದು ಅನಿವಾರ್ಯ.
ಇವ್ಯಾವೂ ಅಹಿಂದ ಜನರ ಮತವುಂಡು ದುಂಡಗಾಗಿರುವ ನಾಯಕರಿಗೆ ಬೇಕಾಗಿಲ್ಲ. ಜಾತಿ ಸಮೀಕ್ಷೆ ಹಿಂದುಳಿದವರ ವಿಷಯವೇ ಎಂದುಕೊಂಡರೂ ಅದರ ಬಗ್ಗೆ ಮಾತನಾಡಲು ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ಸಚಿವ ಸಂತೋಷ್ ಲಾಡ್ ಅವರನ್ನು ಬಿಟ್ಟರೆ ಮತ್ತೊಂದು ಹೆಸರಿಲ್ಲ. ಸಚಿವರಾದ ಭೈರತಿ ಸುರೇಶ್, ಮಧು ಬಂಗಾರಪ್ಪ, ಬೋಸರಾಜು ಮತ್ತು ಮಂಕಾಳ ವೈದ್ಯ ಅವರಿಗೆ ಜಾತಿ ಸಮೀಕ್ಷೆ ಬಗೆಗೆ ಕನಿಷ್ಠ ಜ್ಞಾನವಿಲ್ಲ. ಹಿಂದುಳಿದ ಜಾತಿಗಳ 30 ಶಾಸಕರಿದ್ದಾರೆ. 16 ವಿಧಾನ ಪರಿಷತ್ ಸದಸ್ಯರಿದ್ದಾರೆ ಮತ್ತು 6 ಸಂಸದರಿದ್ದಾರೆ. ಆದರೆ ಯಾರಿಗೂ ಬಾಯಿಲ್ಲ. ಇವರೇ ಜಾತಿ ಸಮೀಕ್ಷಾ ವರದಿಯ ಕತ್ತು ಹಿಸುಕಿ ಕೊಂದ ಮೊದಲ ಅಪರಾಧಿಗಳು.
ಇವರು ಮಾತ್ರವಲ್ಲ, ಈ ಸಮುದಾಯಗಳ ಸ್ವಾಮೀಜಿಗಳು, ಉದ್ಯಮಿಗಳು, ವ್ಯಾಪಾರಸ್ಥರು, ಶ್ರೀಮಂತರು ಜೊತೆಗೆ ಅಲ್ಪಸ್ವಲ್ಪ ಪ್ರಭಾವ ಬೀರುವವರೆಲ್ಲರೂ ಅಪರಾಧಿಗಳೇ. ಯಾವುದೇ ಪಕ್ಷದ ಸರಕಾರ ಬಂದರೂ ತಮ್ಮ ಸಮುದಾಯದ ಹಿತಾಸಕ್ತಿ ಕಾಪಾಡಿಕೊಳ್ಳುತ್ತಿರುವ ಮುಂದುವರಿದ ಜಾತಿಗಳ ಮಠಾಧೀಶರು ಅಹಿಂದ ವರ್ಗದ ಸ್ವಾಮೀಜಿಗಳಿಗೆ ಪಾಠವಾಗಿಲ್ಲ. ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಶ್ರೀಮಂತರು ಮಾದರಿಯಾಗಿಲ್ಲ. ಅಹಿಂದ ಎಂಬುದು ರಾಜಕೀಯದಲ್ಲಿ ಮಾತ್ರ ಇರಬೇಕಾದುದಲ್ಲ. ಧರ್ಮ, ಉದ್ಯಮ, ಪತ್ರಿಕೋದ್ಯಮ, ಶಿಕ್ಷಣ, ನ್ಯಾಯಾಂಗವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆನೆಗಟ್ಟಬೇಕು. ಆಗ ಮಾತ್ರ ರಾಜಕೀಯ ಪ್ರಾತಿನಿಧ್ಯವನ್ನು ಪಡೆದುಕೊಳ್ಳಬಹುದು ಮತ್ತು ಪಡೆದ ಪ್ರಾತಿನಿಧ್ಯವನ್ನು ಪರಿಣಾಮಕಾರಿಯಾಗಿ ಬಳಸಬಹುದು. ಈ ವಿಸ್ತಾರ ನೆಲೆಯನ್ನು ಅರ್ಥ ಮಾಡಿಕೊಂಡಿದ್ದರೆ ಜಾತಿ ಸಮೀಕ್ಷಾ ವರದಿ ಸತ್ತು ಸುಡುಗಾಡು ಸೇರುತ್ತಿರಲಿಲ್ಲ.
ನಂತರ ಕುರುಬರ ಸರದಿ. ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಯುವ ವಕೀಲನಿಗೆ ಕುರುಬ ಸಮುದಾಯಕ್ಕೆ ಸೇರಿದವರಿಬ್ಬರು ಜಾತಿ ನಿಂದನೆ ಮಾಡಿ, ಚಪ್ಪಲಿಯಲ್ಲಿ ಹಲ್ಲೆ ಮಾಡಿದ್ದಾರೆ ಎಂಬ ಪ್ರಕರಣ ಮೊನ್ನೆಯಷ್ಟೇ ಸುರಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಘಟನೆ ಅಹಿಂದ ಸಮುದಾಯಗಳ ನಡುವಿನ ಬಾಂಧವ್ಯದ ಪ್ರಶ್ನೆ. ಭೌಗೋಳಿಕವಾಗಿ ರಾಜ್ಯಾದ್ಯಂತ ಹರಡಿಕೊಂಡು ಸಾಮಾಜಿಕವಾಗಿ ಮಧ್ಯದಲ್ಲಿರುವ ಕುರುಬ ಸಮುದಾಯ ನಿಭಾಯಿಸಬೇಕಾದ ಪ್ರಶ್ನೆ. ನಮ್ಮ ಮನೆಮನೆಗಳಲ್ಲಿ, ಸಮಾಜದಲ್ಲಿ
ದೊಡ್ಡಣ್ಣನಿಗೆ ದೊಡ್ಡ ಪಾತ್ರವಿದೆ. ಹಿಂದುಳಿದವರಿಗೆ ಕುರುಬರು ದೊಡ್ಡಣ್ಣ. ಸಾಮಾಜಿಕ ವ್ಯವಸ್ಥೆಯಲ್ಲಿ ಪರಿಶಿಷ್ಟರು ಮತ್ತು ಅಲ್ಪಸಂಖ್ಯಾತರಿಗಿಂತ ಮೇಲಿರುವವರು. ಅವರು ನಿರ್ವಹಿಸಬೇಕಾದ ಪ್ರಶ್ನೆ. ಜಾತಿ ಸಮೀಕ್ಷೆ ವಿಷಯದಲ್ಲಿ 1ಃಗೆ ವಿಶೇಷ ಮಾನ್ಯತೆ ಇಲ್ಲದಿದ್ದರೆ ಸಮಸ್ಯೆ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲವೇನೋ?
ಮೂರನೇ ಅಪರಾಧಿ ಕಾಂಗ್ರೆಸ್ ನಾಯಕತ್ವ. ಜಾತಿ ಸಮೀಕ್ಷಾ ವರದಿ ಜಾರಿಯಾಗದಿರಲು ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಕಾರಣ, ಸಿದ್ದರಾಮಯ್ಯ ಅವರೇ ಕಾರಣ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ತಾವು ಬೆಂಬಲ ನೀಡಿ ಗೆಲ್ಲಿಸಿದ್ದರಿಂದಲೇ ಅಹಿಂದ ಸಮುದಾಯಗಳು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಮೇಲೆ ಹಕ್ಕೊತ್ತಾಯ ಎಂಬಂತೆ ಕೆಂಡ ಕಾರುತ್ತಿವೆ. ಆದರೆ ಇವೇ ಅಹಿಂದ ವರ್ಗಗಳಲ್ಲೇ ಅಪಸ್ವರ ಇದೆ ಎಂದು ಹಾಗೂ ಅಹಿಂದ ಸಮುದಾಯದ ನಾಯಕರು ಸಮೀಕ್ಷಾ ವರದಿ ಪರ ಮಾತನಾಡುತ್ತಿಲ್ಲ ಎನ್ನುವ ಕಾರಣಕ್ಕಾಗಿ ತಡೆ ಹಿಡಿದಿರಬಹುದು ಅಥವಾ ಸಮೀಕ್ಷಾ ವರದಿ ತಯಾರಿಸುವಾಗ ದ್ವಿತೀಯ ಮೂಲದ ಮಾಹಿತಿಯನ್ನು ಸಂಗ್ರಹಿಸಿ ಪರಿಗಣಿಸದೆ ಬಹಳ ದೊಡ್ಡ ಲೋಪವೆಸಗಲಾಗಿದೆ. ಅದರಿಂದಾಗಿ ಸರಕಾರ ಸಮೀಕ್ಷಾ ವರದಿಯನ್ನು ಒಪ್ಪಿ ಜಾರಿ ಮಾಡಲು ಮುಂದಾಗಿದ್ದರೂ ನ್ಯಾಯಾಲಯ ತಡೆ ನೀಡುವ ಸಾಧ್ಯತೆ ಇತ್ತು. ಇದರಿಂದ ಇನ್ನೂ
ಹೆಚ್ಚಿನ ಮುಖಭಂಗವಾಗುತ್ತಿತ್ತು ಎಂದು ಕಾಂಗ್ರೆಸ್ ಹೈಕಮಾಂಡ್ ತಡೆಗೋಡೆ ನಿರ್ಮಿಸಿರಬಹುದು. ಇವೇ ಕಾರಣಗಳಿಗೆ ಸಿದ್ದರಾಮಯ್ಯ ಕೂಡ ಸುಮ್ಮನಾಗಿರಬಹುದು. ಅದರಲ್ಲಿ ‘ನಾನು ಸಮೀಕ್ಷಾ ವರದಿ ಜಾರಿ ಮಾಡಲು ಸಿದ್ಧನಿದ್ದೆ, ಹೈಕಮಾಂಡ್ ಅವಕಾಶ ನೀಡಲಿಲ್ಲ ಎಂಬ ಸಂದೇಶ ರವಾನೆಯಾಗಲಿ’ ಎಂಬ ಲೆಕ್ಕಾಚಾರವನ್ನೂ ಹಾಕಿರಬಹುದು. ಆದರೆ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಿ ಜಾತಿ ಸಮೀಕ್ಷಾ ವರದಿಯನ್ನು ಜಾರಿ ಮಾಡುವ ಇಚ್ಛಾಶಕ್ತಿ ಪ್ರದರ್ಶಿಸದ ಅಪರಾಧವನ್ನು ಮರೆಮಾಚಲಾಗದು.
ಕಳೆದ ವಾರ ಲಿಂಗಾಯತ ಮುಖಂಡ ಶಾಮನೂರು ಶಿವಶಂಕರಪ್ಪ ಮತ್ತು ಪರಿಶಿಷ್ಟ ಪಂಗಡದ ನಾಯಕ ಕೆ.ಎನ್. ರಾಜಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮಗಳು ಜರುಗಿದವು. ಈ ಎರಡೂ ಸಮಾರಂಭಗಳಿಗೆ ಹೋಗಿದ್ದ ಸಿದ್ದರಾಮಯ್ಯ ಅಲ್ಲಿ ಆಡಿರುವ ಮಾತುಗಳು ಒಟ್ಟಾರೆ ಅಹಿಂದ ವರ್ಗದ, ಅದರಲ್ಲಿ ಹಿಂದುಳಿದವರ ಮತ್ತು ಕಾಂಗ್ರೆಸ್ ಪಕ್ಷದ ರಾಜಕೀಯ ಹೇಗಿರುತ್ತದೆ ಎನ್ನುವುದನ್ನು ಸೂಚ್ಯವಾಗಿ ಹೇಳುತ್ತವೆ. ಅವರು ಏನು ಹೇಳಿದ್ದಾರೆ ಎನ್ನುವುದನ್ನು ನಂತರ ನೋಡೋಣ. ಮೊದಲು ಇದೇ ಶಾಮನೂರು ಶಿವಶಂಕರಪ್ಪ ಮತ್ತು ಕೆ.ಎನ್. ರಾಜಣ್ಣ ಹಿಂದೆ ಸಿದ್ದರಾಮಯ್ಯ ಬಗ್ಗೆ ಏನು ಹೇಳಿದ್ದರು ಎಂಬುದನ್ನು ಗಮನಹರಿಸೋಣ.
ಜಾತಿ ಸಮೀಕ್ಷಾ ವರದಿ ಜಾರಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಶಾಮನೂರು ಶಿವಶಂಕರಪ್ಪ ‘ರಾಜ್ಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರನ್ನು ಬಿಟ್ಟು ರಾಜಕಾರಣ ಮಾಡೋಕಾಗುತ್ತಾ?’ ಎಂದಿದ್ದರು. ಅದು ನೇರವಾಗಿ ಸಿದ್ದರಾಮಯ್ಯ ಅವರಿಗೆ ಹಾಕಿದ್ದ ಸವಾಲಾಗಿತ್ತು. ಇನ್ನೊಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧಾರವಾಗದೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಹೈಕಮಾಂಡ್ ಪ್ರತಿನಿಧಿಗಳು ಸಭೆ ನಡೆಸುತ್ತಿದ್ದರು. ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿತ್ತು. ಅಭಿಪ್ರಾಯ ತಿಳಿಸಿ ಹೊರಬಂದ ಸಿದ್ದರಾಮಯ್ಯ ಅವರ ದಶಕಗಳ ಸ್ನೇಹಿತರಾದ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ ಅವರಂಥವರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ ‘ಮುಖ್ಯಮಂತ್ರಿಗಳ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದಿದ್ದರು. ಆದರೆ ಕೆ.ಎನ್. ರಾಜಣ್ಣ ‘ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು’ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈಗ ಇಬರಿಬ್ಬರ ಹುಟ್ಟುಹಬ್ಬದಲ್ಲಿ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎನ್ನುವ ವಿಷಯಕ್ಕೆ ಮರಳುವುದಾದರೆ ಶಾಮನೂರು ಬಯಸಿದರೆ ಮುಂದಿನ ಚುನಾವಣೆಯಲ್ಲೂ ಟಿಕೆಟ್ ಕೊಡುವುದಾಗಿ ಘೋಷಿಸಿದ್ದಾರೆ. ರಾಜಣ್ಣ ಬಗ್ಗೆ ಮಾತನಾಡುತ್ತಾ ‘ರಾಜಣ್ಣ ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸುತ್ತಿರುವುದು ಅವರು ಎಲ್ಲಾ ವರ್ಗದವರ ಪ್ರೀತಿ, ವಿಶ್ವಾಸ, ಗೌರವ ಗಳಿಸಿರುವುದನ್ನು ತೋರುತ್ತದೆ. ಅವರು ನೇರ, ನಿಷ್ಠುರ ನಾಯಕ’ ಎಂದಿದ್ದಾರೆ. ‘ನಮ್ಮನ್ನು ಬಿಟ್ಟು ರಾಜಕಾರಣ ಮಾಡಲು ಸಾಧ್ಯವೇ’ ಎಂದು ಹೇಳುವ ಮೂಲಕವೇ ನಾವು ನಿಮ್ಮನ್ನು ಬಿಟ್ಟು ರಾಜಕಾರಣ ಮಾಡಬಲ್ಲೆವು ಎಂದಿರುವ ಶಾಮನೂರಿಗೆ ಟಿಕೆಟ್ ಭರವಸೆ. ಇನ್ನೊಂದೆಡೆ ರಾಜಕೀಯ ನಿವೃತ್ತಿ ಘೋಷಿಸಿದ್ದರಾದರೂ ಕೆ.ಎನ್. ರಾಜಣ್ಣ ಅವರಿಗೆ ‘ನಿಮ್ಮಂಥ ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ, ಗೌರವ ಗಳಿಸಿದ ನಾಯಕರು ರಾಜಕೀಯದಲ್ಲಿ ಇರಬೇಕು, ಮುಂದುವರಿಯಿರಿ’ ಎಂಬ ಸೌಜನ್ಯದ ಮಾತನ್ನೇ ಹೇಳುವುದಕ್ಕೂ ಬರ.
ಇದೇ ವೇಳೆ ಶಾಮನೂರು ಶಿವಶಂಕರಪ್ಪ ಬಗ್ಗೆ ದೇವರಾಜ ಅರಸು ಹೇಳಿದ್ದ ಮಾತನ್ನು ನೆನಪಿಸಿಕೊಳ್ಳುವುದು ಸಮಯೋಚಿತ. ಎಚ್. ವಿಶ್ವನಾಥ್ ಮೈಸೂರು ಭಾಗದವರಾಗಿದ್ದರಿಂದ ಮತ್ತು ಕ್ರಿಯಾಶೀಲ ಯುವಕನಾಗಿದ್ದುದರಿಂದ ದೇವರಾಜ ಅರಸು ಅವರ ವಿಶ್ವಾಸ ಗಳಿಸಿದ್ದರು. ಇದು ಗೊತ್ತಿದ್ದ ಶಾಮನೂರು ಶಿವಶಂಕರಪ್ಪ ಟಿಕೆಟ್ ಕೊಡಿಸುವಂತೆ ವಿಶ್ವನಾಥ್ ಬೆನ್ನು ಬಿದ್ದಿದ್ದರು. ಕಡೆಗೊಂದು ದಿನ ಶಾಮನೂರು ಅವರನ್ನು ಕರೆದುಕೊಂಡು ವಿಶ್ವನಾಥ್ ಅವರು ಅರಸು ಮನೆಗೆ ಹೋಗಿಯೇ ಬಿಟ್ಟರು. ಅರಸು ಮುಂದೆ ‘ಇವರು ಲಿಂಗಾಯತರು, ಉದ್ಯಮಿ, ದುಡ್ಡು ಇದೆ. ಜಾತಿ ಮತ್ತು ದುಡ್ಡು ಎರಡೂ ಇರುವುದರಿಂದ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಒಂದು ಸೀಟು ಗ್ಯಾರಂಟಿ’ ಎಂಬ ಪ್ರಸ್ತಾವವಿಟ್ಟರು. ‘ನೋಡೋಣ’ ಎಂದು ಹೇಳಿ ಇಬ್ಬರನ್ನೂ ಹೊರ ಕಳುಹಿಸಿದ ಅರಸು ಇಂಟರ್ ಕಾಮ್ ಮೂಲಕ ಗೇಟಿಗೆ ಫೋನ್ ಮಾಡಿ ವಿಶ್ವನಾಥ್ ಒಬ್ಬರನ್ನೇ ಒಳ ಬರುವಂತೆ ಸೂಚಿಸಿದರು. ವಿಶ್ವನಾಥ್ ಅವರನ್ನು ಕೂರಿಸಿಕೊಂಡು ‘ನೀನಿನ್ನೂ ಬೆಳೆಯಬೇಕಾದ ಹುಡುಗ, ಅವನಂಥ ಜಾತಿ ಮತ್ತು ದುಡ್ಡು ಇರುವವರು ರಾಜಕೀಯಕ್ಕೆ ಬಂದರೆ ನಿನ್ನಂಥವರು ಮೂಲೆ ಸೇರಬೇಕಾಗುತ್ತದೆ.ಬೇಕಾದರೆ ನಿನ್ನ ಸ್ನೇಹಿತನ ಉದ್ಯಮಕ್ಕೆ ಸಹಾಯ ಮಾಡು, ಚುನಾವಣೆಯಲ್ಲಿ ನೀನೂ ಅವನ ನೆರೆವು ತೆಗೆದುಕೊ. ಆದರೆ ಅಧಿಕಾರ ಮತ್ತು ಹಣ ಒಂದೇ ಕಡೆ ಇರದಂತೆ ಎಚ್ಚರ ವಹಿಸು’ ಎಂದಿದ್ದರಂತೆ.
ಅರಸು ಹೇಳಿದ್ದ ಭವಿಷ್ಯ ದಿಟವಾಗಿದೆ. ವಿಶ್ವನಾಥ್ ಮೂಲೆ ಸೇರಿದ್ದಾರೆ. ಶಾಮನೂರಿಗೆ ಬೇಡ ಬೇಡ ಎಂದರೂ ಟಿಕೆಟ್ ಕೊಡಲಾಗುತ್ತಿದೆ. ಯಾಕೆ ಹೀಗಾಗುತ್ತಿದೆ ಎಂದರೆ ಅರಸು ಅವರನ್ನು, ಅರಸು ಪ್ರತಿಪಾದಿಸಿದ ಅಸಲಿ ಅಹಿಂದ ಪರಿಕಲ್ಪನೆಯನ್ನು ಜೊತೆಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್, ವಿ.ಪಿ. ಸಿಂಗ್ ಹೋರಾಟಗಳನ್ನು ಮರೆತದ್ದರಿಂದ. ಹೀಗೆ ಜವಾಬ್ದಾರಿ ಮರೆತಿರುವ ಎಲ್ಲಾ ಅಹಿಂದ ವರ್ಗದ ನಾಯಕರೂ ಜಾತಿ ಸಮೀಕ್ಷಾ ವರದಿಯನ್ನು ಹತ್ತಿಕ್ಕಿದ ಅಪರಾಧಿಗಳು.