×
Ad

ಸಿಎಂ ಬದಲಾವಣೆಗಾಗಿ ಆಡಿಯೊ ಥ್ರೆಟ್!

Update: 2025-07-21 10:50 IST

ತಂತ್ರ, ಕುತಂತ್ರ, ಷಡ್ಯಂತ್ರ ಏನು ಬೇಕಾದರೂ ಕರೆಯಿರಿ. 1980ರಿಂದ ಈಚೆಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾದ ಬಹುತೇಕರು ಮಾಡಿರುವುದು ಇವನ್ನೇ. ಮೊದಲು ಮಾಡಿದ್ದು ಆರ್. ಗುಂಡೂರಾವ್. ನಂತರ 1983ರಲ್ಲಿ ನಡೆದದ್ದು ಇವೇ. ಆಗ ಕ್ರಾಂತಿರಂಗ ಮತ್ತು ಜನತಾ ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಆ ಗೆಲುವಿನಲ್ಲಿ ಕ್ರಾಂತಿರಂಗದ ಎಸ್. ಬಂಗಾರಪ್ಪ ಅವರ ಬೆವರು ಜಾಸ್ತಿ ಇತ್ತು. ಬಂಗಾರಪ್ಪ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 223 ಕಡೆ ಪ್ರಚಾರ ಮಾಡಿದ್ದರು. ಅವರೇ ಕಣಕ್ಕಿಳಿದಿದ್ದ ಸೊರಬದಲ್ಲಿ ಪ್ರಚಾರಕ್ಕೆ ಹೋಗದೆಯೂ ಗೆದ್ದಿದ್ದರು. ಆದರೆ ಮುಖ್ಯಮಂತ್ರಿಯಾಗಿದ್ದು ರಾಮಕೃಷ್ಣ ಹೆಗಡೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಂಗಾರಪ್ಪ ಮತ್ತು ದೇವೇಗೌಡ ನಡುವೆ ತೀವ್ರ ಪೈಪೋಟಿ ಇತ್ತು. ಜಗಳ ಬಿಡಿಸುವ ನೆಪದಲ್ಲಿ ರಂಗ ಪ್ರವೇಶಿಸಿದ ರಾಮಕೃಷ್ಣ ಹೆಗಡೆ ಕುತಂತ್ರ ಮಾಡಿರಲಿಲ್ಲ ಎನ್ನಲು ಸಾಧ್ಯವೇ? ಆಕ್ರೋಶಗೊಂಡಿದ್ದ ಸ್ವಾಭಿಮಾನಿ ಬಂಗಾರಪ್ಪ ಸಂಪುಟ ಸೇರಲಿಲ್ಲ, ದೇವೇಗೌಡ ಸೇರಿದರು.

ಈ ಪರಂಪರೆ ಹೊಡೆದಾಟ-ಬಡಿದಾಟದ ಸ್ವರೂಪ ಪಡೆದುಕೊಂಡದ್ದು 1994ರಲ್ಲಿ. ಹಿಂದೆ ಖಳನಾಯಕನಾಗಿದ್ದ ರಾಮಕೃಷ್ಣ ಹೆಗಡೆ ಸಂತ್ರಸ್ತರಾದರು. ಸಂತ್ರಸ್ತರಾಗಿದ್ದ ದೇವೇಗೌಡರು ಫಲಾನುಭವಿಯಾದರು. ಆಗ ರಾಮಕೃಷ್ಣ ಹೆಗಡೆಯವರನ್ನು ಕೋಣೆಯಲ್ಲಿ ಕೂಡಿಹಾಕಿ, ಥಳಿಸಿ, ಬಟ್ಟೆ ಹರಿದುಹಾಕಲಾಗಿತ್ತು. 1999ರಲ್ಲಿ ಎಸ್.ಎಂ. ಕೃಷ್ಣ ಅವರು ‘ವೀರೇಂದ್ರ ಪಾಟೀಲ್ ಪ್ರಕರಣದಿಂದ ಲಿಂಗಾಯತರು ದೂರವಾಗಿದ್ದಾರೆ. ಒಕ್ಕಲಿಗರು ಕೈಹಿಡಿಯದಿದ್ದರೆ ಕಾಂಗ್ರೆಸ್ ಗೆಲ್ಲಲು ಸಾಧ್ಯವೇ ಇಲ್ಲ’ ಎಂದು ಹೈಕಮಾಂಡ್ ಮನವೊಲಿಸಿ ಧರಂ ಸಿಂಗ್ ಅವರಿಂದ ಕೆಪಿಸಿಸಿ ಕುರ್ಚಿ ಕಿತ್ತುಕೊಂಡಿದ್ದರು. ಅದು ಮುಖ್ಯಮಂತ್ರಿಯಾಗಲೆಂದೇ ಹೆಣೆದ ರಣತಂತ್ರವಾಗಿತ್ತು.

2004ರಲ್ಲಿ ಹಿಂದುಳಿದ ಜಾತಿಯ ಧರಂ ಸಿಂಗ್ ಅವರಿಗೆ ನ್ಯಾಯ ಸಿಕ್ಕಿತ್ತಾದರೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದಲ್ಲಿ ಜೆಡಿಎಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಅವರು ಪರಿಶಿಷ್ಟ ಜಾತಿಯವರು ಎನ್ನುವುದೇ ಪ್ರಮುಖ ಕಾರಣವಾಗಿತ್ತು. 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಹೈಜಾಕ್ ಮಾಡಿ ಮುಖ್ಯಮಂತ್ರಿ ಯಾದರು. 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲ ಎಂಬ ಪ್ರಜಾಪ್ರಭುತ್ವ ವಿರೋಧಿ ಪಟ್ಟು ಹಾಕಿ ಪಟ್ಟವೇರಿದರು. 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರನ್ನು ಸೋಲಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. 2018ರಲ್ಲಿ ಮತ್ತದೇ ಅತಂತ್ರ, ಆಪರೇಷನ್ ಕಮಲ. ಈ ಪರಿಸ್ಥಿತಿ ನೋಡಿಯೇ ರಾಜ್ಯದ ಮತದಾರ 2023ರಲ್ಲಿ ಕಾಂಗ್ರೆಸ್‌ನ 136 ಶಾಸಕರನ್ನು ಗೆಲ್ಲಿಸಿದ್ದ. ಆದರೂ ಮುಖ್ಯಮಂತ್ರಿ ಹುದ್ದೆಗಾಗಿ ಗುದ್ದಾಟ ಜಾರಿಯಲ್ಲಿದೆ.

ಆಗಾಗ ‘ಸಿದ್ದರಾಮಯ್ಯ ಅವರೇ ಐದು ವರ್ಷಕ್ಕೂ ಮುಖ್ಯಮಂತ್ರಿ’ ಎಂದು ಹೇಳುವ ಪರಿಶಿಷ್ಟ ಜಾತಿಯ ಸಚಿವರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷರ ಕಡೆಯ ಪ್ರಭಾವಿ ನಾಯಕರೊಬ್ಬರು ಕರೆ ಮಾಡಿ ಧಮಕಿ ಹಾಕಿದ್ದಾರೆ. ‘ಚುನಾವಣೆಗೆ ದುಡ್ಡಾಕಿ ಗೆಲ್ಲಿಸಿರುವವರು ನಾವು, ನಾವೆಷ್ಟು ಖರ್ಚು ಮಾಡಿದ್ದೇವೆ ಎನ್ನುವುದು ಗೊತ್ತಾ? ಮಾತೆತ್ತಿದರೆ ದಲಿತರು, ಹಿಂದುಳಿದವರು ಎನ್ನುವೆ. ಇದೇನು ದಲಿತರು ಮತ್ತು ಹಿಂದುಳಿದವರಿಗೆ ಮಾತ್ರ ಇರುವ ರಾಜ್ಯವೇ? ಇನ್ನೊಮ್ಮೆ ಸಿಎಂ ಸ್ಥಾನ ಖಾಲಿ ಇಲ್ಲ, ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳಿದರೆ ನಿನಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತೆ’ ಎಂದು ಏಕವಚನದಲ್ಲೇ ಗದರಿದ್ದಾರೆ. ಈ ಸಂಭಾಷಣೆ ರೆಕಾರ್ಡ್ ಆಗಿದ್ದು ಸಚಿವರು ಅದನ್ನು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಕೇಳಿಸಿದ್ದಾರೆ. ಕೆ.ಸಿ. ವೇಣುಗೋಪಾಲ್ ಅವರಿಗೂ ಕಳುಹಿಸಿದ್ದಾರೆ. ತನ್ನ ಜಾತಿಯನ್ನು ನಿಂದಿಸಿದರು. ತಮ್ಮ ಜಾತಿಯ ದರ್ಪವನ್ನು ಪ್ರದರ್ಶಿಸಿದರು ಎಂದು ಅಳಲು ತೋಡಿಕೊಂಡಿದ್ದಾರೆ. ಧಮಕಿ ಹಾಕಿದ ಪ್ರಭಾವಿ ವಿರುದ್ಧ ಕ್ರಮ ತೆಗೆದುಕೊಳ್ಳಿ. ಇಲ್ಲದಿದ್ದರೆ ಆಡಿಯೊ ಲೀಕ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆದರೆ ಅವರ ಎಚ್ಚರಿಕೆಗೆ ಯಾರೂ ಬೆದರಿದಂತೆ ಕಾಣುತ್ತಿಲ್ಲ. ಬದಲಿಗೆ ಅವರ ಮೇಲೆಯೇ ಆಡಿಯೊ ಡಿಲೀಟ್ ಮಾಡಿ ಎಂಬ ಒತ್ತಡ ಹಾಕಲಾಗುತ್ತಿದೆ.

ತನ್ನ ತಂದೆ ಎಐಸಿಸಿ ಅಧ್ಯಕ್ಷ ಎನ್ನುವ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಅಥವಾ ತನ್ನ ತಂದೆ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಯತೀಂದ್ರ ಸಿದ್ದರಾಮಯ್ಯ ಹೀಗೆ ಜಾತಿ ಹೆಸರು ಹೇಳಿ ದರ್ಪ ಪ್ರದರ್ಶಿಸಿದ್ದರೆ, ನಿನಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಹೆದರಿಸಿದ್ದರೆ ಇಷ್ಟೊತ್ತಿಗೆ ಏನಾಗಿರುತ್ತಿತ್ತು? ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟಿರ ಬೇಕಾಗಿತ್ತು. ಯತೀಂದ್ರ ಸಿದ್ದರಾಮಯ್ಯ ಕ್ಷಮೆ ಕೇಳಿರಬೇಕಾಗಿತ್ತು. ಇತ್ತೀಚೆಗೆ ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕೆಂಬ ಪ್ರಸ್ತಾವವಾಗಿತ್ತು. ಜೊತೆಯಲ್ಲಿ ಈಗ ಅಂಥ ಪರಿಸ್ಥಿತಿ ಇಲ್ಲ ಎಂದು ಕೂಡ ಹೇಳಲಾಗಿತ್ತು. ಈಗ ಹೇಳಿ ಪ್ರಭಾವಿಗಳು ಒದ್ದು ಕಿತ್ತು ಕೊಳ್ಳುವ ಪ್ರಯತ್ನ ನಡೆಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?

ರಾಜಣ್ಣ ಭೇಟಿ ಮಾಡದ ಡಿಕೆಸು

ರಾಜ್ಯದ ಯಾವುದೇ ಜಿಲ್ಲೆಯ ಹಾಲು ಉತ್ಪಾದಕರ ಸಂಘ, ಒಕ್ಕೂಟದ ಅಧ್ಯಕ್ಷರಾದವರು, ನಿರ್ದೇಶಕರಾದವರು ಸಹಕಾರ ಸಚಿವರನ್ನು ಭೇಟಿಯಾಗುತ್ತಾರೆ. ಸಂಘದ ಶ್ರೇಯೋಭಿವೃದ್ಧಿಗೆ ಸಹಕಾರ ಕೋರುತ್ತಾರೆ. ಇದು ನಿಯಮವೇನಲ್ಲ, ನಡೆದುಕೊಂಡು ಬಂದಿರುವ ಪರಿಪಾಠ. ಅದೇ ರೀತಿ ಇತ್ತೀಚೆಗೆ ಕೋಮುಲ್ ಅಧ್ಯಕ್ಷರಾಗಿ ಗೆದ್ದ ನಂಜೇಗೌಡ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಭೀಮಾ ನಾಯಕ್ ಮತ್ತಿತರರು ಸಚಿವ ಕೆ.ಎನ್. ರಾಜಣ್ಣ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಆದರೆ ಬಮುಲ್ ಅಧ್ಯಕ್ಷರಾಗಿ ಗೆದ್ದಿರುವ ಡಿ.ಕೆ. ಸುರೇಶ್ ಭೇಟಿಯಾಗಿಲ್ಲ. ಹಿಂದೆ ಡಿ.ಕೆ. ಶಿವಕುಮಾರ್ ಕೆಎಂಎಫ್ ಅಧ್ಯಕ್ಷರ ಚುನಾವಣೆ ಬಗ್ಗೆ ಮಾತನಾಡಲು ಪ್ರಯತ್ನಿಸಿದಾಗ ಕೆ.ಎನ್. ರಾಜಣ್ಣ ಕೈಗೆ ಸಿಕ್ಕಿರಲಿಲ್ಲ. ಅದಕ್ಕೋಸ್ಕರವೇ ಡಿ.ಕೆ. ಸುರೇಶ್ ಈಗ ರಾಜಣ್ಣ ಅವರನ್ನು ಭೇಟಿ ಮಾಡಿಲ್ಲ ಎನ್ನುವ ಗುಸುಗುಸು ಕೇಳಿಬರುತ್ತಿದೆ.

ಡಿ.ಕೆ. ಸುರೇಶ್ ಕಳೆದ ಲೋಕಸಭಾ ಚುನಾವಣೆ ಸೋತರೂ ಪ್ರಭಾವಿ. ಮೂರು ಮೂರು ಹುದ್ದೆಗಳ ಫಲಾನುಭವಿ. ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕು ಎನ್ನುವ ಏಕೈಕ ಕಾರಣಕ್ಕಾಗಿ ಕನಕಪುರ ತಾಲೂಕಿನ ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಹುದ್ದೆ ಪಡೆದುಕೊಂಡಿದ್ದಾರೆ. ಮೊನ್ನೆ ಮೊನ್ನೆ ಬಮುಲ್ ಅಧ್ಯಕ್ಷರಾದರು. ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾರೆ. ಇದೀಗ ಕೆಎಂಎಫ್ ಅಧ್ಯಕ್ಷರಾಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಮೊದಲೆಲ್ಲಾ ಡಿ.ಕೆ. ಶಿವಕುಮಾರ್ ಕಾರಣಕ್ಕೆ ಡಿ.ಕೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾಗೇಬಿಡುತ್ತಾರೆ ಎಂದು ಹೇಳಲಾಗುತ್ತಿತ್ತು. ಈಗ ಅದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಮೂರನ್ನು ‘ದಕ್ಕಿಸಿಕೊಂಡವರಿಗೆ’ ನಾಲ್ಕನೆಯದನ್ನು ಗಿಟ್ಟಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ?

ಇನ್ನೊಂದು ಧಮಕಿ ಕತೆ

ರಣದೀಪ್ ಸಿಂಗ್ ಸುರ್ಜೆವಾಲಾ ಕಡೆಯದಾಗಿ ಭೇಟಿ ಮಾಡಿದ್ದು ತುಮುಲ್ ಅಧ್ಯಕ್ಷರೂ ಆದ ಪಾವಗಡ ಶಾಸಕ ಎಚ್.ವಿ. ವೆಂಕಟೇಶ್ ಅವರನ್ನು. ಭೇಟಿ ಮುಗಿಸಿ ಹೊರಬರುತ್ತಿದ್ದಂತೆ ಅಲ್ಲೇ ಇದ್ದ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಎಚ್.ವಿ. ವೆಂಕಟೇಶ್ ಅವರಿಗೆ ಧಮಕಿ ಹಾಕಿದ್ದಾರೆ. ತುಮುಲ್ ನಲ್ಲಿ ನಾವು 8 ಜನ ಒಕ್ಕಲಿಗ ನಿರ್ದೇಶಕರಿದ್ದೇವೆ. ಆದರೂ ನೀನು ಅಧ್ಯಕ್ಷ ಆಗಿದ್ದೀಯ. ನವೆಂಬರ್ ವರೆಗೆ ನಡೆಸು. ನವೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಒಂದೇ ಗಂಟೆಯಲ್ಲಿ ನಿನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸುತ್ತೇನೆ ಎಂದು ಹೇಳಿದ್ದಾರಂತೆ. ವೆಂಕಟೇಶ್ ಕೂಡ ಪಕ್ಷದ ನಾಯಕರ ಬಳಿ ಅಳಲು ತೋಡಿಕೊಂಡಿದ್ದಾರೆ. ಆದರೆ ಪ್ರಮುಖ ಸಚಿವರು ಆಡಿಯೊ ಸಮೇತ ಅಲವತ್ತುಕೊಂಡರೂ ಕ್ರಮ ಕೈಗೊಳ್ಳದ ನಾಯಕರು ವೆಂಕಟೇಶ್ ದುಮ್ಮಾನಕ್ಕೆ ದನಿಯಾಗುತ್ತಾರೆ ಎನ್ನಲು ಏನು ಗ್ಯಾರಂಟಿ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News