×
Ad

ಜಾತಿ ಗಣತಿ: ಸಿದ್ದರಾಮಯ್ಯರಿಗೆ ಹಿನ್ನಡೆ?

Update: 2025-06-16 11:08 IST

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವುದಾಗಿ ಹೇಳಿದ ಸರಕಾರ ಮರುದಿನವೇ ‘ತಾತ್ವಿಕವಾಗಿ ಒಪ್ಪಿಕೊಳ್ಳುವ’ ಗೋಜಿಗೂ ಹೋಗದೆ ಹೊಸ ಜಾತಿ ಸಮೀಕ್ಷೆ ಮಾಡಲು ನಿರ್ಧರಿಸಿದೆ. ಹಳೆಯ ಸಮೀಕ್ಷೆ ನಡೆದು ಹತ್ತು ವರ್ಷಗಳಾಗಿವೆ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಕಾಯ್ದೆ ಪ್ರಕಾರ ಹತ್ತು ವರ್ಷಕ್ಕೊಮ್ಮೆ ಹೊಸ ಸಮೀಕ್ಷೆ ಮಾಡಬೇಕು, ಆದ್ದರಿಂದ ಹೊಸದಾಗಿಯೇ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಆದರೆ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆೆ ರಾಜ್ಯ ಸರಕಾರಕ್ಕೆ ವರದಿ ಮತ್ತು ಶಿಫಾರಸುಗಳನ್ನು ಸಲ್ಲಿಸಿದಾಗ ಇನ್ನೂ ಹತ್ತು ವರ್ಷ ಆಗಿರಲಿಲ್ಲ. ಆಗಲೇ ತಡಮಾಡದೆ ಒಪ್ಪಿಕೊಂಡಿದ್ದರೆ ಈ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ.

ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ವರದಿ ಒಪ್ಪಿಕೊಳ್ಳಲು ಮನಸ್ಸು ಮಾಡಲಿಲ್ಲ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಅವರಿಗೆ ಜಾತಿ ಸಮೀಕ್ಷಾ ವರದಿ ಒಪ್ಪಿಕೊಳ್ಳಬೇಕೆಂಬ ಕಾಳಜಿ ಮತ್ತು ಇಚ್ಛಾಶಕ್ತಿ ಎರಡೂ ಇರಲಿಲ್ಲ. ಜನತಾ ಪರಿವಾರದವರ ಹುಟ್ಟುಗುಣ ಎನಿಸಿರುವ ಸೋಮಾರಿತನ ಮತ್ತು ಅವಕಾಶವಾದಿತನ ಸಿದ್ದರಾಮಯ್ಯ ಅವರನ್ನೂ ಬಿಟ್ಟಿಲ್ಲ. ಅವರು ಜಾತಿ ಸಮೀಕ್ಷೆ ವರದಿಯನ್ನು ಜಾರಿ ಮಾಡಿಯೇ ಸಿದ್ಧ ಎಂದು ಮೇಜು ಕುಟ್ಟಿದರೇ ವಿನಃ ಅಗತ್ಯ ತಯಾರಿ ಮಾಡಿಕೊಳ್ಳುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಗತ್ಯ ತಯಾರಿ ಇಲ್ಲದೆಯೇ ಜಾರಿಗೆ ಹೊರಟಿದ್ದರಿಂದಲೇ ಅದು ಫಲಪ್ರದವಾಗಿಲ್ಲ.

ಲಿಂಗಾಯತರು ಮತ್ತು ಒಕ್ಕಲಿಗರನ್ನು ಬಿಟ್ಟು ನೀವು ರಾಜಕಾರಣ ಮಾಡಲು ಸಾಧ್ಯವೇ ಎಂದು ಶಾಮನೂರು ಶಿವಶಂಕರಪ್ಪ ಸವಾಲೆಸೆದರು. ಬಿ.ವೈ.ವಿಜಯೇಂದ್ರ ಜಾತಿ ಸಮೀಕ್ಷೆಯನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದರು. ಒಬ್ಬರು ದರ್ಪದ ಮಾತನಾಡಿದರೆ ಇನ್ನೊಬ್ಬರು ಹಿಂದುಳಿದ, ಸಣ್ಣ, ಅತಿ ಸಣ್ಣ ಜಾತಿಗಳ ಬದುಕಿನ ಪ್ರಶ್ನೆಯಾಗಿದ್ದ ಜಾತಿ ಸಮೀಕ್ಷೆಯನ್ನು ಕಸಕ್ಕೆ ಹೋಲಿಸಿ ಹೊಲಸಾದರು. ಅವರ ಮಾತುಗಳಲ್ಲಿ ಜಾತಿ ಸಮೀಕ್ಷಾ ವರದಿ ಜಾರಿಯಾಗುವುದು ಬೇಡ ಎನ್ನುವವರ ಒತ್ತಡದ ತೀವ್ರತೆಯ ಅಂದಾಜಿತ್ತು. ಅದನ್ನು ಸಿದ್ದರಾಮಯ್ಯ ಊಹಿಸಬೇಕಾಗಿತ್ತು. ಉದಾಸೀನ ಮಾಡಿಬಿಟ್ಟರು.

ಸಚಿವರಿಗೆ ಜಾತಿ ಸಮೀಕ್ಷೆ ವರದಿ ಜಾರಿ ಕುರಿತು ಪ್ರತ್ಯೇಕವಾಗಿ ಲಿಖಿತ ಅಭಿಪ್ರಾಯ ತಿಳಿಸುವಂತೆ ಸೂಚಿಸಲಾಯಿತು. ಆದರೆ ಲಿಂಗಾಯತ ಸಚಿವರೆಲ್ಲರೂ ಒಂದೇ ಲಿಖಿತ ಅಭಿಪ್ರಾಯ ನೀಡಿ, ಇದು ಎಲ್ಲರ ಅಭಿಪ್ರಾಯ-ಏಕ ಅಭಿಪ್ರಾಯ ಎಂದು ಹೇಳಿದರು. ಆ ಮೂಲಕ ಒಗ್ಗಟ್ಟು ಪ್ರದರ್ಶಿಸಿದರಲ್ಲದೆ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದರು. ಇಂಥ ಪ್ರಯತ್ನ ಸಮೀಕ್ಷೆ ಪರ ಇದ್ದ ಸಚಿವರಿಂದ ನಡೆಯಲಿಲ್ಲ. ಅವರಲ್ಲಿ ಒಗ್ಗಟ್ಟಿಲ್ಲ. ಆದರೂ ಹಿಂದುಳಿದ ವರ್ಗದ ನಾಯಕ ಎನ್ನುವ ಕಾರಣಕ್ಕಾದರೂ ಸಿದ್ದರಾಮಯ್ಯ ಇವರನ್ನು ಒಗ್ಗೂಡಿಸಲು ಮನಸ್ಸು ಮಾಡಲಿಲ್ಲ.

ಸಮನಾಗಿ ಹಂಚಿಕೊಂಡು ತಿನ್ನುವುದಕ್ಕೆ ಶತಮಾನದ ಹಿಂದೆಯೇ ವಿರೋಧ ವ್ಯಕ್ತವಾಗಿತ್ತು. ನ್ಯಾ. ಮಿಲ್ಲರ್ ಆಯೋಗ 1919ರಲ್ಲಿ ಸಲ್ಲಿಸಿದ ವರದಿ ಜಾರಿಯಾಗುವುದು ಬೇಡ ಎಂದು ಸರ್ ಎಂ. ವಿಶ್ವೇಶ್ವರಯ್ಯನಂಥವರೇ ವಿರೋಧ ವ್ಯಕ್ತಪಡಿಸಿದ್ದರು. ಹಾವನೂರು ಆಯೋಗದ ವರದಿಯನ್ನು ಭೀಮಣ್ಣ ಖಂಡ್ರೆ (ಸಚಿವ ಈಶ್ವರ್ ಖಂಡ್ರೆ ಅವರ ತಂದೆ) ಸದನದಲ್ಲಿ ಸುಟ್ಟು ಹಾಕಿದ್ದರು. ನ್ಯಾ. ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಜಾರಿಯಾಗುವುದನ್ನು ವಿರೋಧಿಸಿ ದೇವೇಗೌಡರು ದೊಡ್ಡ ಪ್ರತಿಭಟನೆ ಮಾಡಿದ್ದರು. ಅಷ್ಟೆಲ್ಲಾ ಏಕೆ 2015ರಲ್ಲಿ ಸಮೀಕ್ಷೆ ಆರಂಭಿಸುವ ಮುನ್ನವೇ ಅಪಸ್ವರಗಳು ಕೇಳಿಬಂದಿದ್ದವು. 2017ರ ವೇಳೆಗೆ ಸಮೀಕ್ಷಾ ಕಾರ್ಯ ಮುಗಿದಿರಲಿಲ್ಲ. ನೂರಾರು ಸಂಪುಟಗಳ ಸಾವಿರಾರು ಪುಟಗಳ ವರದಿಯಲ್ಲಿ ಒಂದೇ ಒಂದು ಪುಟ ಸೋರಿಕೆಯಾಗಿದೆ ಎಂದು ಹೇಳಿ ಇಡೀ ವರದಿ ಅವೈಜ್ಞಾನಿಕ ಎನ್ನುವ ಅಭಿಯಾನವನ್ನೇ ನಡೆಸಲಾಯಿತು.

ಇಂಥ ಇತಿಹಾಸ-ವಾಸ್ತವದ ನಡುವೆಯೇ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸರಕಾರಕ್ಕೆ ವರದಿ ಸಲ್ಲಿಸಿತು. ಇದಾದ ಮೇಲೆ ಮುಂದುವರಿದವರು ತಮ್ಮ ಜಾತಿಯ ಜನಸಂಖ್ಯೆ ಕಮ್ಮಿಯಾಗಿದೆ ಎಂದು ತಕರಾರು ತೆಗೆದರು. ಮಾಧ್ಯಮದವರು ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ ಎಂಬ ಸುಳ್ಳು ಹರಡಿದರು. ಹಿಂದುಳಿದವರು ತಮ್ಮ ಪಾಲೆಲ್ಲಾ ಕುರುಬರ ಕಿಸೆ ಸೇರುತ್ತಿದೆ ಎಂದು ಆಕ್ಷೇಪಿಸಿದರು. ಗೊಲ್ಲರು ತಮ್ಮನ್ನು ಒಡೆಯಲಾಗಿದೆ ಎಂದು ಗೋಳಾಡಿದರು. ಬಲಿಜ ಸಮುದಾಯದವರು ತಮ್ಮನ್ನು ಶಿಕ್ಷಣಕ್ಕೆ ಒಂದು ಪ್ರವರ್ಗ ಉದ್ಯೋಗಕ್ಕೆ ಇನ್ನೊಂದು ಪ್ರವರ್ಗದಲ್ಲಿ ಸೇರಿಸಿ ಅನ್ಯಾಯ ಮಾಡಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಈ ಅಡೆತಡೆಗಳೇ ಜಾತಿ ಸಮೀಕ್ಷಾ ವರದಿ ಜಾರಿ ಮಾಡಲು ಸಿದ್ದರಾಮಯ್ಯ ಅವರಿಗೆ ಪ್ರೇರೇಪಣೆಯೋ ಪ್ರಚೋದನೆಯೋ ಆಗಬೇಕಿತ್ತು. ಏಕೆಂದರೆ ಇವರೇ 2007ರಲ್ಲಿ (ಆಗ ಅವರು ಉಪಮುಖ್ಯಮಂತ್ರಿಯಾಗಿದ್ದರು-ಹಣಕಾಸು ಖಾತೆ ಹೊಂದಿದ್ದರು) ಮೊದಲ ಬಾರಿಗೆ ಜಾತಿ ಸಮೀಕ್ಷೆ ಮಾಡಲು ಹಣ ಕೊಟ್ಟಿದ್ದರು. ಇದಾದ ಮೇಲೆ 2013ರಲ್ಲಿ ಜಾತಿ ಸಮೀಕ್ಷೆ ನಡೆಸುವುದಾಗಿ ಘೋಷಿಸಿದ್ದರು. 2015ರಲ್ಲಿ ಸಮೀಕ್ಷೆ ಶುರುವಾಗಿತ್ತು. ಅಲ್ಲಿಗೆ ಸುಮಾರು 18 ವರ್ಷದ ಬಳಿಕ ಸಮೀಕ್ಷೆಯ ವರದಿ ಜಾರಿಯಾಗುವ ನಿರ್ಣಾಯಕ ಹಂತ ತಲುಪಿತ್ತು.

ಜೊತೆಗೆ ಆಯೋಗವು ಹೊಸದಾಗಿ 398 ಜಾತಿಗಳನ್ನು ಗುರುತಿಸಿದೆ. ಮೀಸಲಾತಿ ಮಿತಿಯನ್ನು ಶೇಕಡಾ 75ಕ್ಕೆ ಏರಿಸಬೇಕೆಂದು ಹೇಳಿದೆ. ಎಲ್ಲಾ ಪ್ರವರ್ಗಗಳಿಗೂ ಸಮಾನಾಂತರವಾಗಿ ಉದ್ಯೋಗಕ್ಕೆ ಕೆನೆಪದರ ನೀತಿ ಅಳವಡಿಸಬೇಕೆಂದು ಶಿಫಾರಸು ಮಾಡಿದೆ. ಇವುಗಳ ಕಾರಣಕ್ಕಾಗಿಯಾದರೂ ಜಾತಿ ಸಮೀಕ್ಷಾ ವರದಿ ಜಾರಿಯಾಗಬೇಕಿತ್ತು ಅಥವಾ ಸರಕಾರ ‘ತಾತ್ವಿಕವಾಗಿ ಒಪ್ಪುವ’ ಬದಲು ಕೆಲ ನಿರ್ದಿಷ್ಟ ಸಂಗತಿಗಳನ್ನು ಒಪ್ಪಿ ಕೆಲ ಅಂಶಗಳನ್ನು ತಿರಸ್ಕರಿಸಬಹುದಿತ್ತು. ಹೇಗೂ ರಾಜ್ಯ ಹಿಂದುಳಿದ ವರ್ಗಗಳ ವಿಧೇಯಕ -2014ರ ಸೆಕ್ಷನ್ 11 ಕ್ಲಾಸ್ 1ರ ಪ್ರಕಾರ 10 ವರ್ಷಗಳ ನಂತರ ಹೊಸ ಸಮೀಕ್ಷೆ ನಡೆಸಬೇಕಾಗಿತ್ತು. ಆಗ, ಈಗ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಾದ ಅವಕಾಶವೂ ಇತ್ತು.

ಆದರೆ ಈಗ ಆಗಿರುವುದು ನಿರಾಸೆ. ಜಾತಿ ಸಮೀಕ್ಷೆ ವರದಿಯನ್ನು ಸರಕಾರ ಒಪ್ಪಿಕೊಳ್ಳುತ್ತದೆ. ಇಲ್ಲಿ ನಮ್ಮ ಪಾತ್ರ ಏನು? ನಾವು ಯಾವ ಸ್ಥಿತಿಯಲ್ಲಿ ಇದ್ದೇವೆ? ನಮಗೇನು ಬೇಕಾಗಿದೆ? ಎಂಬ ಸಂಗತಿಗಳು ತಿಳಿಯುತ್ತವೆ. ನಮ್ಮ ಅಸ್ತಿತ್ವವೂ ದಾಖಲಾಗುತ್ತದೆ ಎಂದು ದಶಕಗಳಿಂದ ಇಟ್ಟುಕೊಂಡಿದ್ದ ಸಮುದಾಯಗಳಿಗೆ ಭ್ರಮನಿರಸನ.

ಸಿದ್ದರಾಮಯ್ಯ ಒಬ್ಬರು ಮನಸ್ಸು ಮಾಡಿದ್ದರೆ ಸಾಧ್ಯವಾಗುತ್ತಿತ್ತು, ಅದೂ ರಾಹುಲ್ ಗಾಂಧಿ ಜಾತಿ ಸಮೀಕ್ಷೆ ಪರ ಇರುವುದರಿಂದ ಖಂಡಿತಾ ಜಾರಿ ಮಾಡಬಹುದಿತ್ತು ಎನ್ನುವುದು ಹಲವರ ವಾದ. ಆದರೆ ಇತ್ತೀಚೆಗೆ ಗುಜರಾತಿನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ‘ಜಾತಿ ಸಮೀಕ್ಷಾ ವರದಿ ಜಾರಿ ಮಾಡಿ’ ಎಂದು ಸಿದ್ದರಾಮಯ್ಯ ಅವರ ಬೆನ್ನುತಟ್ಟಿ ಕಳುಹಿಸಿದ್ದ ರಾಹುಲ್ ಗಾಂಧಿ ಈಗ ‘ಬೇಡ’ ಎನ್ನಲು ಬೇರೆ ಬಲವಾದ ಕಾರಣವಿರಬೇಕು. ಸಿದ್ದರಾಮಯ್ಯ ಹೊರತುಪಡಿಸಿ ಅದು ಗೊತ್ತಿರುವುದು ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್ ಅವರಿಗೆ ಮಾತ್ರ.

ಅದರ ಹೊರತಾಗಿ ಕಾಲ್ತುಳಿತಕ್ಕೂ ಜಾತಿ ಸಮೀಕ್ಷಾ ವರದಿಗೆ ತಡೆ ಬಿದ್ದಿರುವುದಕ್ಕೂ ಸಂಬಂಧ ಇದ್ದಹಾಗಿದೆ. ಬೆಂಗಳೂರಿನಲ್ಲಾದ ದುರಂತದಿಂದ ಸರಕಾರಕ್ಕೆ ಬಹಳ ದೊಡ್ಡ ಹಿನ್ನಡೆಯಾಗಿದೆ. ಅದಕ್ಕೂ ಜಾಸ್ತಿ ಸಿದ್ದರಾಮಯ್ಯ ಅವರಿಗೆ ಮುಜುಗರವಾಗಿದೆ. ಇದರಿಂದ ಹೊರಬರಲು ಜಾತಿ ಸಮೀಕ್ಷಾ ವರದಿಯನ್ನು ಜಾರಿ ಮಾಡಲು ಮುಂದಾಗಿದ್ದರು. ಮುಂಬರುವ ಸಚಿವ ಸಂಪುಟದಲ್ಲಿ ವರದಿ ಮಂಡನೆ ಮಾಡುವುದಾಗಿ ಹೇಳಿದ್ದರು. ಅವರು ಹಾಗೆ ಹೇಳುತ್ತಿದ್ದಂತೆ ದೆಹಲಿಯಿಂದ ಕರೆ ಬಂದಿದೆ. ಸಿದ್ದರಾಮಯ್ಯ ಅವರದು ಕಾಲ್ತುಳಿತದಲ್ಲಿ ಹೋದ ಮಾನ ಜಾತಿ ಸಮೀಕ್ಷೆಯಲ್ಲಿ ಬರಲಿದೆ ಎನ್ನುವ ಲೆಕ್ಕಾಚಾರ. ಹೈಕಮಾಂಡ್ ನಾಯಕರದ್ದು ಕಾಲ್ತುಳಿತ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ ಇನ್ನೊಂದು ಸವಾಲು ಸ್ವೀಕರಿಸುವುದು ಬೇಡ ಎಂಬ ಎಚ್ಚರಿಕೆಯ ನಡೆ.

ಇದರಿಂದ ಸಿದ್ದರಾಮಯ್ಯ ಪ್ರಭಾವ ಕಮ್ಮಿಯಾಗುತ್ತಿದೆಯೇ? ಹೈಕಮಾಂಡ್ ಹಿಡಿತ ಬಿಗಿಯಾಗುತ್ತಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News