×
Ad

ಸಿದ್ದು-ಹರಿಪ್ರಸಾದ್ ಭೇಟಿ ಏಕೆ?

Update: 2025-06-02 10:33 IST

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮಂತ್ರಿಯಾದರೆ ಸಾಕು ಅಂತಾ ಹೈಕಮಾಂಡ್ ನಾಯಕರ ಬಳಿ ಕಾಡಿ ಬೇಡಿ ಸುಸ್ತಾಗಿ ದಿಲ್ಲಿಯ ಕರ್ನಾಟಕ ಭವನದಲ್ಲಿ ಮಲಗಿದ್ದ ಲಕ್ಷ್ಮಣ ಸವದಿ ಅವರನ್ನು ಎಬ್ಬಿಸಿಕೊಂಡು ಬಂದು ಉಪಮುಖ್ಯಮಂತ್ರಿ ಮಾಡಲಾಯಿತು. ಆ ಗುಟ್ಟನ್ನು ಭೇದಿಸಲು ರಾಜಕಾರಣಿಗಳು ಮತ್ತು ರಾಜಕೀಯ ವಿಶ್ಲೇಷಕರು ಬಹಳ ತಿಣುಕಾಡಬೇಕಾಯಿತು. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸಿನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಭೇಟಿ ಕೂಡ ಇಂಥದ್ದೇ ಇನ್ನೊಂದು ಉದಾರಣೆ.

ರಾಜಕೀಯ ನಾಯಕರು ಬಹುತೇಕ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಹೇಳುವುದಿಲ್ಲ. ಅವರ ನಡೆಗಳನ್ನಾಧರಿಸಿ ನಿರ್ಧರಿಸಬೇಕಾಗುತ್ತದೆ. ರಾಜಕೀಯ ಪರಿಸ್ಥಿತಿ, ನಾಯಕರ ಮನೋಸ್ಥಿತಿ, ರಾಜಕಾರಣ ಸಾಗುತ್ತಿರುವ ಗತಿಗಳನ್ನಾಧರಿಸಿ ‘ಹೀಗಾಗುತ್ತಿರಬಹುದು’ ಎಂಬ ಅಂದಾಜು ಮಾಡಬೇಕಾಗುತ್ತದೆ. ಗುಟ್ಟು ಮತ್ತು ಪಟ್ಟು ಎರಡನ್ನೂ ಬಿಟ್ಟುಕೊಡದ ನಿಗೂಢ ನಾಯಕರಾದ ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಭೇಟಿಯನ್ನು ಕೂಡ ಹೀಗೆ ನೋಡಬೇಕಾಗುತ್ತದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಸಮಸ್ಯೆ ಆಗುತ್ತಿರಬಹುದು ಅದರಿಂದಾಗಿ ಮುನಿಸಿಕೊಂಡಿದ್ದ ಬಿ.ಕೆ. ಹರಿಪ್ರಸಾದ್ ಅವರ ಮನೆ ಬಾಗಿಲಿಗೆ ಸಿದ್ದರಾಮಯ್ಯ ಧಾವಿಸಿದ್ದಾರೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಸಮಸ್ಯೆ ಆಗುತ್ತಿದೆ ಎಂಬುದನ್ನು ಸಿದ್ದರಾಮಯ್ಯ ಆಪ್ತರೇ ‘ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ’ ಎಂದು ಹೇಳುವ ಮೂಲಕ ಅನುಮೋದಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎನ್ನುವುದಾದರೆ ಪದೇ ಪದೇ ಅದನ್ನು ಹೇಳುವ ಅಥವಾ ಹೇಳಿಸುವ ಅಗತ್ಯ ಏನಿರುತ್ತದೆ?

ಸೇನಾಧಿಪತಿಗಳ ಮೂಲಕ ಯುದ್ಧ ನಿಯಂತ್ರಿಸುತ್ತಿದ್ದ ರಾಜ ಖುದ್ದಾಗಿ ರಣರಂಗ ಪ್ರವೇಶಿಸಿದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ, ಎದುರಾಳಿ ಮೇಲುಗೈ ಸಾಧಿಸುತ್ತಿದ್ದಾನೆ ಎಂದೇ ಅರ್ಥ. ಸಿದ್ದರಾಮಯ್ಯ ವಿಷಯದಲ್ಲಿ ಎದುರಾಳಿಯಾಗಿರುವ ಡಿ.ಕೆ. ಶಿವಕುಮಾರ್ ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರ ಮನಗೆದ್ದಿದ್ದಾರೆ ಎನ್ನಲಾಗುತ್ತಿದೆ. ಇಷ್ಟು ದಿನ ಸಿದ್ದರಾಮಯ್ಯ ಅವರ ಸೇನೆಗೆ ಡಿಕೆ ಶಿವಕುಮಾರ್ ಒಬ್ಬರನ್ನು ಎದುರಿಸುವುದು ಕಷ್ಟವಾಗಿರಲಿಲ್ಲ. ಇದೀಗ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಒಂದಾಗಿರುವುದರಿಂದ ಸುಲಭವಾಗುತ್ತಿಲ್ಲ.

ಪರಮೇಶ್ವರ್ ಅವರನ್ನು ಮುಂದಿಟ್ಟುಕೊಂಡು ಪ್ರಯೋಗಿಸುತ್ತಿದ್ದ ‘ದಲಿತ ಸಿಎಂ’ ಅಸ್ತ್ರವನ್ನು ನಿಸ್ತೇಜಗೊಳಿಸಲಾಗಿದೆ.

ಇನ್ನೊಬ್ಬ ನಂಬಿಕಸ್ಥ ಸೇನಾಧಿಪತಿ ಕೆ.ಎನ್. ರಾಜಣ್ಣ ಅವರನ್ನು ಬಾಣಬಿಡಲಾರದಂತೆ ನಿತ್ರಾಣಗೊಳಿಸಲಾಗಿದೆ. ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಎಚ್.ಸಿ. ಮಹದೇವಪ್ಪ ಮತ್ತಿತರರು ಆಕ್ರಮಣಕಾರಿ ಪಟುಗಳಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರಿಗೆ ವಿಶ್ವಾಸಾರ್ಹ ಸಂಗಾತಿಯೊಬ್ಬರ ಅನಿವಾರ್ಯ ಸೃಷ್ಟಿಯಾದಂತಿದೆ. ಅದನ್ನವರು ಬಿ.ಕೆ. ಹರಿಪ್ರಸಾದ್ ಅವರಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಿದಂತಿದೆ.

ಬಿ.ಕೆ. ಹರಿಪ್ರಸಾದ್ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಕೆಲ ಕಾರಣಗಳಿವೆ. 2013ರಲ್ಲಿ ಮುಖ್ಯಮಂತ್ರಿ ಆಗುವುದು ಸುಲಭವೇನೂ ಆಗಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಎಂಬ ಮಹಾರಥನ ಪೈಪೋಟಿ ಇತ್ತು. ವರ್ಷ ಕಳೆಯುವುದರೊಳಗೆ ಮುಖ್ಯಮಂತ್ರಿ ಬದಲಾವಣೆ ಎಂಬ ವಿಷಯವೂ ಚಲಾವಣೆಗೆ ಬಂದಿತ್ತು. ಆಗ ಅಹ್ಮದ್ ಪಟೇಲ್, ಆಸ್ಕರ್ ಫೆರ್ನಾಂಡಿಸ್ ಜೊತೆಗೆ ಬಿ.ಕೆ. ಹರಿಪ್ರಸಾದ್ ಕೂಡ ಬೆಂಬಲಿಸಿದ್ದರು. ಪರಿಣಾಮವಾಗಿ ಸಿದ್ದರಾಮಯ್ಯ ಐದು ವರ್ಷ ಪೂರೈಸಲು ಸಾಧ್ಯವಾಗಿತ್ತು.

ಇದಲ್ಲದೆ ಕಾಂಗ್ರೆಸ್ ಒಳಗೆ ಗಾಂಧಿ ಕುಟುಂಬದ ನಿಷ್ಠೆ ಎನ್ನುವುದರ ಹೊರತಾಗಿಯೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಪ್ರತ್ಯೇಕವಾದ ಬಣಗಳಿವೆ. ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಬಣ, ಡಿ.ಕೆ. ಶಿವಕುಮಾರ್ ಅವರು ಪ್ರಿಯಾಂಕಾ ಗಾಂಧಿ ಬ್ರಿಗೇಡ್ ಮತ್ತು ಬಿ.ಕೆ. ಹರಿಪ್ರಸಾದ್ ಅವರು ಸೋನಿಯಾ ಗಾಂಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವುದು ಗುಟ್ಟೇನಲ್ಲ. ಆದರೆ ಗುಜರಾತಿನಲ್ಲಿ ನಡೆದ ಎಐಸಿಸಿ ಅಧಿವೇಶನದ ವೇಳೆ ಸಿದ್ದರಾಮಯ್ಯ ನಾಯಕತ್ವವನ್ನು ಮೆಚ್ಚಿ ಮಾತನಾಡಿದ್ದ ರಾಹುಲ್ ಗಾಂಧಿ ತಿಂಗಳು ಕಳೆಯುವುದರೊಳಗೆ ಸಿದ್ದರಾಮಯ್ಯ ಜೊತೆ ಅಂತರ ಕಾಯ್ದುಕೊಳ್ಳಲಾರಂಭಿಸಿದರು. ತೆಲಂಗಾಣ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾತಿಗಣತಿ ವರದಿಯನ್ನು ಜಾರಿ ಮಾಡಿಲ್ಲ ಎನ್ನುವುದು ರಾಹುಲ್ ಗಾಂಧಿ ಅವರ ಕೋಪಕ್ಕೆ ಕಾರಣ. ಅದಕ್ಕೋಸ್ಕರವೇ ಅವರು ಪ್ರತಿಬಾರಿ ಜಾತಿಗಣತಿ ಬಗ್ಗೆ ಮಾತನಾಡುವಾಗ ರೇವಂತ್ ರೆಡ್ಡಿಯನ್ನು ಶ್ಲಾಘಿಸುತ್ತಾರೆ. ಸಿದ್ದರಾಮಯ್ಯ ಅವರನ್ನು ಉಪೇಕ್ಷಿಸುತ್ತಾರೆ ಎನ್ನುತ್ತವೆ ದಿಲ್ಲಿ ಮೂಲಗಳು.

ಇನ್ನೊಂದೆಡೆ ಜಾರಿ ನಿರ್ದೇಶನಾಲಯ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಡಿ.ಕೆ. ಶಿವಕುಮಾರ್ ಹೆಸರು ನಮೂದಾಗಿದೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ಡಿ.ಕೆ. ಶಿವಕುಮಾರ್

‘ನ್ಯಾಷನಲ್ ಹೆರಾಲ್ಡ್ ನಮ್ಮ ಪಕ್ಷ ಕಾಂಗ್ರೆಸ್ ನಡೆಸುವ ಪತ್ರಿಕೆ. ಅದಕ್ಕಾಗಿ ನಮ್ಮ ಟ್ರಸ್ಟ್ ನಾನು ಮತ್ತು ನನ್ನ ತಮ್ಮ ಹಣ ಕೊಟ್ಟಿದ್ದೇವೆ’ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾರೆ. ಆ ಮೂಲಕ ತಾನು ಕಾಂಗ್ರೆಸ್ ಕಟ್ಟಾಳು ಎಂದು ಸಾರಿಕೊಂಡಿದ್ದಾರೆ ಮತ್ತು ಗಾಂಧಿ ಕುಟುಂಬಕ್ಕೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ.

ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಡುವಿನ ಅಂತರ ಹಿಗ್ಗಿರುವುದು ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಕೇಳಿಬಂದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ತಮ್ಮದೇಯಾದ ದಾಳ ಉರುಳಿಸುತ್ತಿರುವಂತಿದೆ. ಬರುವ ಅಕ್ಟೋಬರ್ 22ಕ್ಕೆ ಅವರು ಎಐಸಿಸಿ ಅಧ್ಯಕ್ಷರಾಗಿ ಮೂರು ವರ್ಷ ತುಂಬಲಿದೆ. ನಂತರ ಅಲ್ಲೂ ಬದಲಾವಣೆಯ ಕೂಗೇಳಬಹುದು. ಮೇಲಾಗಿ ಅವರೇ ನನ್ನನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಳ್ಳಬಹುದು. ಅದಕ್ಕಿಂತ ಮಿಗಿಲಾಗಿ ಮುಖ್ಯಮಂತ್ರಿ ಆಗಬೇಕೆಂಬ ಅವರ ಮಹದಾಸೆ ಮಾಯವಾಗಿಲ್ಲ. ಈಗ ಆಗದಿದ್ದರೆ ಇನ್ನೆಂದೂ ಸಾಧ್ಯವಿಲ್ಲ ಎಂದೇ ತೆರೆಯ ಹಿಂದಿನ ತಯಾರಿ ಆರಂಭಿಸಿರಬಹುದು. ಅಥವಾ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿ ಮಾಡಿ ಮೊದಲ ಸಾಲಿಗೆ ತಂದು ನಿಲ್ಲಿಸುವ ಉಮೇದಿಯೂ ಇರಬಹುದು.

ಡಿ.ಕೆ. ಶಿವಕುಮಾರ್ ಕೂಡ ‘ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ,

ಶತ್ರುವಿನ ಎರಡೂ ಕಣ್ಣನ್ನು ತೆಗೆಯಬೇಕು’ ಎಂದು ಸಿದ್ದರಾಮಯ್ಯ ಎದುರು ಮಲ್ಲಿಕಾರ್ಜುನ ಖರ್ಗೆ ಅವರನ್ನು ತಂದು ನಿಲ್ಲಿಸುತ್ತಿರಬಹುದು. ಇದೇ ಡಿ.ಕೆ. ಶಿವಕುಮಾರ್ ಮಾತು ಕೇಳಿಯೇ ಹೈಕಮಾಂಡ್ ದಲಿತ ನಾಯಕರ ಔತಣಕೂಟಕ್ಕೆ ತಡೆ ನೀಡಿದ್ದು ಮತ್ತು ಕೆಲ ಸಚಿವರು ‘ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ’ ಎಂದು ಹೇಳುತ್ತಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರು ‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಮಾತನಾಡಬೇಡಿ’ ಎಂದು ಗುಟುರು ಹಾಕಿದ್ದು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿಟ್ಟುಕೊಂಡು ಆಟ ಆಡುವುದು ಡಿ.ಕೆ. ಶಿವಕುಮಾರ್ ಅವರಿಗೆ ಅನಿವಾರ್ಯ. ಸದ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬಂದು ಕೂತರೆ ಕಡೆಯ ಒಂದು ವರ್ಷವನ್ನಾದರೂ ಕೇಳಿಪಡೆಯಬಹುದು. ನಂತರ ತನ್ನದೇ ನಾಯಕತ್ವದಲ್ಲಿ ಮತ್ತೆ ಚುನಾವಣೆಗೆ ಹೋಗಬಹುದು. ಸಿದ್ದರಾಮಯ್ಯ ಮುಂದುವರಿದರೆ ಅವರೇ ಐದು ವರ್ಷ ತುಂಬಿಸಿಬಿಡುತ್ತಾರೆ. ನಂತರ ಸತೀಶ್ ಜಾರಕಿಹೊಳಿ ಅಥವಾ ಎಂ.ಬಿ. ಪಾಟೀಲ್ ಅವರಿಗೆ ಅವಕಾಶ ಮಾಡಿಕೊಡುತ್ತಾರೆ. ತಮ್ಮನ್ನು ಪರಿಗಣಿಸಲ್ಲ ಎನ್ನುವ ಲೆಕ್ಕಾಚಾರ ಇರಬಹುದು.

ಕಾಂಗ್ರೆಸ್ ನಾಯಕರ ಜೊತೆಗೆ ಮಾತಿಗಿಳಿದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಒಂದಾಗಿರುವುದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಸಿಗುತ್ತವೆ. ಪೂರಕ ಎನ್ನುವಂತೆ ಕಳೆದವಾರ ಹೈಕಮಾಂಡ್ ಪ್ರತಿನಿಧಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲ ಕೂಡ ದಿಢೀರನೇ ಬೆಂಗಳೂರಿಗೆ ಆಗಮಿಸಿದ್ದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರು. ಭೇಟಿ ವೇಳೆ ಇಬ್ಬರು ನಾಯಕರಿಗೂ ಹೈಕಮಾಂಡ್ ಸಂದೇಶವನ್ನು ತಲುಪಿಸಿರುವ ಸಾಧ್ಯತೆ ಇದ್ದೇ ಇದೆ.

ಸದ್ಯ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಅವರನ್ನು ನಿಭಾಯಿಸಬೇಕಾಗಿದೆ. ಇಷ್ಟು ದಿನ ಕೆ.ಸಿ. ವೇಣುಗೋಪಾಲ್ ಆ ಕೆಲಸವನ್ನು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕೆ.ಸಿ. ವೇಣುಗೋಪಾಲ್ ಬಗ್ಗೆಯೇ ಹಲವು ದೂರುಗಳಿವೆ. ಅದರ ಫಲಿತಾಂಶ ಸಕಾರಾತ್ಮಕವಾಗಿಲ್ಲ. ಉಳಿದಂತೆ ರಾಹುಲ್ ಗಾಂಧಿ ಕೇಳುವುದು ಅವರ ತಾಯಿ ಸೋನಿಯಾ ಗಾಂಧಿ ಮಾತನ್ನು ಮಾತ್ರ. ಸಿದ್ದರಾಮಯ್ಯ ಅವರಿಗೆ ಗೊತ್ತಿರುವವರ ಪೈಕಿ ಸೋನಿಯಾ ಗಾಂಧಿ ಅವರನ್ನು ಸುಲಭವಾಗಿ ಸಂಪರ್ಕ ಮಾಡಬಲ್ಲ ನಾಯಕರೆಂದರೆ ಅದು ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಜೆ. ಜಾರ್ಜ್ ಮಾತ್ರ. ಈ ಇಬ್ಬರಲ್ಲಿ ಯಾವುದೇ ವಿಷಯವನ್ನು ಸೋನಿಯಾ ಗಾಂಧಿ ಅವರಿಗೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡಬಲ್ಲ ಸಾಮರ್ಥ್ಯ ಇರುವುದು ಬಿ.ಕೆ. ಹರಿಪ್ರಸಾದ್ ಅವರಿಗೆ ಮಾತ್ರ. ಅದರಿಂದಾಗಿಯೇ ಸಿದ್ದರಾಮಯ್ಯ ಮತ್ತು ಹರಿಪ್ರಸಾದ್ ನಡುವಿನ ಮುನಿಸು ಮರೆಯಾಗಿದೆ. ಇಬ್ಬರೂ ಮುಖಾಮುಖಿಯಾಗಿದ್ದಾರೆ.

ಭೇಟಿಯ ಬಳಿಕ ಬಿ.ಕೆ. ಹರಿಪ್ರಸಾದ್ ಅವರಿಗೆ ಕರಾವಳಿಯ ಉಸ್ತುವಾರಿ ಕೊಡಲಾಗಿದೆ, ಈ ಕೂಡಲೇ ಕರಾವಳಿಗೆ ತೆರಳಲು ಹೇಳಲಾಗಿದೆ ಎಂಬರ್ಥದ ಸುದ್ದಿಗಳು ಹರಿದಾಡಿದವು. ವಾಸ್ತವದಲ್ಲಿ ಹರಿಪ್ರಸಾದ್ ಅವರಿಗೆ ಕೊಟ್ಟಿರುವುದು ದಿಲ್ಲಿಯ ಉಸ್ತುವಾರಿ. ಹೈಕಮಾಂಡ್ ನಾಯಕರನ್ನು ನಿಭಾಯಿಸುವ ಜವಾಬ್ದಾರಿ. ಕಾಕತಾಳಿಯವೋ ಏನೋ ಮರುದಿನದಿಂದಲೇ ಹರಿಪ್ರಸಾದ್ ಬೆಂಗಳೂರಿನಲ್ಲಿ ಇಲ್ಲ. ಹೈದರಾಬಾದ್, ದಿಲ್ಲಿ ಮತ್ತಿತರ ಕಡೆ ಓಡಾಡುತ್ತಿದ್ದಾರೆ. ಹೀಗೆ ಎಲ್ಲರೂ ಅವರವರು ಬಲ್ಲ ಪಟ್ಟುಗಳನ್ನು ಹಾಕುತ್ತಿದ್ದಾರೆ. ಯಾರಿಗೆ ಎಷ್ಟು ಗಿಟ್ಟುತ್ತೆ ಎನ್ನುವುದನ್ನು ಕಾದುನೋಡಬೇಕು.

ವರ್ಷಗಳಿಂದಲೇ ನಡೆದಿತ್ತು ತಯಾರಿ!

ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನು ಒಂದು ಮಾಡಬೇಕೆಂಬ ಪ್ರಯತ್ನ ವರ್ಷದಿಂದಲೂ ನಡೆದಿತ್ತು. ಮಧ್ಯಸ್ಥಿಕೆ ವಹಿಸುತ್ತಿದ್ದವರು ಇಬ್ಬರಿಗೂ ಪರಸ್ಪರ ಕೈಜೋಡಿಸಿ ಎಂದು ಪದೇ ಪದೇ ಕೇಳಿಕೊಂಡಿದ್ದರು. ಇಬ್ಬರೂ ಒಂದಾದರೆ ಇಬ್ಬರಿಗೂ ಒಳಿತಾಗಲಿದೆ ಎಂಬ ಸಲಹೆ ನೀಡಿದ್ದರು. ಕಾರಣಾಂತರಗಳಿಂದ ಮುಖಾಮುಖಿಯಾಗುವ ಸಂದರ್ಭ ಒದಗಿಬಂದಿರಲಿಲ್ಲ. ಕಡೆಗೆ ‘ಯುವ ನಾಯಕ’ರೊಬ್ಬರು ಹಠ ಹಿಡಿದು ಇಬ್ಬರನ್ನೂ ಗಂಟುಹಾಕಿದ್ದಾರೆ.

ಪ್ರತ್ಯೇಕ ಮಾತುಕತೆ

ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಭೇಟಿಗೆ ‘ಸಾಮಾನ್ಯ ಭೇಟಿ’ ಎಂಬ ಅರ್ಥ ಬರಬೇಕೆಂದು ವಿಶೇಷ ತಯಾರಿ ನಡೆಸಲಾಗಿತ್ತು. ಅದೇ ಕಾರಣಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಉಪಸ್ಥಿತರಿರುವಂತೆ ನೋಡಿಕೊಳ್ಳಲಾಯಿತು. ಎಲ್ಲರೂ ಒಟ್ಟಿಗಿರುವ ಫೋಟೊಗಳನ್ನು ಮಾತ್ರವೇ ಮಾಧ್ಯಮಗಳಿಗೆ ಕಳುಹಿಸಿಕೊಡಲಾಯಿತು. ಅದೇ ವೇಳೆ ಕೆಲಹೊತ್ತು ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ಏನು ಮಾತನಾಡಿದ್ದಾರೆ ಎನ್ನುವುದು ಅವರಿಬ್ಬರಿಗೇ ಗೊತ್ತು. ಇವರಿಬ್ಬರ ಭೇಟಿ ವಿಷಯ ಕೂಡ ಲಕ್ಷ್ಮಣ ಸವದಿ ಪ್ರಕರಣದಂತೆ ಸುಲಭಕ್ಕೆ ಭೇದಿಸಲಾಗದ ಬೇಟೆಯೇ.

ಬಿ.ಕೆ. ಹರಿಪ್ರಸಾದ್ ವಿಶೇಷ

ಬಿ.ಕೆ. ಹರಿಪ್ರಸಾದ್ ಅವರು ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿರುವ ನಾಯಕರಲ್ಲಿ ಒಬ್ಬರು. ಸೋನಿಯಾ ಗಾಂಧಿ ಅವರ ಮೇಲಿನ ಗೌರವವಂತೂ ಇನ್ನೂ ಒಂದು ಗುಲಗಂಜಿ ತೂಕ ಜಾಸ್ತಿ. ಸೋಲುತ್ತೇನೆ ಎನ್ನುವ ಖಾತರಿ ಇದ್ದರೂ ಸೋನಿಯಾ ಗಾಂಧಿ ಅವರು ಹೇಳಿದರು ಎನ್ನುವ ಕಾರಣಕ್ಕೆ ಬಿ.ಕೆ. ಹರಿಪ್ರಸಾದ್ ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರು. ಎಲ್ಲರೂ ಗೆಲ್ಲಲು, ಗೆದ್ದು ಗದ್ದುಗೆ ಹಿಡಿಯಲು ಪಕ್ಷ ಬೇಕು ಎನ್ನುತ್ತಾರೆ. ಬಿ.ಕೆ. ಹರಿಪ್ರಸಾದ್ ಪಕ್ಷಕ್ಕಾಗಿ ಸೋಲಲು ಸಿದ್ಧರಿರುತ್ತಾರೆ. ಇದರಿಂದಾಗಿಯೇ ಇಂದಿಗೂ ಮಧ್ಯವರ್ತಿಯ ಸಹಕಾರ ಇಲ್ಲದೆ ಸೋನಿಯಾ ಗಾಂಧಿ ಅವರನ್ನು ನೇರವಾಗಿ ಭೇಟಿ ಮಾಡಿ ಮಾತನಾಡಬಲ್ಲ ಕೆಲವೇ ಕೆಲವು ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಕೂಡ ಒಬ್ಬರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News