×
Ad

ರಾಹುಲ್ ಗಾಂಧಿಗೆ ಮೋದಿ ಶರಣಾಗಿದ್ದೇಕೆ?

Update: 2025-05-05 09:45 IST

ನರೇಂದ್ರ ಮೋದಿ ಬಾಯಲ್ಲಿ ಎಂದಾದರೂ ರಾಹುಲ್ ಗಾಂಧಿ ಹೆಸರು ಕೇಳಿದ್ದೀರಾ? ನನ್ನ ಮಾಹಿತಿ ಪ್ರಕಾರ ಕೇಳಿರಲು ಸಾಧ್ಯವಿಲ್ಲ. ಮಾತಿನಲ್ಲಿ ಹೇಳುವುದಿರಲಿ, 2017ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ರಾಹುಲ್ ಗಾಂಧಿ ಹೆಸರು ಉಲ್ಲೇಖಿಸಿ ಹುಟ್ಟುಹಬ್ಬದ ಶುಭ ಕೋರುವ ಟ್ವೀಟ್ ಮಾಡಿರುವುದನ್ನು ಬಿಟ್ಟರೆ ಬೇರೆ ಯಾವಾಗಲೂ ಟ್ವೀಟ್ ಮೂಲಕವಾಗಲಿ, ಪತ್ರಗಳಲ್ಲಾಗಲಿ ರಾಹುಲ್ ಗಾಂಧಿ ಹೆಸರನ್ನು ನಮೂದಿಸಿಲ್ಲ. ಮೋದಿಯ ಅತ್ಯಂತ

► ಚಾಣಾಕ್ಷ ನಡೆಗಳಲ್ಲಿ ಇದು ಕೂಡ ಒಂದು.

ಪ್ರಧಾನ ಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ-ನಾಯಕ ಆಡುವ ಪ್ರತೀ ಮಾತಿಗೂ ಅದರದ್ದೆೆಯಾದ ತೂಕ ಇರುತ್ತದೆ. ಮೋದಿ ಬಾಯಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರ ಹೆಸರು ಬಂತು ಎಂದಿಟ್ಟುಕೊಳ್ಳಿ. ಆಗ ಸಹಜವಾಗಿ ಆ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯ ಒಲವು-ನಿಲುವುಗಳೇನು ಎಂಬ ಪ್ರಶ್ನೆಗಳು ಬರುತ್ತವೆ. ರಾಹುಲ್ ಗಾಂಧಿ ಬಗ್ಗೆ ಜನ ‘ಆ ದೃಷ್ಟಿಯಲ್ಲಿ’ ಆಲೋಚನೆ ಮಾಡಲು ಆರಂಭಿಸುತ್ತಾರೆ. ತಾನು ಎದುರಾಳಿಯ ಹೆಸರುಹೇಳುವುದರಿಂದ ಅವರಿಗೆ ಸಹಕಾರಿಯಾಗುತ್ತದೆ ಎಂದು ಮೋದಿ ನಂಬಿರುವಂತೆ ಕಾಣುತ್ತದೆ. ಅದಕ್ಕಾಗಿಯೇ ಅವರು ರಾಹುಲ್ ಗಾಂಧಿ ಹೆಸರು ಹೇಳಬೇಕಾದ ಸಂದರ್ಭಗಳಲ್ಲಿ ‘ಶೆಹಜಾದಾ’ (ರಾಜಾಕುಮಾರ) ಎಂಬ ಅಪರೂಪದ ಉರ್ದು ಪದವನ್ನು ಬಳಸುತ್ತಾರೆ. ಈ ಮೂಲಕ ಬಹಳ ಸೂಕ್ಷ್ಮ್ಮವಾಗಿ ರಾಹುಲ್ ಗಾಂಧಿ ಅವರನ್ನು ಮುಸ್ಲಿಮರೊಂದಿಗೆ ಸಮೀಕರಿಸುವ ಪ್ರಯತ್ನವನ್ನೂ ಮಾಡುತ್ತಿರುತ್ತಾರೆ.

2013ರಲ್ಲಿ ಮೋದಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲು ಅಣಿಯಾಗುತ್ತಿದ್ದಾಗ, ಅವರ ತಂಡ ‘ಪಪ್ಪುಪೀಡಿಯಾ’, ರಾಹುಲ್ ಗಾಂಧಿ ಅವರನ್ನು ‘ಪಪ್ಪು’ ಎಂದು ಬಿಂಬಿಸಲು ಬೆವರು ಹರಿಸುತ್ತಿತ್ತು. ರಾಹುಲ್ ಗಾಂಧಿ ಒಬ್ಬ ‘ಮಂದ ಬುದ್ಧಿಯ ವ್ಯಕ್ತಿ’, ‘ಮೂರ್ಖ’ ಮತ್ತಿತ್ಯಾದಿ ಎಂದು ಬಿಂಬಿಸುವ ಜೋಕ್‌ಗಳನ್ನು ಹರಿಯಬಿಡುತ್ತಿತ್ತು. ವ್ಯಂಗ್ಯಚಿತ್ರಗಳನ್ನು ಹಂಚಲಾಗುತ್ತಿತ್ತು. ಆದರೆ ಮೋದಿ ಬಾಯಲ್ಲಿ ಎಂದೂ ಕೂಡ ‘ಪಪ್ಪು’ ಎನ್ನುವ ಪದ ಬಂದಿಲ್ಲ. ಅದು ಕೂಡ ತಂತ್ರಗಾರಿಕೆಯ ಭಾಗವೇ. ‘ತಾನು ಇತರರಂಥಲ್ಲ’ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ. ಜೊತೆಗೆ ‘ಅಂಥ ಕ್ಷುಲ್ಲಕ ಕೆಲಸದಲ್ಲಿ ನನ್ನ ಪಾತ್ರ ಇಲ್ಲ’ ಎಂದು ಹೇಳುವ ತಂತ್ರಗಾರಿಕೆ. ಬದಲಿಗೆ ಮೋದಿ ತಾನು ರಾಹುಲ್ ಗಾಂಧಿ ಅವರನ್ನು ಮೂರ್ಖ ಎನ್ನುವಂತೆ ನೋಡುತ್ತೇನೆ, ಅಪ್ರಬುದ್ಧ ಎನ್ನುವಂತೆ ನೋಡುತ್ತೇನೆ ಎಂದು ಅಪಹಾಸ್ಯಕ್ಕೆ ಗುರಿ ಮಾಡುವ ಮೂಲಕ ಪರೋಕ್ಷವಾಗಿ ನೀವೂ ಇದೇ ರೀತಿ ನೋಡಿ ಎನ್ನುವ ಸಂದೇಶ ಕೊಡುತ್ತಿರುತ್ತಾರೆ. ರಾಹುಲ್ ಗಾಂಧಿ ಬಗ್ಗೆ ಜನರು ನಿರ್ದಿಷ್ಟ ರೀತಿಯಲ್ಲಿ ಅಂದರೆ ನಕಾರಾತ್ಮಕವಾಗಿ ಯೋಚಿಸುವಂತೆ ಮಾಡುವುದು ಇದರ ಉದ್ದೇಶವಾಗಿರಬಹುದು. ಹಾಗಾಗಿಯೇ ಮೋದಿ, ರಾಹುಲ್ ಗಾಂಧಿ ಅವರನ್ನು ಸಂಬೋಧಿಸಬೇಕಾದಾಗ ‘ಕಾಂಗ್ರೆಸ್ ಕೆ ಏಕ್ ಯುವ ನೇತಾ ಹೈ’, ‘ಆಜ್ ಕಲ್ ಬೋಲ್ನಾ ಸೀಖ್ ರಹೇ ಹೈ’ ಎಂದಿತ್ಯಾದಿ ಜರಿಯುತ್ತಿರುತ್ತಾರೆ. ತಾನು ಮತ್ತು ರಾಹುಲ್ ಗಾಂಧಿ ಒಂದೇ ಅಖಾಡದ ಸ್ಪರ್ಧಿಗಳು ಎನ್ನುವ ಭಾವನೆ ಬರಬಾರದು ಎನ್ನುವ ಕಾರಣಕ್ಕಾಗಿಯೇ ಕೆಲ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೇಳುವ ಪ್ರಶ್ನೆಗಳಿಗೆ ಸ್ಮೃತಿ ಇರಾನಿ, ಸಂಬೀತ್ ಪಾತ್ರ ಅಂಥವರಿಂದ ಉತ್ತರ ಕೊಡಿಸಿದ್ದಾರೆ. ಆ ಮೂಲಕ ರಾಹುಲ್ ಗಾಂಧಿ ಅವರ ಮಟ್ಟ ತನಗೆ ಸಮಾನವಾದುದಲ್ಲ, ಮೂರನೇ ಅಥವಾ ಅದಕ್ಕೂ ಕೆಳ ಹಂತದ ನಾಯಕರ ಮಟ್ಟದ್ದು ಎಂದು ಬಿಂಬಿಸಲು ಪ್ರಯತ್ನಿಸುತ್ತಿರುತ್ತಾರೆ.

ಇಂದಿರಾ ಗಾಂಧಿ ಅವರನ್ನು ಮುಕ್ತ ಕಂಠದಿಂದ ‘ದುರ್ಗೆ’ ಎಂದು ಕರೆದ ಅಟಲ್ ಬಿಹಾರಿ ವಾಜಪೇಯಿ ಅವರಂಥಲ್ಲ ಮೋದಿ. ಹಾಗೆ ನೋಡಿದರೆ ಇಂದಿರಾ ಗಾಂಧಿ ಕೂಡ ಪ್ರತಿಪಕ್ಷದ ನಾಯಕರ ಹೆಸರು ಹೇಳುತ್ತಿರಲಿಲ್ಲ. ಮೇಲಾಗಿ ಇಂದಿರಾ ಗಾಂಧಿ ಮತ್ತು ಮೋದಿ ಕಾರ್ಯವೈಖರಿಯಲ್ಲಿ ಹಲವು ಸಾಮ್ಯತೆಗಳಿವೆ. ಆದರೂ ಮೋದಿ, ಇಂದಿರಾ ಗಾಂಧಿ ಜೊತೆಗೆ ಹೋಲಿಸಿಕೊಳ್ಳಲೂ ಇಷ್ಟಪಡುವುದಿಲ್ಲ. ರಾಜೀವ್ ಗಾಂಧಿ ಸಾಲಿನಲ್ಲಿ ನಿಲ್ಲಲೂ ಬಯಸುವುದಿಲ್ಲ. ‘ಭಕ್ತರು’ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರನ್ನು ಹಾಳುಮಾಡಲು ಹಗಲಿರುಳು ಶ್ರಮಿಸುತ್ತಿದ್ದರೆ ಮೋದಿ ಮಾತ್ರ ನೆಹರೂ ಜೊತೆ ಹೋಲಿಸಿಕೊಳ್ಳಲು ಹಂಬಲಿಸುತ್ತಾರೆ. ಒಮ್ಮೆ ತಮ್ಮ ಭಾಷಣದಲ್ಲಿ 23 ಬಾರಿ ಜವಾಹರಲಾಲ್ ನೆಹರೂ ಹೆಸರನ್ನು ಜಪ ಮಾಡಿದ್ದರು. ಅವರ ಭಾಷಣದಲ್ಲಿ ಹಾಗೆ ತುಂಬಾ ಸಲ ಬಂದ ಇನ್ನೊಂದು ಹೆಸರು ಮೋದಿಯವರದೇ ಹೊರತು ಬೇರಾವ ಬಿಜೆಪಿ ಅಥವಾ ಆರೆಸ್ಸೆಸ್ ನಾಯಕರ ಹೆಸರಲ್ಲ ಎನ್ನುವುದು ಈವರೆಗಿನ ದಾಖಲೆ.

ಪ್ರತಿಪಕ್ಷದ ನಾಯಕನ ಹೆಸರುಹೇಳಲು ಹೀಗೆ ಅಳೆದು-ತೂಗಿ ತುಟಿ ಬಿಚ್ಚುವ ಮೋದಿ, ಈಗ ಅದೇ ರಾಹುಲ್ ಗಾಂಧಿ, ‘ಇದೇ ತನ್ನ ಆದ್ಯತೆಯ ವಿಷಯ ಎಂದು ದೇಶಾದ್ಯಂತ ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುವ ಜಾತಿಗಣತಿ’ಯನ್ನು ‘ತಮ್ಮ ಸರಕಾರ ನಡೆಸುತ್ತದೆ’ ಎಂದು ಪ್ರಕಟಿಸಿ ನಡು ಬಗ್ಗಿಸಿದ್ದಾರೆ.

ಜಾತಿಗಣತಿ ನಡೆಸುವ ಬೇಡಿಕೆಯು ನಗರ ನಕ್ಸಲ್ ಆಲೋಚನಾ ಕ್ರಮವಾಗಿದೆ ಎಂದು ಹೇಳಿದ್ದ ಮೋದಿ ಈಗ ಜಾತಿಗಣತಿಯನ್ನು ನಡೆಸುವುದಾಗಿ ಹೇಳುವ ಮೂಲಕ ‘ನಗರ ನಕ್ಸಲರ’ ಬಗ್ಗೆ ಮಾತನಾಡುವ ನೈತಿಕತೆಯನ್ನೂ ಕಳೆದುಕೊಂಡಿದ್ದಾರೆ. ಬಿಜೆಪಿ ಮತ್ತು ಅದರ ಮೆದುಳಾಗಿರುವ ಆರೆಸ್ಸೆಸ್ ಗಳು ಎಂದೂ ಜಾತಿಗಣತಿಯ ಪರವಾಗಿರಲಿಲ್ಲ. ಅವು ಜಾತಿಗಣತಿ ನಡೆದರೆ ಹಿಂದೂ ಧರ್ಮವನ್ನು ವಿಭಜಿಸಲು ಮೊದಲ ಹೆಜ್ಜೆ ಇಟ್ಟಂತಾಗುತ್ತದೆ ಎಂದು ಪ್ರತಿಪಾದಿಸುತ್ತಿದ್ದವು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕರ್ನಾಟಕದ ಜಾತಿಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ) ವರದಿಯನ್ನು ಕಸದ ಬುಟ್ಟಿಗೆ ಬಿಸಾಕಿ ಎಂದು ಕರೆಕೊಟ್ಟಿದ್ದರು. ಈಗ ಬಿಜೆಪಿ ನಾಯಕರು ಇದೇ ‘ಕಸ’ವನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸುವಂತಾಗಿದೆ.

► ಬಿಜೆಪಿಗೆ ದುಬಾರಿಯಾಗಿರುವ ಬಿಹಾರ

ಪಹಲ್ಗಾಮ್ ಉಗ್ರರ ದಾಳಿಗೆ ಕೇಂದ್ರದ ಬೇಹುಗಾರಿಕಾ ಸಂಸ್ಥೆಗಳ ವೈಫಲ್ಯ, ಭದ್ರತಾಲೋಪಗಳೇ ಕಾರಣ, ಗೃಹ ಸಚಿವ ಅಮಿತ್ ಶಾ ವಿಫಲವಾಗಿರುವುದೇ ಕಾರಣ ಎಂಬಿತ್ಯಾದಿ ಆರೋಪಗಳು ಬರುತ್ತಿವೆ. ಅದಕ್ಕಾಗಿಯೇ ಕೇಂದ್ರ ಸರಕಾರ ಇದ್ದಕ್ಕಿದ್ದಂತೆ ಜಾತಿಗಣತಿಯ ಘೋಷಣೆ ಮಾಡಿದೆ ಎನ್ನುತ್ತಿದ್ದಾರೆ ಕೆಲವರು. ಇನ್ನು ಕೆಲವರು ಬಿಹಾರದ ಚುನಾವಣೆಯೇ ಕಾರಣ ಎಂದು ಹೇಳುತ್ತಿದ್ದಾರೆ. ಕೇಂದ್ರದ ಎನ್‌ಡಿಎ ಸರಕಾರ ನಿಂತಿರುವುದೇ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಎಂಬ ಎರಡು ಊರುಗೋಲುಗಳ ಆಸರೆಯಿಂದ. ಈ ಪೈಕಿ ಚಂದ್ರಬಾಬು ನಾಯ್ಡುಗೆ ಆಂಧ್ರದಲ್ಲಿ ಬೇರೆ ಆಯ್ಕೆಗಳೂ ಇಲ್ಲ. ಅವು ಅವರಿಗೆ ಬೇಕಾಗೂ ಇಲ್ಲ. ಮುಂದೆಯೂ ಅವರು ಎನ್‌ಡಿಎ ಜೊತೆ ಗಟ್ಟಿಯಾಗಿ ನಿಲ್ಲುವ ಸುಳಿವು ನೀಡಿದ್ದಾರೆ. ನಿತೀಶ್ ಕುಮಾರ್ ಇದಕ್ಕೆ ತದ್ವಿರುದ್ಧ. ಸ್ವತಂತ್ರವಾಗಿ ಗೆಲ್ಲುವ ಸಾಮರ್ಥ್ಯವಿಲ್ಲ. ನಾಳೆ ಬಿಜೆಪಿ ಗೆಳೆತನ ಬಿಟ್ಟು ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಸೇರಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಹಾಗಾಗಿ ಬಿಜೆಪಿಗೆ ನಿತೀಶ್ ಕುಮಾರ್ ಅವರನ್ನು ಉಳಿಸಿಕೊಳ್ಳಬೇಕಾದ ದರ್ದಿದೆ. ಉಳಿಸಿಕೊಳ್ಳಬೇಕಾದರೆ ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯವೂ ಇದೆ. ಗೆಲ್ಲಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ.

ಕಳೆದ ಲೋಕಸಭಾ ಚುನಾವಣೆ ಬಳಿಕ ನಡೆದ ಹರ್ಯಾಣ, ಮಹಾರಾಷ್ಟ್ರ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷೆಗಿಂತಲೂ ಉತ್ತಮ ಸಾಧನೆ ಮಾಡಿತ್ತು. ಆದರೂ ಬಿಜೆಪಿಗೆ ಬಿಹಾರ ಗೆಲ್ಲುವ ವಿಶ್ವಾಸವಿಲ್ಲ. ಧರ್ಮವನ್ನೂ ಮೀರಿಸಿ ಬಿಸಾಡುವಂತಹ ಜಾತಿರಾಜಕೀಯವನ್ನು ಜತನದಲ್ಲಿ ಇಟ್ಟುಕೊಂಡಿರುವ ಬಿಹಾರ ಬಿಜೆಪಿ ಪಾಲಿಗೆ ದುಬಾರಿಯಾಗಿದೆ. ಮೂರನೇ ಬಾರಿಗೆ ಅಧಿಕಾರ ನಡೆಸಿ ಆಡಳಿತವಿರೋಧಿ ಅಲೆಯನ್ನು ಹಾಸುಹೊದ್ದಿರುವ ನಿತೀಶ್ ಕುಮಾರ್ ಮತ್ತು ಬಿಜೆಪಿಗೆ ಬಿಹಾರ ಕಲ್ಲು ಮುಳ್ಳಿನ ಹಾದಿಯಾಗಿದೆ. ಮೇಲಾಗಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಆರೆಸ್ಸೆಸ್‌ಗೆ ಈ ವರ್ಷ ತನ್ನ ಕೂಸು (ಬಿಜೆಪಿ) ಸೋಲಬಾರದು ಎಂಬ ಹೆಬ್ಬಯಕೆ ಇದೆ. ಅದರಿಂದಾಗಿಯೇ ‘ಎಂಥದೇ ರಾಜಿ ಮಾಡಿಕೊಂಡರೂ ಸರಿ, ಯಾವ ತಂತ್ರ-ಕುತಂತ್ರ ಅನುಸರಿಸಿದರೂ ಸರಿ, ಗೆಲ್ಲಬೇಕು-ಗೆದ್ದೇ ತೀರಬೇಕು’ ಎಂದು ನಿಶ್ಚಯಿಸಿದೆ. ಬಿಜೆಪಿಗೂ ಅಂಥ ನಿರ್ದೇಶನ ನೀಡಿದೆ. ಜಾತಿಗಣತಿ ಘೋಷಣೆ ಸಂದರ್ಭದಲ್ಲಿ ಮೋದಿ-ಮೋಹನ್ ಭಾಗವತ್ ಭೇಟಿ ಕಾಕತಾಳೀಯವೂ ಆಗಿರಬಹುದು ಅಥವಾ ಜಾತಿಗಣತಿಯ ನಿರ್ದಿಷ್ಟ ಉದ್ದೇಶವನ್ನೇ ಹೊಂದಿದ್ದಿರಲೂಬಹುದು.

► ಜಾತಿಗಣತಿಯ ಗುರಿ ಬಿಹಾರ ಮಾತ್ರವಲ್ಲ!

ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ಚುನಾವಣೆ ಕೂಡ ಹಲವು ಕಾರಣಗಳಿಂದ ಬಿಜೆಪಿ ಪಾಲಿಗೆ ನಿರ್ಣಾಯಕ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಅಧಿಕಾರವಿದ್ದರೂ, ಮೋದಿ-ಯೋಗಿಯಂತಹ ಪ್ರಖರ ‘ಹಿಂದೂ ಹೃದಯ ಸಾಮ್ರಾಟ’ರಿದ್ದರೂ, ಆರೆಸ್ಸೆಸ್ ಮತ್ತು ಅಮಿತ್ ಶಾ ತಂತ್ರಗಾರಿಕೆ ಇದ್ದರೂ, ಅಯೋಧ್ಯೆಯಲ್ಲಿ ಆತುರಾತುರವಾಗಿ ರಾಮನ ಮಂದಿರವನ್ನು ಕಟ್ಟಿದು ನಿಲ್ಲಿಸಿದ್ದರೂ, ಅಪಾರವಾದ ಸಂಪತ್ತನ್ನು ಹರಿಸಿದ್ದರೂ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ ಬಿಜೆಪಿಗೆ ಗಿಟ್ಟಿದ್ದು ಕೇವಲ 33 ಸ್ಥಾನಗಳು. ಎದುರಾಳಿ ಸಮಾಜವಾದಿ ಪಕ್ಷ ಗೆದ್ದದ್ದು 37 ಕ್ಷೇತ್ರಗಳನ್ನು. ಅಚ್ಚರಿ ಎನ್ನುವಂತೆ ಕಾಂಗ್ರೆಸ್ ಪಕ್ಷ ಅಮೇಠಿ ಸೇರಿ 6 ಸ್ಥಾನಗಳನ್ನು ಗೆದ್ದುಕೊಂಡಿತು. ಇವತ್ತಿಗೂ ಬಿಜೆಪಿಗೆ ಕನಸಿನಲ್ಲೂ ಕಾಡುತ್ತಿರುವ ಫಲಿತಾಂಶ ಇದು. ಇದೇ ಪರಿಸ್ಥಿತಿ ಮುಂದುವರಿದರೆ ವಿಧಾನಸಭಾ ಚುನಾವಣೆಯಲ್ಲೂ ಹೀನಾಯವಾಗಿ ಸೋಲ ಬೇಕಾಗುತ್ತದೆ ಎಂಬ ಭಯ ಇದ್ದೇ ಇದೆ.

ಒಂದು ಕಾಲಕ್ಕೆ ಉತ್ತರ ಪ್ರದೇಶದಲ್ಲಿ ಧರ್ಮದ ಕಿಚ್ಚು ಹೊತ್ತಿಸಿ ಇಡೀ ದೇಶದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಿಜೆಪಿಗೆ ಈಗ ರಾಮನ ನಾಡಿನಲ್ಲೇ ರಾಜಕೀಯ ಮಾಡುವುದು ಆರಾಮ ಎನಿಸುತ್ತಿಲ್ಲ. ಅಲ್ಲಿನ ರಾಜಕಾರಣ ಈಗ ಧರ್ಮಕ್ಕಿಂತ ಹೆಚ್ಚಾಗಿ ಜಾತಿ ಸಮೀಕರಣದ ಮೇಲೆ ನಿರ್ಧಾರವಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಗೆಲ್ಲಲು ಅವು ಮಾಡಿದ ಜಾತಿ ಸಮೀಕರಣವೂ ಪ್ರಮುಖ ಕಾರಣಗಳಲ್ಲಿ ಒಂದು. ಅಷ್ಟೇಯೇಕೆ, 2014ರಿಂದೀಚೆಗೆ 2022ರವರೆಗೆ ಎಲ್ಲಾ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಬಿಜೆಪಿ ಗೆದ್ದದ್ದು ಕೂಡ ಮುಖ್ಯವಾಗಿ ಜಾತಿ ಸಮೀಕರಣದಿಂದಾಗಿಯೇ. ಪ್ರಧಾನವಾಗಿ ಸಮಾಜವಾದಿ ಪಕ್ಷದ ಯಾದವ್ ನೇತೃತ್ವದ ಹಿಂದುಳಿದ ವರ್ಗಗಳ ಜಾತಿ ಸಮೀಕರಣಕ್ಕೆ ಪ್ರತಿಯಾಗಿ ಯಾದವೇತರ ಹಿಂದುಳಿದ ಜಾತಿಗಳ ಸಮೀಕರಣದ ಮೂಲಕ. ಆದರೀಗ ರಾಹುಲ್ ಗಾಂಧಿ ಶತಾಯಗತಾಯ ಜಾತಿಗಣತಿ ಆಗಲೇಬೇಕು ಎಂದು ಪ್ರತಿಪಾದಿಸುತ್ತಿರುವುದು ಮತ್ತು ಅದಕ್ಕೆ ಅಖಿಲೇಶ್ ಯಾದವ್ ಬೆಂಬಲಿಸುತ್ತಿರುವುದರಿಂದ ಬಿಜೆಪಿಗೆ ಯಾದವೇತರ ಹಿಂದುಳಿದ ಜಾತಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಮೊದಲಿನಷ್ಟು ಸಲೀಸಲ್ಲ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಯಾರಾಗಬೇಕು ಎಂಬ ವಿಷಯದಲ್ಲಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ನಾಯಕರ ನಡುವೆ ಒಮ್ಮತ ಮೂಡಿಲ್ಲ ಎನ್ನುವ ಮಾತಿದೆ. ಇದೇ ಸೆಪ್ಟ್ಟಂಬರ್ 17ಕ್ಕೆ ನರೇಂದ್ರ ಮೋದಿಗೆ 75 ವರ್ಷ ತುಂಬುತ್ತಿದೆ. ನಂತರ ಅವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವರೋ ಇಲ್ಲವೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಒಂದೊಮ್ಮೆ ಅವರು ಪ್ರಧಾನಿ ಕುರ್ಚಿಯಿಂದ ಕೆಳಗಿಳಿದರೆ ಅವರಿಗೆ ಯಾವ ಸ್ಥಾನ ಕೊಡಬೇಕು ಮತ್ತು ಖಾಲಿಯಾದ ಕುರ್ಚಿಗೆ ಯಾರನ್ನು ತಂದು ಕೂರಿಸಬೇಕು ಎನ್ನುವ ಗೊಂದಲಗಳೂ ಬಗೆಹರಿದಿಲ್ಲ. ಹೀಗೆ ಒಂದರ ಹಿಂದೊಂದು ಜಿಜ್ಞಾಸೆಗಳಿರುವ ಸಂದರ್ಭದಲ್ಲೇ ಬಿಹಾರದಲ್ಲಿ ಸೋಲಾದರೆ ಸಮಸ್ಯೆ ಸಂಕೀರ್ಣವಾಗಲಿದೆ. ಅದು ಉತ್ತರಪ್ರದೇಶದ ಸೋಲಿಗೂ ಮುನ್ನುಡಿ ಬರೆಯಬಹುದು ಎನ್ನುವ ಆತಂಕವಿದೆ.

ಬಾಯಿ ತುಂಬ ನಗುವವರೆಲ್ಲಾ ಸಂತೋಷ, ಸಂತೃಪ್ತರಾಗಿದ್ದಾರೆ ಎಂದು ಅರ್ಥವಲ್ಲ. ಅಧಿಕಾರದಲ್ಲಿ ಇರುವವರೆಲ್ಲಾ ಆನಂದತುಂದಿಲರಾಗಿದ್ದಾರೆ ಎಂದು ಅರ್ಥವಲ್ಲ. ನರೇಂದ್ರ ಮೋದಿ ಕೂಡ ಇದಕ್ಕೆ ಹೊರತಲ್ಲ. ಅವರು ಜರಿಯುತ್ತಲೇ ಜವಾಹರ ಲಾಲ್ ನೆಹರೂ ಜೊತೆ ಹೋಲಿಸಿಕೊಳ್ಳಲು ಹಪಹಪಿಸುತ್ತಾರೆ. ಯಾರ ಹೆಸರಹೆೇಳುವುದಕ್ಕೂ ಸಿದ್ಧರಿರಲಿಲ್ಲವೋ ಈಗ ಅದೇ ನಾಯಕನ ಅಜೇಂಡಾವನ್ನು ಅಪ್ಪಿ ಮುದ್ದಾಡುತ್ತಿದ್ದಾರೆ.

ರಾಹುಲ್ ಗಾಂಧಿ ‘ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಇದೇ ಮೋದಿ ಸರಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುತ್ತದೆ’ ಎಂದಿದ್ದರು. ಮೋದಿ ಸರಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿತ್ತು. ಚುನಾವಣಾ ಬಾಂಡ್ ಮತ್ತು ಲ್ಯಾಟಿರಲ್ ಎಂಟ್ರಿ ವಿಷಯಗಳಲ್ಲೂ ಮೋದಿ ಸರಕಾರ ಮಣಿದಿದ್ದು ರಾಹುಲ್ ಗಾಂಧಿ ಕಾರಣಕ್ಕಾಗಿಯೇ. ಕಡೆಯದಾಗಿ ಕೇಂದ್ರ ಸರ್ಕಾರ ನಿಜಕ್ಕೂ ಜಾತಿಗಣತಿ ನಡೆಸಲಿದೆಯೇ ಎಂಬ ಪ್ರಶ್ನೆ ಕಾಡದೆ ಇರದು. ಇದು ‘ನಡೆಸುವ’ ಭರವಸೆ ನೀಡಿ ರಾಹುಲ್ ಗಾಂಧಿ ಬಾಯಿ ಮುಚ್ಚಿ

ಸುವ ಸಂಚಾಗಿರಲೂಬಹುದು. ಏಕೆಂದರೆ ಜಾತಿಗಣತಿ ನಡೆಸಲು ಕಾಲಮಿತಿಯನ್ನೇನೂ ಹಾಕಿಕೊಂಡಿಲ್ಲ.

► ಆನ್ ರೆಕಾರ್ಡ್

ನರೇಂದ್ರ ಮೋದಿ ಮಣಿಪುರದ ವಿಷಯದಲ್ಲೂ ‘ಅಲ್ಲಿಗೆ ಹೋಗಲ್ಲ’ ಎಂದು ಹಠ ಸಾಧಿಸುತ್ತಿದ್ದಾರೆ. ಈಗ ಪಹಲ್ಗಾಮ್‌ಗೆ

ಹೋಗದೆ ಬಿಹಾರಕ್ಕೆ ಹೋದರು ಎಂಬ ಟೀಕೆಗಳು ಕೇಳಿಬರುತ್ತಿವೆ. ಅವರ ದುರಾದೃಷ್ಟಕ್ಕೆ ರಾಹುಲ್ ಗಾಂಧಿ ಹೋಗಿ ಬಂದಿದ್ದಾರೆ ಮತ್ತು ಮೋದಿ ಏಕೆ ಹೋಗಲಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದಮೇಲೆ ಹೋದರೆ ವಿರೋಧಿಗಳ ಒತ್ತಡಕ್ಕೆ, ಪ್ರಮುಖವಾಗಿ ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದು ಹೋದಂತಾಗುತ್ತದೆ. ಹಾಗಾಗಿ ಪ್ರತಿಷ್ಠೆಯೇ ಪ್ರಧಾನ ಎಂದು ಭಾವಿಸುವ ಮೋದಿ ಮುಂದೆಯೂ ಪಹಲ್ಗಾಮ್‌ಗೆ ಹೋಗುವ ಸಾಧ್ಯತೆಗಳು ತುಂಬಾ ಕಡಿಮೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News