×
Ad

ಡಿಕೆಶಿ ಆರೆಸ್ಸೆಸ್ ಮೆಚ್ಚಿ ಮಾತನಾಡುತ್ತಿರುವುದೇಕೆ?

Update: 2025-08-25 10:54 IST

ಡಿ.ಕೆ. ಶಿವಕುಮಾರ್ ಆರೆಸ್ಸೆಸ್ ಬಗ್ಗೆ ಆಡಿರುವ ಮಾತುಗಳು ಈಗ ರಾಜ್ಯದಲ್ಲಿ ಮಾತ್ರವಲ್ಲ, ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಚರ್ಚೆಗೆ ಹಲವು ಆಯಾಮಗಳಿವೆ. ಅವು; ಕಾಂಗ್ರೆಸ್, ಸೈದ್ಧಾಂತಿಕ ಕಾಂಗ್ರೆಸ್, ಡಿ.ಕೆ. ಶಿವಕುಮಾರ್ ಮತ್ತು ರಾಹುಲ್ ಗಾಂಧಿ. ಕಾಂಗ್ರೆಸ್ ಎಂದರೆ ರಾಜಕೀಯ ಮಾಡಲು, ಅಧಿಕಾರ ಹಿಡಿಯಲು ಎಂಥದೇ ಹೊಂದಾಣಿಕೆಯನ್ನು ಮಾಡಿ.ಕೆ.ೂಳ್ಳುವ, ಯಾವ ಹಂತಕ್ಕೆ ಬೇಕಾದರೂ ಇಳಿಯುವ, ಏನನ್ನು ಬೇಕಾದರೂ ಮಾಡುವ ಒಂದು ರಾಜಕೀಯ ಪಕ್ಷ. ಸೈದ್ಧಾಂತಿಕ ಕಾಂಗ್ರೆಸ್ ಎಂದರೆ ಸಿದ್ಧಾಂತಕ್ಕಾಗಿ ರಾಜಕೀಯ ಮಾಡುವ ಪಕ್ಷ. ಸಂವಿಧಾನವೇ ಸಿದ್ಧಾಂತ ಎಂದುಕೊಂಡಿರುವ ಪಕ್ಷ. ಸಂವಿಧಾನ ಹೇಳುವ ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಪ್ರತಿಪಾದಿಸುವ ಪಕ್ಷ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪ್ರತಿನಿಧಿ. ರಾಹುಲ್ ಗಾಂಧಿ ಸೈದ್ಧಾಂತಿಕ ಕಾಂಗ್ರೆಸ್ ಪ್ರತಿನಿಧಿ.

ಯಾವುದೇ ರಾಜಕಾರಣಿ ವೈಯಕ್ತಿಕ ಅಥವಾ ರಾಜಕೀಯ ಲಾಭವಿಲ್ಲದೆ ಏನನ್ನೂ ಮಾತನಾಡುವುದಿಲ್ಲ. ಯಾರಿಗೋ ಏನೋ ಸಂದೇಶ ಕಳುಹಿಸಲು ಅವರು ಇನ್ನೇನನ್ನೋ ಮಾತನಾಡುತ್ತಾರೆ. ಇದೇ ರೀತಿ Reading between the lines ಮೂಲಕ ನೋಡಿದರೆ ಮಾತ್ರ ಡಿ.ಕೆ. ಶಿವಕುಮಾರ್ ಸದನದಲ್ಲಿ ಆರೆಸ್ಸೆಸ್ ಪ್ರಾರ್ಥನಾ ಗೀತೆ ಸದಾ ವತ್ಸಲೆ... ಹಾಡಿದ್ದರ ಮತ್ತು ಆರೆಸ್ಸೆಸ್ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾತನಾಡಿದ್ದರ ಆಳ-ಅಗಲಗಳು ನಿಲುಕಬಲ್ಲವು.

ಡಿ.ಕೆ. ಶಿವಕುಮಾರ್ ಬಿಜೆಪಿ ಕಡೆಗೆ ವಾಲುತ್ತಿದ್ದಾರೆ. ಮೃದು ಹಿಂದುತ್ವ ಪ್ರತಿಪಾದಿಸುತ್ತಿದ್ದಾರೆ. ಆ ಮೂಲಕ ರಾಜಕಾರಣದಲ್ಲಿ ಮೇಲೇರಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡಿಗೆ ಸಂದೇಶ ಕಳುಹಿಸಿದ್ದಾರೆ ಎಂಬಿತ್ಯಾದಿ ವ್ಯಾಖ್ಯಾನಗಳಾಗುತ್ತಿವೆ. ಈ ಎಲ್ಲಾ ವ್ಯಾಖ್ಯಾನಗಳಿಗೆ ಪೂರಕವಾಗುವಂತಹ ದಂಡಿ ದಂಡಿ ಅಂಶಗಳಿವೆ. ಉದಾಹರಣೆಗೆ ಡಿ.ಕೆ. ಶಿವಕುಮಾರ್ ತಮ್ಮ ಸುದೀರ್ಘ ರಾಜಕಾರಣದಲ್ಲಿ ಯಾವತ್ತೂ ಆರೆಸ್ಸೆಸ್ ಸಿದ್ಧಾಂತ ಈ ದೇಶಕ್ಕೆ ಮಾರಕವಾದುದು ಎಂದು ಹೇಳಿಲ್ಲ. ಬದಲಿಗೆ ಪೋಷಿಸಿದ್ದಾರೆ. ಎಂದೂ ಸಂವಿಧಾನದ ವಿಧಿಗಳನ್ನು, ಅನುಚ್ಛೇದಗಳನ್ನು ಉಲ್ಲೇಖಿಸದ ಡಿ.ಕೆ. ಶಿವಕುಮಾರ್ ಸಂಸ್ಕೃತ ಶ್ಲೋಕ ಪಠಿಸಿ ‘ಶೋತೃ’ಗಳ ಮನಮೆಚ್ಚಿಸಲು ಸದಾ ಪ್ರಯತ್ನ ಮಾಡುತ್ತಿದ್ದಾರೆ.

ಹಿಂದೊಮ್ಮೆ ಇದೇ ಸದನದಲ್ಲಿ ತಾನು ಬೆಂಗಳೂರಿನ ರಾಜಾಜಿನಗರದಲ್ಲಿರುವ ಆರೆಸ್ಸೆಸ್ ನ ವಿಠಲ್ ಶಾಖೆಯಲ್ಲಿದ್ದೆ ಎಂದು ಹೇಳಿದ್ದರು. ತಾವು ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರದ ಹಾರೋಬೆಲೆ ಗ್ರಾಮದ ಕಪಾಲಿ ಬೆಟ್ಟದಲ್ಲಿ ಏಸು ಕ್ರಿಸ್ತ್ರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾಗ ವಿವಾದ ಉಂಟಾಗಿತ್ತು. ಕಲ್ಲಡ್ಕ ಪ್ರಭಾಕರ ಭಟ್ ದೊಡ್ಡ ಧ್ವನಿಯಲ್ಲಿ ವಿರೋಧಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್ ‘ಯಾರವರು ಕಲಡ್ಕ ಪ್ರಭಾಕರ್ ಭಟ್? ಎಂದು ಕೇಳಿದ್ದರು. ಆಮೇಲೆ ಅದೇನಾಯಿತೋ ಏನೋ? ಅವರು ಇವರ ಬಗ್ಗೆ ಮಾತನಾಡಲಿಲ್ಲ, ಇವರು ಅವರ ಬಗ್ಗೆ ಮಾತನಾಡಲಿಲ್ಲ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕರಾವಳಿ ಭಾಗದಲ್ಲಿ ಮೃದು ಹಿಂದುತ್ವ ಪಾಲಿಸುವುದು ಅನಿವಾರ್ಯ ಎಂದು ಹೈಕಮಾಂಡ್ ಮೇಲೆ ಪ್ರಭಾವ ಬೀರಿದರು. ಪರಿಣಾಮವಾಗಿ ಟಿಕೆಟ್ ಕೊಡುವ ವಿಷಯದಲ್ಲಿ ಮತ್ತು ಅಲ್ಲಿ ಪ್ರಚಾರ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನು ದೂರ ಇಡಲಾಗಿತ್ತು. ಲೋಕಸಭಾ ಚುನಾವಣಾ ವೇಳೆ ಕೂಡ ಸಿದ್ದರಾಮಯ್ಯ ಮತ್ತು ಬಿ.ಕೆ.ಹರಿಪ್ರಸಾದ್ ಅವರದು ಅಲ್ಲಿಗೆ ನಾಮಕಾವಸ್ತೆ ಭೇಟಿಯಾಗಿತ್ತು.

ಇನ್ನೊಂದು ಪ್ರಸಂಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಿಂದುತ್ವವಾದಿಗಳ ರೀತಿ ಆರೆಸ್ಸೆಸ್ ಅನ್ನು ತುಷ್ಟೀಕರಣ ಮಾಡಲು ‘ಮನೆಯಲ್ಲಿ ಭಗವದ್ಗೀತೆ ಇಟ್ಟುಕೊಳ್ಳದಿರುವವರು ಹಿಂದೂಗಳೇ ಅಲ್ಲ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್ ‘ನಮ್ಮದು ಹಿಂದೂ ರಾಷ್ಟ್ರ’ ಎಂದಿದ್ದರು. ಕಾಂಗ್ರೆಸ್ ಸಿದ್ಧಾಂತ ‘ಈ ದೇಶ ಜಾತ್ಯತೀತ ದೇಶ’ ಎಂದು ಹೇಳುತ್ತದೆ ಎನ್ನುವುದನ್ನು ಮರೆತು ಡಿ.ಕೆ. ಶಿವಕುಮಾರ್ ಹಿಂದುತ್ವವಾದಿಯಾಗಿದ್ದರು.

ತಾನು ಕಾಂಗ್ರೆಸ್ ಕಟ್ಟಾಳು ಎಂದು ಹೇಳಿಕೊಳ್ಳುವ ಡಿ.ಕೆ. ಶಿವಕುಮಾರ್ ಕುಂಭ ಮೇಳದಲ್ಲಿ ಭಾಗವಹಿಸುವ ಮೂಲಕ ಗಂಗಾ ಮತ್ತು ಯಮುನಾ ನದಿಗಳು ಸೇರಿ ಸಂಗಮವಾಗುವ ಜಾಗದಲ್ಲಿ ತನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮಾತುಗಳಿಗೆ ಎಳ್ಳು ನೀರು ಬಿಟ್ಟರು. ಜಲಸಂಪನ್ಮೂಲ ಸಚಿವರಾಗಿ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿರುವ ಕಾವೇರಿ ನದಿಯನ್ನು ಸ್ವಚ್ಛ ಮಾಡುವ ಬದಲು, ಲಭ್ಯವಾಗುತ್ತಿರುವ ನೀರನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳುವ ಬಗೆ ಹುಡುಕುವುದರ ಬದಲು ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಿದರು. ಕಾಂಗ್ರೆಸ್ ಪಕ್ಷದ ಸರಕಾರವನ್ನು ಅವಹೇಳನ ಮಾಡುವ ಜಗ್ಗಿ ವಾಸುದೇವ್ ಕಾರ್ಯಕ್ರಮಕ್ಕೆ ಹೋಗಿ ಬಂದರು.

ಪ್ರತಿಯೊಬ್ಬರಿಗೂ ಇಷ್ಟ ಬಂದ ದೇವರು-ಧರ್ಮ ಪಾಲಿಸುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನವೇ ನೀಡಿದೆ. ಆದರೆ ಸಾರ್ವಜನಿಕ ವ್ಯಕ್ತಿ, ಜನರಿಂದ ಆಯ್ಕೆಯಾಗಿರುವ ವ್ಯಕ್ತಿ, ಜನರ ತೆರಿಗೆ ಹಣದಲ್ಲಿ ನಡೆಯುವ ಸರಕಾರದ ಭಾಗವಾಗಿರುವ ವ್ಯಕ್ತಿ ಸಾರ್ವಜನಿಕ ಜವಾಬ್ದಾರಿಗಳನ್ನು ಮರೆತು ಜಪ-ತಾಪಗಳಲ್ಲಿ ತೊಡಗುವುದು ರಾಜಧರ್ಮಕ್ಕೆ ಎಸೆಯುವ ಅಪಚಾರ. ಉದ್ಯಮ ನಿರ್ವಹಣೆ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ವ್ಯವಹಾರ. ಕೆಪಿಸಿಸಿ ಅಧ್ಯಕ್ಷಗಾದಿ ಅವರ ಪಕ್ಷಕ್ಕೆ ಸಂಬಂಧಿಸಿದ್ದು (ಪಕ್ಷ ಮತ್ತು ಪಕ್ಷ ನಡೆಸುವ ನಾಯಕ ಕೂಡ ಸಾರ್ವಜನಿಕರಿಗೆ ಉತ್ತರದಾಯಿಯಾಗಿರಬೇಕು). ಆದರೆ ಎರಡೆರಡು ಪ್ರಮುಖ ಖಾತೆಗಳಂತೂ ಸ್ಪಷ್ಟವಾಗಿ ಸಾಮಾಜಿಕ ಜವಾಬ್ದಾರಿ. ಜನರು ಕೊಟ್ಟ ಜವಾಬ್ದಾರಿ. ಉದ್ಯಮ, ಪಕ್ಷದ ಅಧ್ಯಕ್ಷತೆ ಮತ್ತು ಎರಡೆರಡು ಬೃಹತ್ ಖಾತೆಗಳನ್ನು ನಿರ್ವಹಿಸುತ್ತಲೇ ಪೂಜೆ-ಪುನಸ್ಕಾರಗಳಿಗೆ ಪ್ರಥಮ ಆದ್ಯತೆ ನೀಡುತ್ತಾರೆಂದರೆ ಅವರ ಸಾರ್ವಜನಿಕ ಪಾಲ್ಗೊಳ್ಳುವಿಕೆ ಎಷ್ಟು ಪರಿಣಾಮಕಾರಿಯಾಗಿರಬಲ್ಲದು ಎನ್ನುವುದನ್ನು ಅಂದಾಜು ಮಾಡಬಹುದು.

ಇದೀಗ ಇನ್ನೆರಡು ಪ್ರಸಂಗಗಳು ಇತಿಹಾಸದ ಪುಟ ಸೇರಿವೆ. ಒಂದು, ಬಿ.ಎಲ್. ಸಂತೋಷ್ ಬಗ್ಗೆ ಡಿ.ಕೆ. ಶಿವಕುಮಾರ್ ಮಮ್ಮುಲ ಮರುಗಿರುವುದು. ರಾಜಕೀಯವಾಗಿ ಮರುಜನ್ಮಕೊಟ್ಟ ಸೋನಿಯಾ ಗಾಂಧಿ ಅವರನ್ನು ಅತ್ಯಂತ ಕೊಳಕು ಭಾಷೆಯಲ್ಲಿ ಮಾತನಾಡಿದ ಯಾವ ಸಂದರ್ಭದಲ್ಲೂ ಡಿ.ಕೆ. ಶಿವಕುಮಾರ್ ಅವರಿಗೆ ಕೋಪ ಉಕ್ಕಿ ಬಂದ ಉದಾಹರಣೆ ಇಲ್ಲ. ಈಗ ತಮಗೆ ‘ಸಂಬಂಧವೇ ಇಲ್ಲದ’ ಮತ್ತು ಎದುರಾಳಿ ಪಕ್ಷದ ವ್ಯಕ್ತಿ ಬಿ.ಎಲ್. ಸಂತೋಷ್ ಬಗ್ಗೆ ಅಷ್ಟೊಂದು ಮುತುವರ್ಜಿ ವಹಿಸಿದ್ದು ಯಾವ ಕಾರಣಕ್ಕೆ ಎನ್ನುವುದು ನಿಜಕ್ಕೂ ಅಧ್ಯಯನಯೋಗ್ಯ ವಿಷಯ.

ಇನ್ನೊಂದು ಪ್ರಸಂಗ ಸದಾ ವತ್ಸಲೆ... ಗೀತಗಾಯನ ಮತ್ತು ಇದೇ ವೇಳೆ ಆರೆಸ್ಸೆಸ್ ಶಿಕ್ಷಣ ಸಂಸ್ಥೆಗಳ ಬಗ್ಗೆ ಆಡಿರುವ ಮಾತುಗಳು. ಇವೆರಡು ಒಂದಕ್ಕೊಂದು ಬೆಸೆದುಕೊಂಡಿರುವ ಸಂಗತಿಗಳು. ಇಲ್ಲಿಯವರೆಗೆ ಯಾವೊಬ್ಬ ಬಿಜೆಪಿ ನಾಯಕನೂ ಆರೆಸ್ಸೆಸ್ ಪ್ರಾರ್ಥನಾ ಗೀತೆ ಸದಾ ವತ್ಸಲೆ...ಯನ್ನು ಸದನದಲ್ಲಿ ಹಾಡುವ ಧೈರ್ಯ ಮಾಡಿರಲಿಲ್ಲ. ಡಿ.ಕೆ. ಶಿವಕುಮಾರ್ ಹಾಡಿ ದಾರಿ ಮಾಡಿಕೊಟ್ಟಿದ್ದಾರೆ. ನನಗೆ ಸಂಸ್ಕೃತ ಗೊತ್ತು, ಶ್ಲೋಕ ಗೊತ್ತು, ಆರೆಸ್ಸೆಸ್ ಗೊತ್ತು, ಅದರ ಒಲವು-ನಿಲುವುಗಳು ಗೊತ್ತು ಎಂದು ಸಾರಿ ಹೇಳಲು ಹೀಗೆ ಮಾಡಿದರಾ?

ಇಲ್ಲ, ಅವರ ಉದ್ದೇಶ ಬೇರೆ ಇರಬಹುದು ಎನಿಸುತ್ತದೆ. ಏಕೆಂದರೆ ಮೊದಲನೆಯದಾಗಿ ‘ಸದಾ ವತ್ಸಲೆ...’ ಎಂದು ಮನದುಂಬಿ ಹಾಡಲೇಬೇಕಾದ ಸಂದರ್ಭ ಅದಾಗಿರಲಿಲ್ಲ. ಎರಡನೆಯದಾಗಿ ಸದನದ ಪ್ರಸಂಗಕ್ಕೆ ಸ್ಪಷ್ಟೀಕರಣ ಕೊಡುತ್ತಾ ‘ನಾನು ಆರೆಸ್ಸೆಸ್ ಬಗ್ಗೆ ತಿಳಿದಿದ್ದೇನೆ. ಅಲ್ಲಿಯೂ ಕೆಲ ಒಳ್ಳೆಯ ಸಂಗತಿಗಳಿವೆ. ಆರೆಸ್ಸೆಸ್ ಪ್ರತೀ ಜಿಲ್ಲೆ, ತಾಲೂಕುಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಶಿಕ್ಷಣ ಸಂಸ್ಥೆಗಳ ಮೇಲೆ ಹಣ ಹೂಡಿಕೆ ಮಾಡುತ್ತಿದೆ’ ಎಂದು ಹೇಳಿದರು. ಅವರ ಧ್ವನಿಯಲ್ಲಿ ಆಕ್ಷೇಪದ ಲವಲೇಶವೂ ಇರಲಿಲ್ಲ. ಹಾಗಾಗಿ ಅವರು ಆರೆಸ್ಸೆಸ್ ಮೆಚ್ಚಿಯೇ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿವಾದ ಇನ್ನಷ್ಟು ತೀವ್ರವಾಗತೊಡಗಿದಾಗ ‘ನಾನು ಹುಟ್ಟಾ ಕಾಂಗ್ರೆಸಿಗ, ನನ್ನ ರಕ್ತ, ಜೀವನ ಎಲ್ಲವೂ ಕಾಂಗ್ರೆಸ್‌ನಲ್ಲಿದೆ. ಕಡೆಯವರೆಗೂ ಕಾಂಗ್ರೆಸ್‌ನಲ್ಲೇ ಇರುವೆ’ ಎಂಬರ್ಥದ ಟ್ವೀಟ್ (x) ಮಾಡಿದರೂ ಆರೆಸ್ಸೆಸ್ ಬಗೆಗಿನ ಅವರ ಮೃದು ಧೋರಣೆಯನ್ನು ಮರೆಮಾಚಲು ಸಾಧ್ಯವಾಗುತ್ತಿಲ್ಲ. ಡಿ.ಕೆ. ಶಿವಕುಮಾರ್ ಆರೆಸ್ಸೆಸ್ ಬಗ್ಗೆ ತಿಳಿದುಕೊಂಡಿದ್ದೇನೆ ಎಂದಿದ್ದಾರೆ. ಆದರೆ ಅವರ ಮಾತುಗಳನ್ನು ಕೇಳಿದರೆ ಅವರಿಗೆ ಆರೆಸ್ಸೆಸ್ ಅರ್ಥವೇ ಆಗಿಲ್ಲ ಎನ್ನುವುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಕಾಂಗ್ರೆಸ್, ‘ಡಿ.ಕೆ. ಶಿವಕುಮಾರ್ ಕಾಂಗ್ರೆಸ್’ ಇರುವುದೇ ಹಾಗೆ. ಇದಕ್ಕೆ ಭಿನ್ನವಾಗಿ ಸಂವಿಧಾನವೇ ಸಿದ್ಧಾಂತ, ಸಂವಿಧಾನ ಹೇಳುವ ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಪ್ರತಿಪಾದಿಸುವ ಕಾಂಗ್ರೆಸ್ ಕಟ್ಟಲು ರಾಹುಲ್ ಗಾಂಧಿ ದೇಶ ಸುತ್ತುತ್ತಿದ್ದಾರೆ. ಇತ್ತೀಚೆಗೆ ಅವರು ಕಾಂಗ್ರೆಸ್‌ನಲ್ಲಿರುವ ಆರೆಸ್ಸೆಸ್ ಮತ್ತು ಬಿಜೆಪಿ ಮನೋಸ್ಥಿತಿಯ ನಾಯಕರನ್ನು ಹೊರಕ್ಕೆ ಹಾಕಬೇಕು ಎಂದಿದ್ದರು. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕೆಂಬ ಮನೋಸ್ಥಿತಿಯ ಅವರು ಯಾರನ್ನೂ ಒದ್ದು ಹೊರಗೆ ಹಾಕಬೇಕೆಂಬ ದಾರ್ಷ್ಟ್ಯತನ ತೋರಿದವರಲ್ಲ. ಕಾಂಗ್ರೆಸ್ ಅನ್ನು ಕಟ್ಟುವುದರ ಜೊತೆಗೆ ಇರುವ ಕಾಂಗ್ರೆಸ್ ಅನ್ನು ಸ್ವಚ್ಛಮಾಡಲು ಅವರು ಹಾಕುತ್ತಿರುವ ಶ್ರಮ ಎದ್ದು ಕಾಣುತ್ತಿದೆ. ಆದರೂ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಗಿ/s ರಾಹುಲ್ ಗಾಂಧಿ ಕಾಂಗ್ರೆಸ್ ಎಂಬ ಅಂತರ್ಯುದ್ಧದಲ್ಲಿ ಗೆಲ್ಲುತ್ತಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ.

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಬಿ.ಕೆ. ಹರಿಪ್ರಸಾದ್ ಅವರಂಥ ನಾಯಕರೂ ಇದ್ದಾರೆ. ಅವರು ಆರೆಸ್ಸೆಸ್ ತಾಲಿಬಾನ್‌ಗಿಂತಲೂ ಅಪಾಯಕಾರಿ ಎಂದು ಹೇಳುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಆರೆಸ್ಸೆಸ್‌ನ ಆಳ-ಅಗಲ ಮಾತ್ರವಲ್ಲ, ಸುತ್ತಳತೆಯೂ ಗೊತ್ತು. ದೇಶಾದ್ಯಂತ ಕೋಮು ಸೌಹಾರ್ದವನ್ನು ಕದಡಲು ಆರೆಸ್ಸೆಸ್ ನಡೆಸುತ್ತಿರುವ ಹುನ್ನಾರವೂ ಗೊತ್ತು’ ಎಂದು ವಿಧಾನ ಪರಿಷತ್ತಿನಲ್ಲಿ ಅಬ್ಬರಿದ್ದರು. ಪ್ರಿಯಾಂಕ್ ಖರ್ಗೆ ತಾವು ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ಸಂಘಟನೆಯನ್ನು ಅಮಾನತು ಮಾಡುವುದಾಗಿ ಹೇಳುತ್ತಿರುತ್ತಾರೆ. ಆದರೂ ಸದ್ಯ ಡಿ.ಕೆ. ಶಿವಕುಮಾರ್ ಕಾಂಗ್ರೆಸೇ ಹೆಚ್ಚು ಪ್ರಭಾವಿಯಂತೆ ಗೋಚರಿಸುತ್ತಿದೆ. ಅದಕ್ಕೊಂದು ನಿದರ್ಶನ ಬೇಕಾದರೆ ಕೆ.ಎನ್. ರಾಜಣ್ಣ ಮತ್ತು ಡಿ.ಕೆ. ಶಿವಕುಮಾರ್ ಮಾತುಗಳಲ್ಲಿ ಇರುವುದು ಗುಲಗಂಜಿ ತೂಕದ ವ್ಯತ್ಯಾಸ ಮಾತ್ರ. ಕೆ.ಎನ್. ರಾಜಣ್ಣ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನಿಲುವಿಗೆ ವಿರುದ್ಧವಾಗಿ (ಮತಗಳ್ಳತನ) ಮಾತನಾಡಿದರು.

ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ತತ್ವಕ್ಕೆ ವಿರುದ್ಧ ಇರುವ ಸಿದ್ದಾಂತ(ಆರೆಸ್ಸೆಸ್)ಅನ್ನು ಮೆಚ್ಚಿ ಮಾತನಾಡಿದರು. ರಾಜಣ್ಣ ಶಿಕ್ಷೆ ಅನುಭವಿಸುತ್ತಿದ್ದಾರೆ. ಡಿ.ಕೆ.ಶಿ ಅಧಿಕಾರ ಅನುಭವಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News