ಬಾಲಕನಿಗೆ ನಾಯಿ ಕಚ್ಚುವ ವೇಳೆ ನಗುತ್ತಿದ್ದ ಮಾಲೀಕ: ವಿಡಿಯೊ ವೈರಲ್
PC: x.com/htTweets
ಮುಂಬೈ: ಸಾಕುನಾಯಿಯೊಂದು (ಪಿಟ್‌ಬುಲ್) 11 ವರ್ಷದ ಬಾಲಕನಿಗೆ ಕಚ್ಚುವ ವೇಳೆ ಅದರ ಮಾಲೀಕ ನಗುತ್ತಿದ್ದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಶ್ವಾನದ ಮಾಲೀಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪೂರ್ವ ಮುಂಬೈ ಉಪನಗರದಲ್ಲಿ ಈ ಘಟನೆ ನಡೆದಿದೆ.
ಮನ್ಖುರ್ದ್ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಹಾಗೂ ಘಟನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪುಟ್ಟ ಬಾಲಕನನ್ನು ನಾಯಿ ಕಚ್ಚಿ ಗಾಯಗೊಳಿಸುತ್ತಿದ್ದರೆ ಅಕ್ಕಪಕ್ಕದವರು ಕೂಡಾ ಘಟನೆಯನ್ನು ನೋಡಿ ಖುಷಿಪಡುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ.
ಬಾಲಕನ ತಂದೆ ನೀಡಿದ ದೂರಿನ ಪ್ರಕಾರ, ವಸತಿ ಬಡಾವಣೆಯಲ್ಲಿ ನಿಲ್ಲಿಸಿದ್ದ ರಿಕ್ಷಾದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಆರೋಪಿ ಸುಹೈಲ್ ಹಸನ್ ಖಾನ್ (43) ಎಂಬಾತ ನಾಯಿಯನ್ನು ಛೂಬಿಟ್ಟ ಎನ್ನಲಾಗಿದೆ. ಬಾಲಕನ ಗಲ್ಲಕ್ಕೆ ನಾಯಿ ಕಚ್ಚಿದ್ದು, ತೀವ್ರವಾಗಿ ಗಾಯಗೊಳಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಾಲತಾಣಗಳಲ್ಲಿ ಹಲವು ಮಂದಿ ಈ ಘಟನೆಯನ್ನು ಖಂಡಿಸಿದ್ದು, ಬಾಲಕನ ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ಶ್ವಾನವನ್ನು ಛೂಬಿಟ್ಟ ಮಾಲೀಕನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ. ಈ ದಾಳಿಯ ವೇಳೆ ಸ್ಪಂದಿಸದೇ ಇರುವ ಕ್ರಮವನ್ನು ಖಂಡಿಸಿದ್ದಾರೆ.
ಮಾಲೀಕನನ್ನು ಶುಕ್ರವಾರ ಬಂಧಿಸಿ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.