ಕೊಲ್ಕತ್ತಾ ವಿಜ್ಞಾನಿ ಶುಭಬ್ರತ ಸೇನ್ ಗೆ ಪರ್ಕಿನ್ ಪ್ರಶಸ್ತಿ
PC: x.com/deba_chem
ಕೊಲ್ಕತ್ತಾ: ವೈಜ್ಞಾನಿಕ ಸಂಶೋಧನೆಯಲ್ಲಿ ಜಗದೀಶ್ ಚಂದ್ರಬೋಸ್ ಅವರಿಂದ ಹಿಡಿದು ಮೇಘಂದ್ ಶಹಾ, ಸತ್ಯೇಂದ್ರನಾಥ್ ಬೋಸ್ ಅವರಿಂದ ಹಿಡಿದು ಸಿ.ವಿ.ರಾಮನ್ ವರೆಗೆ ಸಾಲು ಸಾಲು ಸಾಧಕರ ಪರಂಪರೆ ಹೊಂದಿರುವ ಕೊಲ್ಕತ್ತಾದ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ನಗರದ ಶ್ಯಾಮ್ ಬಜಾರ್ ಪ್ರದೇಶದಲ್ಲಿ ಸದ್ದುಗದ್ದಲವಿಲ್ಲದೇ ಸಂಶೋಧನೆಯಲ್ಲಿ ತೊಡಗಿದ್ದ ಶುಭಬ್ರತ ಸೇನ್ ಇದೀಗ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (RSC)ಯ ಪರ್ಕಿನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದು.
2020ರಲ್ಲಿ ಆರಂಭಿಸಲಾದ ಪರ್ಕಿನ್ ಪ್ರಶಸ್ತಿಯನ್ನು ಜೂನ್ 25ರಂದು ವೆಬ್‌ಸೈಟ್‌ನಲ್ಲಿ ಘೋಷಿಸಲಾಗಿದ್ದು, ಈ ಪ್ರಶಸ್ತಿ ಆಧುನಿಕ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಗೌರವ ಎಂದು ಪರಿಗಣಿಸಲಾಗಿದೆ. ಪ್ರಥಮ ಕೃತಕ ಡೈ ಸಂಶೋಧಕ ಎನಿಸಿದ ಸರ್ ವಿಲಿಯಂ ಹೆನ್ರಿ ಪರ್ಕಿನ್ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜೀವ ರಸಾಯನ ಶಾಸ್ತ್ರ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗುತ್ತದೆ.
"ನಿಜವಾಗಿಯೂ ರೋಮಾಂಚನವಾಗಿದೆ ಹಾಗೂ ಅತ್ಯಂತ ಶ್ರೇಷ್ಠ ಗೌರವ ಇದು! ಈ ಪ್ರಶಸ್ತಿ ಕೇವಲ ಗೌರವಕ್ಕಿಂತ ದೊಡ್ಡದು. ಸಂಶೋಧನಾ ಕ್ಷೇತ್ರದ ಕುತೂಹಲ, ನಿರಂತರತೆ ಮತ್ತು ರೋಮಾಂಚನವನ್ನು ನೆನಪಿಸುವಂಥದ್ದು. ಜಾಗತಿಕ ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನ ಹೇಗೆ ವಿಕಾಸಗೊಳ್ಳುತ್ತಿದೆ ಎನ್ನುವುದಕ್ಕೆ ಇದು ನಿದರ್ಶನ" ಎಂದು ಸೇನ್ ಅಭಿಪ್ರಾಯಪಟ್ಟಿದ್ದಾರೆ.
ಆಲ್ಟರ್‌ನೇಟಿವ್ ಎಲೆಕ್ಟ್ರೋಡ್ ಎಲೆಕ್ಟ್ರೋಲಿಸಿಸ್ ಎಂಬ ಅದ್ಭುತ ತಂತ್ರದ ಸಂಶೋಧನೆಗಾಗಿ ಈ ಗೌರವ ಸಂದಿದೆ. ಸೇನ್ ಪ್ರಮುಖ ಸಂಶೋಧಕರಾಗಿರುವ ಈ ಕ್ರಾಂತಿಕಾರಿ ವಿಧಾನದ ಮೂಲಕ ಕೆಮಿಸ್ಟ್ ಗಳು ಹೆಚ್ಚು ನಿಖರತೆಯಿಂದ ಹಾಗೂ ವಿಸ್ತೃತ ಸುಸ್ಥಿರತೆಯಿಂದ ರಾಸಾಯನಿಕ ಕ್ರಿಯೆಗಳನ್ನು ನಿಭಾಯಿಸಲು ಅವಕಾಶವಾಗಲಿದೆ.