×
Ad

ನ್ಯಾಯಾಲಯಗಳು ಮತ್ತು ಗ್ಯಾರಂಟಿ ಯೋಜನೆಗಳು

Update: 2026-02-23 10:10 IST

ಜನರಿಗೆ ಉದ್ಯೋಗ, ವಸತಿ, ಆಹಾರ, ಶಿಕ್ಷಣ, ಆಸ್ಪತ್ರೆ ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಚುನಾಯಿತ ಸರಕಾರದ ಸಾಂವಿಧಾನಿಕ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿಯಾಗುವುದು ಸರಿಯಲ್ಲ. ಸರಕಾರ ಅಂದರೆ ವ್ಯಾಪಾರ ಅಲ್ಲ. ಅದು ಶಾಲೆ, ಕಾಲೇಜುಗಳನ್ನು, ಆಸ್ಪತ್ರೆಗಳನ್ನು ಪ್ರಜೆಗಳಿಗೆ ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ನೀಡಬೇಕಾಗುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆ ಬರುವುದಿಲ್ಲ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳೆಂದು ಅಧಿಕೃತವಾಗಿ ಕರೆಯಲಾಗುತ್ತದೆ. ಈಗ ಮಾಧ್ಯಮ ಎಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ ಪತ್ರಿಕಾರಂಗವನ್ನು ಕೂಡ ಜನತಂತ್ರದ ನಾಲ್ಕನೇ ಸ್ತಂಭ ಎಂದು ಅನಧಿಕೃತವಾಗಿ ಹೆಸರಿಸಲಾಗಿದೆ. ಉಳಿದೆರಡು ಅಂಗಗಳಲ್ಲಿ ನಾಗರಿಕರು ತಮಗೆ ಅನ್ಯಾಯವಾದರೆ, ನ್ಯಾಯ ಸಿಗದಿದ್ದರೆ ನ್ಯಾಯಾಂಗದ ಮೊರೆ ಹೋಗುವುದು ಸಹಜವಾಗಿ ನಡೆದುಬಂದ ಪ್ರಕ್ರಿಯೆ. ನ್ಯಾಯಾಲಯದ ಕಟ್ಟೆ ಹತ್ತಿ ನ್ಯಾಯ ಪಡೆದ ಹಲವಾರು ಉದಾಹರಣೆಗಳು ಇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಕಳೆದ ಹನ್ನೊಂದು ವರ್ಷಗಳ ಕಾಲಾವಧಿಯಲ್ಲಿ ನ್ಯಾಯಾಲಯಗಳಿಂದ ಬರುತ್ತಿರುವ ತೀರ್ಪುಗಳು ಅನಿರೀಕ್ಷಿತವಾಗಿ ಅಚ್ಚರಿಯನ್ನು ಉಂಟು ಮಾಡುತ್ತಿವೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಕಳೆದ ವಾರ ಏಕಾಏಕಿ ಬಡವರಿಗೆ ಉಚಿತ ಆಹಾರ ಮತ್ತು ಉಚಿತ ವಿದ್ಯುತ್ ಸೇರಿದಂತೆ ಉಚಿತ ಕೊಡುಗೆಗಳನ್ನು ಕೊಡುತ್ತಿರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತು. ದೇಶದ ಬಹುತೇಕ ರಾಜ್ಯಗಳು ವಿತ್ತೀಯ ಕೊರತೆಯನ್ನು ಎದುರಿಸುತ್ತಿರುವಾಗ ಉಚಿತ ಕೊಡುಗೆಗಳನ್ನು ನೀಡುವುದು ಸರಿಯಲ್ಲ ಎಂದು ಸದರಿ ಪೀಠ ಹೇಳಿತು. ಒಂದೆರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ತಮಿಳುನಾಡಿನ ಡಿಎಂಕೆ ಸರಕಾರ ಉಚಿತವಾಗಿ ವಿದ್ಯುತ್ ನೀಡುವ ಭರವಸೆಯನ್ನು ನೀಡಿರುವುದನ್ನು ಉಲ್ಲೇಖಿಸಿ ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿತು.

ಒಂದು ತಿಂಗಳ ಹಿಂದೆ ಇದೇ ಸರ್ವೋಚ್ಚ ನ್ಯಾಯಾಲಯವು ದೇಶದ ಆರ್ಥಿಕ ಅಭಿವೃದ್ಧಿಗೆ ಪದೇ ಪದೇ ಮುಷ್ಕರಕ್ಕೆ ಕರೆ ಕೊಡುವ ಕಾರ್ಮಿಕ ಸಂಘಟನೆಗಳಿಂದ ಪೆಟ್ಟು ಬೀಳುತ್ತದೆ ಎಂದು ಕೆಂಡ ಕಾರಿತ್ತು. ಆದರೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಂಥ ಉಚಿತ ಕೊಡುಗೆಗಳನ್ನು ಘೋಷಿಸುವ ಮೂಲಕ ಜಯಶಾಲಿಯಾಯಿತು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಅರ್ಜಿಯನ್ನು ಇದೇ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು.

ಇಂಥ ಉಚಿತ ಯೋಜನೆಗಳಿಂದ ಬಡವರು ಸೋಮಾರಿಗಳಾಗುತ್ತಾರೆಂದು ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷವೂ ಹೇಳಿತ್ತು. ಹಸಿದವರಿಗೆ ಅನ್ನ ಕೊಟ್ಟರೆ ಅವರು ಸೋಮಾರಿಗಳಾಗುತ್ತಾರೆ ಎಂಬ ಟೀಕೆ ಹೊಸದಲ್ಲ. ಸರಕಾರಗಳು ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದಾಗೆಲ್ಲ ಅಪಸ್ವರ ಬರುತ್ತಲೇ ಇರುತ್ತದೆ. ಇನ್ಫೋಸಿಸ್ ನಾರಾಯಣಮೂರ್ತಿ ಅಂಥವರು ಕೂಡ ಜನರಿಗೆ ದಿನಕ್ಕೆ 18 ತಾಸು ದುಡಿಯಲು ಕರೆ ನೀಡುತ್ತಾರೆ. ಅಗತ್ಯವಿದ್ದವರಿಗೆ ಕೊಡಬೇಕು ಎಂಬ ನ್ಯಾಯಾಧೀಶರ ಮಾತುಗಳನ್ನು ಒಪ್ಪಬಹುದು. ಉದಾಹರಣೆಗೆ ಉಚಿತ ಬಸ್ ಪ್ರಯಾಣ ಕಡುಬಡತನದ ದುಡಿಯುವ ಮಹಿಳೆಯರಿಗೆ ಕೊಡಲು ತಕರಾರಿಲ್ಲ, ಆದರೆ ಎಲ್ಲ ಮಹಿಳೆಯರಿಗೂ ಇದನ್ನು ಅನ್ವಯಿಸುವ ಬದಲಿಗೆ ಅನುಕೂಲಸ್ಥ ಕುಟುಂಬಗಳ ಮಹಿಳೆಯರಿಗೆ ಟಿಕೆಟ್ ದರದ ಅರ್ಧದಷ್ಟು ನಿಗದಿ ಪಡಿಸಬೇಕಾಗಿತ್ತು. ಗೃಹ ಲಕ್ಷ್ಮಿ ಹಣ ಕೂಡ ಅಗತ್ಯವಿದ್ದವರಿಗೆ ಸೀಮಿತಗೊಳಿಸಬೇಕಾಗಿತ್ತು ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಉಚಿತ ಪ್ರಯಾಣದ ಸೌಕರ್ಯವನ್ನು ಪಡೆಯುವ ಶ್ರೀಮಂತ ಮಹಿಳೆಯರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕಿಸುವುದನ್ನು ನಾನು ಕೇಳಿರುವೆ.

ದುಡಿಯುವ ಬಡವರಿಗೆ ಸರಕಾರ ಅನುಕೂಲ ಮಾಡಿಕೊಟ್ಟರೆ ಟೀಕಿಸುವ ನ್ಯಾಯಾಲಯಗಳು ಕಾರ್ಪೊರೇಟ್ ಉದ್ಯಮಿಗಳ 16 ಲಕ್ಷ ಕೋಟಿ ರೂ. ಬ್ಯಾಂಕ್ ಸಾಲವನ್ನು ಮೋದಿ ಸರಕಾರ ಮನ್ನಾ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಉದಾಹರಣೆಗಳಿಲ್ಲ. ಕೋಟ್ಯಧೀಶರಿಂದ ವಸೂಲು ಮಾಡದ 20 ಲಕ್ಷ ಕೋಟಿ ರೂ. ಸಾಲದ ಬಾಕಿ (ಎನ್‌ಪಿಎ) ಕುರಿತೂ ನ್ಯಾಯಾಲಯಗಳಿಂದ ಆಕ್ಷೇಪ ಬಂದಿಲ್ಲ. ಈ ಹಿಂದೆ 500 ಕೋಟಿ ರೂ.ಗೂ ಹೆಚ್ಚು ಸಾಲ ಪಡೆದು ಅದನ್ನು ಮನ್ನಾ ಮಾಡಿಸಿಕೊಂಡ ಉದ್ಯಮಿಗಳ ಪಟ್ಟಿ ನೀಡುವಂತೆ ಸುಪ್ರೀಂ ಕೋರ್ಟ್ ಸರಕಾರವನ್ನು ಕೇಳಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಾಲ ಮನ್ನಾ ಮಾಡಲ್ಪಟ್ಟ ಉದ್ಯಮಿಗಳ ಪಟ್ಟಿ ನೀಡಲು ನಿರಾಕರಿಸಿತ್ತು.

ಹಸಿದವರಿಗೆ ಅನ್ನ ನೀಡುವ ಅನ್ನಭಾಗ್ಯದಂಥ ಯೋಜನೆಗಳು ಮಾತ್ರ ಎಲ್ಲೆಡೆ ಎದ್ದು ಕಾಣುತ್ತವೆ. ಆದರೆ ದೇಶ, ವಿದೇಶದ ಕಾರ್ಪೊರೇಟ್ ಉದ್ಯಮಪತಿಗಳಿಗೆ ಸರಕಾರ ಸಾಲ ಮನ್ನಾ ಮಾಡುವುದು ಮಾತ್ರವಲ್ಲ, ಅವರಿಗೆ ಉದ್ಯಮ ಸ್ಥಾಪಿಸಲು ರಿಯಾಯಿತಿ ದರದಲ್ಲಿ ನೂರಾರು ಏಕರೆ ಭೂಮಿ, ಅತ್ಯಂತ ಕಡಿಮೆ ದರದಲ್ಲಿ ನೀರು ಮತ್ತು ವಿದ್ಯುತ್‌ನ್ನು ಒದಗಿಸುತ್ತದೆ. ಬ್ಯಾಂಕುಗಳಿಗೆ ತಿರುಪತಿ ನಾಮ ಹಾಕಿದ ಮಿತ್ತಲ್, ಮಲ್ಯ ಅವರಂಥ ಕೋಟ್ಯಧೀಶರು ಬೇರೆ ದೇಶಗಳಿಗೆ ಪಲಾಯನ ಮಾಡುತ್ತಾರೆ.ಇಂಥವರ ಬಗ್ಗೆ ಯಾರೂ ಮಾತಾಡುವುದಿಲ್ಲ. ಆದರೆ ಹಸಿದವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಯನ್ನು ಬಾಯಿಗೆ ಬಂದಂತೆ ಟೀಕಿಸುತ್ತಾರೆ. ದುಡಿಯುವ ಜನರನ್ನು ಬಡವರು ಎಂದು ಕರೆಯುವುದನ್ನು ಹಿರಿಯ ಕಮ್ಯುನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೆಯವರು ಈ ಹಿಂದೆ ಆಕ್ಷೇಪಿಸಿದ್ದರು. ನಮ್ಮ ಮೈ ಬೆವರಿನಿಂದ ದೇಶದ ಸಂಪತ್ತನ್ನು ಸೃಷ್ಟಿಸುವ ದುಡಿಯುವ ನಾವು ಬಡವರು ಹೇಗಾಗುತ್ತೇವೆ ಎಂದು ಪ್ರಶ್ನಿಸಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಭಾರತದಲ್ಲಿ ಅಸಮಾನತೆ ತುಂಬಿ ತುಳುಕುತ್ತಿದೆ. ಒಂದೆಡೆ ಹಸಿವು, ಯಾತನೆಗಳು ಆಕ್ರಂದನ ಕೇಳುತ್ತಿದ್ದರೆ. ಇನ್ನೊಂದೆಡೆ ಸಂಪತ್ತಿನ ಅಸಹ್ಯ ಅಟ್ಟಹಾಸ ನಡೆಯುತ್ತಿದೆ. ಮುಕೇಶ್ ಅಂಬಾನಿ 8 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿದ್ದರೆ. ಸಂಪತ್ತಿನ ಗಳಿಕೆಯಲ್ಲಿ ಅವರ ಜೊತೆಗೆ ಪೈಪೋಟಿ ನಡೆಸಿರುವ ಗೌತಮ್ ಅದಾನಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶೀರ್ವಾದವಿದೆ. ಸರಕಾರಿ ಒಡೆತನದ ಮುಂಬೈ, ಮಂಗಳೂರು ಸೇರಿದಂತೆ ಸರಕಾರಿ ಒಡೆತನದ ಪ್ರಮುಖ ವಿಮಾನ ನಿಲ್ದಾಣಗಳನ್ನು ಮತ್ತು ಕೆಲವು ಬಂದರುಗಳನ್ನು ಅದಾನಿ ಮಡಿಲಿಗೆ ಹಾಕಲಾಗಿದೆ. ಭಾರತದ 139 ಕೋಟಿ ಜನರಿಗೆ ಸಂಪತ್ತಿನ ಮೇಲೆ ಅಂಬಾನಿ, ಅದಾನಿ ಸೇರಿದಂತೆ ಕೆಲವೇ ಬಂಡವಾಳಗಾರರು ಹಿಡಿತ ಸಾಧಿಸಿದ್ದಾರೆ. ಇಂಥ ವಿಷಯಗಳು ಸಂಸತ್ತಿನಲ್ಲಾಗಲಿ, ನ್ಯಾಯಾಲಯಗಳಲ್ಲಾಗಲಿ ಚರ್ಚೆಗೆ ಬರುವುದಿಲ್ಲ.

ಉದ್ಯಮಪತಿಗಳಿಗೆ ಉಚಿತವಾಗಿ, ಇಲ್ಲವೇ ರಿಯಾಯಿತಿ ದರದಲ್ಲಿ ಭೂಮಿ, ನೀರು ಮತ್ತು ವಿದ್ಯುತ್ ಕೊಡುವುದನ್ನು ಸಮರ್ಥಿಸುವವರು ಅದು ಅಭಿವೃದ್ಧಿಗೆ ನೀಡುವ ಕೊಡುಗೆ, ಇದರಿಂದ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತವೆ ಎಂದು ಹೇಳುತ್ತಾರೆ. ಆದರೆ ಸರಕಾರದಿಂದ ಅವಶ್ಯಕತೆಗಿಂತ ಹೆಚ್ಚು ಭೂಮಿಯನ್ನು ಪಡೆಯುವ ಉದ್ಯಮಿಗಳು ಅದನ್ನು ರಿಯಲ್ ಎಸ್ಟೆಟ್‌ಗೆ ದುರ್ಬಳಕೆ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇದಲ್ಲದೆ ಹಲವಾರು ಉದ್ದಿಮೆಗಳಿಂದ ಪರಿಸರಕ್ಕೆ ಧಕ್ಕೆಯಾಗುತ್ತಿರುವುದು ಕೂಡ ಸಾಮಾನ್ಯವಾಗಿದೆ. ಕೊಪ್ಪಳದಲ್ಲಿ ತಲೆ ಎತ್ತಿರುವ ಪರಿಸರ ಮಾರಕ ಉದ್ಯಮಗಳ ವಿರುದ್ಧ ಅಲ್ಲಿನ ಜನರು ಕಳೆದ 114 ದಿನಗಳಿಂದ ಹೋರಾಟ ನಡೆಸಿದ್ದಾರೆ. ನ್ಯಾಯಾಲಯಗಳು ಇಂಥ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡಿ ನೊಂದ ಜನರಿಗೆ ನ್ಯಾಯವನ್ನು ಒದಗಿಸಬೇಕಾಗಿದೆ.

ಜನರಿಗೆ ಉದ್ಯೋಗ, ವಸತಿ, ಆಹಾರ, ಶಿಕ್ಷಣ, ಆಸ್ಪತ್ರೆ ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಚುನಾಯಿತ ಸರಕಾರದ ಸಾಂವಿಧಾನಿಕ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಯಲ್ಲಿ ಅಡ್ಡಿಯಾಗುವುದು ಸರಿಯಲ್ಲ. ಸರಕಾರ ಅಂದರೆ ವ್ಯಾಪಾರ ಅಲ್ಲ. ಅದು ಶಾಲೆ, ಕಾಲೇಜುಗಳನ್ನು, ಆಸ್ಪತ್ರೆಗಳನ್ನು ಪ್ರಜೆಗಳಿಗೆ ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ನೀಡಬೇಕಾಗುತ್ತದೆ. ಇಲ್ಲಿ ಲಾಭ ನಷ್ಟದ ಪ್ರಶ್ನೆ ಬರುವುದಿಲ್ಲ. ಅಭಿವೃದ್ಧಿ ಅಂದರೆ ಉಳ್ಳವರನ್ನು ಇನ್ನಷ್ಟು ಹಣವಂತರನ್ನಾಗಿ ಮಾಡುವುದಲ್ಲ. ಮಾನವಾಭಿವೃದ್ಧಿಯನ್ನು ಕಡೆಗಣಿಸುವ ಯಾವುದೇ ಅಭಿವೃದ್ಧಿಗೆ ಅರ್ಥವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News