×
Ad

ಸದನದಲ್ಲಿ ದ್ವೇಷದ ನಾಲಗೆಯ ಅವಾಂತರ

Update: 2026-02-09 11:23 IST

ಬೌದ್ಧಿಕವಾಗಿ ಬೆಳೆದರೆ, ಸಂವಿಧಾನಕ್ಕೆ ಬದ್ಧವಾಗಿ ಇದ್ದರೆ ಸದನದಲ್ಲಾಗಲಿ ಹೊರಗಾಗಲಿ ಮನ ಮುಟ್ಟುವಂತೆ ಮಾತಾಡಬಹುದು.ಆದರೆ ಸಂಘದ ಶಾಖೆಯಲ್ಲಿ ಬೆಳೆದವರು ಬೇರಾವುದನ್ನು ನೋಡಬಾರದು ಮತ್ತು ಓದಬಾರದು ಎಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡಿರುತ್ತಾರೆ. ಹೊರಗಿನ ಗಾಳಿ ಬೆಳಕು ಬರದಂತೆ ಕಿವಿ ಮುಚ್ಚಿಕೊಂಡಿರುತ್ತಾರೆ.

ಯಾವುದೇ ಸಕಾರಾತ್ಮಕ, ಆರ್ಥಿಕ, ಸಾಮಾಜಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದ, ಜನಾಂಗ ದ್ವೇಷ ಮತ್ತು ಮೌಢ್ಯ, ಕಂದಾಚಾರಗಳನ್ನೇ ಬಂಡವಾಳ ಮಾಡಿಕೊಂಡ ಪಕ್ಷಕ್ಕೆ ಮತ್ತು ಅದು ನಂಬಿದ ಸಿದ್ಧಾಂತಕ್ಕೆ ಸೌಜನ್ಯದ, ಸಜ್ಜನಿಕೆಯ ಭಾಷೆ ಅರ್ಥವಾಗುವುದಿಲ್ಲ. ಕಳೆದ ವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಮತ್ತು ಬಿಜೆಪಿ ಸದಸ್ಯ ಸಿ.ಟಿ.ರವಿ ನಡುವಿನ ವಾಗ್ವಾದವನ್ನು ಗಮನಿಸಿದರೆ ಯಾರು ಏನೆಂಬುದು ಗೊತ್ತಾಗುತ್ತದೆ.

ಸದನದಲ್ಲಿ ಚರ್ಚೆಯ ಮಧ್ಯ ನಸೀರ್ ಅಹ್ಮದ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೀಕಿಸಿದರು.ಅದು ಸಹಜ ರಾಜಕೀಯ ಟೀಕೆಯಾಗಿತ್ತು. ಪ್ರಧಾನಿ ಮೋದಿಯವರ ಬಗ್ಗೆ ಆಡಿದ ಮಾತು ಸದಭಿರುಚಿಯಿಂದ ಕೂಡಿರಲಿಲ್ಲ. ಆದರೆ ಅಸಂಸದೀಯ ಪದವನ್ನೇನೂ ಅವರು ಬಳಸಿರಲಿಲ್ಲ. ಇದನ್ನು ಕೇಳಿ ಸಹನೆ ಕಳೆದುಕೊಂಡ ಸಿ.ಟಿ.ರವಿ ‘ಪ್ರಧಾನಿಯವರನ್ನು ಟೀಕಿಸುವ ನಾಲಗೆ ಪಾಕಿಸ್ತಾನದ ನಾಲಗೆ’ ಎಂದು ತನಗೆ ತಿಳಿದಷ್ಟು ಮಾತಾಡಿದ್ದು ಕೋಲಾಹಲಕ್ಕೆ ಕಾರಣವಾಯಿತು.

ನಸೀರ್ ಅಹ್ಮದ್ ಮಾತಿನ ಬಗ್ಗೆ ಸಿ.ಟಿ. ರವಿಗೆ ಕೋಪ ಬಂದಿದ್ದರೆ, ಅದಕ್ಕೆ ರಾಜಕೀಯವಾಗಿ ಮರು ಉತ್ತರ ನೀಡಬೇಕಿತ್ತು. ಟೀಕಿಸಲು ಸಾಕಷ್ಟು ವಿಷಯಗಳಿದ್ದವು. ಆದರೆ, ಮೆದುಳು ಇರಬೇಕಾದ ಜಾಗದಲ್ಲಿ ಇನ್ನೇನೋ ಇದ್ದರೆ ಅಸಭ್ಯ, ಕೊಳಕು ಮಾತುಗಳು ಬರುತ್ತವೆ. ಕೋಟಿ ರವಿ ಎಂದು (ಜನರ ಬಾಯಿಯಲ್ಲಿ ಇರುವ ಇನ್ನೊಂದು ಪದವನ್ನು ನಾನು ಇಲ್ಲಿ ಬರೆಯುವುದಿಲ್ಲ) ಚಿಕ್ಕಮಗಳೂರಿನ ಜನರು ಕರೆಯುವ ಸಿ.ಟಿ.ರವಿ ಹೊರಗೆ ಇಂಥ ಅಸಭ್ಯ ಮಾತುಗಳನ್ನು ಸಾಕಷ್ಟು ಆಡುತ್ತಾರೆ. ಆದರೆ ಇಂಥದೇ ಮಾತನ್ನು ಸದನದ ಒಳಗೂ ಬಳಸಿ ಸದನದ ಘನತೆಗೆ ಧಕ್ಕೆ ತಂದ ಉದಾಹರಣೆಗಳೂ ಇವೆ. ಕೆಲ ತಿಂಗಳ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗೆಗೂ ಅಸಭ್ಯ ಮಾತನ್ನು ಆಡಿ ಸಭಾಪತಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೆಣ್ಣು ಮಕ್ಕಳ ಬಗ್ಗೆ ಆಡಬಾರದ ಮಾತು ಆಡಿದ ಕಾರಣಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪೀಕರ್‌ಗೆ ದೂರನ್ನು ನೀಡಿದ್ದರು.

ನಸೀರ್ ಅಹ್ಮದ್ ಮಾತಿನ ಬಗ್ಗೆ ಆಕ್ಷೇಪವಿದ್ದರೆ, ನೇರವಾಗಿ ಹೇಳಬಹುದಿತ್ತು. ಆದರೆ, ನಸೀರ್ ಅಹ್ಮದ್ ಮುಸ್ಲಿಮ್ ಎಂಬ ಕಾರಣಕ್ಕಾಗಿ ಬೇಕಂತಲೇ ಪಾಕಿಸ್ತಾನದ ನಾಲಗೆ ಎಂದು ಟೀಕಿಸಿದರು. ಬಿಜೆಪಿ ಸದಸ್ಯರ ದೌರ್ಬಲ್ಯವೆಂದರೆ ಅವರಲ್ಲಿ ಅಧ್ಯಯನ ಶೀಲತೆ ವಿರಳ. ವಿರೋಧಿಗಳಿಗೂ ಪಾಕಿಸ್ತಾನಕ್ಕೂ ತಳಕು ಹಾಕಿ ಮಾತಾಡುವುದು ಅವರ ಚಾಳಿ. ರವಿ ಇಂಥ ಮಾತನ್ನು ಆಡಿದಾಗ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯ ಕೆ.ಎನ್ .ಹರಿಪ್ರಸಾದ್, ‘ರುಚಿಯಾದ ಬಿರಿಯಾನಿ ಸಿಗುತ್ತದೆ ಅಂದರೆ ಆ ನಾಲಗೆ ಪಾಕಿಸ್ತಾನಕ್ಕೂ ಹೋಗಿ ಬರುತ್ತದೆ’ ಎಂದು ಛೇಡಿಸಿದರು. ಪ್ರಧಾನಿ ಮೋದಿಯವರು ಯಾರಿಗೂ ಹೇಳದೇ ಪಾಕಿಸ್ತಾನಕ್ಕೆ ಹೋಗಿ ಆ ದೇಶದ ಅಧ್ಯಕ್ಷನೊಂದಿಗೆ ಬಿರಿಯಾನಿ ತಿಂದು ಬಂದ ಕತೆಯನ್ನು ನೆನಪಿಸಿದರು. ನಿಜ ಅವರಿಗೆ ಪಾಕಿಸ್ತಾನದ ಬಗ್ಗೆ ವಿಶೇಷ ಪ್ರೇಮ. ಸಿಂದಗಿಗೆ ಹೋಗಿ ಪಾಕಿಸ್ತಾನದ ಧ್ವಜ ಹಾರಿಸಿದವರು ಯಾರೆಂಬುದನ್ನು ಇಲ್ಲಿ ವಿವರಿಸಬೇಕಾಗಿಲ್ಲ. ತಾಲಿಬಾನ್‌ಗಲಿಗೆ ಸರಕಾರದ ಖಜಾನೆಯಿಂದ ಕೋಟ್ಯಂತರ ರೂಪಾಯಿ ನೀಡಿದವರು ಯಾರೆಂಬುದನ್ನು ಇಲ್ಲಿ ಹೇಳಬೇಕಾಗಿಲ್ಲ.

ವಿಭಿನ್ನ ವಿಚಾರ ಧಾರೆಗಳಿಗೆ ಸೇರಿದ ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿರುವುದು ಸಹಜ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ಬದುಕುವವರಿಗೆ ಅದರಲ್ಲೂ ಶಾಸನ ಸಭೆಗಳ ಸದಸ್ಯರಾದವರಿಗೆ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಸೌಜನ್ಯ ಇರಬೇಕಾಗುತ್ತದೆ. ಸೌಜನ್ಯ ಮಾತ್ರವಲ್ಲ ಅಸಂಸದೀಯ ಪದಗಳನ್ನು ಬಳಸಬಾರದೆಂಬ ಎಚ್ಚರವೂ ಇರಬೇಕಾಗುತ್ತದೆ. ಶಾಸನ ಸಭೆಗಳಿಗೆ ಹೊಸದಾಗಿ ಬರುವವರು ತಮ್ಮ ಧಿಮಾಕು,ಪಾಳೆಯಗಾರಿ ಭಾಷೆಗಳನ್ನು ಹೊರಗಿಟ್ಟು ಸದನವನ್ನು ಪ್ರವೇಶಿಸಬೇಕಾಗುತ್ತದೆ. ಬಹುತೇಕ ಮಂದಿ ಹೊಸಬರು ಸಹ ಶಾಸಕರನ್ನು ನೋಡಿ, ಅನುಭವಿಗಳ ಮಾತನ್ನು ಕೇಳಿ ಬದಲಾಗುತ್ತಾರೆ.ಬದಲಾಗದ ಉದ್ಧಟರ ಸಾಲಿನಲ್ಲಿ ಸಿ.ಟಿ. ರವಿಯಂಥವರು ಇರುತ್ತಾರೆ.

ಈ ಉದ್ಧಟತನದ ವರ್ತನೆಗೆ ವೈಯಕ್ತಿಕ ವಾಗಿ ಅವರ ದುರಹಂಕಾರ ಮಾತ್ರವಲ್ಲ, ಅವರು ಬೆಳೆದು ಬಂದ ಸಂಘಟನೆಯೂ ಕಾರಣವಾಗಿರಬಹುದು. ಅವರ ಸಂಘಟನೆ ಒಬ್ಬೊಬ್ಬರಿಗೆ ಒಂದೊಂದು ಮುಖವಾಡ ಹಾಕಿರುತ್ತದೆ. ಸಿ.ಟಿ .ರವಿ ಹೀಗಾದರೆ ಇದಕ್ಕೆ ತದ್ವಿರುದ್ಧ್ದವಾಗಿ ಸುರೇಶ್ ಕುಮಾರ್ ಅಂಥವರು ಸರಳತೆ, ಸಜ್ಜನಿಕೆಯಿಂದ ಗಮನ ಸೆಳೆಯುತ್ತಾರೆ.ರವಿ ಅಂಥವರು ಉದ್ಧಟರಂತೆ ಕಾಣಿಸಿಕೊಳ್ಳುತ್ತಾರೆ. ಸಂಘಟನೆಗೆ ಇವರಿಬ್ಬರೂ ಬೇಕು. ಬೇಕಂತಲೇ ಸಂಘ ಪರಿವಾರ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಿ.ಟಿ.ರವಿಯನ್ನು ವಿಧಾನ ಪರಿಷತ್ತಿಗೆ ತಂದು ಕೂರಿಸುತ್ತದೆ.ಈ ರವಿ ಈ ರೀತಿ ಮಾತಾಡಿದ್ದು ಇದೇ ಮೊದಲ ಸಲವಲ್ಲ.

ಈತನ ಉದ್ಧಟತನವನ್ನು ಆತ ಶಾಸಕನಾಗುವ ಮುಂಚಿನಿಂದಲೂ ನೋಡುತ್ತಿರುವೆ. 2005ರಲ್ಲಿ ಬಾಬಾ ಬುಡನ್‌ಗಿರಿ ವಿವಾದವನ್ನು ಕೋಮುವಾದಿಗಳು ಹುಟ್ಟು ಹಾಕಿದಾಗ ಕೋಮು ಸೌಹಾರ್ದ ವೇದಿಕೆ ಮತ್ತು ಸಮಾನ ಮನಸ್ಕ ಸಂಘಟನೆಗಳು ಚಿಕ್ಕಮಗಳೂರಿನಲ್ಲಿ ಸೌಹಾರ್ದ ಸಮಾವೇಶವನ್ನು ನಡೆಸಿದ್ದವು. ಆಗ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದರು. ಆಗ ಅವರಿಗಾಗಿ ಸ್ಥಳೀಯ ಸರಕಾರಿ ಅತಿಥಿ ಗೃಹದಲ್ಲಿ (ಐಬಿ) ಕೊಠಡಿಯನ್ನು ಕಾಯ್ದಿರಿಸಿದಾಗ ಅದಕ್ಕಿಂತ ಮುಂಚೆ ಅಲ್ಲಿ ಹೋದ ರವಿ ಅಲ್ಲಿನ ಎಲ್ಲ ಕೋಣೆಗಳನ್ನು ಬುಕ್ ಮಾಡಿದ್ದ. ಸೌಹಾರ್ದ ವೇದಿಕೆಗೆ ಒಂದೂ ರೂಮ್ ಸಿಗದಂತೆ ಮಾಡಿದ್ದ. ಹೀಗಾಗಿ ನಿಡುಮಾಮಿಡಿ ಸ್ವಾಮಿಗಳು ಸೇರಿದಂತೆ ಎಲ್ಲ ಅತಿಥಿಗಳು ಹೋಟೆಲ್‌ನಲ್ಲಿ ಇರಬೇಕಾಗಿ ಬಂತು. ಇನ್ನೊಂದು ಉದಾಹರಣೆ ಅಂದರೆ ನಾನು ‘ಸೂರ್ಯೋದಯ’ ಪತ್ರಿಕೆಯ ಸಹಾಯಕ ಸಂಪಾದಕನಾಗಿ ಕೆಲಸ ಮಾಡುತ್ತಿದ್ದಾಗ ನಾನು ಕೆಲಸ ಮಾಡುವ ಆ ಪತ್ರಿಕೆಯ ಮಾಲೀಕರಿಗೆ ಫೋನ್ ಮಾಡಿದ ರವಿ ನನ್ನ ಹೆಸರು ಹೇಳಿ ‘ನಿಮ್ಮ ಪತ್ರಿಕೆಯಲ್ಲಿ ನಕ್ಸಲಿಯರನ್ನು ನೇಮಕ ಮಾಡಿಕೊಂಡಿದ್ದೀರಿ’ ಎಂದು ಜೋರು ಮಾಡಿದ್ದ. ಶಾಸಕನಾಗಿ ಬಂದ ನಂತರವೂ ಈತ ಸುಧಾರಿಸಲಿಲ್ಲ.

ಟಿ.ವಿ.ಚರ್ಚೆಯೊಂದರಲ್ಲಿ ಏನೇನೋ ಮಾತಾಡಲು ಹೋಗಿ ಆಗ ಕಮ್ಯುನಿಸ್ಟ್ ಶಾಸಕರಾಗಿದ್ದ ಜಿ.ವಿ.ಶ್ರೀ ರಾಮರೆಡ್ಡಿ ಅವರಿಂದ ಉಗಿಸಿಕೊಂಡಿದ್ದ.

ಇದು ಮಾತ್ರವಲ್ಲ, ಐದು ವರ್ಷಗಳ ಹಿಂದೆ ಈತ ಸಚಿವನಾಗಿದ್ದಾಗ ಚಿಕ್ಕ ಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸಂದರ್ಭದಲ್ಲಿ ಇದೇ ರೀತಿ ವರ್ತಿಸಿದ್ದ.ಆ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕಲ್ಕುಳಿ ವಿಠಲ ಹೆಗ್ಗಡೆ ಅವರ ಬಗ್ಗೆ ಅಪಸ್ವರ ತೆಗೆದ. ವಿಠಲ್ ಹೆಗ್ಗಡೆ ಅವರನ್ನು ನಕ್ಸಲೀಯ ಎಂದು ಕರೆದುದು ಮಾತ್ರವಲ್ಲ ಆ ಸಮ್ಮೇಳನದಲ್ಲಿ ಭಾಗವಹಿಸಲು ನಿರಾಕರಿಸಿದ. ಅಷ್ಟೇ ಅಲ್ಲ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಚಿಕ್ಕ ಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಅನುದಾನ ಸಿಗದಂತೆ ತಡೆ ಹಿಡಿದ. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮನು ಬಳಿಗಾರ ಅವರು ಚಿಕ್ಕ ಮಗಳೂರು ಸಮ್ಮೇಳನಕ್ಕೆ ಹೋಗದಂತೆ ಅಡ್ಡಗಾಲು ಹಾಕಿದ.

ಈ ಅವಾಂತರಕ್ಕೆ ಕಾರಣ ರವಿ ಎಂಬಾತ ನಂಬಿದ ಸಿದ್ಧಾಂತ ಅಂದರೆ ತಪ್ಪಿಲ್ಲ. ರವಿ ಮಾತ್ರವಲ್ಲ ಅದೇ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದ ಕೆಲವು ಸಂಸದರು,ಶಾಸಕರು ಸದನದ ಒಳಗೆ ಮತ್ತು ಹೊರಗೆ ಆಡುವ ಮಾತುಗಳನ್ನು ಗಮನಿಸಿದರೆ ಈ ತಪ್ಪು ವೈಯಕ್ತಿಕವಾಗಿ ಅವರದು ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ರಾಜ ಪ್ರಭುತ್ವವನ್ನು ಇಷ್ಟಪಡುವ ಅವರ ಸಿದ್ಧಾಂತ ಇದಕ್ಕೆ ಕಾರಣವಲ್ಲದೇ ಬೇರೇನೂ ಅಲ್ಲ. ಮುಂಚೆ ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಸಂಸತ್ತಿನ ಘನತೆಗೆ ಧಕ್ಕೆ ಬರದಂತೆ ಎಚ್ಚರ ವಹಿಸುತ್ತಿದ್ದರು. ಈಗಿನ ಇವರ ಪರಮೋಚ್ಚ ನಾಯಕ, ವಿಶ್ವಗುರು ಸದನದಲ್ಲಿ ಆಡುವ ಮಾತುಗಳನ್ನು ಅವಲೋಕಿಸಿದರೆ ಸಿ.ಟಿ. ರವಿ ಆಡುವ ಮಾತುಗಳು ಅಚ್ಚರಿ ಅನಿಸುವುದಿಲ್ಲ. ಇವರೆಲ್ಲ ವಾಟ್ಸ್

ಆ್ಯಪ್ ಯುನಿವರ್ಸಿಟಿಯ ಮೂಲ ಪುರುಷರು ಅಂದರೆ ಅತಿಶಯೋಕ್ತಿಯಲ್ಲ.

ಇಂಥ ಮಾತುಗಳನ್ನು ಆಡುವ ಮೂಲಕ ಇವರು ಭಾರತದ ಪ್ರಜೆಗಳಾದ ಮುಸಲ್ಮಾನರ ದೇಶ ಭಕ್ತಿಯನ್ನು ನಿರಂತರವಾಗಿ ಪ್ರಶ್ನಿಸುತ್ತಲೇ ಇರುತ್ತಾರೆ. ದೇಶದಲ್ಲಿ 18 ಕೋಟಿಯಷ್ಟಿರುವ ಮುಸಲ್ಮಾನರು ಇವರ ಕಿರಿಕಿರಿಯಿಂದ ಪ್ರತಿದಿನವೂ ತಮ್ಮ ದೇಶ ಭಕ್ತಿಯನ್ನು ಸಾಬೀತು ಪಡಿಸುತ್ತಲೇ ಇರಬೇಕಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಪಾಲ್ಗೊಳ್ಳದ , ಸ್ವಾತಂತ್ರ್ಯಾ ನಂತರ ಗಡಿಯಲ್ಲಿ ಶತ್ರು ಸೇನೆಯ ಜೊತೆಗೆ ಎಂದೂ ಹೋರಾಡದ,

ಭಾರತೀಯ ರ ನಡುವೆ ಜಾತಿ, ಮತದ ವಿಷ ಬೀಜ ಬಿತ್ತುವ ಶಕ್ತಿಗಳಿಂದ ಮುಸಲ್ಮಾನರು, ಕ್ರೈಸ್ತರು, ದಲಿತರು ದೇಶ ಭಕ್ತಿಯ ಪಾಠ ಕಲಿಯಬೇಕಾಗಿ ಬಂದುದು ದೇಶದ ದುರಂತ.

ತಲೆಯಲ್ಲಿ ಮೆದುಳೆಂಬುದು ಇದ್ದರೆ ಶಾಸನ ಸಭೆಗಳಿಗೆ ಚುನಾಯಿತರಾಗಿ ಬರುವವರು ತಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶಗಳಿರುತ್ತವೆ. ಸಂಸತ್ ಭವನದಲ್ಲಿ ಹಾಗೂ ರಾಜ್ಯಗಳ ವಿಧಾನ ಮಂಡಲಗಳ ಗ್ರಂಥಾಲಯಗಳಲ್ಲಿ ಇರುವ ಅತ್ಯಂತ ಅಪರೂಪದ ಉತ್ತಮ ಪುಸ್ತಕಗಳನ್ನು ಓದಬಹುದು. ಬಹುತೇಕ ಸದಸ್ಯರು ಇದರ ಸದುಪಯೋಗವನ್ನು ಮಾಡಿಕೊಳ್ಳುವುದಿಲ್ಲ. ಕೆಲವೇ ಕೆಲವರು ಜ್ಞಾನದ ಹಸಿವಿದ್ದವರು ಮಾತ್ರ ದಿನವಿಡೀ ಗ್ರಂಥಾಲಯ ಗಳಲ್ಲಿ ಕುಳಿತು ಓದುತ್ತಿರುತ್ತಾರೆ. ನಾನು ವಿಧಾನ ಸಭೆಯ ಕಲಾಪದ ವರದಿಗೆ ಹೋದಾಗ ರಮೇಶ್ ಕುಮಾರ್, ಭೂಪತಿ, ಜಿ.ವಿ.ಶ್ರೀ ರಾಮರೆಡ್ಡಿ, ಬಿ.ಆರ್.ಪಾಟೀಲರು ಗ್ರಂಥಾಲಯದಲ್ಲಿ ಓದುತ್ತ ಕುಳಿತಿದ್ದನ್ನು ಕಣ್ಣಾರೆ ಕಂಡಿರುವೆ. ಬಿ.ಕೆ.ಹರಿಪ್ರಸಾದ್ ವಿದ್ಯಾರ್ಥಿಯಾಗಿದ್ದಾಗ ಹೇಗಿದ್ದರೆಂಬುದು ಈಗ ಅಗತ್ಯವಿಲ್ಲ.ಆದರೆ ರಾಜ್ಯಸಭೆಗೆ ಹೋದ ನಂತರ ಗಂಭೀರವಾದ ಅಧ್ಯಯನದಿಂದ ತಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಂಡರು.ಪ್ರತಿಯೊಂದು ವಿಷಯದ ಬಗ್ಗೆ ಮಾತಾಡುವ ಪಾಂಡಿತ್ಯವನ್ನು ಪಡೆದರು.ರವಿ ಮತ್ತು ಸುನೀಲ್ ಕುಮಾರರಂಥವರು ಇವರನ್ನು ಮಾದರಿಯಾಗಿಟ್ಟುಕೊಳ್ಳಬೇಕು.ಸದನದ ಭಾಷಣಕ್ಕೆ ವಾಟ್ಸ್ ಆ್ಯಪ್ ಯುನಿವರ್ಸಿಟಿಯನ್ನು ಅವಲಂಬಿಸಿ ಅಪಹಾಸ್ಯಕ್ಕೆ ಈಡಾಗಬಾರದು.

ಬೌದ್ಧಿಕವಾಗಿ ಬೆಳೆದರೆ, ಸಂವಿಧಾನಕ್ಕೆ ಬದ್ಧವಾಗಿ ಇದ್ದರೆ ಸದನದಲ್ಲಾಗಲಿ ಹೊರಗಾಗಲಿ ಮನ ಮುಟ್ಟುವಂತೆ ಮಾತಾಡಬಹುದು.ಆದರೆ ಸಂಘದ ಶಾಖೆಯಲ್ಲಿ ಬೆಳೆದವರು ಬೇರಾವುದನ್ನು ನೋಡಬಾರದು ಮತ್ತು ಓದಬಾರದು ಎಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡಿರುತ್ತಾರೆ. ಹೊರಗಿನ ಗಾಳಿ ಬೆಳಕು ಬರದಂತೆ ಕಿವಿ ಮುಚ್ಚಿಕೊಂಡಿರುತ್ತಾರೆ. ಅಂತಲೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನಿವೃತ್ತ ಸೇನಾಧಿಕಾರಿ ನರವಣೆ ಅವರು ಬರೆದ ಆತ್ಮಚರಿತ್ರೆಯ ಅಪ್ರಕಟಿತ ಪುಸ್ತಕವನ್ನು ಸದನದಲ್ಲಿ ತೋರಿಸಿ ಸವಾಲು ಹಾಕಿದಾಗ 56 ಇಂಚಿನ ಎದೆಯ ವಿಶ್ವ ಗುರು ಗಾಬರಿಯಾದರು. ರಾಷ್ಟ್ರಪತಿ ಅವರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಅವರು ಸದನಕ್ಕೆ ಬರಬೇಕಾಗಿತ್ತು. ಆದರೆ ಬರಲಿಲ್ಲ. ಯಾಕೆಂದರೆ ಅವರ ಬಳಿ ಉತ್ತರವಿರಲಿಲ್ಲ. ಮುಖವೂ ಇರಲಿಲ್ಲ.

ಅವರ ಬದಲಿಗೆ ಲೋಕ ಸಭಾಧ್ಯಕ್ಷ ಓಂ ಬಿರ್ಲಾ ಸಮಜಾಯಿಷಿ ನೀಡಿ ಪ್ರಧಾನಿಯವರ ಜೀವಕ್ಕೆ ಅಪಾಯವಿದ್ದುದರಿಂದ ಸದನಕ್ಕೆ ಬರಲಿಲ್ಲ ಎಂದು ಸ್ಪಷ್ಟೀಕರಣ ನೀಡಬೇಕಾಗಿ ಬಂತು. ಇದಕ್ಕೆ ಲೇವಡಿ ಮಾಡಿದ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಪ್ರಧಾನಿಗೆ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ಜನರ ಗತಿಯೇನು ಎಂದು ಛೇಡಿಸಿದರು.ಹೀಗಾಗಿ ರಾಷ್ಟ್ರಪತಿ ಅವರಿಗೆ ವಂದನೆ ಸೂಚಿಸುವ ನಿರ್ಣಯ ಪ್ರಧಾನಿ ಉತ್ತರವಿಲ್ಲದೇ ಅಂಗೀಕಾರವಾಯಿತು.

ವರ್ಷದಿಂದ ವರ್ಷಕ್ಕೆ ಸಂಸತ್ತಿನ ಗುಣಮಟ್ಟ ಕುಸಿಯುತ್ತಲೇ ಇದೆ. ಮೊದಲು ಜನಪರ ಹೋರಾಟಗಾರರು ಸದನದಲ್ಲಿ ಇರುತ್ತಿದ್ದರು. ಈಗ ರಿಯಲ್ ಎಸ್ಟೇಟ್, ಮೈನಿಂಗ್ ಉದ್ಯಮಿಗಳು, ವಂಚಕ. ಕಾರ್ಪೊರೇಟ್ ದನಿಗಳು ಸದನದಲ್ಲಿ ತುಂಬಿದ್ದಾರೆ.ಹೀಗಾಗಿ ಅಧ್ಯಯನಶೀಲ ಸಂಸದರು ಹಾಗೂ ಶಾಸಕರು ತುಂಬಾ ಕಡಿಮೆ. ಬಿಜೆಪಿ, ಕಾಂಗ್ರೆಸ್ ಹೀಗೆ (ಎಡಪಕ್ಷಗಳನ್ನು ಹೊರತು ಪಡಿಸಿ)ಎಲ್ಲ ಪಕ್ಷಗಳಲ್ಲೂ ಇದೇ ಪರಿಸ್ಥಿತಿ. ಅಂತಲೇ ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಯೊಂದಕ್ಕೂ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಎದ್ದು ನಿಂತು ಉತ್ತರಿಸಬೇಕಾಗುತ್ತದೆ. ಆದರೂ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ , ಸತೀಶ್ ಜಾರಕಿಹೊಳಿ ಮೊದಲಾದ ಕೆಲವರು ಕಾಂಗ್ರೆಸ್‌ನ ಭರವಸೆಯ ನಾಯಕರಾಗಿದ್ದಾರೆ. ಎಲ್ಲ ಪಕ್ಷಗಳ ಸದಸ್ಯರು ಜನಪರ ಕಾಳಜಿ, ಅಧ್ಯಯನ ಶೀಲತೆ, ಸಂವಿಧಾನ ಬದ್ಧತೆಯನ್ನು ಉಳಿಸಿ,ಬೆಳೆಸಿ ಕೊಂಡರೆ ಸದನದ ಘನತೆಯೂ ಹೆಚ್ಚುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸನತ್ ಕುಮಾರ ಬೆಳಗಲಿ

contributor

Similar News