ಪಿಟಿಐ ನಿರ್ದೇಶಕರ ಮಂಡಳಿ ಅಧ್ಯಕ್ಷರಾಗಿ ಕೆ.ಎನ್. ಶಾಂತಕುಮಾರ್ ಆಯ್ಕೆ
ಕೆ.ಎನ್. ಶಾಂತಕುಮಾರ್ (Photo: PTI)
ಹೊಸದಿಲ್ಲಿ: ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ನ ಕೆ.ಎನ್. ಶಾಂತ್ ಕುಮಾರ್ ಅವರು ಶುಕ್ರವಾರ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ PTIಯ ನಿರ್ದೇಶಕರ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಾಂತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
‘ಹಿಂದೂಸ್ತಾನ್ ಟೈಮ್ಸ್’ CEO ಪ್ರವೀಣ್ ಸೋಮೇಶ್ವರ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
"ಇತ್ತೀಚೆಗೆ ವೀಡಿಯೊ ಸೇವೆಯನ್ನು ಪ್ರಾರಂಭಿಸಿದ ನಂತರ ಹೊಸ ಶೈಲಿಯಲ್ಲಿ ಪಿಟಿಐ ಮುನ್ನಡೆಯುತ್ತಿದೆ, ಈ ಸಮಯದಲ್ಲಿ ಪಿಟಿಐ ಚುಕ್ಕಾಣಿ ಹಿಡಿದಿರುವುದು ವಿಶೇಷವಾಗಿದೆ" ಎಂದು ಶಾಂತ್ ಕುಮಾರ್ ಹೇಳಿದ್ದಾರೆ.
ಕೆ.ಎನ್.ಶಾಂತಕುಮಾರ್ ಅವರು ಪ್ರಜಾವಾಣಿ, ಸುಧಾ, ಮಯೂರ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಮಾತೃಸಂಸ್ಥೆಯಾದ ‘ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್’ನ (ಟಿಪಿಎಂಎಲ್) ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ. ಮಯೂರ ಮಾಸಿಕದ ಸಂಪಾದಕರಾಗಿ ಕೆ.ಎನ್.ಶಾಂತಕುಮಾರ್ ಅವರೇ ಸೇವೆ ಸಲ್ಲಿಸುತ್ತಿದ್ದಾರೆ.
62 ವರ್ಷದ ಶಾಂತ್ ಕುಮಾರ್ ಅವರು 1983 ರಿಂದ ದಿ ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ವಹಣೆಯಲ್ಲಿ ವಿವಿಧ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್‌ನ ಅಧ್ಯಕ್ಷರೂ ಆಗಿದ್ದರು, 20 ವರ್ಷಗಳಿಗೂ ಹೆಚ್ಚು ಕಾಲ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.
ಶಾಂತ್ ಕುಮಾರ್ ಕ್ರೀಡೆ ಮತ್ತು ಛಾಯಾಗ್ರಹಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಅವರು 1988 ರಿಂದ ಮಾನ್ಯತೆ ಪಡೆದ ಛಾಯಾಗ್ರಾಹಕರಾಗಿ ಹಲವಾರು ಒಲಂಪಿಕ್ ಕ್ರೀಡೆಗಳಲ್ಲಿ ಭಾಗಿಯಾಗಿದ್ದಾರೆ.
ಶಾಂತಕುಮಾರ್ ಹಾಗೂ ಪ್ರವೀಣ್ ಸೋಮೇಶ್ವರ್ ಅವರನ್ನು ಹೊರತುಪಡಿಸಿ, ವಿಜಯ್ ಕುಮಾರ್ ಚೋಪ್ರಾ (ಪಂಜಾಬ್ ಕೇಸರಿ), ವಿನೀತ್ ಜೈನ್ (ಟೈಮ್ಸ್ ಆಫ್ ಇಂಡಿಯಾ), ಎನ್. ರವಿ (ದಿ ಹಿಂದೂ), ವಿವೇಕ್ ಗೋಯೆಂಕಾ (ಎಕ್ಸ್‌ಪ್ರೆಸ್ ಗ್ರೂಪ್), ಮಹೇಂದ್ರ ಮೋಹನ್ ಗುಪ್ತಾ (ದೈನಿಕ್ ಜಾಗರಣ್), ರಿಯಾದ್ ಮ್ಯಾಥ್ಯೂ (ಮಲಯಾಳ ಮನೋರಮಾ), ಎಂ.ವಿ. ಶ್ರೇಯಮ್ಸ್ ಕುಮಾರ್ (ಮಾತೃಭೂಮಿ), ಎಲ್. ಆದಿಮೂಲಮ್ (ದಿನಮಲರ್), ಹೊರ್ಮುಸ್ಜಿ ಎನ್. ಕಾಮಾ (ಬಾಂಬೆ ಸಮಾಚಾರ್), ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ದೀಪಕ್ ನಯ್ಯರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್, ಹಿರಿಯ ಪತ್ರಕರ್ತ ಮತ್ತು ಬಿಸಿನೆಸ್ ಸ್ಟ್ಯಾಂಡರ್ಡ್ ಮಾಜಿ ಅಧ್ಯಕ್ಷ ಟಿಎನ್ ನಿನನ್ ಮತ್ತು ಟಾಟಾ ಸನ್ಸ್ ಲಿಮಿಟೆಡ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಆರ್ ಗೋಪಾಲಕೃಷ್ಣನ್ ಅವರು ಪಿಟಿಐ ನಿರ್ದೇಶಕ ಮಂಡಳಿಯಲ್ಲಿರಲಿದ್ದಾರೆ.