ಒಂಬತ್ತು ದಿನಗಳಿಂದ ನಾಪತ್ತೆಯಾಗಿದ್ದ ಪಂಜಾಬ್ ರೈತ ಪಾಕ್ ವಶದಲ್ಲಿ!
ಅಮೃತ್‌ಪಾಲ್ ಸಿಂಗ್ PC: x.com/thetribunechd
ಭಟಿಂಡಾ: ಒಂಬತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ರೈತ ಅಮೃತ್‌ಪಾಲ್ ಸಿಂಗ್ (23) ಪಾಕಿಸ್ತಾನದ ವಶದಲ್ಲಿರುವ ಅಂಶ ಇದೀಗ ದೃಢಪಟ್ಟಿದೆ. ಸಿಂಗ್ ಅವರು ಪಂಜಾಬ್ ನ ಫಿರೋಜ್‌ಪುರದ ಪಂಜ್‌ಗ್ರೈನ್ ಗ್ರಾಮದಲ್ಲಿ ಭಾರತ- ಪಾಕಿಸ್ತಾನ ಗಡಿ ದಾಟಿ ಪಾಕ್ ಭೂಮಿ ಪ್ರವೇಶಿಸಿರಬೇಕು ಎಂದು ಶಂಕಿಸಲಾಗಿದೆ.
ಗಡಿರೇಖೆಗೆ ಸಮೀಪದ ರಾಣಾ ಪಂಜ್‌ಗ್ರೈನ್ ಗ್ರಾಮದಲ್ಲಿ ಅಮೃತ್‌ಪಾಲ್ ಸಿಂಗ್ ಕೃಷಿ ಭೂಮಿ ಹೊಂದಿದ್ದಾರೆ. ಗಡಿಬೇಲಿಯಾಚೆಗೆ ಭೂಮಿ ಹೊಂದಿರುವ ರೈತರು ಪ್ರತಿದಿನ ಒಳ ಹಾಗೂ ಹೊರಹೋಗಲು, ಕಾವಲು ಕಾಯುತ್ತಿರುವ ಬಿಎಸ್ಎಫ್ ಸಿಬ್ಬಂದಿ ಬಳಿ ಸಹಿ ಮಾಡಬೇಕಾಗುತ್ತದೆ. ಜೂನ್ 21ರಂದು ತಮ್ಮ ಹೊಲಕ್ಕೆ ಹೋಗಿದ್ದ ಅಮೃತಪಾಲ್ ವಾಪಾಸು ಬಂದಿರಲಿಲ್ಲ.
ಬಿಎಸ್ಎಫ್ ಅಧಿಕಾರಿಗಳು ಕುಟುಂಬವನ್ನು ಸಂಪರ್ಕಿಸಿ, ಇದನ್ನು ದೃಢಪಡಿಸಿಕೊಂಡಿದ್ದಾರೆ. ಆತ ನಾಪತ್ತೆಯಾಗಿರುವುದು ತಿಳಿದ ಕೂಡಲೇ ಪಾಕಿಸ್ತಾನದ ರೇಂಜರ್‌ಗಳನ್ನು ಸಂಪರ್ಕಿಸಿ, ಗುರು ಹರಸಾಹಿ ಪೊಲೀಸ್ ಠಾಣೆಯಲ್ಲಿ ಜೂನ್ 22ರಂದು ಪ್ರಕರಣ ದಾಖಲಿಸಿದ್ದರು.
ಯುವ ರೈತನ ತಂದೆ ಜುಗ್ರಾಜ್ ಸಿಂಗ್ ಪ್ರಕಾರ, ಅಮೃತ್‌ಪಾಲ್ ಅವರು ಪಾಕಿಸ್ತಾನ ಭೂಪ್ರದೇಶವನ್ನು ಪ್ರವೇಶಿಸಿದ್ದು, ಪಾಕಿಸ್ತಾನದ ಪೊಲೀಸರ ವಶದಲ್ಲಿ ಇರುವುದನ್ನು ಪಾಕಿಸ್ತಾನ ರೇಂಜರ್‌ಗಳು ಜೂನ್ 27ರಂದು ದೃಢಪಡಿಸಿದ್ದಾಗಿ ಬಿಎಫ್ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಎಸ್ಎಫ್ ಅಧಿಕಾರಿಗಳು ಪಾಕ್ ಅಧಿಕಾರಿಗಳ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಅಮೃತಪಾಲ್ ಸಿಂಗ್ ವಾಪಸ್ಸಾಗುವ ಭರವಸೆ ಇದೆ.