ಅನಂತಪುರದಲ್ಲಿ ಹೊತ್ತಿ ಉರಿದ ಖಾಸಗಿ ಬಸ್: ಸ್ವಲ್ಪದರಲ್ಲಿ ಪಾರಾದ ಪ್ರಯಾಣಿಕರು
ರಾಯಚೂರು: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ರಾಯಚೂರಿನ ಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಬೆಂಗಳೂರಿನಿಂದ ರಾಯಚೂರಿಗೆ ಬರುತ್ತಿದ್ದ ಗ್ರೀನ್ ಲೈನ್ ಕಂಪೆನಿಯ ಬಸ್ ಅನಂತಪುರ ಜಿಲ್ಲಾ ಕೇಂದ್ರದ ಸುಮಾರು 4 ಕಿ.ಮೀ. ದೂರ ತಲುಪಿದಾಗ ತಡರಾತ್ರಿ 2 ಗಂಟೆ ಸುಮಾರಿಗೆ ಬಸ್ ಹಿಂಬದಿ ಟಯರ್ ಬಳಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ರಾಯಚೂರು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಈ ವಿಷಯವನ್ನು ಚಾಲಕನ ಗಮನಕ್ಕೆ ತಂದಿದ್ದಾರೆ. ಆದರೆ ಚಾಲಕ ಅದನ್ನು ಕಡೆಗಣಿಸಿ ಚಾಲನೆ ಮುಂದುವರಿಸಿದ್ದಾನೆ. ಬಳಿಕ ಬೆಂಕಿ ಪ್ರಮಾಣ ಜಾಸ್ತಿಯಾಗಿದ್ದನ್ನು ಗಮನಿಸಿದ ನಿರ್ಮಲಾ ಬೆಣ್ಣೆ, ಚಾಲಕನನ್ನು ತರಾಟೆಗೈದು ಬಸ್ ನಿಲ್ಲಿಸಲು ಹೇಳಿದಾಗ ಸಹ ಪ್ರಯಾಣಿಕರು ಎಚ್ಚರಗೊಂಡಿದ್ದಾರೆ. ಬಳಿಕ ಚಾಲಕ ಬಸ್ಸನ್ನು ನಿಲ್ಲಿಸಿದ್ದು, ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದು ಪಾರಾಗಿದ್ದಾರೆ. ತೀವ್ರ ನಿದ್ದೆ ಮಂಪರಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ನಿರ್ಮಲಾ ಬೆಣ್ಣೆ ಮಾಹಿತಿ ನೀಡಿದ್ದಾರೆ.
ಬಸ್ಸಿನಲ್ಲಿ ರಾಯಚೂರಿನ ಸುಮಾರು 25 ಪ್ರಯಾಣಿಕರು ಸೇರಿದಂತೆ ಹಲವು ಪ್ರಯಾಣಿಕರಿದ್ದರು.
ಈ ಘಟನೆಗೆ ಚಾಲಕನ ನಿರ್ಲಕ್ಷ್ಯ ವೇ ಕಾರಣ ಬಸ್ ನ ಹಿಂಬದಿಯ ಟೈರ್ ಪಂಚರ್ ಆಗಿತ್ತು ಇದರ ಬಗ್ಗೆ ಕೆಲ ಪ್ರಯಾಣಿಕರು ತಿಳಿಸಿದರೂ ಕ್ಯಾರೆ ಎನ್ನದೇ ಹಾಗೆ ಬಸ್ ಚಾಲನೆ ಮಾಡಿದ್ದಾನೆ ಎಂದು ರಾಯಚೂರಿಗೆ ಆಗಮಿಸಿದ ಪ್ರಯಾಣಿಕರು ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಆದರೆ ಘಟನೆ ನಡೆದ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.