×
Ad

ಹಿರಿಯ ಕಾರ್ಮಿಕ ನಾಯಕ ಕಾಂ. ಅನಂತ್ ಸುಬ್ಬರಾವ್ ನಿಧನಕ್ಕೆ CPI(M) ಜಿಲ್ಲಾ ಸಮಿತಿಯ ಭಾವಪೂರ್ಣ ನಮನಗಳು

Update: 2026-01-29 11:50 IST

ರಾಯಚೂರು, ಜ. — ರಾಜ್ಯದ ಕಾರ್ಮಿಕ ಚಳವಳಿಯ ಹಿರಿಯ ನಾಯಕರು ಹಾಗೂ ಎಐಟಿಯುಸಿ ರಾಜ್ಯಾಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ ಕಾಂ. ಅನಂತ್ ಸುಬ್ಬರಾವ್ ಅವರ ನಿಧನವು ರಾಜ್ಯದ ಕಾರ್ಮಿಕ ಚಳವಳಿಗೆ ಮಾತ್ರವಲ್ಲ, ಒಟ್ಟಾರೆ ಪ್ರಜಾಪ್ರಭುತ್ವ ಚಳವಳಿಗೂ ತುಂಬಲಾರದ ನಷ್ಟವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ರಾಯಚೂರು ಜಿಲ್ಲಾ ಸಮಿತಿ ತಿಳಿಸಿದೆ.

ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಇಡೀ ಜೀವನವನ್ನು ಕಾರ್ಮಿಕರನ್ನು ಸಂಘಟಿಸುವುದು ಹಾಗೂ ಅವರ ಹಕ್ಕುಗಳಿಗಾಗಿ ಹೋರಾಡುವುದಕ್ಕೆ ಸಮರ್ಪಿಸಿದ್ದ ಕಾಂ. ಅನಂತ್ ಸುಬ್ಬರಾವ್ ಅವರು, ಸಂಘಟನೆ ಅಸಾಧ್ಯವೆನಿಸಿದ್ದ ಕಠಿಣ ಪರಿಸ್ಥಿತಿಗಳಲ್ಲಿಯೂ ಸಾರಿಗೆ ಕಾರ್ಮಿಕರನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ಕೆಎಸ್‌ಆರ್‌ಟಿಸಿ ನೌಕರರ ಫೆಡರೇಷನ್‌ನ ರಾಜ್ಯಾಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.

ವಿಮಾ ನೌಕರರಾಗಿ ವಿಮಾ ನೌಕರರ ಚಳವಳಿಯ ಮೂಲಕ ಕಾರ್ಮಿಕ ಚಳವಳಿಗೆ ಪಾದಾರ್ಪಣೆ ಮಾಡಿದ ಕಾಂ. ಅನಂತ್ ಸುಬ್ಬರಾವ್ ಅವರು, ಸಂಘಟಿತ ಹಾಗೂ ಅಸಂಘಟಿತ ವಲಯಗಳ ಎಲ್ಲಾ ರೀತಿಯ ಕಾರ್ಮಿಕರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ನವಉದಾರೀಕರಣದ ಕಾಲಘಟ್ಟದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳ ನಡುವೆ, ಇಂತಹ ಅನುಭವಿ ಮಾರ್ಗದರ್ಶಕ ನಾಯಕನ ಅಗಲಿಕೆಯಿಂದ ರಾಜ್ಯದ ಕಾರ್ಮಿಕ ಚಳವಳಿಗೆ ದೊಡ್ಡ ಹೊಡೆತ ಬಿದ್ದಿದೆ.

ಮೃತರ ಕುಟುಂಬಕ್ಕೆ, ಅಪಾರ ಬಂಧು-ಬಳಗಕ್ಕೆ, ಎಐಟಿಯುಸಿ ಹಾಗೂ ಸಿಪಿಐ ರಾಜ್ಯ ಸಮಿತಿಗೆ ಮತ್ತು ಅವರ ಅಪಾರ ಅಭಿಮಾನಿಗಳಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ರಾಯಚೂರು ಜಿಲ್ಲಾ ಸಮಿತಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News