×
Ad

'ಮಿಸ್ಟರ್ ರಾಯಚೂರು ಉತ್ಸವ -2026' ಕಿರೀಟ ಮುಡಿಗೇರಿಸಿಕೊಂಡ ಪ್ರಶಾಂತ ಕನ್ನೂರಕರ

ರಾಯಚೂರು ಜಿಲ್ಲಾ ಉತ್ಸವ: ರಾಜ್ಯಮಟ್ಟದ ಪುರುಷರ ದೇಹದಾರ್ಢ್ಯ ಸ್ಪರ್ಧೆ

Update: 2026-01-29 16:05 IST

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026 ಪ್ರಯುಕ್ತ ಬುಧವಾರ ರಾಯಚೂರಿನಲ್ಲಿ ನಡೆದ ರಾಜ್ಯ ಮಟ್ಟದ ಪುರುಷರ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ದೇಹದಾರ್ಢ್ಯ ಪಟು ಪ್ರಶಾಂತ ಕನ್ನೂರಕರ ಅವರು ಮಿಸ್ಟರ್ ರಾಯಚೂರು ಉತ್ಸವ-2026ರ ಕಿರೀಟವನ್ನು ಮುಡಿಗೇರಿಸಿಕೊಂಡರು.

ಬೆಳಗಾವಿಯ ಮತ್ತೊಬ್ಬ ದೇಹದಾರ್ಢ್ಯಪಟು ಪ್ರತಾಪ ವಿಠ್ಠಲ್ ಕಲಕುಂದ್ರಿಕರ ರನ್ನರ್ ಆಫ್ ಆಗಿ ಹೊರಹೊಮ್ಮಿದರು. ರಾಯಚೂರಿನ ವೃಷಭ್ ವಶಿಷ್ಟ ಬೆಸ್ಟ್ ಪೋಜರ್ ಸ್ಥಾನಕ್ಕೆ ತೃಪ್ತಿಪಟ್ಟರು.

ವಿಜೇತರಿಗೆ ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕಾಂದೂ, ಮಹಾನಗರ ಪಾಲಿಕೆ ಕಮಿಷನರ್ ಜುಬಿನ್ ಮೋಹಪಾತ್ರ, ರಾಯಚೂರು ಜಿಲ್ಲಾ ದೇಹದಾರ್ಢ್ಯ ಸಂಘದ ಅಧ್ಯಕ್ಷ ಮಂಜುನಾಥ ಹಾನಗಲ್, ಸಂಘದ ಸ್ಥಾಪಕ ಹಾಗೂ ಕಾರ್ಯದರ್ಶಿ ಸುಧಾಕರ ಕುರುಡಿ ಅವರು ವಿಜೇತರಿಗೆ ಟ್ರೋಫಿ, ಪದಕ, ಪ್ರಮಾಣ ಪತ್ರ ಮತ್ತು ಕ್ರಮವಾಗಿ ಪ್ರಥಮ ಬಹುಮಾನ 30,000 ರೂ, ದ್ವಿತೀಯ ಬಹುಮಾನ 10,000 ರೂ ಹಾಗೂ ತೃತೀಯ ಬಹುಮಾನ 5000 ರೂ.ಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಯಚೂರು ಜಿಲ್ಲಾ ದೇಹದಾರ್ಢ್ಯ ಸಂಘ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ನಗರದ ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಈ ದೇಹದಾರ್ಢ್ಯ ಸ್ಪರ್ಧೆ ನಡೆಯಿತು.

ಗಂಗಾಧರ ಎಂ., ಶಂಕರ ಪಿಲ್ಲೆ, ಮೈಬೂಬ್, ಸುಧಾಕರ, ಸುನೀಲ್ ರಾವುತ್, ಕಿರಣಕುಮಾರ, ಸಬರುದ್ದೀನ್ ಪಾಶಾ ಮತ್ತಿತರರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

55 ಕೆ.ಜಿ., 60 ಕೆ.ಜಿ.,65 ಕೆ.ಜಿ.,70 ಕೆ.ಜಿ., 75 ಕೆ.ಜಿ.,80 ಕೆ.ಜಿ. ಮತ್ತು 80+ ಕೆ.ಜಿ ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಪ್ರತಿ ವಿಭಾಗದಲ್ಲಿ ವಿಜೇತರಾದ ತಲಾ ಐದು ಸ್ಪರ್ಧಾಳುಗಳಿಗೆ ಕ್ರಮವಾಗಿ 15,000, 5000, 4000, 3000 ಮತ್ತು 2000 ರೂ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಪದಕ ನೀಡಿ ಸತ್ಕರಿಸಲಾಯಿತು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಡಿವೈಎಸ್ಪಿ ಶಾಂತವೀರ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ, ತಹಶೀಲ್ದಾರ್ ಸುರೇಶ ವರ್ಮಾ, ಅಮರೇಶ ಬಿರಾದಾರ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಿ, ಡಿಎಚ್ ಒ ಡಾ.ಸುರೇಂದ್ರ ಬಾಬು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ ಮತ್ತಿತರರು ಭಾಗವಹಿಸಿದ್ದರು.

ಡಾ.ದಂಡಪ್ಪ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News