ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಮತ್ತೊಂದು ತಿರುವು : ಪತಿ ಸೇರಿ 10 ಜನರ ವಿರುದ್ದ ಬಾಲ್ಯ ವಿವಾಹ, ಪೋಕ್ಸೋ ಕೇಸ್ ದಾಖಲು
ರಾಯಚೂರು: ಜಿಲ್ಲೆಯ ಗುರ್ಜಾಪುರ ಬ್ಯಾರೇಜ್‌ನಲ್ಲಿ ಪತ್ನಿಯೇ ಪತಿಯನ್ನು ನದಿಗೆ ತಳ್ಳಿದ ಘಟನೆಗೆ ಸಂಬಂಧಿಸಿದಂತೆ ಬಾಲ್ಯ ವಿವಾಹ ನಡೆದ ಅಂಶ ಬಯಲಿಗೆ ಬಂದ ಬಳಿಕ ಈಗ ಅಪ್ರಾಪ್ತೆಯನ್ನು ಮದುವೆಯಾದ ಕಾರಣ ಪತಿ ತಾತೆಪ್ಪ ಸೇರಿ 10 ಜನರ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಾಯಚೂರು ತಾಲೂಕಿನ ಶಕ್ತಿನಗರದ ಪತಿ ತಾತಪ್ಪ ಅವರ ತಾಯಿ ಗದ್ದೆಮ್ಮ, ಅಪ್ರಾಪ್ತೆಯ ತಾಯಿ ಸುಮಂಗಲ, ಗೀತಾ, ಆಂಜಿನೇಯ್ಯ, ಗದ್ದೆಪ್ಪ, ರೇಣುಕಾ, ಸದಾನಂದ, ಮಹಾದೇವಿ ಹಾಗೂ ರಾಮನಗೌಡ ಅವರ ವಿರುದ್ಧ ದೇವಸುಗೂರು ಗ್ರಾಮ ಪಂಚಾಯತ್ ಪಿಡಿಓ ರವಿಕುಮಾರ ನೀಡಿದ ದೂರಿನಡಿ ಪ್ರಕರಣ ದಾಖಲಾಗಿದೆ.
ಬಾಲಕಿಯನ್ನು ಮದುವೆ ಮಾಡಿಕೊಂಡಿರುವುದು ದೃಢಪಟ್ಟಿರುವುದರಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗೆ ಪತ್ರ ಬರೆದಿದ್ದರು.
ಶಕ್ತಿನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಏ.18ರಂದು ಮದುವೆ ನಡೆದಿದ್ದು, ವಿವಾಹ ನಡೆದ ಸ್ಥಳ ರಾಯಚೂರು ವ್ಯಾಪ್ತಿಗೆ ಬರುವುದರಿಂದ ವಿವಾಹ ನೇರವೇರಿಸಿದವರ ಮತ್ತು ಭಾಗವಹಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಚೇರಿಗೆ ವರದಿ ನೀಡುವಂತೆ ತಿಳಿಸಿದ್ದರು. ಇಲಾಖೆ ಅಧಿಕಾರಿಗಳು ಪತ್ನಿಯ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅಪ್ರಾಪ್ತೆ ಎನ್ನುವುದು ಬಯಲಾಗಿದ್ದು, ಪತಿ ಹಾಗೂ ಕುಟುಂಬಸ್ಥರು ಬಾಲ್ಯ ವಿವಾಹವನ್ನು ಮಾಡಿರುವುದು ಬಯಲಾಗಿದೆ. ಇಷ್ಟೇ ಅಲ್ಲದೇ ಕೆಲ ದಿನಗಳ ಕಾಲ ಅಪ್ರಾಪ್ತೆಯ ಜೊತೆ ಕಾಲ ಕಳೆದಿದ್ದರಿಂದ ಉಭಯ ಕುಟುಂಬಸ್ಥರ ವಿರುದ್ಧ ಕೇವಲ ಬಾಲ್ಯ ವಿವಾಹ ನಿಷೇಧವಷ್ಟೇ ಅಲ್ಲದೇ ಫೋಕ್ಸೋ ಕಾಯ್ದೆಯಡಿಯಲ್ಲಿಯೂ ಕೇಸ್ ದಾಖಲಿಸಿರುವ ಪೊಲೀಸರು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.