ರಾಜ್ಯದಲ್ಲಿ ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ : ನಿಖಿಲ್ ಕುಮಾರಸ್ವಾಮಿ
ರಾಯಚೂರು: ರಾಜ್ಯದಲ್ಲಿ ಅನುದಾನದ ಕುರಿತು ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ರಾಜ್ಯದಲ್ಲಿ ಯಾವುದೇ ಕೆಲಸ ನೇರವಾಗಿ ಆಗುತ್ತಿಲ್ಲ, ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕಳವಳಕಾರಿ ಸಂಗತಿ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸೆಪ್ಟೆಂಬರ್‌ನಲ್ಲಿ ರಾಜಕೀಯದಲ್ಲಿ ಹಾಗೂ ಮುಂದಿನ ಚುನಾವಣೆಗಳಲ್ಲಿ ಸುನಾಮಿ ಏಳಲಿದೆ. ಇದು ಸ್ವಪಕ್ಷದಿಂದಲೂ ಘೋಷಣೆಯಾಗಿದೆ. ಕಾಂಗ್ರೆಸ್‌ನ ಎಲ್ಲಾ ಶಾಸಕರಲ್ಲಿ ದಿಗಿಲು ಮೂಡಿಸಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಸರಕಾರ ಜನರನ್ನು ಗ್ಯಾರಂಟಿ ಯೋಜನೆಯ ಪರದೆ ಹಾಕಿ ವಂಚಿಸುತ್ತಿದೆ. ರಾಜ್ಯ ಸರಕಾರಸಾಲದ ಸುಳಿಗೆ ಸಿಲುಕಿದೆ. ಹಿಂದೆ ಇದ್ದ ಸಿದ್ದರಾಮಯ್ಯ ಹಾಗೂ ಈಗಿರುವ ಸಿಎಂ ಸಿದ್ದರಾಮಯ್ಯ ಅವರಲ್ಲಿ ಬದಲಾವಣೆ ಆಗಿದೆ. ರಾಜ್ಯದ ಜನರೂ ಕೂಡ ಒಪ್ಪಿಕೊಳ್ಳಲೇಬೇಕಾದ ಸಂಗತಿಯಾಗಿದೆ ಎಂದು ಹೇಳಿದರು.
ಜನರೊಂದಿಗೆ ಜನತಾದಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳು ಹಾಗೂ ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ಸದಸ್ಯತ್ವ ನೊಂದಣಿ ಮಾಡಲು ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕರೆಗಳು ಬಂದಿದ್ದು, ನೊಂದಣಿ ಪ್ರಕ್ರಿಯೆಯೂ ನಡೆದಿದೆ. ತುಮಕೂರು ಜಿಲ್ಲೆಯಿಂದ ಪ್ರವಾಸ ಆರಂಭಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ರಾಯಚೂರು ಜಿಲ್ಲೆಗೆ ಪ್ರವಾಸ ನಡೆಸಲಾಗುತ್ತಿದೆ ಎಂದರು.
ಪಕ್ಷ ಸಂಘಟನೆ, ಪಕ್ಷವನ್ನು ಬಲವರ್ಧನೆ ಮಾಡುವಂತದ್ದು ಪ್ರವಾಸದ ಮುಖ್ಯ ಉದ್ದೇಶವಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ಧತೆಗಳನ್ನು ಕೈಗೊಳ್ಳಬೇಕಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸುವಂತೆ ಸರಕಾರಕ್ಕೆ ಕೋರ್ಟು ಛೀಮಾರಿ ಹಾಕಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು 55 ಸಾವಿರ ಕೋಟಿ ರೂ. ಖರ್ಚು ಮಾಡುತ್ತೀರಿ, ರಾಜ್ಯದಲ್ಲಿ ಅಭಿವೃದ್ಧಿ ಕೇಳೋದೇ ಬೇಡ, ಕೆಕೆಆರ್‌ಡಿಬಿಗೆ 13,000 ಕೋಟಿ ರೂ.ನೀಡಲಾಗಿದೆ ಎಂದು ಸಿದ್ದರಾಮಯ್ಯ ಇತ್ತೀಚಿಗೆ ಹೇಳಿದ್ದು ,ಅದರ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಇದಕ್ಕೂ ಮೊದಲು ರಾಯಚೂರಿನ ಕೃಷಿ ವಿವಿಯಿಂದ ಗಂಜ್ ಕಲ್ಯಾಣ ಮಂಟಪದ ವರೆಗೆ ನಿಖಿಲ್ ಕಾರ್ಯಕರ್ತರಿಂದಿಗೆ ಬೈಕ್ ರ್‍ಯಾಲಿ ನಡೆಸಿದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಹನಮಂತಪ್ಪ ಅಲ್ನೋಡ್, ಮಹಾಂತೇಶ ಪಾಟೀಲ್ ಅತ್ತನೂರು, ನೇಮಿ ಚಂದ್ರಪ್ಪ, ಲಕ್ಷ್ಮೀಪತಿ ಗಾಣದಾಳ, ದೇವೇಂದ್ರರೆಡ್ಡಿ ಸರ್ಜಾಪೂರ, ಸಣ್ಣ ನರಸಿಂಹ ನಾಯಕ, ಎನ್.ಶಿವಶಂಕರ, ಬಿ.ತಿಮ್ಮಾರೆಡ್ಡಿ, ರಾಮಕೃಷ್ಣ, ನರಸಪ್ಪ ಆಶಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.