ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿರುವ ಸಚಿವ ಮಹಾದೇವಪ್ಪ ವಿರುದ್ಧ ಮಾ.3 ರಂದು ಹೋರಾಟ : ಎಸ್.ಮಾರೆಪ್ಪ
ರಾಯಚೂರು : ನಾಗಮೋಹನದಾಸ್ ವರದಿ ಜಾರಿಗೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ ಸಮಾಜಕಲ್ಯಾಣ ಇಲಾಖೆಯ ಸಚಿವ ಎ.ಚ್.ಸಿ.ಮಹಾದೇವಪ್ಪ ವಿರುದ್ಧ ಮಾ. 3 ರಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮತಿ ಪ್ರಧಾನ ಸಂಚಾಲಕ ಎಸ್ ಮಾರೆಪ್ಪ ವಕೀಲರು ಹೇಳಿದರು.
ಅವರಿಂದು ಮಾದ್ಯಮಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ರಾಜ್ಯ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ನಾಗಮೋಹನದಾಸ್ ಪರಿಶೀಲನಾ ಸಮಿತಿ ವರದಿ ನೀಡಲು ಮಾ.1ರ ಗಡುವು ಇದ್ದು, ಆದರೆ ಇಲಾಖೆಯ ಅಧೀನ ಅಧಿಕಾರಿಗಳು ಅಗತ್ಯ ಮಾಹಿತಿ ನೀಡುತ್ತಿಲ್ಲ ಎಂದು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ಸರ್ಕಾರಕ್ಕೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಆಯೋಗದ ಕಾರ್ಯಸೂಚಿಗಳು ನನೆಗುದಿಗೆ ಬೀಳುವಂತಾಗಿದೆ ಎಂದು ದೂರಿದರು.
ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಜಾರಿಯಾಗುವವರೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನು ನೇಮಕ ಮಾಡಬಾರದು ಎಂದು ಪ್ರತಿಭಟನೆಗಳು ಮಾಡಿದ ಬಳಿಕ ಸರ್ಕಾರ ಅದಕ್ಕೆ ಸ್ಪಂದಿಸಿ ನೇಮಕ ಪ್ರಕ್ರಿಯೆ ಮುಂದೂಡಿತ್ತು. ಆದರೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹಾದೇವಪ್ಪ ನವರು ಹುದ್ದೆಗಳ ಭರ್ತಿಮಾಡಲು ಸಚಿವ ಸಂಪುಟದಲ್ಲಿ ಬ್ಯಾಕ್ ಲಾಗ್ ಸಾವಿರರು ಹುದ್ದೆಗಳನ್ನು ಭರ್ತಿ ಮಾಡುವ ತೀರ್ಮಾನ ಮಾಡಿರುವುದು ಖಂಡನೀಯ ಎಂದು ದೂರಿದರು.
ಈ ಸಂದರ್ಭದಲ್ಲಿ ಹೇಮರಾಜ್ ಆಸ್ಕಿಹಾಳ, ನರಸಿಂಹಲು, ತಾಯಪ್ಪ, ಲಕ್ಷ್ಮಣ, ಸೇರಿದಂತೆ ಉಪಸ್ಥಿತರಿದ್ದರು.