ರಾಯಚೂರು| ವೈಟಿಪಿಎಸ್ ನಲ್ಲಿ ಅಗ್ನಿ ಅವಘಡ; ಯಂತ್ರೋಪಕರಣಗಳಿಗೆ ಹಾನಿ
ರಾಯಚೂರು: ರಾಯಚೂರು ತಾಲೂಕಿನ ಯರಮರಸ್ ಬಳಿಯಲ್ಲಿರುವ ವೈಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ನಿನ್ನೆ ರಾತ್ರಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಕಲ್ಲಿದ್ದಲು ಪೂರೈಕೆ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಘಟಕದ ಕೆಲವು ಯಂತ್ರೋಪಕರಣಗಳು ಬೆಂಕಿಯ ಕೆನ್ನಾಲಿಗೆ ಸಿಲುಕಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ನಗರದ ಹೊರವಲಯದಲ್ಲಿರುವ ಘಟಕದಲ್ಲಿ ಸಂಭವಿಸಿದ ಈ ದುರಂತದಲ್ಲಿ ಲಕ್ಷಾಂತರ ರೂ.ಮೌಲ್ಯದ ಯಂತ್ರೋಪಕರಣಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಘಟಕದಲ್ಲಿದ್ದ ಸಿಬ್ಬಂದಿ ಭಯದಿಂದ ಓಡಿಹೋದರು. ಬಳಿಕ ಘಟಕದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಿಯಂತ್ರಣಕ್ಕೆ ಮುಂದಾದರು.
ಬೆಂಕಿ ಅವಘಡಕ್ಕೆ ಘಟಕದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಜವಾಬ್ದಾರಿಯುತ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.