×
Ad

ರಾಯಚೂರಿನಲ್ಲಿ ಭಾರಿ ಮಳೆ: ಜಲಾವೃತ ಪ್ರದೇಶಕ್ಕೆ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಭೇಟಿ, ಪರಿಶೀಲನೆ

Update: 2025-07-22 19:26 IST

ರಾಯಚೂರು: ಜಿಲ್ಲೆಯಲ್ಲಿ ಜು.21ರಂದು ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಜಲಾವೃತಗೊಂಡ ವಿವಿಧ ಪ್ರದೇಶಗಳಿಗೆ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಜು.22ರಂದು ಭೇಟಿ ನೀಡಿ ಪರಿಶೀಲಿಸಿದರು.

ವಿದ್ಯಾ ಭಾರತಿ ಶಾಲೆಯ ಮಾರ್ಗದಲ್ಲಿರುವ ರೈಲ್ವೆ ಕೆಳ ಸೇತುವೆ ಬಳಿ ಭಾರೀ ಪ್ರಮಾಣದಲ್ಲಿ ಮಳೆ ನೀರು ನಿಂತು ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿರುವುದನ್ನು ಆಯುಕ್ತರು ಖುದ್ದು ವೀಕ್ಷಣೆ ನಡೆಸಿದರು. ಈ ಕೆಳ ಸೇತುವೆ ಬಳಸಿ ನಿತ್ಯ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುತ್ತವೆ. ನಿಜಲಿಂಗಪ್ಪ ಕಾಲೊನಿ, ವಿದ್ಯಾ ಭಾರತಿ ಶಾಲೆ ಸೇರಿದಂತೆ ಬೇರೆ ಬೇರೆ ಕಾಲೊನಿಗೆ ತೆರಳಲು ಇದೆ ಪ್ರಮುಖ ಮಾರ್ಗವಾಗಿದೆ. ಮಳೆಯಾದಾಗೊಮ್ಮೆ ಇಲ್ಲಿ ನೀರು ನಿಂತು ಸುಗಮವಾಗಿ ಸಂಚರಿಸಲು ಸಾಕಷ್ಟು ತೊಂದರೆಯಾಗುತ್ತಿದೆ ಎಂದು ದ್ವಿಚಕ್ರ ವಾಹನ ಸವಾರರು ಆಯುಕ್ತರಿಗೆ ತಿಳಿಸಿದರು.

ನಿಮ್ಮ ಸಮಸ್ಯೆ ಏನೆಂದು ಅರ್ಥವಾಗಿದೆ. ಸದ್ಯಕ್ಕೆ ಪಂಪ್ ಮೂಲಕ ನೀರನ್ನು ಬೇರೆಡೆ ಸಾಗಿಸುವ ಕಾರ್ಯ ನಡೆದಿದೆ. ಈ ಮಾರ್ಗವಾಗಿ ಸಂಚರಿಸುವ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ಹಾಗೆ ವಾರದೊಳಗೆ ಇದನ್ನು ಸರಿಪಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ರಾಯಚೂರು ನಗರದ ಕೆಲ ಪ್ರದೇಶಗಳಲ್ಲಿ ಹತ್ತಾರು ವರ್ಷಗಳಿಂದ ಒಳ ಚರಂಡಿಗಳು ಕಸ ತುಂಬಿಕೊಂಡಿವೆ. ಇಲ್ಲಿ ಪ್ಲಾಸ್ಟಿಕ್ ತುಂಬಿ ನೀರು ಚಲಿಸದಂತಾಗಿದೆ. ನಗರದ ಯಾವುದೇ ಕಡೆಗಳಲ್ಲಿ ಮಳೆ ನೀರು ನಿಲ್ಲದೇ ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ಒಳಚರಂಡಿ ಶುಚಿತ್ವ ಕಾರ್ಯವನ್ನು ಈ ಕೂಡಲೇ ಆರಂಭಿಸಲಾಗುವುದು ಎಂದು ಇದೆ ವೇಳೆ ಆಯುಕ್ತರು ತಿಳಿಸಿದರು.

ಸಾರ್ವಜನಿಕರಲ್ಲಿ ಆಯುಕ್ತರ ಮನವಿ:

ಅಂಗಡಿ ಮಾಲಕರು ಮತ್ತು ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಪ್ಲಾಸ್ಟಿಕ್ ಸೇರಿದಂತೆ ಯಾವುದೇ ಕಸವನ್ನು ಪಾಲಿಕೆಯ ಕಸ ಎತ್ತುವ ವಾಹನಗಳಿಗೆ ಹಾಕಬೇಕು. ಕೊಳಚೆ ನೀರನ್ನು ಯಾರು ಸಹ ನೇರವಾಗಿ ಡ್ರೈನೇಜ್ ಪೈಪಗೆ ಬಿಡಬಾರದು ಎಂದು ಇದೆ ವೇಳೆ ಆಯುಕ್ತರು ರಾಯಚೂರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News