ನಾನು ಸಚಿವ, ಪರಿಷತ್ ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ: ಎನ್.ಎಸ್.ಭೋಸರಾಜು
ರಾಯಚೂರು: "ನಾನು ಸಚಿವ ಸ್ಥಾನ, ವಿಧಾನ ಪರಿಷತ್ ನ ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಈ ಕುರಿತು ಆರು ತಿಂಗಳ ಹಿಂದೆಯೇ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ" ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದ್ದಾರೆ.
ಅವರು ನಗರದ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದ ಸಂಪುಟಕ್ಕೆ 34 ಸಚಿವರು ಸೇರಲು ಸಾಧ್ಯ. ಹೀಗಾಗಿ ಪಕ್ಷದ ಹೈಕಮಾಂಡ್ ಜಾತಿ, ಧರ್ಮ ಮತ್ತು ಪ್ರದೇಶ ಎಲ್ಲವನ್ನು ಪರಿಗಣಿಸಿ ಸಚಿವ ಸ್ಥಾನ ನೀಡಿದೆ ಎಂದು ಹೇಳಿದರು.
ರಾಯಚೂರು, ಯಾದಗಿರಿ ಇನ್ನಿತರ ಹಲವು ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿಲ್ಲ. ನಮಗೆ ಸಚಿವ ಸ್ಥಾನ ದೊರೆತಿಲ್ಲ ಎನ್ನುವ ಅಸಮಾಧಾನ ಇಲ್ಲ. ಸಚಿವ ಸ್ಥಾನ ವಿಷಯಕ್ಕೆ ಸಂಬಂಧಿಸಿದಂತೆ ನಾನು ಯಾರನ್ನು ವಿರೊಧಿಸಿಲ್ಲ. ಇತರರಿಗೆ ಸಚಿವ ಸ್ಥಾನ ನೀಡದಂತೆ ತಡೆಯುವ ವ್ಯಕ್ತಿತ್ವ ನನ್ನದಲ್ಲ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಶಾಸಕರು ಒಂದು ಅವಕಾಶವನ್ನು ಕೇಳಿ ಮುಖಂಡರ ಬಳಿ ನಿಯೋಗ ತೆರಳಿದ್ದೆವು. ಸಂದರ್ಭಗಳಿಗೆ ಅನುಗುಣವಾಗಿ ನಮಗೆ ಈ ಸಲ ಸಚಿವ ಸ್ಥಾನ ದೊರೆತಿಲ್ಲ. ಮಂತ್ರಿ ಸ್ಥಾನ ದೊರೆತಿಲ್ಲ ಎಂದ ಮಾತ್ರಕ್ಕೆ ಜಿಲ್ಲೆಗೆ ಗೌರವ ನೀಡಲಾಗಿಲ್ಲ ಎಂದು ಅರ್ಥೈಸಬೇಕಾಗಿಲ್ಲ. ಜಿಲ್ಲೆಯವರು ಯಾರು ಸಚಿವರು ಇಲ್ಲದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳ ಲಾಗುತ್ತದೆ. ಜಿಲ್ಲೆಯ ಅಭಿವೃದ್ಧಿಯ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರ ಸಂಪೂರ್ಣ ಗಮನ ನೀಡಲಿದೆ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸರ್ಕಾರದಿಂದ ಎಲ್ಲಾ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಎನ್.ಎಸ್.ಭೋಸರಾಜು ಹೇಳಿದರು.