ಕೇಂದ್ರದಿಂದ ಜನರ ಮೇಲೆ ಆರ್ಥಿಕ ಹೊರೆ : ಸಂಸದ ಜಿ. ಕುಮಾರ ನಾಯಕ ಆರೋಪ
ರಾಯಚೂರು: ಕೇಂದ್ರದ ಬಿಜೆಪಿ ಸರಕಾರ ಕಾಯ್ದೆಗಳಿಗೆ ತಿದ್ದುಪಡಿ ಮಸೂದೆ ಮಂಡನೆ ಹೆಸರಿನಲ್ಲಿ ಜನರ ಖಾಸಗಿತನಕ್ಕೆ ಧಕ್ಕೆ ಹಾಗೂ ಆರ್ಥಿಕ ಹೊರೆಯಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ತನ್ನ ಉತ್ತರದಾಯಿತ್ವವನ್ನು ಮರೆತಿದೆ ಎಂದು ಸಂಸದ ಜಿ. ಕುಮಾರ ನಾಯಕ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲಿ ಸದಸ್ಯರು ಎತ್ತುತ್ತಿರುವ ಆಕ್ಷೇಪಣೆಗಳಿಗೆ ಸಮರ್ಪಕ ಉತ್ತರ ನೀಡದೆ ವಿಷಯಗಳನ್ನು ಮರೆಮಾಚುತ್ತಿದ್ದಾರೆ ಎಂದು ಅವರು ದೂರಿದರು.
ಸಂಸತ್ ಅಧಿವೇಶನ ಆರಂಭವಾದಾಗಿನಿಂದ ವಿದ್ಯಾರ್ಥಿ ಹಾಗೂ ಯುವಜನರ ಮೇಲೆ ನಡೆದ ದಾಳಿಯ ಕುರಿತು ಚರ್ಚಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಿಲ್ಲ. ಯುವಕರು ನಡೆಸಿದ ಹೋರಾಟ ಏಕಾಏಕಿ ನಡೆದದ್ದಲ್ಲ. ಹಲವು ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಸಂಸತ್ ಮುತ್ತಿಗೆ ನಡೆಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ನಡೆದ ಘಟನೆ ಅಮಾನವೀಯವಾಗಿದ್ದರೂ, ಕೇಂದ್ರ ಗೃಹ ಸಚಿವರು ಈ ಕುರಿತು ಉತ್ತರ ನೀಡಲು ಮುಂದಾಗಿಲ್ಲ ಎಂದರು.
ಗದ್ದಲದ ನಡುವೆಯೇ ಏಳು ಮಸೂದೆಗಳಿಗೆ ಅಂಗೀಕಾರ ನೀಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಬೆಳವಣಿಗೆಯಾಗಿದೆ. ತೆರಿಗೆ ಸೇರಿದಂತೆ ವಿವಿಧ ಕಾನೂನುಗಳ ತಿದ್ದುಪಡಿ ಹಾಗೂ ಬ್ಯಾಂಕರ್ಸ್ ಬುಕ್ಸ್ ಸಾಕ್ಷ್ಯ ಕಾಯ್ದೆಗೆ ಸಂಬಂಧಿಸಿದ ಬದಲಾವಣೆಗಳನ್ನು ಸರ್ಕಾರ ಒತ್ತಡದ ನಡುವೆ ಅಂಗೀಕರಿಸಿದೆ ಎಂದು ಆರೋಪಿಸಿದರು.
ಡಿಜಿಟಲೀಕರಣದ ಬಗ್ಗೆ ಪ್ರಚಾರ ಪಡೆಯುತ್ತಿರುವ ಕೇಂದ್ರ ಸರ್ಕಾರ, ಯುಪಿಐ ಸೇರಿದಂತೆ ಇತರ ಡಿಜಿಟಲ್ ಆರ್ಥಿಕ ವಹಿವಾಟುಗಳ ಮೇಲೆ ತೆರಿಗೆ ವಿಧಿಸಲು ಮುಂದಾಗಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಜನರ ಮೇಲೆ ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜ, ಕೆ. ಶಾಂತಪ್ಪ, ಜಯವಂತರಾವ್ ಪತಂಗೆ, ಜಿ. ಶಿವಮೂರ್ತಿ, ಎನ್. ಶ್ರೀನಿವಾಸರೆಡ್ಡಿ, ಅಮರೇಗೌಡ ಹಂಚನಾಳ, ರಾಜಶೇಖರ ನಾಯಕ, ಆಂಜಿನಯ ಕುರುಬದೊಡ್ಡಿ, ನರಸಿಂಹಲು ಮಾಡಗಿರಿ, ಯುವ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ ಗಟ್ಟು, ಸುಧೀಂದ್ರ ಜಹಾಗೀರದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.