Raichur | ಮಾದಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದೆ ಕಾಂಗ್ರೆಸ್‌ನಿಂದ ಅನ್ಯಾಯ : ಜೆ.ಎಂ.ಮೌನೇಶ
ರಾಯಚೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಮಾದಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಮಾದಾರ ಚೆನ್ನಯ್ಯ ಸೇವಾ ಸಮಿತಿ ಅಧ್ಯಕ್ಷ ಜೆ.ಎಂ. ಮೌನೇಶ ಎಚ್ಚರಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಒಬ್ಬರೂ ಮಾದಿಗ ಸಮಾಜದ ಶಾಸಕರು ಅಥವಾ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಿಲ್ಲ. ಆದರೆ ಬಲಗೈ ಸಮುದಾಯದ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಮಾದಿಗ ಸಮಾಜಕ್ಕೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಹುಸಂಖ್ಯಾತರಾಗಿರುವ ಮಾದಿಗ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡದೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಕೂಡಲೇ ಸಚಿವ ಸ್ಥಾನ ನೀಡುವ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಸಮಾಜ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಸಮೀಪದ ಹದ್ದಿನಾಳ ಗ್ರಾಮದಲ್ಲಿ ನಡೆದ ಭೂಮಾನಂದ ಕೊಲೆ ಘಟನೆ ಖಂಡನೀಯವಾಗಿದೆ. ಮಾದಿಗ ಸಮುದಾಯದ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯ ಹಾಗೂ ಕೊಲೆಗಳು ನಡೆಯುತ್ತಿವೆ. ಈ ಹಿಂದೆ ಮಾನ್ವಿಯಲ್ಲಿ ಪ್ರಸಾದ್ ಎಂಬ ಯುವಕನ ಕೊಲೆ ನಡೆದಿತ್ತು. ಇದೀಗ ಹದ್ದಿನಾಳದಲ್ಲೂ ಇಂತಹ ಘಟನೆ ನಡೆದಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾದಿಗ ಸಮಾಜಕ್ಕೆ ರಕ್ಷಣೆ ಇಲ್ಲದಂತಾಗಿದೆ. ಭೂಮಾನಂದ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ, ಪರಿಹಾರ ಹಾಗೂ ಉದ್ಯೋಗ ಕಲ್ಪಿಸಬೇಕು ಎಂದು ಮೌನೇಶ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಭೀಮಣ್ಣ ಮಂಚಾಲ, ಜೆ.ನರಸಿಂಹಲು, ಆಂಜಿನೇಯ್ಯ ಸಿಯಾತಲಾಬ್, ಹನುಮೇಶ ದಂಡು, ಶಿವು ಭಂಡಾರಿ, ವೆಂಕಟೇಶ ಸಗಮಕುಂಟಾ, ಆಂಜಿನೇಯ ಮಂಡ್ಲಗೇರಾ, ಆರ್.ಶೇಖರ ಇದ್ದರು.