ವೇತನ ಸಿಗದೆ ಮಕ್ಕಳ ಸಹಾಯವಾಣಿ ಸಿಬ್ಬಂದಿ ಪರದಾಟ : ಆ.11ಕ್ಕೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಪ್ರತಿಭಟನೆ
ರಾಯಚೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗೆ ಸುಮಾರು 10 ತಿಂಗಳಿಂದ ವೇತನ ಪಾವತಿಸಬೇಕು ಮತ್ತು ಹಲವು ವರ್ಷಗಳಿಂದ ಬಾಕಿ ಇರುವ ಪ್ರಯಾಣ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಆಗಸ್ಟ್ 11ರಂದು ಸಿಐಟಿಯು ನೇತೃತ್ವದಲ್ಲಿ ಅನಿರ್ದಿಷ್ಟವಧಿ ಧರಣಿ ನಡೆಸಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ವಾತ್ಸಲ್ಯ ಮಾರ್ಗಸೂಚಿಯನ್ವಯ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ದಿನದ 24 ಗಂಟೆಗಳ ಕಾಲ ಮಕ್ಕಳ ಸಹಾಯವಾಣಿ ಸೇವೆ ಕೈಗೊಳ್ಳುವ ಸಿಬ್ಬಂದಿಗೆ ಕಳೆದ 10 ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ಖಾಯಮೇತರರ ನೌಕರರ ಒಕ್ಕೂಟದ (ಸಿಐಟಿಯು) ನೇತೃತ್ವದಲ್ಲಿ ಸಿಬ್ಬಂದಿಗಳು ಆ.11ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಬಾಲನ್ಯಾಯ(ಮಕ್ಕಳ ರಕ್ಷಣೆ ಮತ್ತು ಪಾಲನೆ) ಕಾಯ್ದೆ 2015 ತಿದ್ದುಪಡಿ ಕಾಯ್ದೆ 2021ರನ್ವಯ ಸೆಪ್ಟೆಂಬರ್ 2023 ರಿಂದ ಕರ್ನಾಟಕ ಸರಕಾರ ಮಕ್ಕಳ ಸಹಾಯವಾಣಿ 1098ನ್ನು ಏಕೀಕರಿಸಿ ರಾಜ್ಯದಲ್ಲಿ ಕಾರ್ಯಾರಂಭಿಸುತ್ತಿದ್ದು, ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿ ಚೈಲ್ಡ್ ಲೈನ್ ನಲ್ಲಿ 300ಕ್ಕೂ ಹೆಚ್ಚು ವಿದ್ಯಾವಂತ ಯುವಕ, ಯುವತಿಯರನ್ನು ಬಾಹ್ಯಮೂಲ ಏಜೆನ್ಸಿಗಳಿಂದ ಸೆಪ್ಟೆಂಬರ್ 2023ರಿಂದ ದುಡಿಸಿಕೊಳ್ಳಲಾಗುತ್ತಿದೆ. ರಾಯಚೂರಿನಲ್ಲಿ 8 ಜನ ಕೆಲಸ ಮಾಡುತ್ತಿದ್ದಾರೆ.
ಮಕ್ಕಳ ಸಹಾಯವಾಣಿ ಸಿಬ್ಬಂದಿಯ 10 ತಿಂಗಳ ಬಾಕಿ ವೇತನ ತಕ್ಷಣ ಪಾವತಿ ಮಾಡಬೇಕು. ಹಲವು ವರ್ಷದಿಂದ ಬಾಕಿ ಇರುವ ಪ್ರಯಾಣ ಭತ್ಯೆ ಬಿಡುಗಡೆ ಮಾಡಬೇಕು, SNA-SPARSH ತಂತ್ರಾಂಶದಿಂದ ಉಂಟಾಗುತ್ತಿರುವ ತೊಂದರೆ ಸರಿಪಡಿಸಿ ಸಿಬ್ಬಂದಿಗೆ ತ್ವರಿತವಾಗಿ ವೇತನ ಪಾವತಿಸಲು ಕ್ರಮವಹಿಸಬೇಕು. ಮಕ್ಕಳ ಸಹಾಯವಾಣಿಯ ಎಲ್ಲಾ ಸಿಬ್ಬಂದಿ ಅತ್ಯಂತ ಕಡಿಮೆ ಸಂಬಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ವೇತನ ಪರಿಷ್ಕರಣೆ ಮಾಡಬೇಕು. ಪ್ರತಿ ತಿಂಗಳು ತಪ್ಪದೇ ವೇತನ ಪಾವತಿ ಖಾತ್ರಿಪಡಿಸಬೇಕು. ರಾಜ್ಯ ಸರ್ಕಾರ ಮೊದಲು ವೇತನಪಾವತಿಗೆ ಅನುದಾನ ಒದಗಿಸಬೇಕು ಎಂದು ಸಿಐಟಿಯು ಪ್ರಕಟಣೆಯಲ್ಲಿ ಆಗ್ರಹಿಸಿದೆ.