ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಕೆ ; ಬೇಸಿಗೆ ಬೆಳೆಗೆ ನೀರು ಕೊಡದಿದ್ದರೆ ಹೋರಾಟ: ಚಾಮರಸ ಮಾಲಿ ಪಾಟೀಲ್
ರಾಯಚೂರು: ತುಂಗಭಧ್ರ ಜಲಾಶಯದ ಕ್ರಸ್ಟ್ ಗೇಟ್ ಕೂರಿಸಲು ಸರ್ಕಾರ ಮುಂದಾಗಿದ್ದು, ಬೇಸಿಗೆಯಲ್ಲಿ ಎರಡನೇ ಬೆಳೆಗೆ ನೀರು ಬಿಡಲು ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕ್ರಸ್ಟ್ ಗೇಟ್ ಕೂಡಿಸಲಾಗುತ್ತಿರುವ ಕಾರಣ ಬೇಸಿಗೆ ಬೆಳೆಗೆ ನೀರು ಕೊಡುವುದಿಲ್ಲ ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಬೇಸಿಗೆಯಲ್ಲಿ ನೀರು ಕೊಟ್ಟು ಕೂಡ ಗೇಟ್‍ಗಳನ್ನು ಅಳವಡಿಸಬಹುದಾಗಿದ್ದು, ಈ ಕುರಿತು ಚರ್ಚಿಸಲು ವಾರದೊಳಗೆ ಅಧಿಕಾರಿಗಳು, ರೈತರು ಮತ್ತು ಜನಪ್ರತಿನಿಧಿಗಳ ತುರ್ತು ಸಭೆ ಕರೆಯಬೇಕು ಎಂದರು.
ಇತ್ತೀಚೆಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರೊಂದಿಗೆ ಜಿಲ್ಲೆಯಲ್ಲಿರುವ ನೀರಾವರಿ ಸಮಸ್ಯೆ, ತುಂಗಭದ್ರ ಕ್ರಸ್ಟ್ ಗೇಟ್ ಅಳವಡಿಕೆಯ ಕುರಿತು ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಗೇಟ್‍ಗಳ ಅಳವಡಿಕೆಯ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆಗೆ ನೀರು ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಇದರಿಂದ ರೈತರಿಗೆ ಮಾತ್ರವಲ್ಲದೇ ರೈಸ್ ಮಿಲ್‍ಗಳು, ಕೂಲಿಕಾರ್ಮಿಕರ ಸೇರಿದಂತೆ ಅನೇಕ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಒಳ ಹರಿವು ನಿರಂತರವಾಗಿರುವುದರಿಂದ ನೀರನ್ನು ಬಂದ್ ಮಾಡದೇ ಗೇಟ್‍ಗಳನ್ನು ಅಳವಡಿಸಬಹುದಾಗಿದೆ ಎಂದರು.
ಕೇವಲ ಗೇಟ್‍ಗಳನ್ನು ಕೂರಿಸಲು ನೀರು ಕೊಡಲು ಆಗುವುದಿಲ್ಲ ಎನ್ನುವುದು ಸರಿಯಲ್ಲ. ಇದಕ್ಕೆ ರೈತರು ಯಾರು ಕೂಡ ಒಪ್ಪುವುದಿಲ್ಲ. ಗೇಟ್ ಅಳವಡಿಕೆ ಜೊತೆಗೆ ಎಡದಂಡೆ ನಾಲೆಯ ಸೇತುವೆಗಳು, ಸ್ಟಕ್ಚರ್ ಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ಸರಿಪಡಿಸಲು ಕೂಡ ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ತುಂಗಭದ್ರ ಎಡದಂಡೆ ಕಾಲುವೆ ಭಾಗದಲ್ಲಿ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಚರ್ಚಿಸಲು ಸರ್ಕಾರ ಕೂಡಲೇ ತುರ್ತು ಸಭೆ ಕರೆಯಬೇಕು. ಸಭೆ ಕರೆಯಲು ರಾಯಚೂರು, ಕೊಪ್ಪಳ, ಬಳ್ಳಾರಿ ಭಾಗದ ಜನಪ್ರತಿನಿಧಿಗಳು ಆಸಕ್ತಿ ವಹಿಸಿ, ಸರ್ಕಾರವನ್ನು ಎಚ್ಚರಗೊಳಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಜಾನ್‍ವೆಸ್ಲಿ, ಬೂದಯ್ಯ ಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ, ಚಂದ್ರಶೇಖರ ಸೇರಿದಂತೆ ಇತರರಿದ್ದರು.