×
Ad

ಕಾನೂನುಗಳನ್ನು ಅರಿತು ಸಮರ್ಥವಾಗಿ ಬಳಸಬೇಕು : ನ್ಯಾ.ಎಂ.ಜಿ.ಉಮಾ

Update: 2025-03-08 16:07 IST

ರಾಯಚೂರು : ಮಹಿಳೆಯರ ರಕ್ಷಣೆಗೆ ದೇಶದಲ್ಲಿ ಸಾಕಷ್ಟು ಕಾನೂನುಗಳಿದ್ದು, ಮಹಿಳೆಯರು ಅವುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಾಧೀಶರಾದ ಎಂ.ಜಿ.ಉಮಾ ಅವರು ಹೇಳಿದರು.

ಶನಿವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಲೋಕ ಅದಾಲತ್ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುರುಷ ಪ್ರಧಾನ ಸಮಾಜದಲ್ಲಿ ಹಿಂದಿನಿಂದಲೂ ಮಹಿಳೆಯರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ದೌರ್ಜನ್ಯದ ದಿನಗಳು ಕೊನೆಯಾಗಬೇಕು. ಮಹಿಳೆಯರು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ದೇಶದಲ್ಲಿ ಕಾನೂನು ಜಾರಿಯಲ್ಲಿವೆ. ಈ ಕಾನೂನಗಳನ್ನು ತಿಳಿದು ಬಳಸಬೇಕು ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶವನ್ನು ಮಹಿಳೆಯರು ಅರಿಯಬೇಕು. ಮಹಿಳೆಯನ್ನು ತಾಯಿ ಮತ್ತು ಭೂಮಿಗೆ ಹೋಲಿಕೆ ಮಾಡಲಾಗುತ್ತದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಇದ್ದಾರೆ. ಮಹಿಳೆಯರು ಯಾವಾಗಲೂ ಕ್ರಿಯಾಶೀಲರಾಗಿ ವಿಶೇಷ ಸಾಧನೆಗಳನ್ನು ಮಾಡಬೇಕು ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಮಾರುತಿ ಎಸ್.ಬಾಗಡೆ ಅವರು ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕಾಲಿಟ್ಟಿದ್ದು, ಅವರ ಸಾಧನೆಯು ಮೆಚ್ಚುವಂತದ್ದಾಗಿದೆ. ಮಹಿಳೆಯರು ಇನ್ನೂ ಹೊಸ ಹೊಸ ಕ್ಷೇತ್ರದಲ್ಲಿ ಮುಂದೆ ಬರಬೇಕು. ಮಹಿಳಾ ನ್ಯಾಯವಾದಿಗಳು ಅಧ್ಯಯನಶೀಲರಾಗಬೇಕು‌ ಎಂದರು.

ಇದೇ ಸಂದರ್ಭದಲ್ಲಿ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶ್ರೀಕಾಂತ್ ಎಸ್.ವಿ., 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹತ್ತಿಕಾಳ್ ಪ್ರಭು ಸಿದ್ದಪ್ಪ, ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಸಿದ್ದರಾಮಪ್ಪ ಕಲ್ಯಾಣರಾವ್, ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಎ.ಸಾತ್ವಿಕ್, ಅಪರ ಹಿರಿಯ ವ್ಯವಹಾರ ನ್ಯಾಯಾಧೀಶ ಸುದೀನ್ ಕುಮಾರ್ ಡಿ.ಜೆ., 2ನೇ ಹೆಚ್ಚುವರಿ ಹಿರಿಯ ಶ್ರೇಣಿ ವ್ಯವಹಾರ ನ್ಯಾಯಾಧೀಶರಾದ ಶ್ವೇತಾ ಸಿಂಗ್, 3ನೇ ಅಪರ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಅನೀಲ್ ಶೇಖಣ್ಣನವರ್, ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರಾದ ಹುಲಗಪ್ಪ ಡಿ., ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News