×
Ad

ಕಲ್ಯಾಣ ಕರ್ನಾಟಕದ ಹೆಣ್ಣು ಮಕ್ಕಳಲ್ಲಿ ಶಕ್ತಿ, ಯುಕ್ತಿ ಹೆಚ್ಚಾಗಿದೆ: ಡಾ.ನಾಗಲಕ್ಷ್ಮೀ ಚೌಧರಿ

Update: 2025-09-17 19:24 IST

ರಾಯಚೂರು: ಕಲ್ಯಾಣ ಕರ್ನಾಟಕದ ಹೆಣ್ಣುಮಕ್ಕಳಲ್ಲಿ ಶಕ್ತಿ ಹೆಚ್ಚಿದ್ದು, ಯುಕ್ತಿಯೂ ಹೆಚ್ಚಾಗಿದೆ. ಇಲ್ಲಿ ಮಕ್ಕಳು ಸಾಮಾನ್ಯರಲ್ಲಿ ಅಸಾಮಾನ್ಯರು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ನಗರದ ಎಸ್‌ಎಸ್‌ಆರ್‌ಜಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಸಭಾಂಗಣದಲ್ಲಿ, ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನ ಕಡಿಮೆಯಾಗದಿರುವುದು, ಬಾಲ್ಯವಿವಾಹಗಳು ಮತ್ತು ಬಾಲ್ಯ ಗರ್ಭಿಣಿಯರ ಪ್ರಕರಣಗಳು ಹೆಚ್ಚಿರುವುದು – ಇವೆಲ್ಲ ಕಾರಣಗಳಿಂದ ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗವೆಂದು ಹೇಳಲಾಗುತ್ತಿದೆ. ಇವು ನಿವಾರಣೆಯಾದಾಗ ಮಾತ್ರ ಈ ಭಾಗ ಪ್ರಗತಿಯತ್ತ ಸಾಗುತ್ತದೆ ಎಂದು ಹೇಳಿದರು.

ಮಕ್ಕಳು ಸೂರ್ಯನಂತೆ ಸ್ವಪ್ರಕಾಶಿತರಾಗಬೇಕು, ಚಂದ್ರನಂತೆ ಅವಲಂಬಿತರಾಗಬಾರದು ಎಂಬ ಅಂಬೇಡ್ಕರ್ ಅವರ ನುಡಿಯನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಹೆಣ್ಣುಮಕ್ಕಳು ಕೇವಲ ಮನೆ ಕೆಲಸ ಮತ್ತು ಮಕ್ಕಳ ನಿರ್ವಹಣೆಗೆ ಸೀಮಿತವಾಗಬಾರದು. ಸ್ವತಂತ್ರವಾಗಿ ಆಲೋಚಿಸಿ, ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಹೊಂದಬೇಕು ಎಂದರು.

ಓದುವುದರಿಂದ ವ್ಯತ್ಯಾಸವನ್ನು ತರಬಹುದು. ಮಹಿಳೆಯರು ಪ್ರಗತಿ ಸಾಧಿಸಲು ಶಿಕ್ಷಣ ಮುಖ್ಯ. ಮೊಬೈಲ್‌ನಿಂದ ದೂರ ಇದ್ದರೆ ಗುರಿ ಸಾಧನೆ ಸುಲಭವಾಗುತ್ತದೆ. ಕೆಟ್ಟ ಅಭ್ಯಾಸಗಳು ಬೇಗ ಬರುತ್ತವೆ, ಆದರೆ ಒಳ್ಳೆಯ ಅಭ್ಯಾಸಗಳು ಜೀವನಪರ್ಯಂತ ಕೈ ಹಿಡಿಯುತ್ತವೆ. ಕೆಟ್ಟ ಅಭ್ಯಾಸಗಳು ನಾಶಮಾಡುತ್ತವೆ, ಆದ್ದರಿಂದ ಹೆಣ್ಣುಮಕ್ಕಳು ಉತ್ತಮವಾಗಿ ಓದಿ, ಉನ್ನತ ಸ್ಥಾನಕ್ಕೇರಬೇಕು ಎಂದು ಅವರು ವಿದ್ಯಾರ್ಥಿನಿಯರಿಗೆ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವೂ ನಡೆಯಿತು.

ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ, ಗಿರಿಜಾ, ಸಂಜಯ್ ಪವಾರ್, ಈರಮ್ಮ, ಗುಂಜಳ್ಳಿ, ಮಂಜುಳಾ, ಪ್ರತಿಭಾ ರೆಡ್ಡಿ, ಶ್ರೀದೇವಿ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News