ರಾಯಚೂರು | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಮಹಿಳಾ ಪೊಲೀಸರ ಸೇವೆ ಪ್ರಶಂಸನೀಯ : ಎಸ್‌ಪಿ ಅರುಣಾಂಗ್ಷುಗಿರಿ
ರಾಯಚೂರು: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಶೇ.15ರಷ್ಟು ಮಹಿಳಾ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಅವರು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಆಯೋಜಿಸಲಾದ ಮಹಿಳಾ ಪೊಲೀಸರ ಕವಾಯತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಪೊಲೀಸರು ಕುಟುಂಬದ ಜವಾಬ್ದಾರಿಗಳ ಜೊತೆಗೆ ಇಲಾಖೆಯ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೊಲೀಸರ ಕೊಡುಗೆ ಅಪಾರವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಮಹಿಳೆಯರ ರಕ್ಷಣೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಅವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ಪ್ರತಿ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮದೇ ಆದ ರೀತಿಯಲ್ಲಿ ಇಲಾಖೆಗೆ ಕೊಡುಗೆ ನೀಡಿದ್ದಾರೆ. ಅವರನ್ನು ಅಭಿನಂದಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸರಿಗಾಗಿ ಈ ಕವಾಯತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗಳಿಂದ ಕವಾಯತು ಪ್ರದರ್ಶಿಸಲಾಯಿತು. ನಂತರ ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಪೊಲೀಸ್ ಉಪ ಅಧೀಕ್ಷಕರಾದ ಶಾಂತವೀರ, ಪ್ರಮಾನಂದ ಘೋಡೈ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.