ರಾಯಚೂರು: ಗಣೇಶ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
Update: 2025-08-31 21:39 IST
ರಾಯಚೂರು: ವಾಹನದಲ್ಲಿ ಗಣೇಶ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಗಟ್ಟುಬಿಚ್ಚಾಲಿಯಲ್ಲಿ ನಡೆದಿದೆ.
ಗ್ರಾಮದ ನಿವಾಸಿ ನರಸಿಂಹ (22) ಮೃತಪಟ್ಟ ಯುವಕ. ಗಣೇಶೋತ್ಸವ ಹಿನ್ನೆಲೆಯಲ್ಲಿ ಯುವಕರು ಸೇರಿಕೊಂಡು ಗಣೇಶವನ್ನು ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಸಮೀಪದ ರಾಜೋಳಿಬಂಡಾ ಕಾಲುವೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗಾಗಿ ಪಿಕಪ್ ವಾಹನದಲ್ಲಿಟ್ಟಿದ್ದ ಗಣೇಶ ಮೂರ್ತಿಯನ್ನು ಮೆರವಣಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ವಾಹನದಲ್ಲಿಟ್ಟ ಮೂರ್ತಿಯನ್ನು ಮೂರ್ನಾಲ್ಕು ಜನರು ಹಿಡಿದುಕೊಂಡಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶಗೊಂಡು ನರಸಿಂಹ ಮೃತಪಟ್ಟಿದ್ದು, ಈ ವೇಳೆ ಉಳಿದವರು ವಾಹನದಿಂದ ಜಿಗಿದು ಪ್ರಣಾಪಾಯದಿಂದ ಪಾರಾಗಿದ್ದಾರೆ. ಯರಗೇರಾ ಠಾಣೆ ವ್ಯಾಪ್ತಿಯಲ್ಲಿ ಘೆಟನೆ ಸಂಭವಿಸಿದೆ.