×
Ad

ಕಾರ್ಮಿಕ ವಿರೋಧಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಎಐಸಿಸಿಟಿಯು ವತಿಯಿಂದ ಮಾನ್ವಿಯಲ್ಲಿ ಬೈಕ್ ರ‍್ಯಾಲಿ

Update: 2026-01-29 20:57 IST

ಮಾನ್ವಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ಉದ್ಯೋಗ ಕಸಿಯುವ ವಿಬಿ ಗ್ರಾಮ ಜಿ–2025 ಕಾಯ್ದೆಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ, ಕೇಂದ್ರ ಸರ್ಕಾರದ ರೈತ–ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಜೆಸಿಟಿಯು ಫೆಬ್ರವರಿ 12ರಂದು ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರ ಕರೆಯ ಪ್ರಯುಕ್ತ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ (ಎಐಸಿಸಿಟಿಯು) ವತಿಯಿಂದ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.

ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಬೈಕ್ ರ‍್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸವ ವೃತ್ತದಲ್ಲಿ ಸಮಾಪ್ತಿಗೊಂಡಿತು. ಈ ವೇಳೆ ಸಂಘಟನೆ ಮುಖಂಡರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ದೇಶದಾದ್ಯಂತ ಕಾರ್ಮಿಕ ಸಂಘಟನೆಗಳು ಹಾಗೂ ಟ್ರೇಡ್ ಯೂನಿಯನ್‌ಗಳು ವಿರೋಧ ವ್ಯಕ್ತಪಡಿಸಿದ್ದರೂ, ಕಾರ್ಮಿಕರ ಮನವಿಯನ್ನು ಲೆಕ್ಕಿಸದೇ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರಿಗೆ ದೊರಕಬೇಕಾದ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ಅಜೀಜ್ ಜಾಗೀದಾರ್ ಮಾತನಾಡಿ, ಸಾರ್ವಜನಿಕ ವಲಯವನ್ನು ಖಾಸಗಿಯವರಿಗೆ, ವಿಶೇಷವಾಗಿ ಏಕಸ್ವಾಮ್ಯ ಬಂಡವಾಳಗಾರರಿಗೆ ಹಸ್ತಾಂತರಿಸುವ ನೀತಿ ದೇಶದ ಕಾರ್ಮಿಕರಿಗೆ ಮಾರಕವಾಗಿದೆ. ಕಾರ್ಮಿಕರು ತ್ಯಾಗ ಮತ್ತು ಹೋರಾಟಗಳಿಂದ ಪಡೆದ 29 ಕಾನೂನುಗಳನ್ನು ರದ್ದುಪಡಿಸಿ ಮಾಲಕರ ಪರ ಸಂಹಿತೆಗಳನ್ನು ಜಾರಿ ಮಾಡಲಾಗಿದೆ. ಈ ಅನ್ಯಾಯಕರ ನೀತಿಗಳನ್ನು ಹಿಂಪಡೆಯುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಸಿರಿವಾರ ವಿಭಾಗದ ಅಧ್ಯಕ್ಷ ರಾಜ ಮಹ್ಮದ್, ಮಾನ್ವಿ ಉಪ ವಿಭಾಗದ ಅಧ್ಯಕ್ಷ ಬಸಲಿಂಗಪ್ಪ ಜಂಬಲದಿನ್ನಿ, ಹಿರೆಕೊಟ್ನೆಕಲ್ ಉಪ ವಿಭಾಗದ ಅಧ್ಯಕ್ಷ ವೆಂಕಟೇಶ್ ಕೋರಿ, ಕೇಂದ್ರ ಸಮಿತಿ ಖಜಾಂಚಿ ಜಲೀಲ್ ಪಾಷಾ, ಗೋಪಾಲ ರಾವ್, ಚಂದ್ರಶೇಖರ್, ಬಸವರಾಜ ಬಾಗಲವಾಡ, ರಂಗಪ್ಪ ನಾಯಕ, ಶಂಕರ್ ಜಾನೇಕಲ್, ಕೃಷ್ಣ, ಇಮ್ರಾನ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿ ಪ್ರಚಾರಾಂದೋಲನವನ್ನು ಯಶಸ್ವಿಗೊಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News