ಮಸ್ಕಿ | ಅಲ್ಪಸಂಖ್ಯಾತರ ಅನುದಾನ ದುರ್ಬಳಕೆ : ಬಳಗಾನೂರು ಗ್ರಾ.ಪಂ.ಮಾಜಿ ಅಧ್ಯಕ್ಷರಿಂದ ಆರೋಪ
ಮಸ್ಕಿ: ತಾಲೂಕಿನ ಬಳಗಾನೂರು ಪಟ್ಟಣದಲ್ಲಿ ಅಲ್ಪಸಂಖ್ಯಾತರ ಕಾಲೋನಿಗೆ ಬಿಡುಗಡೆಯಾದ 1 ಕೋಟಿ ರೂ. ಅನುದಾನವನ್ನು ಖಾಸಗಿ ಲೇಔಟ್ ಗೆ ಕಾಮಗಾರಿ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ.
ಅಲ್ಪಸಂಖ್ಯಾತರ ಹೆಸರಿನಲ್ಲಿ ಬರೋಬ್ಬರಿ ಒಂದು ಕೋಟಿ ರೂ. ಅನುದಾನದ ಕಾಮಗಾರಿ ಅಲ್ಪಸಂಖ್ಯಾತರು ಇಲ್ಲದ ಏನ್ ಎ ಲೇಔಟ್ ನಲ್ಲಿ ಕಾಮಗಾರಿ ಮುಗಿಸಿ ಪ್ರಭಾವಿ ರಾಜಕಾರಣಿ, ಅಧಿಕಾರಿ ಹಾಗೂ ಗುತ್ತಿಗೆದಾರರು ಸೇರಿಕೊಂಡು ಒಂದು ಕೋಟಿ ರೂ. ಗುಳುಂ ಮಾಡಿದ್ದಾರೆ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ತಿಕ್ಕಯ್ಯ ಗಂಭೀರ ಆರೋಪ ಮಾಡಿದರು.
ಅವರು ಮಸ್ಕಿ ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ, 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಮಗ್ರ ಅಭಿವೃದ್ಧಿ ಮತ್ತು ಮೂಲ ಸೌಲಭ್ಯಗಳಿಗಾಗಿ 1 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.
ಆದರೆ ಸರ್ಕಾರದ ಆದೇಶದಲ್ಲಿ ಅಲ್ಪ ಸಂಖ್ಯಾತರ ಕುಟುಂಬಗಳು ಹೆಚ್ಚಾಗಿ ಇರುವ ಕಾಲೋನಿಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಸರ್ಕಾರದಿಂದ ನಿರ್ದೇಶನ ಇದೆ. ಸ್ಥಳೀಯ ಶಾಸಕರು ಬಳಗಾನೂರು ಗ್ರಾಮದಲ್ಲಿ ಅಲ್ಪಸಂಖ್ಯಾತರ ಕುಟುಂಬಗಳು ಅಧಿಕವಾಗಿರುವ ಕಾಲೋನಿಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತರು ಎರಡು ಅಥವಾ ಮೂರು ಮನೆ ಇರುವ ಸ್ಥಳವನ್ನು ಗುರುತಿಸಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಬೆಂಗಳೂರು ಇವರಿಗೆ ದೂರನ್ನು ಕೂಡ ಸಲ್ಲಿಸಿ ಅಲ್ಪಸಂಖ್ಯಾತರ ಅನುದಾನ ದುರ್ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ (ಎನ್.ಎ) ಆದೇಶ ಮಾಡುವ ಕಾಲಕ್ಕೆ ತಮ್ಮ ಆದೇಶದಲ್ಲಿ (9) ನಿಬಂಧನೆಗಳ ಪ್ರಕಾರ ಭೂ ಮಾಲಕರು ಮೂಲಭೂತ ಸೌಲಭ್ಯಗಳಾದ ಚರಂಡಿ, ರಸ್ತೆ, ನೀರು, ವಿದ್ಯುತ್ ಸಂಪರ್ಕ ಮಾಡಿ ಪ್ಲಾಟ್ ಖರೀದಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಹಾಗೂ ಇದರ ಎಲ್ಲಾ ಹೊಣೆಗಾರಿಕೆ ಭೂ ಮಾಲಕರ ಜವಾಬ್ದಾರಿ ಇರುತ್ತದೆಂದು ಆದೇಶದಲ್ಲಿದೆ. ಆದರೂ ಸಹಿತ ಶಾಸಕರು ಹಾಗೂ ಅವರ ಆಪ್ತ ಸಹಾಯಕ ಶರಣೇಗೌಡ ಎನ್.ಎ ಲೇಔಟ್ ನಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದು ಹಣ ದೋಚುವ ತಂತ್ರವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.