ರಾಯಚೂರು | ನ್ಯಾಯಾಲಯದ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟಿರುವುದಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಅಸಮಾಧಾನ
ರಾಯಚೂರು : ದೇವದುರ್ಗ ಪಟ್ಟಣದಲ್ಲಿ ಹೊಸದಾಗಿ ನಿರ್ಮಿಸಿರುವ ಕೋರ್ಟ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರ ಹೆಸರನ್ನು ಕೈಬಿಟ್ಟಿರುವುದು ನೋವು ತಂದಿದೆ. ಇದರಿಂದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಅಸಮಾಧಾನವಾಗಿದೆ. ಹೀಗಾಗಿ ಶಾಸಕ ಸ್ಥಾನದ ಹಕ್ಕುಚ್ಯುತಿಯಾಗಿರುವುದಕ್ಕೆ ಸಭಾಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ದೇವದುರ್ಗಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕಿ ಕರೆಮ್ಮ ಜಿ.ನಾಯಕ, ನಮ್ಮ ನೋವು, ಅಸಮಧಾನ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಮೇಲಿದೆಯೇ ಹೊರತು ನ್ಯಾಯಾಂಗ ಇಲಾಖೆ ಮೇಲಲ್ಲ. ಕ್ಷೇತ್ರಕ್ಕೆ ಹೈಕೋರ್ಟ್ ನ್ಯಾಯಾಧೀಶರು, ನಮ್ಮ ತಾಲೂಕಿನವರೇ ಆಗಿರುವ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಬರುತ್ತಿರುವುದಕ್ಕೆ ನಮಗೆಲ್ಲ ಸಂತಸವಿದೆ. ಆದರೆ ಈ ರೀತಿ ಅವಮಾನಿಸಿರುವ ಕುರಿತು ದೂರು ಸಲ್ಲಿಸಿದ್ದು ಲೋಕೋಪಯೋಗಿ ಇಲಾಖೆ ಸಚಿವರ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದರು.
ನ್ಯಾಯದ ಪರ ನಡೆದಿರುವ ಹೋರಾಟದಲ್ಲಿ ಪಾಲ್ಗೊಂಡ ಕಾರಣಕ್ಕೆ ನನ್ನ ಮೇಲೆ ಪೊಲೀಸ್ ಪ್ರಕರಣಗಳು ದಾಖಲಾಗಿವೆಯೇ ಹೊರತು ಯಾವುದೇ ಗಂಭೀರವಾದ ಪ್ರಕರಣಗಳು ದಾಖಲಾಗಿಲ್ಲ. ಪ್ರಕರಣಗಳು ದಾಖಲಾಗಿರುವುದೇ ಮಾನದಂಡವಾಗಿದ್ದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿರುವ ಸಚಿವರ ಮೇಲಿಲ್ಲವೇ? ಎಂಬ ಪ್ರಶ್ನೆ ಕೇಳಬೇಕಾಗುತ್ತದೆ. ಈ ಕಾರ್ಯಕ್ರಮದಲ್ಲಿ ಏನಾದರೂ ಗಲಾಟೆ, ಪ್ರತಿಭಟನೆಗಳು ನಡೆಸಿದರೆ ನಿಮ್ಮನ್ನೇ ಟಾರ್ಗೇಟ್ ಮಾಡಬೇಕಾಗಬೇಕಾಗುತ್ತದೆ ಎಂದು ಓರ್ವ ಉನ್ನತ ಮಟ್ಟದ ಅಧಿಕಾರಿಗಳು ಧಮ್ಕಿ ಹಾಕಿದ್ದು, ದಾಖಲೆಗಳ ಸಮೇತ ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ತಿಳಿಸುತ್ತೇನೆ. ಆದರೆ ಕ್ಷೇತ್ರದ ಮತದಾರರು ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸವಿಟ್ಟಿದ್ದಾರೆ. ಮತದಾರರ ಋಣ ತೀರಿಸುವುದಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವೆ ಎಂದು ಹೇಳಿದರು.