ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರೆ ಉಳಿಸಲು ಶೀಘ್ರದಲ್ಲೇ ಪಕ್ಷಾತೀತ ಸಭೆ : ಮಾಜಿ ಸಂಸದ ವಿರೂಪಾಕ್ಷಪ್ಪ
ರಾಯಚೂರು : ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯ ಕಾರ್ಖಾನೆಗಳ ತ್ಯಾಜ್ಯ ಜಲಾಶಯ ಕಲುಷಿತಗೊಳ್ಳುತ್ತಿದ್ದು, ಜಲಾಶಯ ವ್ಯಾಪ್ತಿಯ ರೈತರು, ರಾಜಕೀಯ ಮುಖಂಡರು ಒಗ್ಗೂಡಿ ಹೋರಾಟ ಮಾಡುವ ಅವಶ್ಯವಿದೆ. ಶೀಘ್ರವೇ ಈ ಬಗ್ಗೆ ಪಕ್ಷಾತೀತ ಸಭೆ ಕರೆದು ಚರ್ಚಿಸಲಾಗುವುದು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಶನಿವಾರ ಸಿಂಧನೂರು ತಾಲೂಕಿನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯ ಪಕ್ಕ ಗಿಣಿಗೇರಾ, ಕೊಪ್ಪಳ ಭಾಗದಲ್ಲಿ 200ಕ್ಕೂ ಹೆಚ್ಚು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ನಿರ್ಮಾಣವಾಗಿರುವುದರಿಂದ ಕೊಪ್ಪಳ ಭಾಗದ ವಾತಾವರಣ ಕೆಟ್ಟುಹೋಗಿದೆ. ಕಾರ್ಖಾನೆಗಳ ತ್ಯಾಜ್ಯ ಜಲಾಶಯಕ್ಕೆ ಹರಿಬಿಡುತ್ತಿರುವುದರಿಂದ ತುಂಗಭದ್ರಾ ಜಲಾಶಯ ನೀರು ಕಲುಷಿತಗೊಳ್ಳುತ್ತಿದೆ. ಇದೇ ಬೆಳವಣಿಗೆ ಮುಂದುವರೆದರೆ ಮುಂದೆ ಈ ಭಾಗದ ಜನರಿಗೆ ಕುಡಿಯಲು ನೀರು ಸಿಗದಂತ ಸ್ಥಿತಿ ಬರುತ್ತದೆ. ಈ ಬಗ್ಗೆ ಈ ಭಾಗದ ಜನರು ಜಾಗೃತರಾಗಿ ಹೋರಾಟಕ್ಕೆ ಮುಂದಾಗಬೇಕೆಂದರು. ಸರಿಯಲ್ಲ ಎಂದರು.
ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಉದ್ದೇಶದಿಂದ ಜಲಾಶಯ ನಿರ್ಮಿಸಿದ್ದು, ಆದರೆ ಕಾರ್ಖಾನೆಗಳ ತ್ಯಾಜ್ಯ ಜಲಾಶಯಕ್ಕೆ ಬಿಟ್ಟು ನೀರು ಕಲುಷಿತಗೊಳಿಸುತ್ತಿರುವುದು ಆತಂಕ ಮೂಡಿಸಿದೆ. ಇದು ಸರಿಯಾದುದ್ದಲ್ಲ. ಈ ಬಗ್ಗೆ ತಮ್ಮ ವಿರೋಧವಿದೆ ಎಂದು ಹೇಳಿದರು.
ಚೆಕ್ ಡ್ಯಾಂ ಮೂಲಕ ನೀರು ಪಡೆಯಲಿ :
ಕಾರ್ಖಾನೆಗಳಿಗೆ ನೀರು ಕೊಡಬೇಕೆಂದರೆ ಮೊದಲು ಕಾರ್ಖಾನೆಗಳು ಜಲಾಶಯದ ಹಿನ್ನೀರಿಗೆ ಚೆಕ್ ಡ್ಯಾಂ ನಿರ್ಮಿಸಿ ನೀರು ಪಡೆಯಲಿ. ಅದನ್ನು ಬಿಟ್ಟು ಈ ಭಾಗದ ಜನರ ನೀರಿನ ಪಾಲನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದರು.
ಹೋರಾಟ ನಿಲ್ಲಿಸಬಾರದು :
ಕೊಪ್ಪಳದ ಗವಿಶ್ರೀಗಳು ಕೊಪ್ಪಳದಲ್ಲಿ ಹೊಸ ಕಾರ್ಖಾನೆ ಸ್ಥಾಪಿಸಲು ವಿರೋಧ ವ್ಯಕ್ತಪಡಿಸಿದ್ದು ಶ್ಲಾಘನೀಯ. ಶ್ರೀಗಳ ಹೋರಾಟ ಇದೇ ರೀತಿ ಮುಂದುವರೆಯಬೇಕು. ಯಾವುದೇ ಶ್ರೀಗಳು ತಮ್ಮ ಹೋರಾಟವನ್ನು ಹಿಂಪಡೆಯಬಾರದು ಎಂದು ವಿರೂಪಾಕ್ಷಪ್ಪ ಒತ್ತಾಯಿಸಿದರು.
ಖರೀದಿ ಕೇಂದ್ರ ಪ್ರಾರಂಭಿಸಲಿ :
ಜೋಳ ಕಟಾವು ಮಾಡಿ 2-3 ತಿಂಗಳುಗಳು ಗತಿಸಿದ್ದು, ಆದರೆ ಸರ್ಕಾರ ಖರೀದಿ ಕೇಂದ್ರ ತೆರೆಯದೇ ನಿರ್ಲಕ್ಷ್ಯ ತೋರಿದ್ದು ಖಂಡನೀಯ. ಖಾಲಿ ಚೀಲದ ಕೊರತೆ, ಲಾರಿಗಳ ಜಿಪಿಎಸ್ ನೆಪವೊಡ್ಡಿ ಖರೀದಿ ಕೇಂದ್ರ ಪ್ರಾರಂಭಿಸದೇ ಇರುವುದು ಸರಿಯಲ್ಲ. ಸರ್ಕಾರ ರೈತರ ಹಿತಾಸಕ್ತಿ ಮರೆತಿದೆ ಎಂದು ಆರೋಪಿಸಿದರು.