ರಾಯಚೂರು | ಕ್ಷಯ ನಿಯಂತ್ರಣಕ್ಕಾಗಿ 100 ದಿನ ಅಭಿಯಾನ ; ವಿಶೇಷ ಜಾಥಾ
ರಾಯಚೂರು : ಜಿಲ್ಲೆಯಲ್ಲಿ ಕ್ಷಯ (ಟಿ.ಬಿ) ರೋಗಿಗಳನ್ನು ಗುರುತಿಸಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡಲು 100 ದಿನಗಳ ಟಿಬಿ ಅಭಿಯಾನವನ್ನು ಕೈಗೊಂಡಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದು ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮುಹಮ್ಮದ್ ಶಾಕೀರ ಮೊಹಿಯುದ್ದೀನ್ ಅವರು ಹೇಳಿದರು.
ಜ.30ರ ಗುರುವಾರದಂದು ನಗರದ ಪೂರ್ಣಿಮಾ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ರಾಯಚೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪೂರ್ಣಿಮಾ ಆಯುರ್ವೇದಿಕ್ ವೈದ್ಯಕೀಯ ಸಂಸ್ಥೆಯ ವತಿಯಿಂದ ಕ್ಷಯ ಅಭಿಯಾನದ ಅಂಗವಾಗಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
60 ವರ್ಷ ಮೇಲಿನವರು, ಮದ್ಯ, ಧೂಮಪಾನ ವ್ಯಸನಿಗಳು, ಕಡಿಮೆ ತೂಕ ಇರುವವರು ಹಾಗೂ ಕ್ಷಯರೋಗದ ಹಾಗೂ ಇನ್ನೀತರ ಲಕ್ಷಣ ಹೊಂದಿರುವವರನ್ನು ದುರ್ಬಲ ಗುಂಪಿನ ವ್ಯಕ್ತಿಗಳು ಎಂದು ಗುರುತಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕ್ಷಯರೋಗದ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕ್ಷಯರೋಗಕ್ಕೆ ಚಿಕಿತ್ಸೆ, ಸೌಲಭ್ಯ :
ಕ್ಷಯ ಪತ್ತೆಯಾದ ರೋಗಿಗಳಿಗೆ ಸಾಮಾನ್ಯವಾಗಿ 6ತಿಂಗಳು ಚಿಕಿತ್ಸೆ ನೀಡಲಾಗುತ್ತದೆ. ಮಾತ್ರೆಗಳನ್ನು ನಿತ್ಯವೂ ಸೇವಿಸುವುದು, ಧೂಮಪಾನ-ಮದ್ಯಪಾನ ಮಾಡದಿರುವುದು, ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸುವುದು ಸೇರಿದಂತೆ ವೈದ್ಯರು ಸೂಚಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ 6 ತಿಂಗಳಲ್ಲಿ ಕ್ಷಯದಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು. ಕೆಲವು ಪ್ರಕರಣಗಳಲ್ಲಿ 18 ತಿಂಗಳುವರೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್ ಅವರು ಮಾತನಾಡಿ, ಮನೆಮನೆ ಭೇಟಿ ವೇಳೆ ಗುರುತಿಸಿದ ವ್ಯಕ್ತಿಗಳಿಗಾಗಿ ಪ್ರತಿಯೊಂದು ಹಳ್ಳಿ ಹಾಗೂ ವಾರ್ಡ್ ಮಟ್ಟದಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಕಫ ಪರೀಕ್ಷೆಗೆ ಒಳಗಾಗಬೇಕು. ಆರಂಭದಲ್ಲೇ ಕ್ಷಯರೋಗ ಪತ್ತೆ ಮಾಡಿದರೆ ಚಿಕಿತ್ಸೆ ನೀಡುವುದು ಹಾಗೂ ಬೇರೆಯವರಿಗೆ ರೋಗ ಹರಡುವುದನ್ನು ತಡೆಯಲು ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪೂರ್ಣಿಮಾ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರೆಡ್ಡಿ ಎಸ್.ಕರಮುಡಿ, ಸಂಸ್ಥೆಯ ಉಪನ್ಯಾಸಕರಾದ ಡಾ.ಅಕ್ಕಮಹಾದೇವಿ, ಡಾ.ಉಮಾ ಯಾಳಗಿ, ಡಾ.ಸ್ವಾತಿ, ಡಾ.ಸಂತೋಷ ಕುಮಾರ್ ಸೇರಿದಂತೆ ಸಂಸ್ಥೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರು.