ರಾಯಚೂರು | ಬಾಲಕಿಯ ಅತ್ಯಾಚಾರ ಖಂಡಿಸಿ ಜಿಲ್ಲಾಡಳಿತಕ್ಕೆ ಮನವಿ
ರಾಯಚೂರು : ಮಾನ್ವಿ ತಾಲೂಕಿನ ಪೋತ್ನಾಳ ಶಾಲೆಯ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ, ಬಾಲಕಿಯರ ಮೇಲೆ, ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಗಳು, ಕೊಲೆ, ಸುಲಿಗೆ, ದೌರ್ಜನ್ಯಗಳು ಮಿತಿಮೀರಿ ನಡೆಯುತ್ತಿವೆ. ಸ್ವಾತಂತ್ರ ಬಂದು 70 ವರ್ಷಗಳೇ ಗತಿಸಿದರೂ ಇನ್ನೂ ಕೂಡ ಈ ಸಮಾಜದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ, ಗಂಡಾಳ್ವಿಕೆಯು ಮಹಿಳೆಯನ್ನು ಗುಲಾಮಾಳನ್ನಾಗಿ ನಡೆಸಿಕೊಳ್ಳುತ್ತಾ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ದೂರಿದರು.
ದೇಶದಲ್ಲಿ ದಿನನಿತ್ಯ ಒಂದಲ್ಲ ಒಂದು ರೀತಿ ಮಹಿಳೆಯರ ಮೇಲೆ ದೌರ್ಜನಗಳು ನಡೆಯುತ್ತಾ ಬರುತ್ತಿವೆ, ಮಾನವಿ ತಾಲೂಕಿನ ಪೋತ್ನಾಳ ಗ್ರಾಮದ ಖಾಸಗಿ ಶಾಲೆಯೊಂದರ 7 ವರ್ಷದ ಪುಟ್ಟ ಕಂದಮ್ಮನ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆಯು ಇಡಿ ಮಾನವ ಸಮಾಜವೇ ತಲೆತಗ್ಗಿಸುವಂಥಾಗಿದೆ.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ, ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳಿಗೆ ಹೋಗಿ ಮನೆಗೆ ಹಿಂದಿರುಗಿ ಬರುವವರೆಗೂ ಅವರ ಪಾಲಕರು ಜೀವವನ್ನು ಕೈಯಲ್ಲಿ ಹಿಡಿದು ಕಾಯುವಂತಹ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ.
ನಮ್ಮನ್ನಾಳುವ ಸರಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ನೀಚ ಕಾಮುಕರಿಗೆ ಕಠಿಣ ಶಿಕ್ಷೆಯನ್ನು ನೀಡಿ ಮುಂದೆಂದೂ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೊಳಿಸಬೇಕು, ಮತ್ತು ಪೋತ್ನಾಳ ಗ್ರಾಮದ ವಿದ್ಯಾಭಾರತಿ ಶಾಲೆಯ ಮುಖ್ಯಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಆ ಶಾಲೆಯನ್ನು ಕೂಡ ರದ್ದು ಮಾಡಬೇಕು ಹಾಗೂ ಸಂತ್ರಸ್ತ ಬಾಲಕಿಗೆ ಸೂಕ್ತ ಪರಿಹಾರವನ್ನು ನೀಡಿ ವಿದ್ಯಾರ್ಥಿನಿಯರ ರಕ್ಷಣೆಗೆ ವಿಶೇಷ ಕಾಯಿದೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಂತಾನ್, ಪಾಲರಾಜ ಮತ್ತಿತರರು ಇದ್ದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28