ರಾಯಚೂರು | ಬಗರ್ ಹುಕುಂ ಪರಿಹಾರ ಹಕ್ಕು ಪತ್ರ ನೀಡಲು ಒತ್ತಾಯಿಸಿ ಬೆಂಗಳೂರು ಚಲೋ : ಮರೆಪ್ಪ ಹರವಿ
ರಾಯಚೂರು : ಬಗರ್ ಹುಕುಂ ಒಂದು ಬಾರಿ ಪರಿಹಾರ ಹಕ್ಕುಪತ್ರಗಳನ್ನು ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಮಾ.11 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮರೆಪ್ಪ ಹರವಿ ಅವರು ಹೇಳಿದರು.
ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅನೇಕ ವರ್ಷಗಳಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಕಷ್ಟದ ಜೀವನ ಮದ್ಯೆ ಸಾಗುವಳಿ ಮಾಡಿದ ಬಡ ರೈತರು ಸಾಗುವಳಿ ಪಟ್ಟ ಇಲ್ಲದೆ ವಂಚಿತರಾಗಿದ್ದಾರೆ. ಸಾಗುವಳಿ ಪತ್ರಕ್ಕಾಗಿ 34 ಲಕ್ಷ ರೂ. ಗೂ ಹೆಚ್ಚು ಅರ್ಜಿಗಳು ರಾಜ್ಯದಲ್ಲಿ ಸಲ್ಲಿಕೆಯಾಗಿವೆ. ಅನಾದಿ ಕಾಲದಿಂದಲೂ ಜೀವನೋಪಾಯಕ್ಕಾಗಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿರುವವರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕಾಗಿರುವುದರಿಂದ ಕಾನೂನು ತೊಡಕುಗಳನ್ನು ನಿವಾರಿಸಿ ಸಾಗುವಳಿ ಪತ್ರಗಳನ್ನು ಕೊಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಭೂ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಗುವುದು ಎಂದರು.
2016 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಬೆಳಗಾವಿ ನೀಡಿದ ಭರವಸೆಯಂತೆ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿದೆ ಮಾತು ತಪ್ಪಿದೆ ಎಂದು ಸರಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಭೂಮಿಯನ್ನೆ ನಂಬಿ ಬದುಕುತ್ತಿರುವವರಿಗೆ ಸಾಗುವಳಿ ಪತ್ರ ವಿತರಿಸಬೇಕು. 34 ಲಕ್ಷ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವ ಸರ್ಕಾರ ಉಳುಮೆ ಮಾಡುತ್ತಿರುವ ಬಡವರ ಭೂಮಿಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಆಪಾದಿಸಿದರು. ಜಿಲ್ಲೆಯಿಂದ ಸಾಗುವಳಿ ಪತ್ರಕ್ಕಾಗಿ 20 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಈ ಸಂದರ್ಭದಲ್ಲಿ ಗುರುರಾಜ, ಶಿವರಾಜದೊಡ್ಡಿ ವಿರೇಶ ನಾಯಕ, ಆಂಜನೇಯ, ಶ್ರೀನಿವಾಸ್ ಕೊಪ್ಪರ ಸೇರಿದಂತೆ ಉಪಸ್ಥಿತರಿದ್ದರು.