×
Ad

ರಾಯಚೂರು | ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ

Update: 2025-10-13 18:48 IST

ರಾಯಚೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಡಾ.ಬಿ.ಆರ್ ಅಂಬೇಡ್ಕ‌ರ್ ವೃತ್ತದಿಂದ ಟಿಪ್ಪುಸುಲ್ತಾನ್ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.  

2025-26ನೇ ಸಾಲಿಗೆ ರಾಜ್ಯದ 44 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಕೇಂದ್ರದ ವಿವಿಧ ಇಲಾಖೆಗಳಲ್ಲಿ 9.5 ಲಕ್ಷ ಹುದ್ದೆಗಳು ಖಾಲಿ ಇದ್ದು ರೈಲ್ವೆ ಇಲಾಖೆ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಸರಕಾರದಿಂದ ಕಿಂಚಿತ್ತು ಪ್ರಯತ್ನಗಳು ನಡೆಯುತ್ತಿಲ್ಲ ಎಂದು ದೂರಿದರು.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59.454 ಹುದ್ದೆಗಳು ಖಾಲಿ ಬಿದ್ದಿವೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಚಿತ್ರಕಲಾ, ಸಂಗೀತ, ನಾಟಕ, ದೈಹಿಕ ಸೇರಿದಂತೆ ವಿಶೇಷ ಶಿಕ್ಷಕರ ನೇಮಕಾತಿ ಬಗ್ಗೆ ಮಾತನಾಡುವುದೇ ಬೇಡ ಎಂಬಂತಾಗಿದೆ. ಮತ್ತೊಂದೆಡೆ ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಕಂದಾಯ, ಒಳಾಡಳಿತ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಅತಿಥಿ ಶಿಕ್ಷಕ, ಅತಿಥಿ ಉಪನ್ಯಾಸಕ, ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಪುಡಿಗಾಸಿಗೆ ಉದ್ಯೋಗ ಭದ್ರತೆ ನೀಡದೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವಜನರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕು. ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಿ ಪಾರದರ್ಶಕತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.  

ಪ್ರತಿಭಟನೆಯಲ್ಲಿ ಚನ್ನಬಸವ ಜಾನೇಕಲ್, ವಿನೋದ್ ಕುಮಾರ್, ಯಲ್ಲಪ್ಪ, ಡಾ.ಹನುಮಂತ ಕುರ್ಡಿ, ರಾಮಚಂದ್ರಪ್ಪ ಶಿವಪ್ಪ ಕೃಷ್ಣಸಂದೀಪ್, ತೇಜಸ್, ಸೋಮು, ಸಂಜೀವ್, ಶ್ರೀಕಾಂತ್ ಹಾಗೂ ಉದ್ಯೋಗಾಕಾಂಕ್ಷಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News