×
Ad

ರಾಯಚೂರು | ಬಾಲಕಿಯ ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ

Update: 2025-02-07 15:48 IST

ರಾಯಚೂರು : ಜಿಲ್ಲೆಯ ಮಾನ್ವಿ ತಾಲೂಕಿನ ಮುದ್ದಂಗುಡ್ಡಿ ಗ್ರಾಮದ ಬಾಲಕಿಯ ಅತ್ಯಾಚಾರ ಘಟನೆ ಖಂಡಿಸಿ ಮಾನ್ವಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರಗತಿಪರ, ದಲಿತಪರ, ವಿದ್ಯಾರ್ಥಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದ ಮುದ್ದಂಗುಡ್ಡಿ ಬಾಲಕಿಯ ಮೇಲಿನ ಮೇಲೆ ಪೈಶಾಚಿಕ ಕೃತ್ಯ ನಡೆದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಕತ್ತಾ, ದೆಹಲಿ, ಬಿಹಾರ, ಉತ್ತರಪ್ರದೇಶ ಹೀಗೆ ಹಲವೆಡೆ ಅತ್ಯಾಚಾರ ಪ್ರಕರಣ ಘಟನೆಗಳು ಬೆಳಕಿಗೆ ಬರುತ್ತಿದ್ದವು, ರಾಜ್ಯದಲ್ಲಿ ಘಟನೆಗಳನ್ನು ಖಂಡಿಸಿ ಪ್ರತಿಭಟಿಸಿದ್ದೇವೆ. ಆ ಘಟನೆಗಳು ಮಾಸುವ ಮುನ್ನವೇ ರಾಜ್ಯದಲ್ಲಿ ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಅತ್ಯಾಚಾರಿಗಳನ್ನು ಬಂಧಿಸುವ ಬದಲು ಎನ್ಕೌಂಟರ್ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಶಾಂತ ಜಾಗೀರ್ ಪನ್ನೂರು ಮಾತನಾಡಿ, ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಯಂತೆ ತಲೆ ಎತ್ತಿದ್ದು, ಆದರೆ ಸರಕಾರದ ಸುತ್ತೋಲೆಗಳ ಪ್ರಕಾರ ಶಿಕ್ಷಣ ಸಂಸ್ಥೆಗಳನ್ನು ನಡೆಸದೇ ಬೇಕಾಬಿಟ್ಟಿಯಾಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಅತ್ಯಾಚಾರಕ್ಕೆ ಪರೋಕ್ಷವಾಗಿ ಕಾರಣರಾದ ಶಾಲೆಯ ಮುಖ್ಯಸ್ಥ ರಾಜು ತಾಳಿಕೋಟಿ ಇವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಜನಸೇವಾ ಫೌಂಡೇಶನ್ ಅಧ್ಯಕ್ಷ ಜಾವೀದ್ ಖಾನ್ ಮಾತನಾಡಿ, ಕಳೆದ ವಾರ ಸಿಂಧನೂರಿನಲ್ಲಿ ಒಂದು ಕಾಲೇಜು ವಿದ್ಯಾರ್ಥಿನಿಗೆ ಒಬ್ಬ ಕಾಮುಕ ಕತ್ತು ಕೊಯ್ದು ಕೊಲೆ ಮಾಡಿದ್ದ ಅದು ಮಾಸುವ ಮುನ್ನವೇ ನಮ್ಮ ಮಾನವಿ ತಾಲೂಕಿನಲ್ಲಿ ಇಂತ ಘಟನೆ ನಡೆದಿದೆ, ಇದಕ್ಕೆ ಕಾರಣರಾದ ಶಿವನಗೌಡ ಕಂದೆ ಲಿಂಗಪ್ಪಗೌಡ ಮುದ್ದಂಗುದ್ದಿ ಹಾಗೂ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹೊಳೆಯಪ್ಪ ಊಟಕನೂರ್ ಮಾತನಾಡಿ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಪರವಾನಿಗೆಯನ್ನು ರದ್ದು ಪಡಿಸಬೇಕು ಹಾಗೂ ಆತ್ಯಾಚಾರಕ್ಕೆ ಒಳಗಾಗಿರುವ ಮಗುವಿಗೆ ಶಿಕ್ಷಣ ಸಂಸ್ಥೆಯಿಂದ 25 ಲಕ್ಷ ರೂ.ಗಳನ್ನು ಪರಿಹಾರವಾಗಿ ಕೊಡಬೇಕು, ಸರ್ಕಾರದಿಂದ ಅತ್ಯಾಚಾರಕ್ಕೆ ಒಳಗಾದ ಮಗುವಿಗೆ 1ಕೋಟಿ ರೂ. ಪರಿಹಾರ ಕಲ್ಪಿಸಿಕೊಟ್ಟು, ಮಗುವಿಗೆ ಮುಂದಿನ ದಿನಗಳಲ್ಲಿ ಸರಕಾರಿ ಕೆಲಸ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ರಾಜು ಸಂಗಪ್ಪ ಪಿರಂಗಿ ಹಾಗೂ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಫಾದರ್ ಡಾನ್ ಪ್ರೇಮ್ ಲೋಬೊ, ದಲಿತ ಹೋರಾಟಗಾರರಾದ ಲಕ್ಷ್ಮಣ್ ಜಾನೇಕಲ್, ಆಕಾಶ್ ಮ್ಯಾಕ್ಸಿ, ಆಂಜನೇಯ ನಸಲಾಪುರ್, ಪಂಪಾಪತಿ, ಹಡಪದ, ರಮೇಶ ನಾಯಕ್, ಪ್ರಭು, ಚಂದ್ರು ಜಗ್ಗಿ ಸಂಗಾಪುರ್ ಸೇರಿದಂತೆ ಎಲ್ಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News