ರಾಯಚೂರು | ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ವಿರೋಧಿಸಿ : ಕ್ಲಿಫ್ಟನ್ ಡಿ.ರೊಜಾರಿಯೋ
ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡುವುದರ ಮೂಲಕ ಕಾರ್ಮಿಕ ದಂಗೆಗಳಿಗೆ ಹೆಗಲೊಡ್ಡಲು ಮುಂದಾಗಬೇಕು’ ಎಂದು ಎಐಸಿಸಿಟಿಯು ರಾಷ್ಟ್ರೀಯ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಜಾರಿಯೋ ಕರೆ ನೀಡಿದರು.
ಸ್ಥಳೀಯ ಸರ್ಕಾರಿ ನೌಕರರ ಭವನದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು
ಜು.9ರ ಅಖಿಲ ಭಾರತ ಮುಷ್ಕರವನ್ನು ಬೃಹತ್ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಮುಂದಾಗಬೇಕಾಗಿದೆ ಎಂದು ತಿಳಿಸಿದ ಅವರು, ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಾ ಆಳುವ ವರ್ಗಕ್ಕೆ ಸೇವೆ ಸಲ್ಲಿಸುತ್ತಿರುವ ಕೆಲ ಕಾರ್ಮಿಕ ಸಂಘಟನೆಗಳಿಂದ ಹೊರಬಂದು ರಾಜಿರಹಿತ ಕ್ರಾಂತಿಕಾರಿ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.
ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್ ಮಾತನಾಡಿ, ‘ದುಡಿಯುವ ಜನರಿಗೆ ಮೂಲಭೂತ ಸೌಕರ್ಯಗಳಂತಹ ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಮಿಕರನ್ನು ಸಂಘಟಿಸುವುದರ ಮೂಲಕ ಹೋರಾಟಕ್ಕೆ ಮುಂದಾಗಬೇಕಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಅಝೀಝ್ ಜಾಗೀರದಾರ್, ಮುಹಮ್ಮದ್ ಶಾಲಂ, ಹನೀಫ್, ಜಿಲಾನ್ ಯರಗೇರಾ, ಪ್ರಹ್ಲಾದ್, ಜಗದೀಶ್, ವಿರುಪಾಕ್ಷಿ, ಶ್ರೀನಿವಾಸ ಬುಕ್ಕನ್ನಟ್ಟಿ, ಹುಸೇನಪ್ಪ ಅರಳಹಳ್ಳಿ, ದುರುಗಪ್ಪ, ಮಹಾದೇವ ಅಮರಾಪರ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಪಾಲ್ಗೊಂಡಿದ್ದರು.