×
Ad

ರಾಯಚೂರು | ಮಾನವ ಕಳ್ಳ ಸಾಗಣೆ ತಡೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ : ನ್ಯಾ. ಹೆಚ್.ಎ.ಸಾತ್ವಿಕ್ ಸಲಹೆ

Update: 2025-11-14 18:47 IST

ರಾಯಚೂರು : ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ,ನ್ಯಾ. ಹೆಚ್.ಎ.ಸಾತ್ವಿಕ್ ಅವರು ಹೇಳಿದರು.

ನವೆಂಬರ್ 13ರಂದು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಣೆ ತಡೆಗಟ್ಟುವ ಕುರಿತು ಪ್ರವಾಸಿ ಮಿತ್ರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಮಹಿಳೆಯರಿಗೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಮಾಡುವವರಿಗೆ ಕಠಿಣವಾದ ಶಿಕ್ಷೆಯಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಆದ್ದರಿಂದ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಮಹಿಳೆಯರ ಮೇಲೆ ನಡೆಯುವ ಮಾನಸಿಕ, ದೈಹಿಕ ದೌರ್ಜನ್ಯ, ಕಿರುಕುಳ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಬೇಕು. ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ತಾಣಗಳಲ್ಲಿ ಯಾವುದಾದರೂ ಅನೈತಿಕ ಚಟುವಟಿಕೆ ನಡೆದರೆ ಅಥವಾ ಅನೈತಿಕ ಚಟುವಟಿಕೆ ನಡೆಸಲು ಪ್ರಯತ್ನಪಡುವವರ ವಿರುದ್ಧ ಯಾವುದೇ ಭಯವಿಲ್ಲದೆ ಸಾರ್ವಜನಿಕರು ಹಾಗೂ ಪ್ರವಾಸಿ ಮಿತ್ರರು ಕಾನೂನಿನ ಸಹಾಯ ಪಡೆಯಬೇಕು ಎಂದು ಪ್ರವಾಸಿ ಮಿತ್ರರಿಗೆ ಕಿವಿ ಮಾತು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಕಾನೂನಿನ ಸೇವೆ ಪಡೆದು ಅದನ್ನು ತಡೆಯಲು ಪ್ರಯತ್ನಿಸಬೇಕು. ಮಹಿಳೆಯರು ಮತ್ತು ಮಕ್ಕಳು ಅವರ ಹಕ್ಕುಗಳನ್ನು ಸಂಪೂರ್ಣವಾಗಿ ಪಡೆಯಬೇಕು. ಮಹಿಳೆಯರಿಗೆ ಭಯ ಮುಕ್ತ ವಾತಾವರಣ ಕಲ್ಪಿಸಬೇಕು. ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು. ಆಗ ಮಾತ್ರ ಸದೃಡ ಸಮಾಜ ನಿರ್ಮಿಸಲು ಸಾಧ್ಯ. ಪ್ರವಾಸಿ ಮಿತ್ರರಿಗೆ ಈ ಕಾರ್ಯಕ್ರಮ ತುಂಬಾ ಅವಶ್ಯಕವಾಗಿತ್ತು. ಕಾರ್ಯಕ್ರಮ ಆಯೋಜಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯ ಮೆಚ್ಚುವಂತದ್ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಪ್ರವಾಸಿ ಮಿತ್ರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News