ರಾಯಚೂರು | ಕೋಳಿ ಶೀತ ಜ್ವರದ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಿ: ಜಿಲ್ಲಾಧಿಕಾರಿ ನಿತೀಶ್ ಕೆ.
ನಿತೀಶ್ ಕೆ.
ರಾಯಚೂರು : ಕೋಳಿ ಶೀತ ಜ್ವರ ರೋಗೋದ್ರೇಕವಾಗಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು ನಿತೀಶ್ ಕೆ. ಅವರು ಸಾರ್ವಜನಿಕರು ಮತ್ತು ಕೋಳಿ ಸಾಕಾಣಿಕೆದಾರರಿಗೆ ಸೂಚನೆ ನೀಡಿದ್ದಾರೆ.
ಹಕ್ಕಿ–ಜ್ವರವು ಸಾಂಕ್ರಾಮಿಕ ರೋಗವಾಗಿದ್ದು“ಎವಿಯನ್ ಇನ್-ಫ್ಲೂ-ಎಂಜಾ ಎಂಬ ವೈರಾಣುವಿನಿಂದ ಬರುತ್ತದೆ. ಕೋಳಿ ಶೀತ ಜ್ವರವು ನಾಟಿ ಕೋಳಿ, ಫಾರಂ ಕೋಳಿ, ಟರ್ಕಿ ಕೋಳಿ,ಕೌಜುಗನ ಹಕ್ಕಿ,ನವಿಲಹಕ್ಕಿ,ಬಾತು ಕೋಳಿ,ನವಿಲು ಹಕ್ಕಿ, ಹಂಸ ಪಕ್ಷಿ,ಬಾತುಕೋಳಿ ಇತ್ಯಾದಿ ಎಲ್ಲಾ ಹಕ್ಕಿ ಪ್ರಬೇದಗಳಲ್ಲಿ ಕಂಡು ಬರುತ್ತದೆ. ಇದಲ್ಲದೆ ಮನುಷ್ಯನೊಳಗೊಂಡಂತೆ ಎಲ್ಲಾ ಬಿಸಿ ರಕ್ತ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಈ ರೋಗ ಹರಡುವುದಿಲ್ಲ ಎಂದಿದ್ದಾರೆ.
ರೋಗ ಲಕ್ಷಣಗಳು :
ಕೋಳಿ ಅಥವಾ ಪಕ್ಷಿಗಳಲ್ಲಿ ಹಠಾತ್ ಸಾವು, ಅಸಾಧಾರಣ ಸಾವು, ಸತ್ತ ಕೋಳಿಗಳ ಮೂಗೂ, ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಯುವುದು. ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುಗುವುದು.
ರೋಗ ಹರಡುವಿಕೆ :
ಸರಿಯಾಗಿ ಬೇಯಿಸದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವನೆಯಿಂದ, ಸೂಕ್ತ ರಕ್ಷಕ ಕವಚಗಳನ್ನು ಧರಿಸದೇ ರೋಗ ಪೀಡಿತ ಕೋಳಿ ಮತ್ತು ಕುಲುಷಿತ ಸಲಕರಣೆಗಳ ಸಂಪರ್ಕದಿಂದ ಕಳೆದ ವಾರ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಕೋಳಿ ಶೀತ ಜ್ವರದ ರೋಗೋದ್ರೇಕವಾಗಿರುತ್ತದೆ. ಆದ್ದರಿಂದ ಮುಂಜಾಗೃತೆ ಕ್ರಮಗಳನ್ನು ವಹಿಸುವ ಅವಶ್ಯಕತೆಯಿರುತ್ತದೆ.
ಒಡೆದ ಕೋಳಿ ಮೊಟ್ಟೆ ಹಾಗೂ ಸತ್ತ ಕೋಳಿಗಳನ್ನು ಸುಡುವುದು. ಕೋಳಿಗಳಲ್ಲಿ ಅಸಹಜ ಸಾವು ಸಂಭವಿಸಿದಲ್ಲಿ ತಕ್ಷಣವೇ ಫಾರಂ ವ್ಯಾಪ್ತಿಗೊಳಪಡುವ ಅಥವಾ ಹತ್ತಿರ ಪಶುವೈದ್ಯಕೀಯ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಯವರಿಗೆ ಮಾಹಿತಿ ನೀಡುವುದು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿಯವರು ಫಾರಂಗಳಿಗೆ ಭೇಟಿ ನೀಡಲು ಬಂದಾಗ ಕಡ್ಡಾಯವಾಗಿ ಅನುಮತಿ ನೀಡುವುದು ಹಾಗೂ ಮಾದರಿಗಳನ್ನು ಸಂಗ್ರಹಿಸಲು ಸಹಕರಿಸುವುದು.
ಸಾರ್ವಜನಿಕರಿಗೆ ಸೂಚನೆಗಳು :
ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಅಸಹಜ ಸಾವನ್ನಪ್ಪಿದರೆ, ತಕ್ಷಣವೇ ಹತ್ತಿರದ ಪಶುವೈದ್ಯರು ಅಥವಾ ಸಿಬ್ಬಂದಿಯವರ ಗಮನಕ್ಕೆ ತರುವುದು. ರೋಗ ನಿಯಂತ್ರಣ ಹಾಗೂ ಆರೋಗ್ಯ ರಕ್ಷಣೆಯ ಹಿತದೃಷ್ಠಿಯಿಂದ ಕೋಳಿ ಫಾರಂಗಳಿಗೆ ಅನುಮತಿಯಿಲ್ಲದೇ ಪ್ರವೇಶಿಸಬಾರದು. ಕೆರೆ, ಕಟ್ಟೆ, ನೀರಿನ ತೋರೆ, ನದಿ ಮತ್ತು ಇತರೇ ನೀರಿನ ಜಾಗಕ್ಕೆ ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯಕೀಯ ಇಲಾಖೆಯ ಗಮನಕ್ಕೆ ತರುವುದು. ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಮುಟ್ಟಿದ್ದಲ್ಲಿ ಸೋಪಿನಿಂದ ಕೈತೊಳಿಯುವುದು. 70 ಡಿಗ್ರಿ ಸೇಂಟಿಗ್ರೇಡ್ ನಲ್ಲಿ ಹತ್ತು ನಿಮಿಷ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸಿ ಸೇವಿಸುವುದು. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆ: ಉಪ ನಿರ್ದೇಶಕರು(ಆಡಳಿತ) ಪಶುಪಾಲನಾ ಇಲಾಖೆ ರಾಯಚೂರು; 8495019849, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶುಪಾಲನಾ ಇಲಾಖೆ ರಾಯಚೂರು; 9591353247, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಮಾನವಿ; 9591353247, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಸಿಂಧನೂರು; 9448037402, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಲಿಂಗಸುಗೂರು; 9480284443, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ದೇವದುರ್ಗ; 7411026744, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಮಸ್ಕಿ; 7975062716, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ, ಸಿರವಾರ; 9448855227ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.