×
Ad

ರಾಯಚೂರು | ಬಸವಾದಿ ಶರಣರ ವಿಚಾರಗಳನ್ನು ಮಕ್ಕಳಲ್ಲಿ ಮೂಡಿಸಬೇಕು : ಡಾ.ಪಂಡಿತರಾಧ್ಯ

Update: 2025-09-05 23:29 IST

ರಾಯಚೂರು: ಬಸವಣ್ಣ ಕೇವಲ ಒಂದು ಸಮಾಜಕ್ಕೆ ಸೀಮಿತರಲ್ಲ, ಅವರು ವಿಶ್ವಗುರು. ನುಡಿದಂತೆ ನಡೆದ ಬಸವಾದಿ ಶರಣರ ವಿಚಾರಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಗಂಜ್ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಇಂದು ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಪ್ರತಿಯೊಬ್ಬರೂ ಬಾಹ್ಯ ಸಂಪತ್ತನ್ನು ಬಿಟ್ಟು ಜ್ಞಾನದ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕಿದ್ದು, ಪ್ರಸ್ತುತ ಆತ್ಮ ಕಲ್ಯಾಣ ಹಾಗೂ ಲೋಕ ಕಲ್ಯಾಣದ ಜ್ಞಾನವನ್ನು ಮರೆಯಲಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಸಾರ್ವಜನಿಕರಲ್ಲಿ ಬಸವ ಸಂದೇಶದ ಬೀಜಗಳನ್ನು ಬಿತ್ತುವ ಆಶಯವನ್ನು ಬಸವ ಸಂಸ್ಕೃತಿ ಅಭಿಯಾನ ಹೊಂದಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರೊಂದಿಗೆ ಸಂವಾದ, ಪಾದಯಾತ್ರೆ, ಸಾರ್ವಜನಿಕ ಸಮಾವೇಶ ಹಾಗೂ ನಾಟಕ ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಅರಿವು ಹೆಚ್ಚಿಸಬೇಕಿದೆ ಎಂದರು.

ಜನರು ಆರ್ಥಿಕವಾಗಿ, ಸಾಮಾಜಕವಾಗಿ ಹಾಗೂ ರಾಜಕೀಯವಾಗಿ ತುಂಬಾ ಎತ್ತರದ ಸ್ಥಾನದಲ್ಲಿದ್ದು, ನೈತಿಕವಾಗಿ ಕುಸಿದು ಹೋಗುತ್ತಿದ್ದು, ಧಾರ್ಮಿಕವಾಗಿ ಹಲವು ದಿಕ್ಕುಗಳನ್ನು ಹಿಡಿಯುತ್ತಿದ್ದಾರೆ. ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಕೂಡ ಹೊನ್ನು ಹೆಣ್ಣು ಮಣ್ಣು ಎಂಬುವುದು ನೈಜ ಸಂಪತ್ತು ಎಂದು ಬದುಕುತ್ತಿದ್ದು, ಆದರೆ ಹನ್ನೆರಡನೇ ಶತಮಾನದಲ್ಲಿ ಜ್ಞಾನಿಗಳಾಗಿದ್ದ ಅಲ್ಲಮಪ್ರಭು ಅವರ ಪ್ರಕಾರ ನಿಜವಾದ ಸಂಪತ್ತು ಎಂದರೆ ಅದು ಜ್ಞಾನವಾಗಿದೆ ಎಂದು ಹೇಳಿದರು.

ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ನಗರದ ಸಾರ್ವಜನಿಕರೊಂದಿಗೆ ಬಸವ ಸಂಸ್ಕೃತಿಯ ಕುರಿತು ಸಂವಾದ ನಡೆಯಿತು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಲವು ಪ್ರಶ್ನೆಗಳಿಗೆ ವೇದಿಕೆ ಮೇಲಿದ್ದ ಸಮಾಜದ ಮಠಾಧೀಶರು ಉತ್ತರಿಸಿದರು.

ಈ ಸಂದರ್ಭದಲ್ಲಿ ವಿವಿಧ ಮಠಗಳ ಮಠಾಧೀಶರಾದ ಡಾ.ಬಸವಲಿಂಗಪಟ್ಟದೇವರು, ಗುರುಬಸವ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ,ಬಸಿದ್ದಲಿಂಗ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಚಿಕ್ಕಸುಗೂರು ಚೌಕಿ ಮಠದ ಸಿದ್ದಲಿಂಗ ಸ್ವಾಮೀಜಿ, ನಗರ ಶಾಸಕ ಡಾ.ಶಿವರಾಜ ಪಾಟೀಲ್, ಪ್ರಮುಖರಾದ ಡಾ.ಬಸವರಾಜ ಸಾದರ, ಪಿ.ರುದ್ರಪ್ಪ ಕುರಕುಂದಿ, ರಾಚನಗೌಡ ಕೋಳೂರು,ಮಸ್ಕಿ ನಾಗರಾಜ, ಹರವಿ ನಾಗನಗೌಡ, ಶರಣಭೂಪಾಲ ನಾಡಗೌಡ, ಚಂದ್ರಶೇಖರ ಪಾಟೀಲ್ ಮಿರ್ಜಾಪೂರ, ಲಲಿತಾ ಬಸನಗೌಡ, ಎಂ.ಶಿವಶರಣರೆಡ್ಡಿ, ಡಾ.ಸರ್ವಮಂಗಳ ಸಕ್ರಿ, ಜಗದೇವಿ ಚನ್ನಬಸವಣ್ಣ, ಕರೀಂ ಸಾಬ್, ಚುಕ್ಕಿ ಸೂಗಪ್ಪ ಸಾಹುಕಾರ, ಸರೋಜಮ್ಮ ಮಾಲಿಪಾಟೀಲ್, ಚಂದಮ್ಮ ಸಕ್ರಿ ಸೇರಿದಂತೆ ಅನೇಕರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News