ರಾಯಚೂರು | ಕಳ್ಳತನ ಪ್ರಕರಣ : 32 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ವಶ
ರಾಯಚೂರು, ನ.16: ನಗರದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮನೆಗಳಲ್ಲಿ ಕಳ್ಳತನ ಪ್ರಕರಣ ಬೇಧಿಸಿ ಕಳ್ಳನನ್ನು ಪತ್ತೆ ಹಚ್ಚಿ ಆರೋಪಿಯಿಂದ 36.22 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ತಿಳಿಸಿದ್ದಾರೆ.
ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.20 ಮತ್ತು ಆ.29ರಂದು ನಗರದ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶದ ಧರ್ಮಾವರಂ ಮೂಲದ ಗುಜ್ಜಲ ರಾಮಕೃಷ್ಣ ಎಂಬಾತ ಮೂರು ಮನೆಗಳ ಬೀಗ ಮುರಿದು ಮನೆಗಳ ಅಲಮಾರದಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ, ಈ ಕುರಿತು ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು. ತನಿಖೆ ಕೈಗೊಂಡು ಕಳ್ಳನನ್ನು ನ.10 ರಂದು ಪತ್ತೆಹಚ್ಚಿ 36,22,500 ರೂ. ಬೆಲೆ ಬಾಳುವ 315 ಗ್ರಾಂ. ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆಯೂ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪೊಲೀಸ್ ಠಾಣೆಯಾಗಿ ಆಯ್ಕೆಯಾಗಿದೆ. ದೇಶದ ಮೂರು ಪೊಲೀಸ್ ಠಾಣೆಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನ.28ರಂದು ರಾಯಪುರದಲ್ಲಿ ನಡೆಯಲಿರುವ ಪೊಲೀಸ್ ಮಹಾನಿರ್ದೇಶಕರು, ಇನ್‌ಸ್ಪೆಕ್ಟರ್‌ಗಳ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ಶಾಂತವೀರ, ವೆಂಕಟೇಶ ಉಗಿಬಂಡಿ, ಸಿಪಿಐಗಳಾದ ನಾಗರಾಜ ಮೇಕಾ,ವಿ.ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.